ಕನ್ನಡ ಸುದ್ದಿ  /  Karnataka  /  Who Is Jagadish Shettar: Background Of Jagdish Shettar Who Left Bjp And Joined Congress; Disturbed Bjp Leaders' Reaction

Who is Jagadish Shettar: ಕಮಲ ಬಿಟ್ಟು ಕೈ ಹಿಡಿದ ಜಗದೀಶ್‌ ಶೆಟ್ಟರ್‌ ಹಿನ್ನೆಲೆ ಇದು; ವಿಚಲಿತರಾದ ಬಿಜೆಪಿ ನಾಯಕರ ಪ್ರತಿಕ್ರಿಯೆ ಹೀಗಿದೆ..

Who is Jagadish Shettar: ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ ಪಕ್ಷ ಸೇರಿದಾಗ ಬಿಜೆಪಿ ನಾಯಕರು ಅಷ್ಟೊಂದು ಚಿಂತೆಗೀಡಾಗಿಲ್ಲ. ಆದರೆ, ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಪಕ್ಷ ಸೇರಿದ್ದು ಬಿಜೆಪಿ ನಾಯಕರನ್ನು ವಿಚಲಿತರನ್ನಾಗಿಸಿದೆ. ಈ ವಿದ್ಯಮಾನದ ಕಿರು ಅವಲೋಕನ ಇಲ್ಲಿದೆ.

ಜಗದೀಶ್‌ ಶೆಟ್ಟರ್‌ ಮಾಜಿ ಮುಖ್ಯಮಂತ್ರಿ
ಜಗದೀಶ್‌ ಶೆಟ್ಟರ್‌ ಮಾಜಿ ಮುಖ್ಯಮಂತ್ರಿ (PTI FILE PHOTO)

ಕರ್ನಾಟಕ ವಿಧಾನ ಸಭಾ ಚುನಾವಣೆ ದಿನ ಸಮೀಪವಿರುವಾಗ ಆಡಳಿತಾರೂಢ ಬಿಜೆಪಿಗೆ ಆಘಾತ ಉಂಟುಮಾಡುವ ವಿದ್ಯಮಾನಗಳು ಒಂದೊಂದಾಗಿ ನಡೆಯುತ್ತಿವೆ. , ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಬೆನ್ನಿಗೆ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಕೂಡ ಕಾಂಗ್ರೆಸ್‌ ಪಕ್ಷ ಸೇರಿಕೊಂಡಿದ್ದಾರೆ.

ಲಕ್ಷ್ಮಣ ಸವದಿ ಅವರು ಕಾಂಗ್ರೆಸ್‌ ಪಕ್ಷ ಸೇರಿದಾಗ ಬಿಜೆಪಿ ನಾಯಕರು ಅಷ್ಟೊಂದು ಚಿಂತೆಗೀಡಾಗಿಲ್ಲ. ಆದರೆ, ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಪಕ್ಷ ಸೇರಿದ್ದು ಬಿಜೆಪಿ ನಾಯಕರನ್ನು ವಿಚಲಿತರನ್ನಾಗಿಸಿದೆ. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಬಿಎಸ್ ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿದರೆ, ಲಕ್ಷ್ಮಣ ಸವದಿ ಮತ್ತು ಜಗದೀಶ ಶೆಟ್ಟರ್‌ ಕಾಂಗ್ರೆಸ್‌ ಸೇರಿದ ಕಾರಣ ಮೂವರು ಪ್ರಭಾವಿಗಳ ಬಲವನ್ನು ಪಕ್ಷ ಕಳೆದುಕೊಂಡಂತಾಗಿದೆ.

ಹುಬ್ಬಳ್ಳಿ- ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜಗದೀಶ ಶೆಟ್ಟರ್‌ ಕಣಕ್ಕೆ ಇಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಯಾರು ಮತ್ತು ಅವರು ಬಿಜೆಪಿ ಬಿಡುವುದಕ್ಕೆ ಕಾರಣವಾದ ಘಟನೆ ಏನು? ಇಲ್ಲಿದೆ ಆ ವಿವರ.

ಜಗದೀಶ್‌ ಶೆಟ್ಟರ್‌ ಯಾರು?

ಜಗದೀಶ್ ಶಿವಪ್ಪ ಶೆಟ್ಟರ್ ಅವರ ಪೂರ್ಣ ಹೆಸರು. ಕರ್ನಾಟಕದಲ್ಲಿ ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರು. ಮಾಜಿ ಮುಖ್ಯಮಂತ್ರಿ. ವಿಧಾನ ಸಭೆಯ ಸ್ಪೀಕರ್‌ ಕೂಡ ಆಗಿದ್ದವರು. ಹುಬ್ಬಳ್ಳಿ ಧಾರವಾಡ ಪ್ರದೇಶದಲ್ಲಿ ಲಿಂಗಾಯತ ಸಮುದಾಯದ ನಡುವೆ ಪಕ್ಷದ ಫೇಸ್‌ ಆಗಿ ಪ್ರಭಾವ ಹೊಂದಿದವರು. ಅವರ ತಂದೆ, ಎಸ್‌ಎಸ್ ಶೆಟ್ಟರ್ ಅಂದಿನ ಜನಸಂಘ ಪಕ್ಷದಿಂದ ಹುಬ್ಬಳ್ಳಿ-ಧಾರವಾಡದ ಮೇಯರ್ ಆಗಿದ್ದರು ಮತ್ತು ನಗರ ಪಾಲಿಕೆಯಲ್ಲಿ ಕೌನ್ಸಿಲರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಜಗದೀಶ್ ಶೆಟ್ಟರ್ ಮೊದಲ ಬಾರಿಗೆ 1994 ರಲ್ಲಿ, ಬಿಜೆಪಿ ಶಾಸಕರಾಗಿ ಗೆದ್ದರು. ಹಂತ ಹಂತವಾಗಿ ಪಕ್ಷದ ಪ್ರಮುಖ ಸ್ಥಾನಗಳನ್ನು ಪಡೆದವರು. ಅವರು 2012-2013 ರ ನಡುವೆ, ಬಿಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು. ಆಗ ಕರ್ನಾಟಕದ 15 ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶ ಪಡೆದರು. ಇದಕ್ಕೂ ಮುನ್ನ ಶೆಟ್ಟರ್ ಅವರು 2008 ರಲ್ಲಿ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿದ್ದರು. ನಂತರ ಅವರು ಆಗಿನ ಬಿಜೆಪಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಮತ್ತು ಸದಾನಂದ ಗೌಡರ ಸಂಪುಟದಲ್ಲಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.

ಜಗದೀಶ್‌ ಶೆಟ್ಟರ್‌ ಬಿಜೆಪಿ ಬಿಟ್ಟದ್ದು ಯಾಕೆ?

ಮೂರು ದಶಕಗಳ ಕಾಲ ಶಾಸಕರಾಗಿ ಮತ್ತು ಪಕ್ಷದ ಮಟ್ಟದಲ್ಲಿ, ಸರ್ಕಾರದ ಮಟ್ಟದಲ್ಲಿ ಬಹಳ ಪ್ರಮುಖ ಹೊಣೆಗಾರಿಕೆಗಳನ್ನು ನಿಭಾಯಿಸಿದ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ರಾಜೀನಾಮೆ ಸಲ್ಲಿಸಿ ಸೋಮವಾರ ಕಾಂಗ್ರೆಸ್ ಸೇರಿದರು.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವಾಗ ರಾಜ್ಯದ ಹಲವು ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಿದೆ. ಶೆಟ್ಟರ್ ಟಿಕೆಟ್ ವಂಚಿತ ಹಿರಿಯರಲ್ಲಿ ಒಬ್ಬರು. ಅತೃಪ್ತ ಲಿಂಗಾಯತ ಮುಖಂಡ ಪಕ್ಷದ ಹೈಕಮಾಂಡ್ ಜತೆ ಸಭೆ ನಡೆಸಿದರು. ಬಿಜೆಪಿ ಹೈಕಮಾಂಡ್ ಅವರಿಗೆ ನವದೆಹಲಿಯಲ್ಲಿ ಪ್ರಮುಖ ಸ್ಥಾನ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಟಿಕೆಟ್ ನೀಡುವ ಆಶ್ವಾಸನೆ ನೀಡಿತ್ತು ಎಂದು ವರದಿಯಾಗಿದೆ.

ಆದರೆ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಟಿಕೆಟ್ ವಿಚಾರದಲ್ಲಿ ಅವರು ಅಚಲವಾಗಿದ್ದು, ಅವರ ಷರತ್ತುಗಳಿಗೆ ಬಿಜೆಪಿ ಒಪ್ಪಿಗೆ ನೀಡಿಲ್ಲ. ಪಕ್ಷವು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನಿರಾಕರಿಸಿದೆ ಮತ್ತು ಅವರು ಕೂಡ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇದೇ ವೇಳೆ ಜಗದೀಶ್ ಶೆಟ್ಟರ್ ವಿರುದ್ಧ ಬಿಜೆಪಿ ಇನ್ನೂ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಶೆಟ್ಟರ್‌ ನಿರ್ಗಮನದ ಬೆನ್ನಿಗೆ ಮಾಜಿ ಮುಖ್ಯಮಂತ್ರಿ, ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಬಿಎಸ್. ಯಡಿಯೂರಪ್ಪ ಅವರ ಸುದ್ದಿಗೋಷ್ಠಿಯನ್ನು ಬಿಜೆಪಿ ಏರ್ಪಡಿತ್ತು. ಅದರಲ್ಲಿ ಅವರು, “ಬಿಜೆಪಿ ರಾಷ್ಟ್ರೀಯ ಪಕ್ಷ. ಹಳೆ ಬೇರು ಹೊಸ ಚಿಗುರು ಸೇರಿ ಪಕ್ಷವನ್ನು ಇನ್ನೂ ದೊಡ್ಡ ಹಂತಕ್ಕೆ ಬೆಳೆಸಬೇಕಿದೆ. ಶೆಟ್ಟರ್‌ ಅವರಿಗೆ, ಈಶ್ವರಪ್ಪನವರಿಗೆ, ಸವದಿಯವರಿಗೆ, ನನಗೆ ಎಲ್ಲವನ್ನೂ ಬಿಜೆಪಿ ನೀಡಿದೆ. ನಾನು ಇಂದು ಜನರ ವಿಶ್ವಾಸ ಗಳಿಸಲು ಕಾರಣ ಎಂದರೆ ಅದು ಬಿಜೆಪಿ ಪಕ್ಷ” ಎಂದು ಹೇಳಿದರು.

ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.

IPL_Entry_Point