logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಶೋಭಾ ಕರಂದ್ಲಾಜೆ ಪ್ರಚಾರ ವೇಳೆ ಅವಘಡ, ಕಾರಿನ ಬಾಗಿಲು ಗುದ್ದಿ ದ್ವಿಚಕ್ರ ವಾಹನ ಸವಾರ ಸಾವು

Bangalore News: ಶೋಭಾ ಕರಂದ್ಲಾಜೆ ಪ್ರಚಾರ ವೇಳೆ ಅವಘಡ, ಕಾರಿನ ಬಾಗಿಲು ಗುದ್ದಿ ದ್ವಿಚಕ್ರ ವಾಹನ ಸವಾರ ಸಾವು

Umesha Bhatta P H HT Kannada

Apr 08, 2024 11:41 PM IST

ಶೋಭಾ ಕರಂದ್ಲಾಜೆ ಅವರ ಕಾರಿನ ಬಾಗಿಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

  • ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಶೋಭಾ ಕರಂದ್ಲಾಜೆ ಅವರಿದ್ದ ಕಾರಿನ ಬಾಗಿಲು ತೆಗೆಯುವಾಗ ಸಂಭವಿಸಿದ ದುರಂತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

    (ವರದಿ: ಎಚ್‌.ಮಾರುತಿ, ಬೆಂಗಳೂರು)

ಶೋಭಾ ಕರಂದ್ಲಾಜೆ ಅವರ ಕಾರಿನ ಬಾಗಿಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.
ಶೋಭಾ ಕರಂದ್ಲಾಜೆ ಅವರ ಕಾರಿನ ಬಾಗಿಲು ಡಿಕ್ಕಿಯಾಗಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ.

ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಸೇರಿದ ಎಸ್ ಯು ವಿ ಕಾರಿನ ಬಾಗಿಲು ದ್ವಿಚಕ್ರ ವಾಹನಕ್ಕೆ ತಗುಲಿ ಅಪಘಾತ ಸಂಭವಿಸಿದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ 62 ವರ್ಷದ ಪ್ರಕಾಶ್ ಎಂಬುವವರು ಮೃತಪಟ್ಟಿದ್ದಾರೆ. ಈ ಸಂದರ್ಭದಲ್ಲಿ ಕಾರಿನಲ್ಲಿ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿ ಇದ್ದರು ಎಂದು ತಿಳಿದು ಬಂದಿದೆ.ಬೆಂಗಳೂರಿನ ಕೆ.ಆರ್.ಪುರದ ಗಣಪತಿ ದೇವಸ್ಥಾನ ಸಮೀಪ ಇಂದು, ಸೋಮವಾರ ಮಧ್ಯಾಹ್ನ 12.30ರ ವೇಳೆಗೆ ಈ ಅಪಘಾತ ಸಂಭವಿಸಿದೆ. ಈ ಅವಘಡ ಕುರಿತು ಕೆ.ಆರ್.ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ನಾರಾ ಶ್ರೀನಿವಾಸ್ ರಾವ್ ಬಂಧನ; ಗೋವಾ ಮಹಿಳೆಯ ಬ್ಲಾಕ್ ಮೇಲ್, ಬೆಂಗಳೂರಿನ ವ್ಯಕ್ತಿ ಸೆರೆ

ಬೆಂಗಳೂರು: ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಜಾಯ್‌ ರೈಡ್‌, ಯುವಕನ ಬಂಧನ, ಡಿಎಲ್ ಅಮಾನತಿಗೆ ಶಿಫಾರಸು

ಕರ್ನಾಟಕ ಹವಾಮಾನ ಮೇ 20; ದಕ್ಷಿಣ ಕನ್ನಡ, ಉಡುಪಿ ಸೇರಿ 8ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಮಳೆ ಮುನ್ಸೂಚನೆ

Hubli News: ಅಂಜಲಿ ಹತ್ಯೆ, ಹುಬ್ಬಳ್ಳಿಯಲ್ಲಿ ಇಂದು ಪರಮೇಶ್ವರ್‌ ಸಭೆ, ಸಿಬಿಐ ತನಿಖೆಗೆ ಜೋಶಿ ಆಗ್ರಹ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ‌ ಶೋಭಾ ಕರಂದ್ಲಾಜೆ ಅವರು ಪ್ರಚಾರಕ್ಕಾಗಿ ಕೆ.ಆರ್.ಪುರಕ್ಕೆ ಬಂದಿದ್ದರು. ಇವರಿಗೆ ಸೇರಿದ್ದ ಟಯೋಟಾ ಫಾರ್ಚೂನರ್ ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಇದೇ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರ ಪ್ರಕಾಶ್ ಪ್ರಯಾಣಿಸುತ್ತಿದ್ದರು.

ಕಾರಿನ ಚಾಲಕ ದಿಢೀರ್ ಎಂದು ಬಾಗಿಲು ತೆರೆದಿದ್ದರು. ವೇಗವಾಗಿ ಹೊರಟಿದ್ದ ಪ್ರಕಾಶ್ ಅವರ ದ್ವಿಚಕ್ರ ವಾಹನಕ್ಕೆ ಕಾರಿನ ಬಾಗಿಲು ಬಲವಾಗಿ ಗುದ್ದಿತ್ತು. ಇದರಿಂದ ದ್ವಿಚಕ್ರ ವಾಹನ ಜೊತೆಯಲ್ಲೇ ಪ್ರಕಾಶ್ ರಸ್ತೆಗೆ ಬಿದ್ದಿದ್ದರು. ಅವರು ಏಳುವ ಮುನ್ನವೇ ಇದೇ ಮಾರ್ಗದಲ್ಲಿ ಅತೀ ವೇಗವಾಗಿ ಹೊರಟಿದ್ದ ಖಾಸಗಿ ಬಸ್ಸಿನ ಚಕ್ರ ಪ್ರಕಾಶ್ ಅವರ ಮೇಲೆ ಹರಿದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿದ್ದ ಪ್ರಕಾಶ್ ಅವರನ್ನು ಅಲ್ಲಿ ನೆರೆದಿದ್ದ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

ಸಚಿವೆ ಶೋಭಾ ಕರಂದ್ಲಾಜೆ ಅವರ ಕಾರಿನ ಬಾಗಿಲನ್ನು ದಿಢೀರ್ ಎಂದು ತೆಗೆದಿದ್ದರಿಂದಲೇ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಂತರ ಅಂತಿಮ ವಿವರ ಲಭ್ಯವಾಗಲಿದೆ. ಕಾರಿನ ಚಾಲಕ ಮತ್ತು ಬಸ್ ಚಾಲಕ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ದುರಂತ ಕುರಿತು ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ ಅವರು, ಪ್ರಕಾಶ್ ನಮ್ಮ ಪಕ್ಷದ ಕಾರ್ಯಕರ್ತ. 24 ಗಂಟೆ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಅಗಲಿಕೆಯಿಂದ ತೀವ್ರ ನೋವುಂಟಾಗಿದೆ. ಅವರ ಕುಟುಂಬದ ಜೊತೆ ನಿಲ್ಲುತ್ತೇನೆ. ಪಕ್ಷದ ವತಿಯಿಂದ ಅವರ ಕುಟುಂಬಕ್ಕೆ ಪರಿಹಾರ ನೀಡುವುದಾಗಿ ತಿಳಿಸಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ