Murugha Sri Case: ಮುರುಘಾ ಶ್ರೀಗಳ ಪ್ರಕರಣದ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲ್ಲ - ಆರಗ ಜ್ಞಾನೇಂದ್ರ
Sep 03, 2022 02:18 PM IST
ಮುರುಘಾ ಶ್ರೀಗಳ ಪ್ರಕರಣದ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲ್ಲ ಎಂದ ಗೃಹ ಸಚಿವರು
- ಮುರುಘಾ ಮಠದ ಸ್ವಾಮೀಜಿ ಪ್ರಕರಣದ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಮುರುಘಾ ಮಠದ ಸ್ವಾಮೀಜಿ ಪ್ರಕರಣದ ತನಿಖೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಲೈಂಗಿಕ ದೌರ್ಜನ್ಯ ಆರೋಪದಡಿ ಚಿತ್ರದುರ್ಗದ ಮುರುಘ ಮಠದ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವರು, ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಮುರುಘಾ ಮಠಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, ಏಳು ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ ಎಂದು ಹೇಳಿದರು.
ಮುರುಘಾ ಮಠದ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಡಿ ಶಿವಮೂರ್ತಿ ಮುರುಘಾ ಶರಣರನ್ನು ಸೆಪ್ಟೆಂಬರ್ 1ರ ರಾತ್ರಿ ಬಂಧಿಸಲಾಗಿತ್ತು. ಪ್ರಕರಣ ದಾಖಲಾಗಿ ಆರು ದಿನಗಳು ಕಳೆದ ಬಳಿಕ, ಮುರುಘಾ ಶ್ರೀಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.
ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಚಿತ್ರದುರ್ಗ ಡಿವೈಎಸ್‌ಪಿ ಅನಿಲ್ ಕುಮಾರ್ ತನಿಖಾಧಿಕಾರಿಯಾಗಿದ್ದಾರೆ
.ಬಂಧನದ ಮಾರನೇ ದಿನವೇ, ಅಂದರೆ ಸೆಪ್ಟೆಂಬರ್ 2 ರ ಬೆಳಗ್ಗೆ ಶ್ರೀಗಳಿಗೆ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಹೃದಯಾಘಾತವಾಗಿದೆ ಎಂದು ಮೂಲಗಳು ತಿಳಿಸಿದ್ದವು.
ಸೆ.1 ರಾತ್ರಿ ರಾತ್ರಿ ಬಂಧಿಸಿದ ಕೂಡಲೇ ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ನಡುವೆ, ಶನಿವಾರ (ಸೆ.2) ಕೋರ್ಟ್‌ಗೆ ಹೋಗಿದ್ದ ಪೊಲೀಸರು, ಶರಣರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಅರ್ಜಿ ಸಲ್ಲಿಸಿದರು. ಇದೀಗ ನ್ಯಾಯಾಲಯವು ಶರಣರನ್ನು ಸೆ.5ರ ವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಶವಮೂರ್ತಿ ಮುರುಘಾ ಶರಣರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ನಿನ್ನೆ (ಸೆ.2) ರಾತ್ರಿಯಿಂದಲೇ ವಿಚಾರಣೆ ಶುರುಮಾಡಿದ್ದಾರೆ. ಇಂದು (ಸೆ.3) ಕೂಡ ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆ ಮುಂದುವರಿದಿದೆ.ನಿನ್ನೆ ರಾತ್ರಿ ಎರಡು ಗಂಟೆ ಕಾಲ ನಿರಂತರ ಪ್ರಶ್ನೆಗಳನ್ನು ಎದುರಿಸಿದ ಶರಣರು, ಬಳಿಕ ವಿಶ್ರಾಂತಿ ಬೇಕು ಎಂದ ಕಾರಣ ವಿರಾಮ ನೀಡಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ಮತ್ತೆ ವಿಚಾರಣೆ ಶುರುವಾಗಿದೆ. ಚುಟುಕು ಉತ್ತರಗಳನ್ನು ನೀಡುತ್ತಿರುವ ಶರಣರು, ಜಾಮೀನು ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಶರಣರ ವಿಚಾರಣೆಯ ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕಣ ಮಾಡುತ್ತಿರುವ ಪೊಲೀಸರು, ಡಿವೈಎಸ್‌ಪಿ ಕಚೇರಿ ಸುತ್ತ ಬಿಗಿ ಬಂದೋಬಸ್ತ್ ಏಪರ್ಡಿಸಿದ್ದಾರೆ.