Karnataka Elections: ಕರ್ನಾಟಕ ವಿಧಾನಸಭಾ ಚುನಾವಣೆ; ಸಿ.ಟಿ.ರವಿ, ಡಾ. ರೇವಣ್ಣ, ವಿ. ಸೋಮಣ್ಣ, ಅಶ್ವತ್ಥನಾರಾಯಣ ನಾಮಪತ್ರ ಸಲ್ಲಿಕೆ
Apr 17, 2023 05:18 PM IST
ಸಿ.ಟಿ.ರವಿ ನಾಮಪತ್ರ ಸಲ್ಲಿಕೆ
- ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ(Karnataka Elections) ಕರ್ನಾಟಕದಲ್ಲಿ ವಿವಿಧ ಮುಖಂಡರು ಚುನಾವಣೆಗೆ ಸ್ಪರ್ಧಿಸಲು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.
ಚಿಕ್ಕಮಗಳೂರು : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ(Karnataka Elections) ಕರ್ನಾಟಕದಲ್ಲಿ ವಿವಿಧ ಮುಖಂಡರು ಚುನಾವಣೆಗೆ ಸ್ಪರ್ಧಿಸಲು ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi), ಮೈಸೂರಿನಲ್ಲಿ ಟಿ. ನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರೇವಣ್ಣ ಮತ್ತು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹಾಗೂ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಹಾಲಿ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಾದ ಬಿ.ವೈ.ವಿಜಯೇಂದ್ರ, ಶಿಕಾರಿಪುರ, ಸಿ.ಟಿ.ರವಿ- ಚಿಕ್ಕಮಗಳೂರು, ಜ್ಯೋತಿ ಗಣೇಶ್ -ತುಮಕೂರು ನಗರ, ಎಸ್.ಪಿ.ಸ್ವಾಮಿ -ಮದ್ದೂರು, ಡಾ. ಇಂದ್ರೇಶ್ -ಮೇಲುಕೋಟೆ, ಸಚ್ಚಿದಾನಂದ -ಶ್ರೀರಂಗಪಟ್ಟಣ, ಎಸ್.ರಘು -ಸಿ.ವಿ.ರಾಮನ್ ನಗರ, ರವಿ ಸುಬ್ರಮಣ್ಯ- ಬಸವನಗುಡಿ, ಕುಮಾರ ಬಂಗಾರಪ್ಪ -ಸೊರಬ, ವರ್ತೂರ ಪ್ರಕಾಶ್ -ಕೋಲಾರ, ಹರೀಶ್ ಪೂಂಜಾ-ಬೆಳ್ತಂಗಡಿ, ರೂಪಾಲಿ ನಾಯಕ್- ಕಾರವಾರ, ಶಿವನಗೌಡ ನಾಯಕ್-ದೇವದುರ್ಗ, ಶಿವರಾಜ್ ಪಾಟೀಲ್-ರಾಯಚೂರು, ಮುನಿರತ್ನ ನಾಯ್ಡು- ಆರ್. ಆರ್.ನಗರ, ಎಸ್.ಮುನಿರಾಜು-ದಾಸರಹಳ್ಳಿ, ಎಂ.ಕೃಷ್ಣಪ್ಪ -ಬೆಂಗಳೂರು ದಕ್ಷಿಣ, ಅಶೋಕ್ ಜಯರಾಮ್-ಮಂಡ್ಯ, ಅನಿಲ್ ಕುಮಾರ್ ಕೊರಟಗೆರೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಪತ್ನಿ ಪಲ್ಲವಿರವಿ ಹಾಗೂ ಮುಖಂಡರೊಂದಿಗೆ ಸೋಮವಾರ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿ ಸಹಸ್ರಾರು ಜನ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಬೆಳಗ್ಗೆ ಸ್ವಗ್ರಾಮ ಚಿಕ್ಕಮಾಗರವಳ್ಳಿ ಗ್ರಾಮಕ್ಕೆ ತೆರಳಿದ ಸಿ.ಟಿ.ರವಿ ಗ್ರಾಮ ದೇವತೆಗೆ ಪೂಜೆ ಸಲ್ಲಿಸಿದ ಬಳಿಕ ನಗರದ ಬಸವನಹಳ್ಳಿ ನಿವಾಸದಿಂದ ಅಪಾರ ಬೆಂಬಲಿಗರೊಂದಿಗೆ ಶ್ರೀ ಕಾಮಧೇನು ಗಣಪತಿ ದೇವಾಲಯ, ಶೃಂಗೇರಿ ಶ್ರೀ ಶಂಕರಮಠ,ಶ್ರೀ ಬೋಳರಾಮೇಶ್ವರ ದೇವಾಲಯ, ತಾಲೂಕು ಕಚೇರಿ ಗಣಪತಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಮನೆಯಿಂದ ಹೊರಡುತ್ತಿದ್ದಂತೆ ಪುಷ್ಪವೃಷ್ಟಿಯೊಂದಿಗೆ ಸ್ವಾಗತಿಸಿದ ಕಾರ್ಯಕರ್ತರು ವಿವಿಧ ಘೋಷಣೆಗಳೊಂದಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪ್ರಧಾನಮಂತ್ರಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಣ್ಣಾಮಲೈ ಸೇರಿದಂತೆ ವಿವಿಧ ಮುಖಂಡರ ಫೋಟೋ ಹಿಡಿದು ದಾರಿಯುದ್ದಕ್ಕೂ ಜೈ ಕಾರ ಹಾಕುತ್ತಾ ಸಾಗಿದ ಕಾರ್ಯಕರ್ತರು ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ದಾರಿಯುದ್ದಕ್ಕೂ ಅಲ್ಲಲ್ಲಿ ನಾಗರೀಕರು ಆರತಿ ಎತ್ತಿ, ಕಾಯಿ ಒಡೆದು ಪುಷ್ಪಮಾಲೆ ಹಾಕಿ ಶುಭಕೋರಿದ ದೃಶ್ಯ ಸಾಮಾನ್ಯವಾಗಿತ್ತು. ಮಹಿಳೆಯರಾದಿಯಾಗಿ ನಗರ ಹಾಗೂ ಗ್ರಾಮೀಣ ಭಾಗದ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಶಾಸಕ ಸಿ.ಟಿ.ರವಿ ನಾಮಪತ್ರ ಸಲ್ಲಿಕೆ ಹಿನ್ನೆಲೆ ಬಸವನಹಳ್ಳಿ ಮುಖ್ಯರಸ್ತೆ ಸಂಪೂರ್ಣ ಗಿಜಗುಡುತ್ತಿತ್ತು. ಪತ್ನಿ ಪಲ್ಲವಿ ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ಗ್ರಾಮಾಂತರ ಅಧ್ಯಕ್ಷ ಈಶ್ವರಹಳ್ಳಿ ಮಹೇಶ್, ಸಫಾಯಿ ಕರ್ಮಾಚಾರಿ ಅಭಿವೃದ್ದಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಜೊತೆ ನಾಮಪತ್ರ ಸಲ್ಲಿಸಿದರು. ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಉಪಾಧ್ಯಕ್ಷ ಉಮಾದೇವಿ ಕೃಷ್ಣಪ್ಪ ಸೇರಿದಂತೆ ಸದಸ್ಯರುಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರುಗಳು ಹಾಗೂ ಪಕ್ಷದ ಮುಖಂಡರುಗಳು ಇದ್ದರು.
ಸಚಿವ ಅಶ್ವತ್ಥನಾರಾಯಣ ನಾಮಪತ್ರ ಸಲ್ಲಿಕೆ
ಬೆಂಗಳೂರು: ಹಾಲಿ ಶಾಸಕ ಮತ್ತು ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದರು.
ಇದರ ಅಂಗವಾಗಿ ಮಲ್ಲೇಶ್ವರದ ಮಾರಮ್ಮ ಸರ್ಕಲ್‌ನಲ್ಲಿ ಪೂಜೆ ಸಲ್ಲಿಸಿ, ಸಾವಿರಾರು ಕಾರ್ಯಕರ್ತರೊಂದಿಗೆ ಹೊರಟ ಅವರು, 18ನೇ ಅಡ್ಡರಸ್ತೆಯಲ್ಲಿರುವ ಗೋಕಾಕ್ ಚಳವಳಿ ಸ್ಮರಣಾರ್ಥ ಉದ್ಯಾನ, 18ನೇ ಅಡ್ಡರಸ್ತೆ ಮೂಲಕ ಚುನಾವಣಾಧಿಕಾರಿಗಳ ಕಚೇರಿ ಇರುವ ಜಲಮಂಡಳಿ ಕಚೇರಿಗೆ ಪಾದಯಾತ್ರೆ ಮೂಲಕ ಸಾಗಿದರು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಲಾತಂಡಗಳು ತಮ್ಮ ಪ್ರದರ್ಶನದ ಮೂಲಕ ಮೆರುಗು ನೀಡಿ, ವರ್ಣರಂಜಿತ ವಾತಾವರಣವನ್ನು ಸೃಷ್ಟಿಸಿದ್ದವು.
ಇಷ್ಟೇ ಅಲ್ಲದೆ, ಮಲ್ಲೇಶ್ವರ ಕ್ಷೇತ್ರದ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವ ಯದುಗಿರಿ ಯತಿರಾಜ ಮಠ, ಬಡಗನಾಡು ಬ್ರಾಹ್ಮಣ ಮಹಾಸಭಾ, ಸಿರಿನಾಡು ಬ್ರಾಹ್ಮಣ ಸಭಾ, ಅಕ್ಷಯ ಬ್ರಾಹ್ಮಣ ಸಭಾ, ಮಹಾತ್ಮ ಮಹಾಮಂಡಲ, ಮಾಧ್ವ ಮಹಾಮಂಡಲ, ವಿಪ್ರತ್ರಯ ಪರಿಷತ್, ಸುಧೀಂದ್ರ ನಗರದ ಮಾಧ್ವ ಸಂಘ ಮತ್ತು ಉಲಚಕಮ್ಮೆ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು ನಾಮಪತ್ರದ ಜತೆ ಸಲ್ಲಿಸಬೇಕಾದ 10 ಸಾವಿರ ರೂ.ಗಳ ಠೇವಣಿ ಮೊತ್ತವನ್ನು ಅಶ್ವತ್ಥನಾರಾಯಣ ಅವರಿಗೆ ದೇಣಿಗೆಯಾಗಿ ಹಸ್ತಾಂತರಿಸಿದರು. ಇದೇ ಹಣವನ್ನು ಸಚಿವರು ನಾಮಪತ್ರದ ಜತೆ ಚುನಾವಣಾ ಅಧಿಕಾರಿಗಳಿಗೆ ಠೇವಣಿಯಾಗಿ ನೀಡಿದರು.
ಡಾ. ರೇವಣ್ಣ ನಾಮಪತ್ರ ಸಲ್ಲಿಕೆ
ಮೈಸೂರು: ಟಿ. ನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರೇವಣ್ಣ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಾಜರಿದ್ದರು. ಈ ಸಂದರ್ಭದಲ್ಲಿ ಸಚಿವರಾದ ವಿ.ಸೋಮಣ್ಣ ಕೂಡ ಹಾಜರಿದ್ದರು
ವಿ ಸೋಮಣ್ಣ ನಾಮಪತ್ರ ಸಲ್ಲಿಕೆ
ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಹಾಜರಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ಸಮಾವೇಶದಲ್ಲಿ ಪಾಲ್ಗೊಂಡು, ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಸಚಿವ ವಿ.ಸೋಮಣ್ಣ, ಸಂಸದ ವಿ.ಶ್ರೀನಿವಾಸ ಪ್ರಸಾದ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹಾಗೂ ಮತ್ತಿತರರು ಹಾಜರಿದ್ದರು.