Graft charge shrouds Bommai govt: ಮಂತ್ರಿಗಳು ಲಂಚ ಕೇಳ್ತಿದ್ದಾರೆ ಎಂದು ಆರೋಪಿಸಿದ ಗುತ್ತಿಗೆದಾರರ ಸಂಘ
Jan 17, 2023 11:34 AM IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಾಂಕೇತಿಕ ಚಿತ್ರ)
Graft charge shrouds Bommai govt: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ(ಕೆಎಸ್‌ಸಿಎ)ದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ 3-4 ಸಚಿವರು, 13-14 ಶಾಸಕರ ವಾಟ್ಸ್‌ಆಪ್ ಮೆಸೇಜ್, ಆಡಿಯೋ ಕ್ಲಿಪ್ ಗುತ್ತಿಗೆದಾರರ ಸಂಘದಲ್ಲಿದೆ ಎಂದು ಹೇಳಿದರು. ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಅವರ ಆಡಿಯೋ ಕ್ಲಿಪ್ ರಿಲೀಸ್ ಮಾಡಿದರು.
ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ಈಗ ಭ್ರಷ್ಟಾಚಾರದ ಕರಿಛಾಯೆಯನ್ನು ಎದುರಿಸಲಾರಂಭಿಸಿದೆ. ಸರ್ಕಾರಿ ಗುತ್ತಿಗೆಗಳಲ್ಲಿ ಕಮಿಷನ್ ಲಂಚದ ಬೇಡಿಕೆ ಹೆಚ್ಚಾಗಿದೆ ಎಂಬ ಆರೋಪ ಕೇಳಿಬಂದಿದೆ. ಶಾಸಕರು, ಸಚಿವರು ಮತ್ತು ಸರ್ಕಾರ ಪ್ರಮುಖರು ಲಂಚ, ಕಮಿಷನ್ ಬೇಡಿಕೆ ಮುಂದಿಟ್ಟ ಸಂಬಂಧ ದಾಖಲೆಗಳಿವೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಮುಖ್ಯಸ್ಥರು ಸೋಮವಾರ ದೃಢವಾಗಿ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ(ಕೆಎಸ್‌ಸಿಎ)ದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ಬಹಿರಂಗಪಡಿಸಿದರು. ಬಿಜೆಪಿ ಸರ್ಕಾರದ ಮೂರಿಂದ ನಾಲ್ಕು ಸಚಿವರು, 13-14 ಶಾಸಕರ ವಾಟ್ಸ್‌ಆಪ್ ಮೆಸೇಜ್‌ಗಳು ಮತ್ತು ಆಡಿಯೋ ಕ್ಲಿಪ್‌ಗಳು ಗುತ್ತಿಗೆದಾರರ ಸಂಘದ ಬಳಿ ಇದೆ ಎಂದು ಹೇಳಿದ ಮಂಜುನಾಥ್, ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಆಡಿಯೋ ಕ್ಲಿಪ್ ರಿಲೀಸ್ ಮಾಡಿದರು.
ಬಿಜೆಪಿಯ 3ರಿಂದ 4 ಸಚಿವರು, 13ರಿಂದ 14 ಶಾಸಕರು ಭ್ರಷ್ಟಾಚಾರ ನಡೆಸಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. ಗುತ್ತಿಗೆದಾರರ ಬಳಿ ಎಲ್ಲ ದಾಖಲೆಗಳೂ ಇವೆ. ಆದರೆ ಅದನ್ನು ಹಿಡಿದು ಹೊರಬರಲು ಎಲ್ಲರಿಗೂ ಭಯವಿದೆ. ಸಂತೋಷ್ ಪಾಟೀಲ್‌ಗೆ ಆಗಿರುವುದನ್ನು ಯಾರೂ ಮರೆತಿಲ್ಲ. ನಮ್ಮ ಕುಟುಂಬ ಸದಸ್ಯರ ಜತೆಗೆ ಮಾತುಕತೆ ನಡೆಸಿ, ಸಂಘದ ಬೆಂಬಲದೊಂದಿಗೆ ಪ್ರತಿಯೊಂದು ದಾಖಲೆಯನ್ನೂ ಬಿಡುಗಡೆ ಮಾಡಲಿದ್ದೇವೆ ಎಂದು ಮಂಜುನಾಥ್ ಹೇಳಿದರು. ಬಿಡುಗಡೆಯಾಗಿರುವ ಒಂದು ಆಡಿಯೋ ಕ್ಲಿಪ್ ಅನ್ನು HT ಆಲಿಸಿದ್ದು, ಅದರ ದೃಢೀಕರಣವನ್ನು ಮಾಡುವುದು ಸಾಧ್ಯವಾಗಿಲ್ಲ.
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಎದುರಿಸಿದ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಕಳೆದ ವರ್ಷ ಏಪ್ರಿಲ್‌ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಪಾಟೀಲ್ ಅಂದು ಈಶ್ವರಪ್ಪ ವಿರುದ್ಧ 40% ಕಮಿಷನ್ ಕೇಳಿ ಪೀಡಿಸುತ್ತಿದ್ದರು ಆರೋಪ ಮಾಡಿದ್ದರು.
ಈ ಪ್ರಕರಣದಲ್ಲಿ ಪೊಲೀಸ್ ತನಿಖೆ ನಡೆಯಿತು. ಕೊನೆಗೆ ಈಶ್ವರಪ್ಪಗೆ ಕ್ಲೀನ್ ಚಿಟ್ ಸಿಕ್ಕಿತು. ಈ ವಿಚಾರವಾಗಿ ಪಾಟೀಲ್ ಅವರ ಕುಟುಂಬ ಕೇಸ್ ಕ್ಲೋಸ್ ಮಾಡಿದ್ದನ್ನು ಪ್ರಶ್ನಿಸಿ ವಿಶೇಷ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಕ್ಲೀನ್ ಚಿಟ್ ಸಿಕ್ಕಿದೆ ಎಂದು ಈಗ ಮತ್ತೆ ಸಂಪುಟ ಸೇರಲು ಈಶ್ವರಪ್ಪ ಇನ್ನಿಲ್ಲದ ಪ್ರಯತ್ನ ನಡೆಸಿರುವುದು ಸುದ್ದಿಯಾಗಿದೆ.
ಗುತ್ತಿಗೆದಾರರ ಸಂಘದ ಆರೋಪ ಯಾರು ಏನು ಹೇಳಿದ್ರು?
ಆಡಿಯೋ ಕ್ಲಿಪ್ ಬಗ್ಗೆ ನನಗೆ ಏನೂ ಮಾಹಿತಿ ಇಲ್ಲ. ಅದರ ಬಗ್ಗೆ ಏನೂ ಗೊತ್ತಿಲ್ಲ. ಒಮ್ಮೆ ಅದನ್ನು ಆಲಿಸಿದ ಬಳಿಕ ಪ್ರತಿಕ್ರಿಯೆ ನೀಡುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು.
40 % ಕಮಿಷನ್ ಸರ್ಕಾರದ ವಿಚಾರ ಪ್ರತಿಯೊಬ್ಬರಿಗೂ ಗೊತ್ತಿರುವಂಥದ್ದೇ ಆಗಿದೆ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಕಮಿಷನ್ ಸರ್ಕಾರ ಕರಿಛಾಯೆ ಆರಂಭ ಹೀಗಿತ್ತು..
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವ ಕಮಿಷನ್ ವ್ಯವಹಾರದ ಮೇಲೆ ಬೆಳಕು ಚೆಲ್ಲಿತ್ತು. ಅನೇಕ ಗುತ್ತಿಗೆದಾರರು ಬಹಿರಂಗವಾಗಿ ಈ ಕಮಿಷನ್ ವ್ಯವಹಾರದ ಬಗ್ಗೆ ಮಾತನಾಡಲಾರಂಭಿಸಿದರು. ಬಿಜೆಪಿ ಸರ್ಕಾರ ಪಬ್ಲಿಕ ವರ್ಕ್ ಕಾಂಟ್ರಾಕ್ಟ್‌ಗಳ ಮೇಲೆ ಶೇಕಡ 40 ಕಮಿಷನ್ ಕೇಳುತ್ತಿದೆ ಎಂಬ ಮಾತು ಗುತ್ತಿಗೆದಾರರ ವಲಯದಲ್ಲಿ ಜನಜನಿತ. ಈ ಸಂಬಂಧ ಪ್ರಧಾನಮಂತ್ರಿಗೂ ಕೆಎಸ್‌ಸಿಎ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮೂರು ವರ್ಷಗಳಿಂದ ಕೆಲವು ಗುತ್ತಿಗೆದಾರರಿಗೆ ಅವರು ಮಾಡಿದ ಕಾಮಗಾರಿಗಳ ಪಾವತಿಯೇ ಆಗಿಲ್ಲ ಎಂದು ಕೆಎಸ್‌ಸಿಎ ಅಧ್ಯಕ್ಷ ಡಿ.ಕೆಂಪಣ್ಣ ಆರೋಪಿಸಿದ್ದಾರೆ. ಸಚಿವ ಮುನಿರತ್ನ ಅವರಿಂದ ಸ್ವತಃ ಮಾನಹಾನಿ ಪ್ರಕರಣ ಎದುರಿಸುತ್ತಿರುವ ಕೆಂಪಣ್ಣ, ಮುನಿರತ್ನ ಅವರು ತಡೆ ಆದೇಶ ತಂದಿರುವ ಕಾರಣ ದಾಖಲೆಗಳನ್ನು ಇದುವರೆಗೆ ಬಿಡುಗಡೆ ಮಾಡಿಲ್ಲ. ಮುಂದಿನ 30 ದಿನಗಳ ಒಳಗೆ ಆ ದಾಖಲೆಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದರು.
ಸಚಿವ ಮುನಿರತ್ನ ಲಂಚ ಕೇಳಿದರು ಎಂದು ಕೆಂಪಣ್ಣ ಮತ್ತು ಅಸೋಸಿಯೇಷನ್ ಕಳೆದ ಆಗಸ್ಟ್ ತಿಂಗಳಲ್ಲಿ ಆರೋಪ ಮಾಡಿದ್ದರು. ಇದಾದ ಬಳಿಕ ಮುನಿರತ್ನ ಮಾನಹಾನಿ ಕೇಸ್ ದಾಖಲಿಸಿದ್ದರು. ಸರ್ಕಾರದಿಂದ ಕೆಂಪಣ್ಣ ಅವರಿಗೆ ಪಾವತಿಯಾಗಬೇಕಾದ ಹಣದ ಮೊತ್ತ 23,000 ಕೋಟಿ ರೂಪಾಯಿ ಎಂದು ಅಸೋಸಿಯೇಷನ್ ಮೂಲಗಳು ತಿಳಿಸಿವೆ.