logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Elections: ನೀತಿ ಸಂಹಿತೆ ಉಲ್ಲಂಘನೆ; 2346 ಎಫ್‌ಐಆರ್ ದಾಖಲು, 305 ಕೋಟಿ ಮೊತ್ತದ ನಗದು-ವಸ್ತು ಮುಟ್ಟುಗೋಲು

Karnataka Elections: ನೀತಿ ಸಂಹಿತೆ ಉಲ್ಲಂಘನೆ; 2346 ಎಫ್‌ಐಆರ್ ದಾಖಲು, 305 ಕೋಟಿ ಮೊತ್ತದ ನಗದು-ವಸ್ತು ಮುಟ್ಟುಗೋಲು

HT Kannada Desk HT Kannada

May 03, 2023 11:46 AM IST

google News

ಚುನಾವಣಾ ಆಯೋಗ

    • Election Commission: ಕಳೆದ 2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನಕ್ಕೆ (ಮೇ 10) ಇನ್ನೂ ಒಂದು ವಾರ ಬಾಕಿರುವಾಗಲೇ, ವಶಪಡಿಸಿಕೊಂಡಿರುವ ನಗದು ಮತ್ತು ವಸ್ತುಗಳ ಮೊತ್ತವು 222 ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ.
ಚುನಾವಣಾ ಆಯೋಗ
ಚುನಾವಣಾ ಆಯೋಗ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Elections 2023) ಘೋಷಣೆಯಾದ ನಂತರ ಚುನಾವಣಾ ಆಯೋಗವು (Election Commission) ಈವರೆಗೆ 305 ಕೋಟಿ ರೂಪಾಯಿ ಮೊತ್ತದಷ್ಟು ನಗದು ಹಾಗೂ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದೆ. ರಾಜ್ಯದಲ್ಲಿ ಮಾರ್ಚ್‌ 29ರಂದು ಚುನಾವಣಾ ನೀತಿ ಸಂಹಿತೆ ಜಾರಿಯಾಗಿತ್ತು. ಕಳೆದ 2018ರ ಚುನಾವಣೆಯಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ನಗದು ಮತ್ತು ವಸ್ತುಗಳ ಮೊತ್ತ 83 ಕೋಟಿ ರೂಪಾಯಿ. ಈ ಲೆಕ್ಕದಂತೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನಕ್ಕೆ (ಮೇ 10) ಇನ್ನೂ ಒಂದು ವಾರ ಬಾಕಿರುವಾಗಲೇ ಅಂದರೆ ಮೇ 3ರವರೆಗೆ ವಶಪಡಿಸಿಕೊಂಡಿರುವ ನಗದು ಮತ್ತು ವಸ್ತುಗಳ ಮೊತ್ತವು 222 ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ.

ಈವರೆಗೆ ವಶಪಡಿಸಿಕೊಂಡಿರುವುದರಲ್ಲಿ ನಗದು (110 ಕೋಟಿ), ಮದ್ಯ (74 ಕೋಟಿ ಮೌಲ್ಯ), ಚಿನ್ನ ಮತ್ತು ಬೆಳ್ಳಿ (81 ಕೋಟಿ ಮೌಲ್ಯ), ಹಂಚಿಕೆ ಮಾಡಲು ತಂದಿದ್ದ ವಸ್ತುಗಳು (22 ಕೋಟಿ ಮೌಲ್ಯ), ಮಾದಕ ವಸ್ತುಗಳು (18 ಕೋಟಿ ಮೌಲ್ಯ) ಸೇರಿವೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

ನಗದು ಮತ್ತು ವಸ್ತುಗಳ ಮುಟ್ಟುಗೋಲು ಸಂಬಂಧ ಚುನಾವಣಾ ನೀತಿ ಸಂಹಿತೆ ಕುರಿತು ಈವರೆಗೆ 2,346 ಎಫ್‌ಐಆರ್ ದಾಖಲಾಗಿವೆ. ಚುನಾವಣೆ ಘೋಷಣೆಗೆ ಮೊದಲೇ (ಮಾರ್ಚ್ 9ರಿಂದ 27ರ ಅವಧಿ) ಮುಟ್ಟುಗೋಲು ಹಾಕಿಕೊಂಡಿದ್ದು ನಗದು ಮತ್ತು ವಸ್ತುಗಳ ಮೊತ್ತ 58 ಕೋಟಿ ರೂಪಾಯಿ ದಾಟಿತ್ತು.

ದೊಡ್ಡಮಟ್ಟದಲ್ಲಿ ಅವ್ಯವಹಾರ ನಡೆಯುವ ಅನುಮಾನಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಅಗತ್ಯ ಮುನ್ನೆಚ್ಚರಿಕೆ ವಹಿಸಿದೆ. ಸ್ಥಳೀಯ ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸುವಂತೆ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‌ ಕುಮಾರ್ ಸೂಚಿಸಿದ್ದಾರೆ. ವಿಡಿಯೊ ಕಾನ್ಫರೆನ್ಸ್ ಮೂಲಕ ರಾಜ್ಯದ ಕಾನೂನು ಸುವ್ಯವಸ್ಥೆ ಹಾಗೂ ಪರಿಸ್ಥಿತಿ ಪರಿಶೀಲಿಸಿದ ಅವರು, ಅಕ್ಕಪಕ್ಕದ ರಾಜ್ಯಗಳ ಪೊಲೀಸರ ಸಹಕಾರದಿಂದ ಗಡಿಯಲ್ಲಿ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಅಕ್ರಮ ಎಸಗುವವರಲ್ಲಿ ಆಡಳಿತದ ಬಗ್ಗೆ ಭಯ ಹುಟ್ಟಿಸಬೇಕು ಎಂದು ತಾಕೀತು ಮಾಡಿದರು. ಕರಾವಳಿ ಕಾವಲು ಪಡೆ ಹಾಗೂ ಮಾದಕ ವಸ್ತು ನಿಯಂತ್ರಣ ದಳದ ಅಧಿಕಾರಿಗಳಿಗೆ ಕಣ್ಗಾವಲು ಹೆಚ್ಚಿಸುವಂತೆ ಸೂಚಿಸಿದರು.

ಪರಿಶೀಲನಾ ಸಭೆಯಲ್ಲಿ ಗೋವಾ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಮತ್ತು ಪೊಲೀಸ್ ಇಲಾಖೆಯ ಮುಖ್ಯಸ್ಥರು ಪಾಲ್ಗೊಂಡಿದ್ದರು.

ರಾಜ್ಯದ ಸುತ್ತಲೂ ಇರುವ 185 ಅಂತರರಾಜ್ಯ ಗಡಿ ತಪಾಸಣಾ ಠಾಣೆಗಳಲ್ಲಿ ಕಣ್ಗಾವಲು ಹೆಚ್ಚಿಸಬೇಕು. ನೆರೆ ರಾಜ್ಯಗಳಿಂದ ಅಕ್ರಮವಾಗಿ ನಗದು, ಮದ್ಯ, ಮಾದಕ ವಸ್ತುಗಳು ಅಥವಾ ಇತರ ಉಚಿತ ಹಂಚಿಕೆ ವಸ್ತುಗಳು ಬಾರದಂತೆ ತಡೆಯಬೇಕು. ಇವನ್ನು ಮತದಾರರಿಗೆ ಹಂಚಿಕೆಯಾಗದಂತೆ ತಡೆಯಬೇಕು ಎಂದು ತಾಕೀತು ಮಾಡಿದರು. ವಿಡಿಯೊ ಕಾನ್ಫರೆನ್ಸ್ ಸಭೆಯಲ್ಲಿ ಮಾತನಾಡಿದ ಚುನಾವಣಾ ಆಯುಕ್ತ ಅರುಣ್ ಗೋಯೆಲ್, ಬಿಗಿ ಕ್ರಮಕೈಗೊಳ್ಳುವುದು ಎಂದರೆ ಜನಜೀವನಕ್ಕೆ ತೊಂದರೆ ಉಂಟು ಮಾಡುವುದು ಅಲ್ಲ. ಈ ಬಗ್ಗೆಯೂ ಅಧಿಕಾರಿಗಳು ಎಚ್ಚರದಿಂದ ಇರಬೇಕು. ಚುನಾವಣೆಯು ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ನಡೆಯಬೇಕು ಎನ್ನುವುದಷ್ಟೇ ಈ ಕ್ರಮಗಳ ಉದ್ದೇಶ ಆಗಿರಬೇಕು ಎಂದು ತಿಳಿಸಿದರು.

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಘೋಷಣೆಯಾಗಲಿದೆ. ಕರ್ನಾಟಕದಲ್ಲಿ ಈ ಬಾರಿ 5.24 ಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ಈ ಪೈಕಿ 2.63 ಕೋಟಿ ಪುರುಷರು ಮತ್ತು 2.60 ಕೋಟಿ ಮಹಿಳೆಯರು. 100 ವರ್ಷ ದಾಟಿರುವ 16,976 ಮತದಾರರಿದ್ದರೆ, 18ರಿಂದ 19 ವರ್ಷದ ಯುವ ಮತದಾರರ ಸಂಖ್ಯೆ 9.58 ಲಕ್ಷ. 80 ವರ್ಷ ದಾಟಿದವರ ಸಂಖ್ಯೆಯೂ (12.15 ಲಕ್ಷ) ಗಣನೀಯ ಪ್ರಮಾಣದಲ್ಲಿದೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಚುನಾವಣಾ ಆಯೋಗವು ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಪ್ರತಿ ಅಭ್ಯರ್ಥಿಗೆ 40 ಲಕ್ಷ ರೂಪಾಯಿ ವೆಚ್ಚ ಮಿತಿ ಘೋಷಿಸಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ 3.51 ಲಕ್ಷ ಸಿಬ್ಬಂದಿ ಶ್ರಮಿಸಲಿದ್ದಾರೆ. ವೆಚ್ಚದ ಪರಿಶೀಲನೆಗಾಗಿ 234 ವೆಚ್ಚ ವೀಕ್ಷಕರನ್ನು ಗುರುತಿಸಲಾಗಿದೆ.

ಕರ್ನಾಟಕದಲ್ಲಿ ಹಾಲಿ ಅಸ್ತಿತ್ವದಲ್ಲಿರುವ 15ನೇ ವಿಧಾನಸಭೆಯ ಅವಧಿ ಮೇ 23ಕ್ಕೆ ಕೊನೆಯಾಗಲಿದೆ. ಪ್ರಸ್ತುತ ಬಿಜೆಪಿ 119, ಕಾಂಗ್ರೆಸ್ 75, ಜೆಡಿಎಸ್‌ 28 ಶಾಸಕ ಬಲ ಹೊಂದಿವೆ. ಬಿಜೆಪಿಯ ಉಮೇಶ್ ಕತ್ತಿ ಹಾಗೂ ಆನಂದ್ ಮಾಮನಿ ನಿಧನರಾದ ಹಿನ್ನೆಲೆಯಲ್ಲಿ 2 ಸ್ಥಾನಗಳು ಖಾಲಿಯಿವೆ. ಈ ಸ್ಥಾನಗಳಿಗೆ ಉಪ ಚುನಾವಣೆ ನಡೆದಿರಲಿಲ್ಲ.

ಎಚ್‌ಟಿ ಕನ್ನಡ ವಾಟ್ಸಾಪ್ ಕಮ್ಯುನಿಟಿ ಸೇರಿ. ಫೇಸ್‌ಬುಕ್ ಪೇಜ್ ಲೈಕ್ ಮಾಡಿ, ಟ್ವಿಟರ್‌ನಲ್ಲಿ ಫಾಲೊ ಮಾಡಿ. ಯುಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ