logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Assembly Elections: ಕರುನಾಡ ಕದನದಲ್ಲಿ ಕುಟುಂಬ ರಾಜಕಾರಣಕ್ಕೆ ಮತ್ತೆ ಮಣೆ; ಚುನಾವಣೆಯಲ್ಲಿ ಗೆದ್ದ ಅಪ್ಪ-ಮಕ್ಕಳು, ಬಂಧುಗಳಿವರು

Karnataka Assembly Elections: ಕರುನಾಡ ಕದನದಲ್ಲಿ ಕುಟುಂಬ ರಾಜಕಾರಣಕ್ಕೆ ಮತ್ತೆ ಮಣೆ; ಚುನಾವಣೆಯಲ್ಲಿ ಗೆದ್ದ ಅಪ್ಪ-ಮಕ್ಕಳು, ಬಂಧುಗಳಿವರು

HT Kannada Desk HT Kannada

May 14, 2023 02:42 PM IST

ಶಾಮನೂರು ಶಿವಶಂಕರಪ್ಪ, ಪುತ್ರ ಮಲ್ಲಿಕಾರ್ಜುನ (ಎಡಚಿತ್ರ), ಹರೀಶ್‌ಗೌಡ ಮತ್ತು ಜಿಟಿ ದೇವೇಗೌಡ (ಬಲಚಿತ್ರ)

    • Family Politics: ಹಲವು ಕುಟುಂಬದ ಕುಡಿಗಳು ಗೆಲುವಿನ ನಗೆ ಬೀರಿದ್ದರೆ, ಮತ್ತೆ ಕೆಲವರು ಸೋತಿದ್ದಾರೆ. ಅಪ್ಪ-ಮಗ, ಅಣ್ಣ-ತಮ್ಮ, ಅಪ್ಪ-ಮಗಳು, ಅಕ್ಕ-ತಮ್ಮ.. ಹೀಗೆ ಎಲ್ಲರೂ ವಿಧಾನಸಭೆಯಲ್ಲಿ ಈ ಬಾರಿಯೂ ಸಿಗಲಿದ್ದಾರೆ. ಪತ್ರಕರ್ತ ಕುಂದೂರು ಉಮೇಶ ಭಟ್ಟ ಕಟ್ಟಿಕೊಟ್ಟಿರುವ ಚಿತ್ರಣ ಇಲ್ಲಿದೆ
ಶಾಮನೂರು ಶಿವಶಂಕರಪ್ಪ, ಪುತ್ರ ಮಲ್ಲಿಕಾರ್ಜುನ (ಎಡಚಿತ್ರ), ಹರೀಶ್‌ಗೌಡ ಮತ್ತು ಜಿಟಿ ದೇವೇಗೌಡ (ಬಲಚಿತ್ರ)
ಶಾಮನೂರು ಶಿವಶಂಕರಪ್ಪ, ಪುತ್ರ ಮಲ್ಲಿಕಾರ್ಜುನ (ಎಡಚಿತ್ರ), ಹರೀಶ್‌ಗೌಡ ಮತ್ತು ಜಿಟಿ ದೇವೇಗೌಡ (ಬಲಚಿತ್ರ)

ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಮತದಾರ ಕುಟುಂಬ ರಾಜಕಾರಣಕ್ಕೆ (Family Politics) ಮಣೆ ಹಾಕಿದ್ದಾನೆ. ಹಲವು ಕುಟುಂಬದ ಕುಡಿಗಳು ಗೆಲುವಿನ ನಗೆ ಬೀರಿದ್ದರೆ, ಮತ್ತೆ ಕೆಲವರು ಸೋತಿದ್ದಾರೆ. ಅಪ್ಪ-ಮಗ, ಅಣ್ಣ-ತಮ್ಮ, ಅಪ್ಪ-ಮಗಳು, ಅಕ್ಕ-ತಮ್ಮ.. ಹೀಗೆ ಎಲ್ಲರೂ ವಿಧಾನಸಭೆಯಲ್ಲಿ ಈ ಬಾರಿಯೂ ಸಿಗಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಕರ್ನಾಟಕ ಹವಾಮಾನ ಮೇ 19; ರಾಜ್ಯದಲ್ಲಿ ಮಳೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲಿ ಆರೆಂಜ್ ಅಲರ್ಟ್‌, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

ಗೆದ್ದ ಅಪ್ಪ ಮಗ: ದಾವಣಗೆರೆಯಲ್ಲಿ ಉತ್ತರ ಹಾಗೂ ದಕ್ಷಿಣ ಕ್ಷೇತ್ರಗಳಿಂದ ಕಾಂಗ್ರೆಸ್‌ನಿಂದ ಸ್ಪರ್ಧೆಗೆ ಇಳಿದಿದ್ದ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಅವರ ಪುತ್ರ ಮಲ್ಲಿಕಾರ್ಜುನ ವಿಧಾನಸಭೆ ಪ್ರವೇಶಿಸಿದ್ದಾರೆ. ಮೊದಲ ಬಾರಿಗೆ ಇಬ್ಬರೂ ಪ್ರವೇಶಿಸುತ್ತಿರುವುದು ವಿಶೇಷ.

ಅದೇ ರೀತಿ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಬಯಸಿದ್ದರೂ ಅವಕಾಶ ಸಿಗದೇ ಇದ್ದುದರಿಂದ ಜಾತ್ಯತೀತ ದಳದಲ್ಲೇ ಉಳಿದ ಹಾಲಿ ಶಾಸಕ ಜಿ.ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಮಗ ಅಪೆಕ್ಸ್ ಬ್ಯಾಂಕ್ ಉಪಾಧ್ಯಕ್ಷ ಜಿ.ಡಿ.ಹರೀಶ್‌ಗೌಡ ನೆರೆಯ ಹುಣಸೂರು ಕ್ಷೇತ್ರದಲ್ಲಿ ಜಯಸಾಧಿಸಿದ್ದು, ತಾವು ಅಂದುಕೊಂಡಂತೆ ಇಬ್ಬರೂ ಗೆದ್ದು ಹಠ ಸಾಧಿಸಿದ್ದಾರೆ. ಹಿಂದೆ ಹುಣಸೂರು ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಎರಡು ಬಾರಿ ಗೆದ್ದಿದ್ದರು.

ಅಪ್ಪನಿಗೆ ಮಗಳ ಸಾಥ್

ಬೆಂಗಳೂರಿನಲ್ಲಿ ರಾಮಲಿಂಗಾರೆಡ್ಡಿ( ಬಿಟಿಎಂ ಲೇಔಟ್) ಗೆದ್ದಿದ್ದರೆ ಹಾಗೂ ಸೌಮ್ಯ ರೆಡ್ಡಿ (ಜಯನಗರ) ಸ್ವಲ್ಪದರಲ್ಲಿ ಅವಕಾಶ ತಪ್ಪಿಸಿಕೊಂಡರು. ವಿಜಯನಗರದಲ್ಲಿ ಲೇಔಟ್ ಕೃಷ್ಣಪ್ಪ ಗೆದ್ದರೆ, ಕಳೆದ ಬಾರಿ ಗೋವಿಂದರಾಜನಗರದಲ್ಲಿ ಸೋತಿದ್ದ ಮಗ ಪ್ರಿಯಾ ಕೃಷ್ಣ ಈ ಬಾರಿ ಗೆದ್ದು ಜೋಡಿ ನಗೆ ಬೀರಿದ್ದಾರೆ.

ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿ ಭಿನ್ನ ಪಕ್ಷಗಳಿಂದ ಅಪ್ಪ ಮಗ ಮೊದಲ ಬಾರಿ ಗೆದ್ದಿದ್ದಾರೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್‌ನಿಂದ ಗೆದ್ದಿದ್ದ ಅರಕಲಗೂಡು ಮಂಜು ಕೊನೆ ಕ್ಷಣದಲ್ಲಿ ಜೆಡಿಎಸ್ ಸೇರಿ ಜಯ ಸಾಧಿಸಿದ್ದಾರೆ. ಒಂದೂವರೆ ವರ್ಷದ ಹಿಂದೆ ಎಂಎಲ್ಸಿ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಕೊಡಗಿನಲ್ಲಿ ಸೋತಿದ್ದ ಎ.ಮಂಜು ಮಗ ಡಾ.ಮಂಥರ್‌ಗೌಡ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೋಲಾರ ಜಿಲ್ಲೆಯ ಕೆಜಿಎಫ್‌ನಿಂದ ರೂಪಕಲಾ ಶಶಿಧರ್ ಮತ್ತೆ ಗೆದ್ದರೆ, ಆರು ಬಾರಿ ಎಂಪಿಯಾಗಿ ಸೋತಿದ್ದ ಕೆ.ಎಚ್.ಮುನಿಯಪ್ಪ ದೇವನಹಳ್ಳಿಯಲ್ಲಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಅಪ್ಪ ಮಗಳ ಜೋಡಿ ವಿಧಾನಸಭೆಯಲ್ಲಿ ಈ ಬಾರಿ ಮಿಂಚಲಿದೆ.

ತಮ್ಮನಿಗೆ ಅಕ್ಕನ ಜತೆ: ಬೆಂಗಳೂರಿನ ಸಿ.ವಿ.ರಾಮನ್ ನಗರದಿಂದ ಬಿಜೆಪಿಯ ಎಸ್ ರಘು ಮತ್ತೆ ಗೆದ್ದಿದ್ದರೆ, ಅರವಿಂದ ಲಿಂಬಾವಳಿ ಬದಲು ಮಹದೇವಪುರದಲ್ಲಿ ಟಿಕೆಟ್ ಪಡೆದಿದ್ದ ರಘು ಸಹೋದರಿ ಮಂಜುಳಾ ಲಿಂಬಾವಳಿ ಗೆದ್ದಿದ್ದು ಅಕ್ಕ- ತಮ್ಮ ಜತೆಯಾಗಿಯೇ ವಿಧಾನಸಭೆ ಪ್ರವೇಶಿಸಿದ್ದಾರೆ.

ಸೋಲದ ಜಾರಕಿಹೊಳಿ ಸಹೋದರರು: ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರದ್ದೇ ಅಬ್ಬರ. ಯಾವುದೇ ಪಕ್ಷದಲ್ಲಿದ್ದರೂ ಅವರು ಗೆಲ್ಲುತ್ತಾರೆ. ಈ ಬಾರಿ ಯೂ ಸತೀಶ್ ಜಾರಕಿಹೊಳಿ (ಯಮಕನಮರಡಿ-ಕಾಂಗ್ರೆಸ್), ರಮೇಶ್ ಜಾರಕಿಹೊಳಿ (ಗೋಕಾಕ್-ಬಿಜೆಪಿ), ಬಾಲಚಂದ್ರ ಜಾರಕಿಹೊಳಿ (ಅರಭಾವಿ-ಬಿಜೆಪಿ) ಮತ್ತೆ ಗೆದ್ದಿದ್ದಾರೆ. ಅವರ ಮತ್ತೊಬ್ಬ ಸಹೋದರ ಲಖನ್ ಈಗಾಗಲೇ ಎಂಎಲ್ಸಿಯಾಗಿದ್ದಾರೆ. ಸದನದಲ್ಲಿ ಹೀಗೆ ನಾಲ್ವರು ಶಾಸಕರಿರುವುದು ದಾಖಲೆ.

ರೆಡ್ಡಿಗಳಿಗೆ ಭಾರೀ ಹಿನ್ನಡೆ

ಆದರೆ ಈ ಬಾರಿ ಬಳ್ಳಾರಿ ಕುಟುಂಬಕ್ಕೆ ಜನತೆ ಶಾಕ್ ನೀಡಿದ್ದಾರೆ. ಸಹೋದರ ಹೊಸ ಪಕ್ಷ ಕಟ್ಟಿದರೂ ಬಿಜೆಪಿಯಲ್ಲೇ ಉಳಿದು ಸ್ಪರ್ಧಿಸಿದ್ದ ಸೋಮಶೇಖರ ರೆಡ್ಡಿ (ಬಳ್ಳಾರಿ), ಕರುಣಾಕರರೆಡ್ಡಿ (ಹರಪನಹಳ್ಳಿ) ಸೋತಿದ್ದಾರೆ. ಹೊಸ ಪಕ್ಷ ಕಟ್ಟಿದ ಜನಾರ್ದನರೆಡ್ಡಿ ಗಂಗಾವತಿಯಲ್ಲಿ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ಹಿಂದೆ ಅವರು ವಿಧಾನಪರಿಷತ್ ಸದಸ್ಯರಾಗಿದ್ದರು. ಜನಾರ್ದನರೆಡ್ಡಿ ಪತ್ನಿ ಅರುಣ ಲಕ್ಷಿö್ಮ ಬಳ್ಳಾರಿಯಲ್ಲಿ ಸೋಲು ಕಂಡಿದ್ದಾರೆ.

ಮಾಜಿ ಸಿಎಂ ಧರ್ಮಸಿಂಗ್ ಅವರ ಪುತ್ರರಲ್ಲಿ ಅಜಯ್‌ಸಿಂಗ್ ಜೇವರ್ಗಿಯಲ್ಲಿ ಮೂರನೇ ಬಾರಿ ಗೆದ್ದರೆ, ಬೀದರ್‌ನ ಬಸವಕಲ್ಯಾಣದಿಂದ ಸ್ಪರ್ಧಿಸಿದ್ದ ವಿಜಯ್‌ಸಿಂಗ್ ಸೋತಿದ್ದಾರೆ. ಮತ್ತೊಬ್ಬ ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಪುತ್ರರಾದ ಮಧು ಹಾಗೂ ಕುಮಾರ್ ಬಂಗಾರಪ್ಪ ಈ ಬಾರಿಯೂ ಮುಖಾಮುಖಿಯಾಗಿದ್ದರು. ಅದರಲ್ಲಿ ಮಧು ಗೆದ್ದು ಕುಮಾರ್ ಸೋತಿದ್ದಾರೆ. ಮಧು ಹಿಂದೆ ಜಾ.ದಳದಿಂದ ಗೆದ್ದರೆ ಈ ಬಾರಿ ಕಾಂಗ್ರೆಸ್‌ನಿAದ ಗೆಲುವು ಸಾಧಿಸಿದ್ದಾರೆ.

ಮಾಜಿ ಡಿಸಿಎಂ ಎಂ.ಪಿ.ಪ್ರಕಾಶ್ ಪುತ್ರಿ ಲತಾ ಮಲ್ಲಿಕಾರ್ಜುನ ಅವರಿಗೆ ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿತ್ತು. ಕೊನೆಗೆ ಪಕ್ಷೇತರರಾಗಿಯೇ ಗೆದ್ದು ಇತಿಹಾಸವನ್ನು ಲತಾ ನಿರ್ಮಿಸಿದ್ದಾರೆ. ಈ ಹಿಂದೆ ಈ ಕ್ಷೇತ್ರದಿಂದ ಅವರ ಸಹೋದರ ರವೀಂದ್ರ ಶಾಸಕರಾಗಿ ಬಳಿಕ ನಿಧನರಾಗಿದ್ದರು. ಎಂ.ಪಿ.ಪ್ರಕಾಶ್ ನೆರೆಯ ಹಡಗಲಿ ಕ್ಷೇತ್ರದ ಶಾಸಕರಾಗಿದ್ದರು.

ಬೆಳಗಾವಿ ಜಿಲ್ಲೆಯಲ್ಲಿ ಕತ್ತಿ ಕುಟುಂಬದ ರಮೇಶ್‌ಕತ್ತಿ ಚಿಕ್ಕೋಡಿಯಿಂದ ಸೋತರೆ, ಅಣ್ಣನ ಮಗ ನಿಖಿಲ್ ಕತ್ತಿ ಹುಕ್ಕೇರಿಯಿಂದ ಜಯಸಾಧಿಸಿದ್ದಾರೆ. ಇಬ್ಬರಿಗೂ ಬಿಜೆಪಿ ಟಿಕೆಟ್ ನೀಡಿತ್ತು.

ಇಬ್ಬರಿಗೂ ವಿಧಾನಸಭೆ ದರ್ಶನ

ಇನ್ನು ಎರಡು ಬಾರಿ ಮಂಡ್ಯ ಜಿಲ್ಲೆ ಮೇಲುಕೋಟೆ ಶಾಸಕರಾಗಿದ್ದ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಮಗ ದರ್ಶನ್ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಸಾಫ್ಟ್‌ವೇರ್ ಕಂಪೆನಿ ಆರಂಭಿಸಿ ಅಮೆರಿಕಾದಲ್ಲೂ ಶಾಖೆ ಹೊಂದಿರುವ ದರ್ಶನ್ ರಾಜಕಾರಣವನ್ನೂ ಬಿಟ್ಟಿರಲಿಲ್ಲ. ಈ ಬಾರಿ ಸರ್ವೋದಯ ಪಕ್ಷಕ್ಕೆ ಇಲ್ಲಿ ಕಾಂಗ್ರೆಸ್ ಬೆಂಬಲಿಸಿತ್ತು. ಅದೇ ರೀತಿ ಮಾಜಿ ಸಂಸದ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿದ್ದ ಧ್ರುವನಾರಾಯಣ ಅವರ ಪುತ್ರ ದರ್ಶನ್ ನಂಜನಗೂಡಿನಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ. ಧ್ರುವ ಹಾಗೂ ಅವರ ಪತ್ನಿ ವೀಣಾ 10 ದಿನಗಳ ಅಂತರದಲ್ಲೇ 2 ತಿಂಗಳ ಹಿಂದೆ ನಿಧನರಾಗಿದ್ದರು. ಈ ಕಾರಣದಿಂದ ದರ್ಶನ್‌ಗೆ ಟಿಕೆಟ್ ನೀಡಿದ್ದು. ಅನುಕಂಪ ಇಲ್ಲಿ ಕೆಲಸ ಮಾಡಿದೆ.

ಸಹೋದರ ಸಂಬಂಧಿಗಳಾದ ಸಂತೋಷ್ ಲಾಡ್ ಕಾಂಗ್ರೆಸ್‌ನಿಂದ ಕಲಘಟಗಿಯಲ್ಲಿ ಗೆದ್ದರೆ, ಅನಿಲ್ ಲಾಡ್ ಬಳ್ಳಾರಿಯಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸೋತಿದ್ದಾರೆ. ಪ್ರತಿ ಚುನಾವಣೆ ಬಂದಾಗ ಕುಟುಂಬ ರಾಜಕಾರಣದ ಚರ್ಚೆ ನಡೆಯುತ್ತಲೇ ಇರುತ್ತದೆ. ಈ ಬಾರಿ ಹೆಚ್ಚು ಸಂಬಂಧಿಕರು ಅವಕಾಶ ಪಡೆದಿರುವುದು ವಿಶೇಷ ಎನಿಸಿದೆ.

ಗೌಡರ ಕುಟುಂಬಕ್ಕೆ ಭಿನ್ನ ಫಲ

ಚುನಾವಣೆ ವಿಷಯ ಬಂದಾಗ ಎಲ್ಲಾ ಕುಟುಂಬಗಳದ್ದು ಒಂದು ಕಥೆಯಾದರೆ ದೇವೇಗೌಡರ ಕುಟುಂಬದ್ದೇ ಭಿನ್ನ, ಈಗಾಗಲೇ ಎಚ್‌ಡಿಕುಮಾರಸ್ವಾಮಿ ಹಾಗೂ ರೇವಣ್ಣ ಕುಟುಂಬದವರು ಸದನಗಳಲ್ಲಿ ಸದಸ್ಯರು. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಗೆದ್ದರೆ, ಮಗ ನಿಖಿಲ್ ಕುಮಾರಸ್ವಾಮಿಗೆ ಕ್ಷೇತ್ರ ತ್ಯಾಗ ಮಾಡಿದ್ದ ಅನಿತಾ ಕುಮಾರಸ್ವಾಮಿಗೆ ನಿರಾಸೆಯಾಗಿದೆ. ಏಕೆಂದರೆ ರಾಮನಗರದಲ್ಲಿ ನಿಖಿಲ್ ಗೆಲ್ಲಲು ಆಗಿಲ್ಲ. ನಾಲ್ಕು ವರ್ಷದ ಹಿಂದೆ ಮಂಡ್ಯದಲ್ಲೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದ ನಿಖಿಲ್‌ಗೆ ಇದು ಎರಡನೇ ಸೋಲು.

ಹಾಸನದಲ್ಲಿ ರೇವಣ್ಣ ಹೊಳೆನರಸಿಪುರದಿಂದ ಗೆದ್ದಿದ್ದು, ಪತ್ನಿ ಭವಾನಿಗೆ ಟಿಕೆಟ್‌ಗಾಗಿ ಪಟ್ಟು ಹಿಡಿದು ನಂತರ ಸ್ವರೂಪ್ ಅವರನ್ನೇ ಬೆಂಬಲಿಸಿ ಗೆಲ್ಲಿಸಿದ್ದಾರೆ. ಹಾಸನದಲ್ಲಿ ರೇವಣ್ಣನ ಒಬ್ಬ ಪುತ್ರ ಪ್ರಜ್ವಲ್ ಎಂ.ಪಿ., ಮತ್ತೊಬ್ಬ ಡಾ.ಸೂರಜ್ ರೇವಣ್ಣ ಎಂಎಲ್‌ಸಿ. ಗೌಡರ ಬೀಗರಲ್ಲಿ ಸಿ.ಎನ್.ಬಾಲಕೃಷ್ಣ (ಡಾ.ಸಿ.ಎನ್.ಮಂಜುನಾಥ್ ಸಹೋದರ) ಶ್ರವಣಬೆಳಗೊಳ ಕ್ಷೇತ್ರದಲ್ಲಿ ಗೆದ್ದರೆ, ಮತ್ತೊಬ್ಬ ಬೀಗರಾದ ಡಿ.ಸಿ.ತಮ್ಮಣ್ಣ ಮದ್ದೂರಲ್ಲಿ ಸೋಲು ಕಂಡಿದ್ದಾರೆ.

ವಿಧಾನಸಭೆಗೆ ವಿಜಯೇಂದ್ರ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರಗೆ ಅವಕಾಶ ಪಡೆಯುವ ವಿಚಾರದಲ್ಲಿ ಬಿಜೆಪಿಯಲ್ಲಿ ಸದ್ದಿಲ್ಲದ ಮುಸುಕಿನ ಗುದ್ದಾಟವೇ ನಡೆದಿತ್ತು. ಕೊನೆಗೆ ಮಗನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿದ್ದು ಫಲ ನೀಡಿದೆ. ವಿಜಯೇಂದ್ರ ಅಲ್ಲಿ ಗೆದ್ದು ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಈ ಹಿಂದೆ ಇದೇ ಕ್ಷೇತ್ರದ ಶಾಸಕರಾಗಿದ್ದ ಬಿ.ವೈ.ರಾಘವೇಂದ್ರ ಹಾಲಿ ಶಿವಮೊಗ್ಗದ ಸಂಸದ.

ಬರಹ: ಕುಂದೂರು ಉಮೇಶ ಭಟ್ಟ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ