ಬೆಂಗಳೂರು ವಾತಾವರಣ ಕೆಟ್ಟಿದೆ, ಬಾಂಬೆ ಅಥವಾ ಪುಣೆಗೆ ಹೋಗ್ಲಾ ಅಥವಾ ಭಾರತವನ್ನೇ ಬಿಡ್ಲಾ; ಉದ್ಯಮಿ ಅನಂತ್ ಟ್ವೀಟ್ ವೈರಲ್
May 07, 2024 12:57 PM IST
ಬೆಂಗಳೂರು ವಾತಾವರಣ ಕೆಟ್ಟಿದೆ, ಬಾಂಬೆ ಅಥವಾ ಪುಣೆಗೆ ಹೋಗ್ಲಾ ಅಥವಾ ಭಾರತವನ್ನೇ ಬಿಡ್ಲಾ ಎಂಬ ವೈರಲ್ ಟ್ವೀಟ್ ಮಾಡಿದ ಉದ್ಯಮಿ ಅನಂತ್.
ಬೆಂಗಳೂರು ದೇಶದ ಪ್ರಮುಖ ಟೆಕ್ ಕೇಂದ್ರ. ಇಲ್ಲಿ ಈ ಬಾರಿ ಸುಡುಬಿಸಿಲು, ನೀರಿನ ಸಮಸ್ಯೆ ಹೀಗೆ ಹವಾಮಾನ ವೈಪರೀತ್ಯದ ಕಾರಣಕ್ಕೆ ಬೆಂಗಳೂರಿಗರು ತತ್ತರಿಸಿದ್ದಾರೆ. ಇದೇ ವೇಳೆ, ಬೆಂಗಳೂರು ವಾತಾವರಣ ಕೆಟ್ಟಿದೆ, ಬಾಂಬೆ ಅಥವಾ ಪುಣೆಗೆ ಹೋಗ್ಲಾ ಅಥವಾ ಭಾರತವನ್ನೇ ಬಿಡ್ಲಾ ಎನ್ನುತ್ತ ಉದ್ಯಮಿ ಅನಂತ್ ಅವರು ಮಾಡಿದ ಟ್ವೀಟ್ ವೈರಲ್ ಆಗಿದೆ. ಇದರ ವಿವರ ಇಲ್ಲಿದೆ.
ಬೆಂಗಳೂರು: ಹವಾಮಾನ ವೈಪರೀತ್ಯ, ಗೊತ್ತು ಗುರಿ ಇಲ್ಲದ ಅಭಿವೃದ್ಧಿಗಳಿಂದ ನಗರ ಪ್ರದೇಶಗಳು ತೊಂದರೆಗೆ ಒಳಗಾಗಿವೆ. ಇದರಿಂದ ಬೆಂಗಳೂರು ಹೊರತಲ್ಲ. ಸುಡುಬಿಸಿಲು, ನೀರಿನ ಕೊರತೆ ಸೇರಿ ಬೆಂಗಳೂರಿಗರು ಈ ಬಾರಿ ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳೆದ ಎರಡು ಮೂರು ತಿಂಗಳಿಂದ ಬೆಂಗಳೂರಿಗರ ಸಂಕಷ್ಟ ಸೋಷಿಯಲ್ ಮೀಡಿಯಾದಲ್ಲಿ ಪದೇಪದೆ ಚರ್ಚೆಗೆ ಒಳಗಾಗುತ್ತಿದೆ. ಈ ಸಲ ಉದ್ಯಮಿ ಅನಂತ್ ಶರ್ಮಾ ಅವರ ಟ್ವೀಟ್ ವೈರಲ್ ಆಗಿದೆ.
ಅನಂತ್ ಶರ್ಮಾ ಅವರು ಬೆಂಗಳೂರು ಮೂಲದ ಕಂಪನಿಯೊಂದರ ಸಹ ಸಂಸ್ಥಾಪಕ. ಬೆಂಗಳೂರು ಮಹಾನಗರದ ಮೂಲಸೌಕರ್ಯ, ಹವಾಮಾನ ಮತ್ತು ನೀರಿನ ಪರಿಸ್ಥಿತಿಯನ್ನು ಟೀಕಿಸಿದ ಅವರು "ಭಾರತವನ್ನು ತೊರೆಯಬೇಕೇ" ಎಂಬ ಪ್ರಶ್ನೆಯನ್ನು ಟ್ವೀಟ್ ಮಾಡಿ ತಮ್ಮ ಫಾಲೋಯರ್ಸ್ ಜೊತೆಗೆ ಸಂವಹನ ಶುರುಮಾಡಿದ್ದರು. ಅಷ್ಟೇ ಅಲ್ಲ, ಮುಂಬೈ ಅಥವಾ ಪುಣೆಗೆ ಸ್ಥಳಾಂತರವಾಗುವುದು ಯೋಗ್ಯವೇ ಎಂದೂ ಕೇಳಿದ್ದಾರೆ.
“ಬೆಂಗಳೂರು ಇನ್ನೂ 5 ವರ್ಷಗಳಲ್ಲಿ ಕೆಟ್ಟ ವಾತಾವರಣ, ಕೆಟ್ಟ ಹವಾಮಾನ ಮತ್ತು ಕೆಟ್ಟ ನೀರಿನಿಂದಾಗಿ ಜನ ವಾಸಕ್ಕೆ ಯೋಗ್ಯವಲ್ಲದೇ ಹೋಗಲಿದೆ ಎಂದು ತೋರುತ್ತಿದೆ. ಮುಂಬೈ ಅಥವಾ ಪುಣೆಗೆ ಸ್ಥಳಾಂತರಿಸಲು ಯೋಗ್ಯವಾಗಿದೆಯೇ ಅಥವಾ ನಾನು ಭಾರತವನ್ನು ತೊರೆಯಬೇಕೇ? ಎಂದು ಅನಂತ್ ಎಕ್ಸ್‌ನಲ್ಲಿ ಕೇಳಿದ್ದಾರೆ.
ಅನಂತ್ ಶರ್ಮಾ ಅವರ ಟ್ವೀಟ್ ಹೀಗಿದೆ
ಅನಂತ್ ಅವರು ಮೇ 3 ರಂದು ಮಧ್ಯಾಹ್ನ ನಂತರ 1.42ಕ್ಕೆ ಟ್ವೀಟ್ ಮಾಡಿದ್ದು, ಇದು 3.76 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ಜನರ ಗಮನ ಸೆಳೆದಿದೆ. ಅದೇ ರೀತಿ 500ಕ್ಕೂ ಹೆಚ್ಚು ಕಾಮೆಂಟ್, 110ಕ್ಕೂ ಹೆಚ್ಚು ಸಲ ರೀಟ್ವೀಟ್ ಆಗಿದೆ. ಅನೇಕರು ತಮ್ಮ ಆಲೋಚನೆಗಳನ್ನೂ ಅವರ ಈ ಪೋಸ್ಟ್‌ಗೆ ಸೇರಿಸಿದ್ದಾರೆ.
ಬೆಂಗಳೂರಿನ ಉದ್ಯಮಿ ಸೃಜನ್ ಆರ್ ಶೆಟ್ಟಿ ಅವರು ಅನಂತ್ ಶರ್ಮಾ ಅವರ ಪೋಸ್ಟ್ ಓದಿದ ಬಳಿಕ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. “ಹವಾಮಾನದ ಬಗ್ಗೆ ಯೋಚಿಸಿ ಜನರು ಬೆಂಗಳೂರಿಗೆ ಬರುವುದಿಲ್ಲ. ಅವರು ಬೆಂಗಳೂರಿಗೆ ಬರುತ್ತಾರೆ. ಹಾಗೆ ಬಂದ ಬಳಿಕ ಹವಾಮಾನವು ಉತ್ತಮವಾಗಿದೆ/ವಾಗಿತ್ತು ಎಂಬುದು ಅವರಿಗೆ ತಿಳಿಯುತ್ತದೆ. ಇಲ್ಲಿನ ಜನರು ಕರುಣಾಮಯಿಗಳು. ಎಲ್ಲರೂ ಗೆಲ್ಲಬೇಕೆಂದು ಬಯಸುತ್ತಾರೆ. ಯುವ ಜನರು ಶೂನ್ಯ-ಮೊತ್ತದ ಆಟಗಳನ್ನು ಆಡಬೇಕೆಂದು ಬಯಸುತ್ತಾರೆ. ಇಂತಹ ಮನಸ್ಥಿತಿಯನ್ನು ಇಲ್ಲಿ ಹೊರತುಪಡಿಸಿ ಬೇರೆಲ್ಲಿಯೂ ಕಾಣಸಿಗದು” ಎಂದು ಅವರು ಹೇಳಿದ್ದಾರೆ.
“ಜನರು ಬೆಂಗಳೂರನ್ನು ವಲಸೆ ನಗರ ಎಂದು ಭಾವಿಸುತ್ತಿರುವುದೇ ಬೆಂಗಳೂರಿನ ವ್ಯವಸ್ಥಿತ ಸಮಸ್ಯೆ. ಇದು ವೋಟ್ ಬ್ಯಾಂಕ್ ಆಗದ ಹೊರತು, ನಗರವನ್ನು ಬದಲಾಯಿಸಲು ಯಾರೂ ಬಯಸುವುದಿಲ್ಲ. 80 ಪ್ರತಿಶತದವರೆಗೆ ಮತದಾನವಾಗಬೇಕು. ಅಧಿಕಾರಿಗಳು ಕೆಲಸ ಮಾಡುವುದಕ್ಕೆ ಒತ್ತಡ ಹೇರಬೇಕು. ಇದಕ್ಕಾಗಿ ಅವರನ್ನು ಪ್ರಶ್ನಿಸುತ್ತಿರಬೇಕು. ಇದೊಂದೇ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಏಕೈಕ ಮಾರ್ಗ. ನಾವು ಅದನ್ನು ಮಾಡದಿರುವವರೆಗೆ, ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಅಧಿಕಾರದಲ್ಲಿ ಉಳಿಯಲು ಬಯಸುತ್ತಾರೆ. ಹಾಗಾಗಿ ಬೆಂಗಳೂರು ಅದರಲ್ಲಿ ಒಂದು ಅಂಶವಾಗಿರುವುದಿಲ್ಲ ಎಂದು ಶೆಟ್ಟಿ ವಿವರಿಸಿದ್ದಾರೆ.
ಇತರೆ ಎಕ್ಸ್ ಬಳಕೆದಾರರ ಪ್ರತಿಕ್ರಿಯೆ ಹೀಗಿದೆ
“ಪ್ರತಿಯೊಂದು ನಗರಕ್ಕೂ ಸಮಸ್ಯೆಗಳಿವೆ. ಒಂದು ನಗರದಿಂದ ಇನ್ನೊಂದು ನಗರಕ್ಕೆ ಓಡುವುದನ್ನು ನಿಲ್ಲಿಸಿ. ಯಾವ ನಗರದಲ್ಲಿದ್ದೀರೋ ಅದೇ ನಗರದ ವಾತಾವರಣಕ್ಕೆ ಹೊಂದಲು ಪ್ರಾರಂಭಿಸಿ" ಎಂದು ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಶರ್ಮಾ, “ ಇದುವರೆಗೂ ಅದನ್ನು ಮಾಡುತ್ತಿದ್ದೇನೆ. ಈಗ ಸಮಯ ಮೀರಿದೆ ಎಂದು ಅನಿಸುತ್ತದೆ” ಉತ್ತರಿಸಿದ್ದಾರೆ.
ಮತ್ತೊಬ್ಬರು, “ಬಹುಶಃ ಜನಪ್ರಿಯವಲ್ಲದ ಅಭಿಪ್ರಾಯ. ಆದರೆ ಇದು ಈಗ ಬಹಳ ಸರಳವಾಗಿದೆ. ಇದು ಹವಾಮಾನ ಮತ್ತು ನೀರಿನ ಬಗ್ಗೆ ಮಾತ್ರವಲ್ಲ. ಕಾಲಾವಧಿಯಲ್ಲಿ ಇನ್ನೂ ಅನೇಕ ಸೂಚಕಗಳಿವೆ. ನಿಮಗೆ ಸಾಧ್ಯವಾದರೆ ಬಿಡಿ" ಎಂದು ಹೇಳಿದ್ದಾರೆ. ಇದಕ್ಕೆ ಶರ್ಮಾ ಅವರು "ನಗರವನ್ನು ತೊರೆಯಲು ಕಾರಣಗಳು ಪ್ರತಿದಿನ ಬಲಗೊಳ್ಳುತ್ತವೆ" ಎಂದು ಕಾಮೆಂಟ್‌ಗೆ ಉತ್ತರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.