logo
ಕನ್ನಡ ಸುದ್ದಿ  /  ಕರ್ನಾಟಕ  /  Arjuna Cremated: ಜನರ ಆಕ್ರೋಶದ ನಡುವೆ ಅರ್ಜುನನಿಗೆ ಅಂತಿಮ ವಿದಾಯ: ಅಂಬಾರಿ ಆನೆ ಸಾವಿನ ತನಿಖೆಗೆ ಹೆಚ್ಚಿದ ಒತ್ತಡ

Arjuna cremated: ಜನರ ಆಕ್ರೋಶದ ನಡುವೆ ಅರ್ಜುನನಿಗೆ ಅಂತಿಮ ವಿದಾಯ: ಅಂಬಾರಿ ಆನೆ ಸಾವಿನ ತನಿಖೆಗೆ ಹೆಚ್ಚಿದ ಒತ್ತಡ

HT Kannada Desk HT Kannada

Dec 05, 2023 04:51 PM IST

ಮಣ್ಣಲ್ಲಿ ಮಣ್ಣಾಗಿ ಹೋದ ಅಂಬಾರಿ ಆನೆ ಅರ್ಜುನ ಮೈಸೂರು ದಸರಾಗೆ ಬಂದಾಗ

    • Arjuna Memory ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತು ಗಮನ ಸೆಳೆದಿದ್ದ ಅರ್ಜುನ ಆನೆ ಹಾಸನ ಜಿಲ್ಲೆಯಲ್ಲಿ(Hassan) ಕಾರ್ಯಾಚರಣೆ ವೇಳೆ ಮೃತಪಟ್ಟಿತು. ಆನೆಯ ಅಂತ್ಯಕ್ರಿಯೆ ಸಾಕಷ್ಟು ಚರ್ಚೆಗಳ ನಡುವೆ ಸರ್ಕಾರಿ ಗೌರವದೊಂದಿಗೆ ಅರಣ್ಯ ಇಲಾಖೆ( Karnataka Forest Department) ನೆರವೇರಿಸಿತು 
ಮಣ್ಣಲ್ಲಿ ಮಣ್ಣಾಗಿ ಹೋದ ಅಂಬಾರಿ ಆನೆ ಅರ್ಜುನ ಮೈಸೂರು ದಸರಾಗೆ ಬಂದಾಗ
ಮಣ್ಣಲ್ಲಿ ಮಣ್ಣಾಗಿ ಹೋದ ಅಂಬಾರಿ ಆನೆ ಅರ್ಜುನ ಮೈಸೂರು ದಸರಾಗೆ ಬಂದಾಗ

ಹಾಸನ: ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಅರ್ಜುನ ಆನೆಯ ಸಾವಾಗಿದೆ ಎಂಬ ಸ್ಥಳೀಯರ ಆಕ್ರೋಶದ ನಡುವೆ ಅಂಬಾರಿ ವೀರ ಅರ್ಜುನನ ಅಂತ್ಯಕ್ರಿಯೆ ನಡೆಯಿತು.

ಟ್ರೆಂಡಿಂಗ್​ ಸುದ್ದಿ

Hubli News:ಅಂಜಲಿ ಅಂಬಿಗೇರ ಹತ್ಯೆ, ಹುಬ್ಬಳ್ಳಿ ಐಪಿಎಸ್‌ ಅಧಿಕಾರಿ ರಾಜೀವ್‌ ಸಸ್ಪೆಂಡ್‌, ಪೊಲೀಸ್‌ ಆಯುಕ್ತರ ತಲೆದಂಡ ಸಾಧ್ಯತೆ

Environment day: ವಿಶ್ವ ಪರಿಸರ ದಿನಕ್ಕೆ ಜಾಗತಿಕ ತಾಪಮಾನದ ಮೇಲೆ ಪ್ರಬಂಧ ಬರೆಯಿರಿ, 5000 ರೂ. ಬಹುಮಾನ ಪಡೆಯಿರಿ

Vijayapura News: ವಿಜಯಪುರ ಬಿಎಲ್‌ಡಿಇಯಲ್ಲಿ ಕೌಶಲ್ಯಗಳ ಸಂಗಮ, ತಾಂತ್ರಿಕ ಹಬ್ಬದ ಸಡಗರ

Museums Day 2024: ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಮೈಸೂರು ಮ್ಯೂಸಿಯಂಗಳಿಗೆ ಹೊಸ ರೂಪ, ಏನಿದರ ವಿಶೇಷ

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಯಸಳೂರು ವಲಯದ ದಬ್ಬಳ್ಳಿಕಟ್ಟೆ ಕೆಎಫ್‌ಡಿಸಿ ನಡುತೋಪಿನ ಪ್ರದೇಶದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಿತು.

ಆದರೆ ಆನೆ ಸಾವಿನ ಬಗ್ಗೆ ಅನುಮಾನಗಳಿರುವುದರಿಂದ ಮರಣೋತ್ತರ ಪರೀಕ್ಷೆ ನಡೆಸಿ ತನಿಖೆಗೆ ಆದೇಶಿಸಬೇಕು. ಅಲ್ಲಿಯವರೆಗೂ ಯಾವುದೇ ಕಾರಣಕ್ಕೂ ಅಂತ್ಯಕ್ರಿಯೆ ಮಾಡಬಾರದು ಎಂದು ಸ್ಥಳೀಯರು ಆಗ್ರಹಿಸಿ ಅಡ್ಡಿಪಡಿಸಿದರು. ಈ ವೇಳೆ ಪೊಲೀಸರು ಲಾಠಿಯಿಂದ ಚದುರಿಸಿ ಅಂತ್ಯಕ್ರಿಯೆಗೆ ಅನುವು ಮಾಡಿಕೊಟ್ಟರು.

ಆನೆ ಮಾವುತರು ಹಾಗೂ ಅವರ ಕುಟುಂಬದವರು ಆಕ್ರಂದನ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರ ಕಣ್ಣೀರಿನ ನಡುವೆ ಅರ್ಜುನ ಕೊನೆಗೆ ಅಲ್ಲಿಯೇ ಮಣ್ಣಲ್ಲಿ ಮಣ್ಣಾಗಿ ಹೋದ.

ಸತ್ತಲ್ಲೇ ಅಂತ್ಯಕ್ರಿಯೆ

ಯಸಳೂರು ಬಳಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ದಾಳಿಗೆ ಒಳಗಾದ ಅರ್ಜುನ ಆನೆ ಸೋಮವಾರ ಮಧ್ಯಾಹ್ನ ಮೃತಪಟ್ಟಿತ್ತು. ಬಳಿಕ ಆನೆ ಅಂತ್ಯಕ್ರಿಯೆ ನಾಗರಹೊಳೆಯ ಬಳ್ಳೆಯಲ್ಲಿ ಮಾಡಬೇಕು ಎನ್ನುವ ಬೇಡಿಕೆ ಇಟ್ಟರೂ ಅರಣ್ಯ ಇಲಾಖೆ ಒಪ್ಪಲಿಲ್ಲ. ಆನೆಗಳಿಗೆ ಪೂಜೆ ನೆರವೇರಿಸುವ ಮೈಸೂರಿನ ಅರ್ಚಕ ಪ್ರಹ್ಲಾದರಾವ್‌ ಅವರು ಎಲ್ಲಿ ಮೃತಪಟ್ಟಿದೆಯೋ ಅಲ್ಲಿಯೇ ಅಂತ್ಯಕ್ರಿಯೆ ಮಾಡಿ ಎನ್ನುವ ಸಲಹೆ ನೀಡಿದರು. ಅದರಂತೆ ಮೈಸೂರಿನಿಂದ ಆಗಮಿಸಿದ ಪ್ರಹ್ಲಾದ್‌ ರಾವ್‌ ಪೂಜೆ ಸಲ್ಲಿಸಿದರು.

ಈ ವೇಳೆ ದಬ್ಬಳ್ಳಿ ಕಟ್ಟೆ ಗ್ರಾಮದ ಬಳಿಯೇ ಗುಂಡಿ 15 ಅಡಿ ಆಳದ ಗುಂಡಿಯನ್ನು ತೋಡಲಾಯಿತು. ದಸರಾದಲ್ಲಿ ಅಂಬಾರಿ ಹೊತ್ತಿದ್ದರಿಂದ ಆನೆ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಬೇಕು. ಮರಣೋತ್ತರ ಪರೀಕ್ಷೆ ಮಾಡಬಾರದು ಎಂದು ಸೂಚನೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹಾಸನ ಡಿಸಿ ಸತ್ಯಭಾಮ, ಹಿರಿಯ ಅಧಿಕಾರಿಗಳು ಪೂಜೆ ಸಲ್ಲಿಸಿದರು. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಗೌರವವನ್ನು ಸಲ್ಲಿಸಿದರು.

ಮಾವುತರ ಆಕ್ರಂದನ

ಆನೆಯ ಉಸ್ತುವಾರಿಯನ್ನು ಎರಡು ವರ್ಷದಿಂದ ನೋಡಿಕೊಳ್ಳುತ್ತಿದ್ದ ಬಳ್ಳೆ ಆನೆ ಶಿಬಿರದ ಮಾವುತ ವಿನು ಹಾಗೂ ಆತನ ಸಹೋದರ ರಾಜು ಹಾಗೂ ಕುಟುಂಬದ ಸದಸ್ಯರು ಆನೆ ಬಳಿ ಬಂದಾಗ ಕಣ್ಣೀರಿಟ್ಟರು.

ನಮ್ಮನ್ನೆಲ್ಲಾ ಬಿಟ್ಟು ಹೋಗಬೇಡ. ನಿನ್ನನ್ನು ಬಿಟ್ಟು ನಾವು ಇಲ್ಲಿಂದ ಹೋಗುವುದಿಲ್ಲ. ರಾಜಾ ಎದ್ದು ಬಾ ಎಂದು ವಿನು ಹಾಗೂ ರಾಜಾ ಅವರ ಹೇಳುವಾಗ ಹಲವರ ಕಣ್ಣಲ್ಲಿ ನೀರು ಜಿನುಗಿತು. ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಕಣ್ಣೀರಾದರು.

ಕಾರ್ಯಾಚರಣೆ ವೇಳೆ ಗುಂಡೇಟು ಬಿದ್ದು ಕಾಲಿಗೆ ನೋವಾದರೂ ನೀನು ಹೋರಾಟ ಮಾಡಿದ್ದೀಯಾ. ಅಧಿಕಾರಿಗಳೇನು ಬೇಕಂತಲೆ ಹೊಡೆದಿಲ್ಲ. ನಾನು ಹತ್ತಿರದಲ್ಲಿಯೇ ಇದ್ದರೇ ನಿನ್ನನ್ನು ಕರೆದುಕೊಂಡು ಬರುತ್ತಿದ್ದೆ ಎಂದು ಆನೆ ಪರಿಚಾರಕ ರಾಜು ಕಣ್ಣೀರಿಡುತ್ತಲೇ ಹೇಳಿದರು.

ಆಕ್ರೋಶ, ಲಾಠಿ ಪ್ರಹಾರ

ಅರ್ಜುನ ಆನೆಯನ್ನು ಸರಿಯಾಗಿ ನಡೆಸಿಕೊಳ್ಳದೇ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ತಜ್ಞ ಪಶುವೈದ್ಯಾಧಿಕಾರಿಗಳನ್ನೂ ಇಲ್ಲಿಗೆ ಕರೆ ತಂದಿಲ್ಲ. ಸಿಸಿಎಫ್‌ ರವಿಶಂಕರ್‌ ಸಹಿತ ಹಿರಿಯ ಅಧಿಕಾರಿಗಳೂ ಸ್ಥಳದಲ್ಲಿ ಇರಲಿಲ್ಲ. ಈ ವೇಳೆ ಅನುಭವ ಇಲ್ಲದ ಕೆಲವರು ಕಾರ್ಯಾಚರಣೆ ನಡೆಸಿದ್ದಾರೆ. ಏಕಾಏಕಿ ಕಾಡಾನೆ ನುಗ್ಗಿ ಬಂದಾಗ ಗಾಳಿಯಲ್ಲಿ ಗುಂಡು ಹಾರಿಸಿದ್ಧಾರೆ. ಇದು ಅರ್ಜುನನ ಕಾಲಿಗೆ ಬಿದ್ದಿದೆ. ಅರವಳಿಕೆಯನ್ನು ಕಾಡಾನೆಗೆ ಹೊಡೆಯುವ ಬದಲು ಸಾಕಾನೆ ಪ್ರಶಾಂತನಿಗೆ ನೀಡಲಾಗಿದೆ. ಈ ಅವಾಂತರಗಳಿಂದಲೇ ಅರ್ಜುನ ಆನೆ ಮದಗಜದ ಎದುರಲ್ಲಿ ಸಿಲುಕಿ ತಪ್ಪಿಸಿಕೊಳ್ಳಲಾಗದೇ ಜೀವ ಕಳೆದುಕೊಂಡಿದೆ. ಮರಣೋತ್ತರ ಪರೀಕ್ಷೆ ನಡೆದರೆ ಎಲ್ಲವೂ ತಿಳಿಯಲಿದೆ. ತನಿಖೆಗೆ ಆದೇಶಿಸಿ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಮಾಡಿ. ಆನಂತರ ಅಂತ್ಯಕ್ರಿಯೆ ಮಾಡಬೇಡಿ ಎಂದು ಸ್ಥಳೀಯರು, ಕೆಲ ಸಂಘಟನೆಗಳ ಪ್ರಮುಖರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

ಈ ವೇಳೆ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರು ಅಲ್ಲಿದ್ದವರನ್ನು ಲಾಠಿ ಬಿಸಿ ತೋರಿಸಿ ಚದುರಿಸಿದರು. ಕೆಲ ಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಈ ಬಿಸಿಯ ನಡುವಯೇ ಕ್ರೇನ್‌ಗಳನ್ನು ಬಳಸಿ ಅರ್ಜುನ ಆನೆ ದೇಹವನ್ನು ಆಳದ ಗುಂಡಿಗೆ ಇಳಿಸಲಾಯಿತು. ಸ್ಥಳೀಯರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಹಕಾರದೊಂದಿಗೆ ಆನೆಯ ಅಂತ್ಯಕ್ರಿಯೆ ನಡೆಸಲಾಯಿತು.

ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್‌

ಅರ್ಜುನ ಸಾವಿನ ವಿಚಾರ ಸಾಮಾಜಿಕ ಮಾಧ್ಯಮಗಳಲ್ಲೂ ಟ್ರೋಲ್‌ ಆಯಿತು. ಅರ್ಜುನ ಫೋಟೋ ಹಾಕಿ ಅರಣ್ಯ ಇಲಾಖೆ ಅಧಿಕಾರಿಗಳೇ ಆತನ ಸಾವಿಗೆ ಕಾರಣವಾದರು. ಈ ಬಗ್ಗೆ ತನಿಖೆ ನಡೆಸಬೇಕು ಎನ್ನುವ ಒತ್ತಾಯವನ್ನೂ ಮಾಡಿದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ