Milk Shortage: ರಾಜಧಾನಿ ಬೆಂಗಳೂರಿನಲ್ಲಿ ಹಾಲು ಪೂರೈಕೆಯಲ್ಲಿ ವ್ಯತ್ಯಯ: ಮಿಲ್ಕ್ ಪಾರ್ಲರ್‌ಗಳ ಸಮಸ್ಯೆಗೆ ಕಾರಣ ಹುಡುಕುತ್ತಾ..
Mar 31, 2023 08:10 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು ನಗರದಲ್ಲಿನ ಕೆಲವು ಸಹಕಾರಿ ಸಂಸ್ಥೆಗಳು ಮತ್ತು ಹಾಲಿನ ಪಾರ್ಲರ್‌ಗಳು ಹಾಲಿನ ಕೊರತೆ ಎದುರಿಸುತ್ತಿವೆ. ಪ್ರಮುಖವಾಗಿ ಮದರ್ ಡೈರಿ ಹಾಲಿನ ಉತ್ಪನ್ನಗಳ ಕೊರತೆ ಎದುರಾಗಿದ್ದು. ಪೂರೈಕೆ ಪುನರಾರಂಭಗೊಂಡಿದ್ದರೂ ಕೊರತೆ ಮುಂದುವರೆದಿರುವುದು ಹಾಲು ಮಾರಾಟಗಾರರನ್ನು ಚಿಂತೆಗೆ ದೂಡಿದೆ.
ಬೆಂಗಳೂರು: ನಗರದಲ್ಲಿನ ಕೆಲವು ಸಹಕಾರಿ ಸಂಸ್ಥೆಗಳು ಮತ್ತು ಹಾಲಿನ ಪಾರ್ಲರ್‌ಗಳು ಹಾಲಿನ ಕೊರತೆ ಎದುರಿಸುತ್ತಿವೆ. ಪ್ರಮುಖವಾಗಿ ಮದರ್ ಡೈರಿ ಹಾಲಿನ ಉತ್ಪನ್ನಗಳ ಕೊರತೆ ಎದುರಾಗಿದ್ದು. ಪೂರೈಕೆ ಪುನರಾರಂಭಗೊಂಡಿದ್ದರೂ ಕೊರತೆ ಮುಂದುವರೆದಿರುವುದು ಹಾಲು ಮಾರಾಟಗಾರರನ್ನು ಚಿಂತೆಗೆ ದೂಡಿದೆ.
ಮದರ್ ಡೈರಿ ಉತ್ಪನ್ನಗಳನ್ನು ಪಡೆಯುವ ನಗರದ ನಂದಿನಿ ಮಿಲ್ಕ್ ಪಾರ್ಲರ್ ಮಾಲೀಕನೋರ್ವ, ಫೆಬ್ರವರಿ 28ರಂದು ಮದರ್ ಡೈರಿ ಹಾಲು ಸರಬರಾಜಾಗಿಲ್ಲ ಎಂದು ಹೇಳುತ್ತಾರೆ. ಸದ್ಯಕ್ಕೆ ಪೂರೈಕೆ ಪುನರಾರಂಭಗೊಂಡಿದೆಯಾದರೂ, ಸೂಕ್ತ ಪ್ರಮಾಣದಲ್ಲಿ ಪೂರೈಕೆ ಮಾಡುತ್ತಿಲ್ಲ ಎಂದು ಮಿಲ್ಕ್ ಪಾರ್ಲರ್ ಮಾಲೀಕರು ಹೇಳಿದ್ದಾರೆ.
ಹಾಲು ಪೂರೈಕೆಯಲ್ಲಿ ಕೊರತೆಯಿದೆ ಎಂದು ಮದರ್ ಡೈರಿಯ ಮೂಲಗಳು ಖಚಿತಪಡಿಸಿದ್ದು, ಇದು ಇನ್ನಷ್ಟು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ ಎಂದು ಮಿಲ್ಕ್ ಪಾರ್ಲರ್ ಮಾಲೀಕರು ಅಂದಾಜಿಸಿದ್ದಾರೆ.
"ನನ್ನ ಅವಶ್ಯಕತೆ ದಿನಕ್ಕೆ 1,500 ಲೀಟರ್ ಆಗಿದ್ದರೆ, ಸುಮಾರು 1,000 ಲೀಟರ್ ಮಾತ್ರ ಪೂರೈಸಲು ಏಜೆಂಟರಿಗೆ ಸಾಧ್ಯವಾಗುತ್ತಿದೆ. ಮದರ್ ಡೈರಿಯಿಂದ ಅನೇಕ ಮಿಲ್ಕ್ ಪಾರ್ಲರ್ ಮಾಲೀಕರು ಇದೇ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.. " ಎಂದು ಮಿಲ್ಕ್ ಪಾರ್ಲರ್ ಮಾಲೀಕ ಅಲವತ್ತುಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ (ಬಮುಲ್) ಮುಖ್ಯಸ್ಥ ನರಸಿಂಹ ಮೂರ್ತಿ, ರೈತರಿಂದ ಸರಬರಾಜಾಗುವ ಹಾಲಿನ ಪ್ರಮಾಣ ಕಡಿಮೆಯಾಗಿರುವುದೇ ಡೈರಿಗಳು ಕೊರತೆಯನ್ನು ಎದುರಿಸಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಒಕ್ಕೂಟವು ಈಗ ಪ್ರತಿದಿನ 13 ಲಕ್ಷ ಲೀಟರ್ ಹಾಲನ್ನು ಸಂಗ್ರಹಿಸುತ್ತಿದೆ. ಆದರೆ ಇನ್ನೂ ಒಂದು ಲಕ್ಷ ಲೀಟರ್ ಹಾಲಿನ ಕೊರತೆ ಇದೆ ಎಂದು ನರಸಿಂಹ ಮೂರ್ತಿ ತಿಳಿಸಿದ್ದಾರೆ.
ನಾವು ಪೂರೈಕೆಯನ್ನು ನಿರ್ವಹಿಸುತ್ತಿದ್ದು, ಏಜೆಂಟರು 100 ಲೀಟರ್ ಹಾಲಿಗೆ ಬೇಡಿಕೆ ಇಟ್ಟರೆ 80 ಲೀಟರ್ ಮಾತ್ರ ಕೊಡಲು ಸಾಧ್ಯವಾಗುತ್ತಿದೆ. ನಮ್ಮಲ್ಲಿ ಕೇವಲ ಹಾಲು ಮಾತ್ರವಲ್ಲದೇ ತುಪ್ಪದ ಕೊರತೆ ಕೂಡ ಇದೆ ಎನ್ನುತ್ತಾರೆ ನರಸಿಂಹ ಮೂರ್ತಿ.
ಕೆಎಂಎಫ್‌ನ ಖರೀದಿ ಬೆಲೆಯಿಂದ ಅತೃಪ್ತರಾಗಿರುವ ರೈತರು, ತಮ್ಮ ಜಾನುವಾರುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಇದು ಹಾಲಿನ ಕೊರತೆಗೆ ಪ್ರಮುಖ ಕಾರಣವಾಗಿದೆ. ಒಂದು ವೇಳೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಹಾಲಿನ ಕೊರತೆ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ನರಸಿಂಹ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಈ ಹಣಕಾಸು ವರ್ಷದಲ್ಲಿ ಕೆಎಂಎಫ್ ಸರಾಸರಿ ಶೇ. 2ರಷ್ಟು ಹಾಲಿನ ಕೊರತೆಯನ್ನು ಎದುರಿಸಿದೆ. ಇದರರ್ಥ ಸರಾಸರಿ ಇಳುವರಿಯು ದಿನಕ್ಕೆ 84-85 ಲಕ್ಷ ಲೀಟರ್‌ಗಳಿಂದ ದಿನಕ್ಕೆ ಸುಮಾರು 76 ಲಕ್ಷ ಲೀಟರ್‌ಗಳಿಗೆ ಕಡಿಮೆಯಾಗಿದೆ ಎಂಬುದು ಹಾಲು ಪೂರೈಕೆದಾರರ ವಾದ.
ಒಟ್ಟಿನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಹಾಲು ಪೂರೈಕೆಯಲ್ಲಿ ವ್ಯತ್ಯಯ ಕಂಡುಬಂದಿದ್ದು, ಇದರಿಂದ ಮಿಲ್ಕ್ ಪಾರ್ಲರ್ ಮಾಲೀಕರು ಮತ್ತು ಗ್ರಾಹಕರು ಪರದಾಡುವಂತಾಗಿದೆ.
ಇನ್ನು ನಗರದಲ್ಲಿ ಹಾಲಿನ ಉತ್ಪನ್ನಗಳ ತೀವ್ರ ಕೊರತೆ ಎದುರಾಗಿದ್ದರೂ, ವ್ಯಾಪಾರಸ್ಥರು ತುಪ್ಪದ ಕೃತಕ ಅಭಾವವನ್ನು ಸೃಷ್ಟಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ನಾಗರಿಕರು ಗಂಭೀರ ಆರೋಪ ಮಾಡುತ್ತಿದ್ದಾರೆ.
ಇಂದಿನ ಪ್ರಮುಖ ಸುದ್ದಿ
Donald Trump: 'ನೀಲಿತಾರೆ'ಗೆ ಹಣ ಪಾವತಿ ಆರೋಪ: ಟ್ರಂಪ್ ಈಗ ಕ್ರಿಮಿನಲ್ ಮೊಕದ್ದಮೆ ಎದುರಿಸುವ ಮೊದಲ ಯುಎಸ್ ಮಾಜಿ ಅಧ್ಯಕ್ಷ!
2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ನೀಲಿಚಿತ್ರ ತಾರೆಯೋರ್ವಳಿಗೆ ಹಣ ಪಾವತಿಸಿದ ಆರೋಪ ಎದುರಿಸುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯಾಯಾಲಯದಿಂದ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಖ್ಯಾತಿಗೆ ಗುರಿಯಾಗಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.
ವಿಭಾಗ