logo
ಕನ್ನಡ ಸುದ್ದಿ  /  ಕರ್ನಾಟಕ  /  Sriramulu: ಸಿದ್ದರಾಮಯ್ಯ ಸಿಎಂ ಆದರೆ ಖುಷಿ ಎಂದ ಶ್ರೀರಾಮುಲು: ʼಹೌದು ಹುಲಿಯʼ ಬೆಂಬಲಿಗರಲ್ಲಿ ಸಂತಸದ ಹೊನಲು!

Sriramulu: ಸಿದ್ದರಾಮಯ್ಯ ಸಿಎಂ ಆದರೆ ಖುಷಿ ಎಂದ ಶ್ರೀರಾಮುಲು: ʼಹೌದು ಹುಲಿಯʼ ಬೆಂಬಲಿಗರಲ್ಲಿ ಸಂತಸದ ಹೊನಲು!

Nikhil Kulkarni HT Kannada

Aug 16, 2022 07:07 PM IST

google News

ಬಿ ಶ್ರೀರಾಮುಲು (ಸಂಗ್ರಹ ಚಿತ್ರ)

    • ಬಳ್ಳಾರಿಯಲ್ಲಿ ಜರುಗಿದ ಕುರುಬ ಸಂಘದ ವಾಣಿಜ್ಯ ಮಳಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಾರಿಗೆ ಸಚಿವ ಬಿ. ಶ್ರೀರಾಮುಲು, ತಮ್ಮ ಹಾಗೂ ಸಿದ್ದರಾಮಯ್ಯ ನಡುವೆ ವೈಯಕ್ತಿಕ ದ್ವೇಷವಿಲ್ಲ ಎಂದು ಹೇಳಿದರು. ಅಲ್ಲದೇ ಸಿದ್ದರಾಮಯ್ಯ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾದರೆ ತಮಗೆ  ಸಂತಸವಾಗುತ್ತದೆ ಎಂದೂ ಹೇಳುವ ಮೂಲಕ ಶ್ರೀರಾಮುಲು ಅಚ್ಚರಿ ಮೂಡಿಸಿದ್ದಾರೆ.
ಬಿ ಶ್ರೀರಾಮುಲು (ಸಂಗ್ರಹ ಚಿತ್ರ)
ಬಿ ಶ್ರೀರಾಮುಲು (ಸಂಗ್ರಹ ಚಿತ್ರ) (Verified Twitter)

ಬಳ್ಳಾರಿ: ದೇವರ ಆಶೀರ್ವಾದದಿಂದ ಸಿದ್ದರಾಮಯ್ಯ ಮತ್ತೆ ಈ ರಾಜ್ಯದ ಮೂಖ್ಯಮಂತ್ರಿಯಾದರೆ ತಮಗೆ ಸಂತಸವಾಗಲಿದೆ ಎಂಬ ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ಆಸೆ ಪಡುವ ವ್ಯಕ್ತಿಗಳಲ್ಲಿ ನಾನೂ ಒಬ್ಬ ಎಂದು ಶ್ರೀರಾಮುಲು ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ.

ಬಳ್ಳಾರಿಯಲ್ಲಿ ಜರುಗಿದ ಕುರುಬ ಸಂಘದ ವಾಣಿಜ್ಯ ಮಳಿಗೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀರಾಮುಲು, ತಮ್ಮ ಹಾಗೂ ಸಿದ್ದರಾಮಯ್ಯ ನಡುವೆ ವೈಯಕ್ತಿಕ ದ್ವೇಷವಿಲ್ಲ ಎಂದು ಹೇಳಿದರು. ನಾವಿಬ್ಬರೂ ರಾಜಕೀಯವಾಗಿ ಪರಸ್ಪರ ವಿರೋಧಿಗಳೇ ಹೊರತು, ನಮ್ಮಿಬ್ಬರ ನಡುವಿನ ವೈಯಕ್ತಿಕ ಸಂಬಂಧ ಚೆನ್ನಾಗಿದೆ ಎಂದು ಶ್ರೀರಾಮುಲು ನುಡಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ನೀವು ರಾಜ್ಯದ ಎರಡನೇ ದೇವರಾಜ್‌ ಅರಸು ಎಂದು ಕರೆಸಿಕೊಳ್ಳಬೇಕು ಎಂಬುದು ನನ್ನ ಆಸೆಎಂದು ಅವರಲ್ಲಿ ಹೇಳಿದ್ದೆ. ಅವರು ಕೂಡ ಐದು ವರ್ಷಗಳ ಕಾಲ ರಾಜ್ಯಕ್ಕೆ ಉತ್ತಮ ಆಡಳಿತ ನೀಡಿದ್ದರು. ಅವರು ಮತ್ತೆ ಈ ರಾಜ್ಯದ ಮುಖ್ಯಮಂತ್ರಿಯಾದರೆ ತಮಗೆ ಖುಷಿಯಾಗುತ್ತದೆ ಎಂದು ಶ್ರೀರಾಮುಲು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿಯಿಂದ ಸಿದ್ದರಾಮಯ್ಯ ಹೇಗೆ ಗೆದ್ದರು ಎಂಬುದನ್ನು ಅವರನ್ನೊಮ್ಮೆ ಕೇಳಿ ನೋಡಿ. ಅವರು ಬಹಿರಂಗವಾಗಿ ಸತ್ಯ ಹೇಳುವುದಿಲ್ಲವಾದರೂ, ಸಂದರ್ಭ ಬಂದಾಗ ನಾನೇ ಸತ್ಯ ಹೇಳುತ್ತೇನೆ ಎಂದು ಶ್ರೀರಾಮುಲು ಅಚ್ಚರಿಯ ಹೇಳಿಕೆ ನೀಡಿದರು. ಶ್ರೀರಾಮುಲು ಬಾದಾಮಿಯಲ್ಲಿ ಸಿದ್ದರಾಮಯ್ಯ ವಿರುದ್ಧವಾಗಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ನಾವು ಯಾವುದೇ ಕಾರಣಕ್ಕೂ ಹಿಂದುಳಿದ ಸಮುದಾಯವನ್ನು ಬಿಟ್ಟು ಕೊಡಲು ತಯಾರಿಲ್ಲ. ಏಕೆಂದರೆ ಅದು ನಮ್ಮ ಸಮುದಾಯ. ಬಿಜೆಪಿಯಿಂದ ಹಿಂದುಳಿದ ಸಮುದಾಯದಿಂದ ಮುಖ್ಯಮಂತ್ರಿಯಾಗುವ ಅವಕಾಶ ದೊರೆತರೆ, ತಾವು ಖಂಡಿತವಾಗಿಯೂ ಉತ್ತಮ ಆಡಳಿತ ನೀಡುವ ಭರವಸೆ ನೀಡುವುದಾಗಿ ಶ್ರೀರಾಮುಲು ಇದೇ ವೇಳೆ ಹೇಳಿದರು.

ಸಿದ್ದರಾಮಯ್ಯ ಮತ್ತು ನಾನು ರಾಜಕೀಯ ವಿರೋಧಿಗಳು ನಿಜ. ಆದರೆ ನಾವಿಬ್ಬರೂ ರಾಜಕೀಯದಲ್ಲಿ ಇರಬೇಕು ಎಂಬುದು ನಮ್ಮಿಬ್ಬರ ಬಯಕೆಯೂ ಆಗಿದೆ. ಹಿಂದುಳಿದ ಸಮುದಾಯದಿಂದ ಮುಖ್ಯಮಂತ್ರಿಯಾಗುವ ಅವಕಾಶ ಸನನಗೆ ಸಿಕ್ಕರೆ, ಸಿದ್ದರಾಮಯ್ಯ ಕೂಡ ಅದಕ್ಕೆ ಒಪ್ಪಿಗೆ ಮುದ್ರೆ ಒತ್ತುತ್ತಾರೆ ಎಂಬುದು ನನ್ನ ಅಚಲ ನಂಬಿಕೆ. ನಾನು ಮತ್ತು ಸಿದ್ದರಾಮಯ್ಯ ಹಿಂದುಳಿದ ಸಮುದಾಯವನ್ನು ಒಂದುಗೂಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ ಎಂದು ಶ್ರೀರಾಮುಲು ಹೇಳಿದರು.

ನಾನು ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ವಿರೋಧಿಸಿದ ಮಾತ್ರಕ್ಕೆ ಕುರುಬ ಸಮಾಜದ ವಿರೋಧಿ ಎನ್ನುವುದು ಸರಿಯಲ್ಲ. ಸಿದ್ದರಾಮಯ್ಯ ಮತ್ತು ನಾನು ಎರಡೆರಡು ಕ್ಷೇತ್ರದಲ್ಲಿ ನಿಂತು ಒಂದರಲ್ಲಿ ಗೆದ್ದು, ಮತ್ತೊಂದು ಕ್ಷೇತ್ರದಲ್ಲಿ ಸೋತಿದ್ದೇವೆ. ರಾಜಕೀಯವೇ ಬೇರೆ, ವೈಯಕ್ತಿಕ ಸಂಬಂಧವೇ ಬೇರೆ. ನನ್ನ ಮತಗ್ತು ಸಿದ್ದರಾಮಯ್ಯ ನಡುವಿನ ಸ್ನೇಹ ಸಂಬಂಧದ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದು ಶ್ರೀರಾಮುಲು ನುಡಿದರು.

ಇನ್ನು ಶ್ರೀರಾಮುಲು ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, 2023ರ ವಿಧಾನಸಭೆ ಚುನಾವಣೆಯಲ್ಲಿ ಕುರುಬ ಸಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಶ್ರೀರಾಮುಲು, ಸಿದ್ದರಾಮಯ್ಯ ಪರ ಬ್ಯಾಟಿಂಗ್‌ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಒಟ್ಟಿನಲ್ಲಿ ಸಿದ್ದರಾಮಯ್ಯ ಅವರನ್ನು ಸದಾ ಕಟು ಶಬ್ಧಗಳಲ್ಲಿ ಟೀಕಿಸುತ್ತಲೇ ಬಂದಿರುವ ಶ್ರೀರಾಮುಲು, ಇದೇ ಮೊದಲ ಬಾರಿಗೆ ಬಹಿರಂಗವಾಗಿ ಕಾಂಗ್ರೆಸ್‌ ನಾಯಕನ ಬಗ್ಗೆ ಒಳ್ಳೆಯ ಮಾತುಗಳನ್ನಾಡಿರುವುದು ರಾಜ್ಯದ ಗಮನ ಸೆಳೆದಿದೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆಗಳಾಗಲಿವೆಯೇ ಎಂಬ ಪ್ರಶ್ನೆಯೂ ಇದೀಗ ಮುನ್ನೆಲೆಗೆ ಬಂದಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ