logo
ಕನ್ನಡ ಸುದ್ದಿ  /  ಕರ್ನಾಟಕ  /  Dharwad News: ಸದ್ದಿಲ್ಲದೇ ಕನ್ನಡದ ಕೆಲಸ ಮಾಡಿದ ಕಾಪಸೆ, ದೇಹದಾನ ಮಾಡಿ ಮಾದರಿಯಾದ ಸಾಹಿತಿ

Dharwad News: ಸದ್ದಿಲ್ಲದೇ ಕನ್ನಡದ ಕೆಲಸ ಮಾಡಿದ ಕಾಪಸೆ, ದೇಹದಾನ ಮಾಡಿ ಮಾದರಿಯಾದ ಸಾಹಿತಿ

Umesha Bhatta P H HT Kannada

Mar 27, 2024 06:21 PM IST

ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಈಗ ನೆನಪು

    • ಕನ್ನಡದ ವಿದ್ವಾಂಸ ಗುರುಲಿಂಗ ಕಾಪಸೆ ಅವರು ವಿವಾದಕ್ಕೆ ಎಡೆ ಮಾಡಿಕೊಡದೇ ಕೆಲಸ ಮಾಡಿ ನಿರ್ಗಮಿಸಿದವರು. ಅವರು ತಮ್ಮ ಪಾಂಡಿತ್ಯದಿಂದಲೇ ಗಮನ ಸೆಳೆದಿದ್ದವರು.
ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಈಗ ನೆನಪು
ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಈಗ ನೆನಪು

ಧಾರವಾಡ : ಸದ್ದು ಮಾಡದೇ ಕನ್ನಡದ ಕೆಲಸವನ್ನು ಕಟ್ಟಾಳುವಿನ ರೀತಿಯಲ್ಲಿ ಮಾಡಿದ ಹಿರಿಯ ಸಾಹಿತಿ, ಕನ್ನಡದ ವಿದ್ವಾಂಸ, ಡಾ.ಗುರುಲಿಂಗ ಕಾಪಸೆ ಅವರ ನೆನಪು ಶಾಶ್ವತ. ಕನ್ನಡದ ಸಾಹಿತ್ಯ ವಲಯದಲ್ಲಿ ಯಾವುದೇ ಪ್ರಭಾವಳಿ ಸೃಷ್ಟಿಸಿಕೊಳ್ಳದೇ ತಾವು ನಂಬಿದ ಚಿಂತನೆಯ ಮೂಲಕ ಬದುಕು ನಡೆಸಿ ನಿರ್ಗಮಿಸಿದವರು ಕಾಪಸೆ ಅವರು. ಧಾರವಾಡದಲ್ಲಿ ಬುಧವಾರ ಅವರು ಲಿಂಗೈಕ್ಯರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಇನ್ನು ನಾಲ್ಕು ವರ್ಷವಾಗಿದ್ದರೆ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದರು. ವಯೋ ಸಹಜ ಕಾರಣದಿಂದ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಗುರುಲಿಂಗ ಕಾಪಸೆ ಅವರು ತಮ್ಮ ದೇಹವನ್ನು ವೈದ್ಯಕೀಯ ಉದ್ದೇಶಗಳಿಂದ ದಾನ ಮಾಡುವ ಮೂಲಕ ಅಲ್ಲಿಯೂ ಮಾದರಿಯಾದರು.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಜಲ ಮಂಡಳಿ ಫೋನ್ ಇನ್ ಕಾರ್ಯಕ್ರಮ ಇಂದು ಬೆಳಗ್ಗೆ 9.30ಕ್ಕೆ, ಕುಂದುಕೊರತೆ, ಅಹವಾಲು ಸಲ್ಲಿಸಲು ಫೋನ್ ನಂಬರ್ ಇಲ್ಲಿದೆ..

ಕರ್ನಾಟಕ ಹವಾಮಾನ ಮೇ 17; ದಕ್ಷಿಣ ಕನ್ನಡ, ಮೈಸೂರು, ಮಂಡ್ಯ ಸೇರಿ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉಳಿದೆಡೆ ಮಳೆ ಮುನ್ಸೂಚನೆ

Belagavi News: ಚಾಲುಕ್ಯ ರೈಲಿನಲ್ಲಿ ಟಿಕೆಟ್‌ ತಪಾಸಣೆ ವೇಳೆ ಇರಿದ ಪ್ರಯಾಣಿಕ. ಸಿಬ್ಬಂದಿ ಸಾವು, ಆರೋಪಿ ಪರಾರಿ

Bangalore Crime: ಗೃಹ ಸಚಿವರ ಆಪ್ತ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ 1 ಕೋಟಿ ರೂ. ವಂಚಿಸಿದ್ದ ಯುವಕ ಬಂಧನ

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದ ಅವರು ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ 70 ರ ದಶಕದಲ್ಲಿಯೇ ಕನ್ನಡದ ಅಧ್ಯಾಪಕರಾಗಿ ಹಲವಾರು ವಿದ್ಯಾರ್ಥಿಗಳು, ಯುವ ಸಾಹಿತಿಗಳನ್ನು ಬೆಳೆಸಿದವರು. ವಿದ್ಯಾಕಾಶಿ ಧಾರವಾಡದಲ್ಲಿಯೇ ನಿವೃತ್ತಿ ಜೀವನ ನಡೆಸಿದ್ದರು.

ಕಾಪಸೆ ಅವರು ಜನಿಸಿದ್ದ ಕೃಷ್ಣಾ-ಭೀಮಾ ತೀರದ ಬಿಜಾಪುರ ಜಿಲ್ಲೆಯಲ್ಲಿ. ಭೀಮಾ ನದಿ ಭಾಗದ ಬಿ.ಕೆ.ಲೋಣಿಯಲ್ಲಿ 1928 ರ ಏಪ್ರಿಲ್‌ 2ರಂದು ಜನಿಸಿದ್ದ ಕಾಪಸೆ ಅವರು ಸ್ವಗ್ರಾಮದಲ್ಲಿಯೇ ಶಿಕ್ಷಣ ಪಡೆದು ನಂತರ ವಿಜಯಪುರ, ಧಾರವಾಡದಲ್ಲಿ ವ್ಯಾಸಂಗ ಪಡೆದವರು. ಕನ್ನಡ ಸಾಹಿತ್ಯದ ಮೇಲೆ ಎಳೆಯ ವಯಸ್ಸಿನಲ್ಲಿಯೇ ಒಲುಮೆ ಬೆಳೆಸಿಕೊಂಡು ಎಂಎ ಕೂಡ ಕನ್ನಡದಲ್ಲಿಯೇ ಮುಗಿಸಿದವರು. ಬಳಿಕ ಕನ್ನಡದ ಮೇಷ್ಟ್ರಾಗಿಯೇ ಮುಂದುವರೆದರು. ಧಾರವಾಡವೇ ಅವರ ಕರ್ಮಭೂಮಿಯಾಗಿ ಮಾರ್ಪಟ್ಟಿತ್ತು. ಕನ್ನಡ ಸಾಹಿತ್ಯ, ಭಾಷೆ, ಸಂಶೋಧನೆ ಜತೆಗೆ ಜನಪದ ವಿಚಾರದಲ್ಲೂ ಅವರು ಅಗಾಧ ಜ್ಞಾನ ಸಂಪಾದಿಸಿದ್ದರು. ವಿಜಯಪುರದ ಮಧುರಚೆನ್ನರ ಕುರಿತಾದ ಜೀವನ ಹಾಗೂ ಕೃತಿಗಳು ಎನ್ನುವ ಮಹಾಪ್ರಬಂಧ ಅವರ ಕಾರ್ಯಕ್ಕೆ ಹಿಡಿದ ಕೈಗನ್ನಡಿ.

ಹಂಪಿ ಕನ್ನಡ ವಿಶ್ವವಿದ್ಯಾಲಯ ದ ಪ್ರಸಾರಾಂಗವು1998ರಲ್ಲಿ ಹೊರ ತಂದ ಡಾ. ಕಾಪಸೆ ಅವರು ಸಂಪಾದಿಸಿದ ಹಲಸಂಗಿ ಗೆಳೆಯರು ಕೂಡ ಅಷ್ಟೇ ಮಹತ್ವ ಪಡೆದಿದೆ.

ಅಕ್ಕಮಹಾದೇವಿ, ಶ್ರೀ ಅರವಿಂದರು, ಬಸವೇಶ್ವರ ಅವರ ಇತರೆ ಪ್ರಮುಖ ಕೃತಿಗಳು.

ಪ್ರವಾಸದಲ್ಲೂ ಆಸಕ್ತಿಯಿಂದ ಇದದ ಅವರು ಶಾಲ್ಮಲೆಯಿಂದ ಗೋದಾವರಿಯವರೆಗೆ ಎನ್ನುವ ಪ್ರವಾಸಕಥನ ರಚಿಸಿದ್ದರು. ಮಕ್ಕಳ ಸಾಹಿತ್ಯದಲ್ಲೂ ಕೈಯಾಡಿಸಿದ್ದ ಕಾಪಸೆ ಅವರು ಅಲ್ಲಿಯೂ ಕೃತಿಗಳನ್ನು ನೀಡಿದ್ದರು.

ಕಾಲ-ಕವಿ (ಕಾವ್ಯ), ಪಾರಮಾರ್ಥ ಗೀತಾ ಪ್ರವಚನ, ಹರಿಹರನ ಐದು ರಗಳೆಗಳು, ಅರವಿಂದ ಪರಿಮಳ, ಹೈಮವತಿ ಶೈಶವಲೀಲೆ(ಗಿರಿಜಾ ಕಲ್ಯಾಣ ಸಂಗ್ರಹ), ಚೆಂಬೆಳಕು (ಕಣವಿ ಅಭಿನಂದನ ಗ್ರಂಥ), ಬೆಳಗಲಿ (ದು.ನಿಂ.ಬೆಳಗಲಿ ಅಭಿನಂದನ ಗ್ರಂಥ), ಕನ್ನಡ ಮರಾಠಿ ಸಾಹಿತ್ಯ ಬಾಂಧವ್ಯ, ಭವ್ಯ ಮಾನವ ಕಾವ್ಯ ದರ್ಶನ, ಜ್ಞಾನಸಿಂಧು, ಪಿ.ಧೂಲಾಸಾಹೇಬ, ಕನ್ನಡ ಕಾವಲು, ಚಾಮರಸ, ಮುಗಿಯದ ಹಾಡು, ಆತ್ಮಶೋಧ (ಮಧುರಚೆನ್ನರ ಸಮಗ್ರ ಸಾಹಿತ್ಯ ಶೋಧ) ಅವರ ಸಂಪಾದಿಕ ಕೃತಿಗಳು. ಬೇಂದ್ರೆ-ಮಧುರಚೆನ್ನ ಸಖ್ಯಯೋಗ ಎಂಬ ಪ್ರಮುಖ ಕೃತಿಯನ್ನು ನೀಡಿದ್ದಾರೆ. ಇದೇ ನಿಜವಾದ ಮೂರ್ತಿಪೂಜೆ ಮತ್ತು ಇದೇ ನಿಜವಾದ ಧರ್ಮ (ಮರಾಠಿಯಿಂದ ಕನ್ನಡಕ್ಕೆ), ಬಸವೇಶ್ವರಾಂಚೆ ವಚನ (ಕನ್ನಡದಿಂದ ಮರಾಠಿಗೆ) ಅನುವಾದ ಕೃತಿಗಳು ಪ್ರಕಟವಾಗಿವೆ.

ಅವರ ಸಾಹಿತ್ಯ ಸಾಧನೆಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳೂ ಬಂದಿದ್ದವು. ವರದರಾಜ ಆದ್ಯ ಪ್ರಶಸ್ತಿ, ಆನಂದಕಂದ ಪ್ರಶಸ್ತಿ, ಸ.ಸ.ಮಾಳವಾಡ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಫೆಲೋಶಿಪ್ , ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮತ್ತು ಫೆಲೋಷಿಪ್ ದೊರೆತಿತ್ತು. ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಕಾಪಸೆ ಅವರು ಗಟ್ಟಿ ಕೆಲಸ ಮಾಡಿದ್ದನ್ನು ಈಗಲೂ ಅವರ ಶಿಷ್ಯರು ನೆನಪಿಸಿಕೊಳ್ಳುತ್ತಾರೆ.

ಧಾರವಾಡದ ಸಪ್ತಾಪುರದಲ್ಲಿರುವ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಆನಂತರ ವೈದ್ಯಕೀಯ ಕಾಲೇಜಿಗೆ ದೇಹವನ್ನು ಹಸ್ತಾಂತರ ಮಾಡಲಾಯಿತು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ