logo
ಕನ್ನಡ ಸುದ್ದಿ  /  Karnataka  /  Bsy Vs Jagadish Shettar Will Shettar Do The Magic In Hubli Dharwad Central Which Was Done By Bsy In Shikaripur Uks

BSY vs Jagadish Shettar - ಶಿಕಾರಿಪುರದಲ್ಲಿ ಯಡಿಯೂರಪ್ಪ ಮಾಡಿದ ʻಮ್ಯಾಜಿಕ್‌ʼ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಶೆಟ್ಟರ್ ಮಾಡ್ತಾರಾ…

Umesh Kumar S HT Kannada

Apr 18, 2023 07:15 AM IST

ಜಗದೀಶ್‌ ಶೆಟ್ಟರ್‌ vs ಬಿಎಸ್‌ ಯಡಿಯೂರಪ್ಪ: ಶಿಕಾರಿಪುರದಲ್ಲಿ ಯಡಿಯೂರಪ್ಪ ಮಾಡಿದ ʻಮ್ಯಾಜಿಕ್‌ʼ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಶೆಟ್ಟರ್ ಮಾಡ್ತಾರಾ…

  • BSY vs Jagadish Shettar: ಆದರೆ ಒಂದು ವಿಚಾರ ಗಮನಿಸಬೇಕು. ಜಗದೀಶ್‌ ಶೆಟ್ಟರ್‌ ಕೂಡ ಮಾಜಿ ಮುಖ್ಯಮಂತ್ರಿ. ಲಿಂಗಾಯತ ಸಮುದಾಯದವರೇ. ಅವರು ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿರುವ ವರ್ಚಸ್ಸಿನ ಕಡೆಗೊಂದು ಇಣುಕುನೋಟ ಇದು.

ಜಗದೀಶ್‌ ಶೆಟ್ಟರ್‌ vs ಬಿಎಸ್‌ ಯಡಿಯೂರಪ್ಪ: ಶಿಕಾರಿಪುರದಲ್ಲಿ ಯಡಿಯೂರಪ್ಪ ಮಾಡಿದ ʻಮ್ಯಾಜಿಕ್‌ʼ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಶೆಟ್ಟರ್ ಮಾಡ್ತಾರಾ…
ಜಗದೀಶ್‌ ಶೆಟ್ಟರ್‌ vs ಬಿಎಸ್‌ ಯಡಿಯೂರಪ್ಪ: ಶಿಕಾರಿಪುರದಲ್ಲಿ ಯಡಿಯೂರಪ್ಪ ಮಾಡಿದ ʻಮ್ಯಾಜಿಕ್‌ʼ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ಶೆಟ್ಟರ್ ಮಾಡ್ತಾರಾ…

ಹಿಂದುತ್ವ, ಆರೆಸ್ಸೆಸ್‌ ಸಿದ್ಧಾಂತದ ನೆಲೆಗಟ್ಟಿನಲ್ಲಿ ಬೆಳೆದರೂ ಕೆಲವೊಂದು ರಾಜಕೀಯ ಸನ್ನಿವೇಶದಲ್ಲಿ ಪಕ್ಷವನ್ನು ಮೀರಿ ಹೋಗುವ ನಾಯಕರಿದ್ದಾರೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಬಿಎಸ್‌ ಯಡಿಯೂರಪ್ಪ ಈ ವಿಚಾರದಲ್ಲಿ ಗಮನಸೆಳೆವಂಥವರು. ಇವರು ಪಕ್ಷ ಬಿಟ್ಟ ಕಾರಣ ಉಂಟಾದ ಹಾನಿ, ಪಕ್ಷಕ್ಕೂ ಅದೇ ರೀತಿ ವೈಯಕ್ತಿಕವಾಗಿ ಅವರಿಗೂ ದೊಡ್ಡದೇ ಆಗಿತ್ತು. ಆದರೆ ಒಂದು ವಿಚಾರ ಗಮನಿಸಬೇಕು. ಜಗದೀಶ್‌ ಶೆಟ್ಟರ್‌ ಕೂಡ ಮಾಜಿ ಮುಖ್ಯಮಂತ್ರಿ. ಲಿಂಗಾಯತ ಸಮುದಾಯದವರೇ. ಅವರೂ ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿರುವ ವರ್ಚಸ್ಸಿನ ಕಡೆಗೊಂದು ಇಣುಕುನೋಟ ಇದು.

ಟ್ರೆಂಡಿಂಗ್​ ಸುದ್ದಿ

Bangalore Rains: ಬೆಂಗಳೂರಲ್ಲಿ ವರುಣ ದರ್ಶನ, ಸತತ 5 ತಿಂಗಳ ನಂತರ ಸುರಿದ ಮಳೆಗೆ ತಂಪಾದ ಉದ್ಯಾನ ನಗರಿ

Indian Railways:ಬೆಳಗಾವಿ-ಭದ್ರಾಚಲಂ, ಅರಸಿಕೆರೆ-ಹೈದ್ರಾಬಾದ್‌ ರೈಲು ರದ್ದು, ವಂದೇಭಾರತ್‌ ರೈಲು ಮಾರ್ಗ ಬದಲಾವಣೆ

Tumkur News: ತುಮಕೂರು ಹರಳೂರಿನ ಐತಿಹಾಸಿಕ ಶ್ರೀವೀರಭದ್ರ ಸ್ವಾಮಿಯ ಅದ್ದೂರಿ ರಥೋತ್ಸವ

Hassan Scandal: ಬಂಧನ ಭೀತಿ, ಜಾಮೀನಿಗಾಗಿ ನ್ಯಾಯಾಲಯಕ್ಕೆ ಮೊರೆ ಹೋದ ಎಚ್‌ಡಿ ರೇವಣ್ಣ

ಶಿಕಾರಿಪುರದಲ್ಲಿ ಬಿಎಸ್‌ವೈ ವರ್ಚಸ್ಸಿಗೆ ಸರಿಸಾಟಿಯಾಗದ ಪಕ್ಷದ ವರ್ಚಸ್ಸು

ಬಿಎಸ್.‌ ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರವನ್ನು ಎಂಟು ಸಲ ಪ್ರತಿನಿಧಿಸಿದ್ದರು. ಗಣಿ ಅಕ್ರಮದ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಚಾಟಿತರಾಗುವ ಭೀತಿಯಿಂದ ಬಿಜೆಪಿ ಬಿಟ್ಟು ಹೊರಬಂದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಕಟ್ಟಲು ಹೊರಟರು. ಶಿಕಾರಿಪುರ ಕ್ಷೇತ್ರದಲ್ಲಿ ಕೆಜೆಪಿ ಅಭ್ಯರ್ಥಿಯಾಗಿಯೇ ಸ್ಪರ್ಧಿಸಿ ಗೆದ್ದರು. ಶಿಕಾರಿಪುರ ಕ್ಷೇತ್ರದಲ್ಲಿ ಬಿಎಸ್.‌ ಯಡಿಯೂರಪ್ಪ ಅವರ ಮತ ಗಳಿಕೆ ಮತ್ತು ವಿಜಯವನ್ನು ಅವಲೋಕಿಸುವುದಕ್ಕೆ ಇದು ಸಕಾಲ.

ಶಿಕಾರಿಪುರ ಕ್ಷೇತ್ರದಲ್ಲಿ 1983ರಿಂದ 1994ರ ತನಕ ಸತತವಾಗಿ ಗೆಲುವು ದಾಖಲಿಸಿ ವಿಧಾನಸಭಾ ಕ್ಷೇತ್ರ ಪ್ರವೇಶಿಸಿದವರು ಬಿ.ಎಸ್.ಯಡಿಯೂರಪ್ಪ. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಬಿಎನ್‌. ಮಹಾಲಿಂಗಪ್ಪ ಅವರ ಎದುರು ಕಳೆದುಕೊಂಡರು. ಅದಾದ ಬಳಿಕ ಅವರು ಶಿಕಾರಿಪುರ ಕ್ಷೇತ್ರವನ್ನು ಒಮ್ಮೆ ಮಗನಿಗೆ ಬಿಟ್ಟರೆ ಮತ್ಯಾರಿಗೂ ಬಿಟ್ಟುಕೊಟ್ಟಿಲ್ಲ.

ಅವರು ಕೆಜೆಪಿಯಿಂದ ಶಿಕಾರಿಪುರದಲ್ಲಿ ಸ್ಪರ್ಧಿಸಿ ಗೆದ್ದಾಗ ಪಡೆದ ಮತಗಳ ಸಂಖ್ಯೆ 69, 126 (49.89%). ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಎಸ್.ಶಾಂತವೀರಪ್ಪ ಗೌಡ ಅವರಿಗೆ ಸಿಕ್ಕಿದ್ದು 44,701 (32.26%) ಮತಗಳು. ಇನ್ನು ʻಬಿಜೆಪಿʼಗೆ ಈ ಕ್ಷೇತ್ರದಲ್ಲಿ ಸಿಕ್ಕಿದ್ದು ಕೇವಲ 2,383 (1.72%) ಮತಗಳು. ಅಂದರೆ ಶೇಕಡ 64.5% ಮತಗಳನ್ನು ಬಿಜೆಪಿ ಕಳೆದುಕೊಂಡಿತ್ತು. ಕ್ಷೇತ್ರದಲ್ಲಿ ಬಿಎಸ್‌ ಯಡಿಯೂರಪ್ಪ ಅವರು ಬೆಳೆಸಿಕೊಂಡಿದ್ದ ವೈಯಕ್ತಿಕ ವರ್ಚಸ್ಸು ಪಕ್ಷದ ವರ್ಚಸ್ಸನ್ನೂ ಮೀರಿಸಿತ್ತು. ಇದೇ ಕಾರಣಕ್ಕೆ ಅವರ ಮಗ ವಿಜಯೇಂದ್ರ ಇಲ್ಲಿಂದಲೇ ಸ್ಪರ್ಧಿಸುತ್ತಾನೆ ಎಂದು ಪಕ್ಷ ಘೋಷಿಸುವ ಮೊದಲೇ ಯಡಿಯೂರಪ್ಪ ಘೋಷಿಸಿದ್ದರು. ಪಕ್ಷವೂ ಅದಕ್ಕೆ ತಲೆದೂಗಿದೆ!

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ನಲ್ಲಿ ತಮ್ಮ ವರ್ಚಸ್ಸನ್ನು ಒರೆಗೆ ಹಚ್ಚಿದ ಜಗದೀಶ ಶೆಟ್ಟರ್‌...

ಇನ್ನು, ಜಗದೀಶ್‌ ಶೆಟ್ಟರ್‌ ವಿಚಾರಕ್ಕೆ ಬರೋಣ. ಜನಸಂಘ, ಸಂಘಪರಿವಾದ ನೆಲೆಗಟ್ಟಿನಲ್ಲಿ ಬೆಳೆದವರು. ಇದೀಗ ಏಳನೇ ಸಲ ಸ್ಪರ್ಧಿಸುವುದಕ್ಕೆ ಟಿಕೆಟ್‌ ಕೊಡುತ್ತಿಲ್ಲ, ತನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಆಪಾದಿಸುತ್ತ ತಮ್ಮ ಬೀಗ ಶಾಮನೂರು ಶಿವಶಂಕರಪ್ಪ ಇರುವಂತಹ ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದಾರೆ ಜಗದೀಶ್‌ ಶೆಟ್ಟರ್‌.

ಕಳೆದ ವಿಧಾನಸಭಾ ಚುನಾವಣೆ (2018)ಯಲ್ಲಿ ಜಗದೀಶ್‌ ಶೆಟ್ಟರ್‌ ಬಿಜೆಪಿ ಪ್ರತಿನಿಧಿಯಾಗಿ 75,794 (51.31%) ಮತಗಳಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಡಾ.ಮಹೇಶ್‌ ನಲ್ವಾಡ್‌ 54,488 (36.89%) ಮತಗಳಿಸಿದ್ದರು.

ಇದಕ್ಕೂ ಮೊದಲು 2013ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಜಗದೀಶ್‌ ಶೆಟ್ಟರ್‌ 58,201 (49.61%) ಮತಗಳಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ಡಾ.ಮಹೇಶ್‌ ನಲ್ವಾಡ್‌ 40,447 (34.48%) ಮತಗಳಿಸಿದರು. ಈ ಹಿಂದೆ 2008ರಲ್ಲಿ ನಡೆದ ಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್‌ 58,747 (54.75%) ಮತ ಗಳಿಸಿದ್ದರು. ಕಾಂಗ್ರೆಸ್‌ ಪಕ್ಷದ ಮುನವಳ್ಳಿ ಶಂಕರಣ್ಣ ಈಶ್ವರಪ್ಪ ಎಂ ಅವರು 32,738 ಮತ ಗಳಿಸಿದ್ದರು.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರ ಚಿತ್ರಣ

ಮತದಾರರ ಒಟ್ಟು ಸಂಖ್ಯೆ- 2,42,700

ಪುರುಷ ಮತದಾರರು- 1,21,695

ಮಹಿಳಾ ಮತದಾರರು- 1,20,972

ಇತರೆ ಮತದಾರರು- 33

ಜಾತಿವಾರು ಮತದಾರರ ಅಂದಾಜು ಸಂಖ್ಯೆ

ಲಿಂಗಾಯತರು - 71,000

ಮುಸ್ಲಿಮರು- 43,000

ಎಸ್ಸಿ/ಎಸ್ಟಿ- 32,000

ಕ್ರೈಸ್ತರು- 26,500

ಮರಾಠಾ- 22,700

ಬ್ರಾಹ್ಮಣ- 22,000

ಇತರೆ ಸಮುದಾಯದವರು 25,000

(ಜಾತಿ ಗಣತಿ ಆಧಾರಿತ ಅಂಕಿ ಅಂಶ)

ಶೆಟ್ಟರ್‌ ವರ್ಚಸ್ಸಿನ ಹಿಂದಿನ ಲೆಕ್ಕಾಚಾರ

ಜಗದೀಶ್‌ ಶೆಟ್ಟರ್ ಅವರು ಬಣಜಿಗ ಲಿಂಗಾಯತರ ಸಮುದಾಯಕ್ಕೆ ಸೇರಿದವರು. ಕ್ಷೇತ್ರದ ಲಿಂಗಾಯತರ ಸಂಖ್ಯೆ 71 ಸಾವಿರ ಇದ್ದರೂ, ಬಣಜಿಗ ಲಿಂಗಾಯತ ಸಂಖ್ಯೆ ಕೇವಲ 12,500 ಸಾವಿರ. ಹೆಚ್ಚಿನವರು ಪಂಚಮಸಾಲಿ ಸಮುದಾಯದವರು. ಮೀಸಲಾತಿ ವಿಚಾರದಲ್ಲಿ ಗೆಲುವು ಸಿಕ್ಕ ಕಾರಣ ಬಿಜೆಪಿ ಬಿಟ್ಟು ಶೆಟ್ಟರ್‌ ಹಿಂದೆ ಬರುತ್ತಾರಾ ಎಂಬುದು ಪ್ರಶ್ನೆ.

ಸಂಘಟನಾ ಚಾತುರ್ಯದ ವಿಚಾರಕ್ಕೆ ಬಂದರೆ, ಬಿಎಸ್‌ವೈ ಅವರಷ್ಟು ಸಂಘಟನಾ ಚತುರತೆ ಉಳ್ಳವರಲ್ಲ ಶೆಟ್ಟರ್. ‌ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲೂ ಹೇಳಿಕೊಳ್ಳುವ ಸಾಧನೆ ಇಲ್ಲ ಎಂಬ ಮಾತು ಕೇಳಿಬರುತ್ತಿದೆ. ಈ ಎಲ್ಲ ಹಿನ್ನೆಲೆ ಇರುವ ಕಾರಣವೇ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದೆ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿಬರುತ್ತಿದೆ. ಆದಾಗ್ಯೂ, ಹುಬ್ಬಳ್ಳಿ ಸೆಂಟ್ರಲ್‌ ಕ್ಷೇತ್ರದ ಮಟ್ಟಿಗೆ ತಮ್ಮ ವರ್ಚಸ್ಸು ಎಷ್ಟರಮಟ್ಟಿಗಿದೆ ಎಂಬುದನ್ನು ಈಗ ಜಗದೀಶ್‌ ಶೆಟ್ಟರ್‌ ಅವರೇ ಈಗ ಒರೆಗೆ ಹಚ್ಚಿಕೊಂಡಿದ್ದಾರೆ. ಫಲಿತಾಂಶದ ದಿನ ಅದೂ ಬಹಿರಂಗವಾಗಲಿದೆ!

    ಹಂಚಿಕೊಳ್ಳಲು ಲೇಖನಗಳು