logo
ಕನ್ನಡ ಸುದ್ದಿ  /  ಕರ್ನಾಟಕ  /  Jagadish Shettar: ಸ್ವಾಭಿಮಾನಕ್ಕೆ ಧಕ್ಕೆ; ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಕಾರಣ ನೀಡಿದ ಜಗದೀಶ್ ಶೆಟ್ಟರ್

Jagadish Shettar: ಸ್ವಾಭಿಮಾನಕ್ಕೆ ಧಕ್ಕೆ; ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಕ್ಕೆ ಕಾರಣ ನೀಡಿದ ಜಗದೀಶ್ ಶೆಟ್ಟರ್

Meghana B HT Kannada

Apr 22, 2023 09:29 AM IST

google News

ಜಗದೀಶ್‌ ಶೆಟ್ಟರ್‌

    • ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ (Jagadish Shettar), ಶಾಸಕ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೀಗ, ಕಾಂಗ್ರೆಸ್​​ ಸೇರಲು ಕಾರಣ ಏನು ಎಂಬುದನ್ನ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.
ಜಗದೀಶ್‌ ಶೆಟ್ಟರ್‌
ಜಗದೀಶ್‌ ಶೆಟ್ಟರ್‌

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections) ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ (Hubli-Dharwad Central) ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಪಡೆಯುವಲ್ಲಿ ವಿಫಲವಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ (Jagadish Shettar), ಶಾಸಕ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್​​ಗೆ ಸೇರ್ಪಡೆಯಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದೀಗ, ಕಾಂಗ್ರೆಸ್​​ ಸೇರಲು ಕಾರಣ ಏನು ಎಂಬುದನ್ನ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಎಎನ್​ಐ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಜಗದೀಶ್‌ ಶೆಟ್ಟರ್‌, “ಸಾರ್ವಜನಿಕರು ನನ್ನನ್ನು ನಂಬಿದ್ದರು, ಮತ್ತು ನಾನು ಹುಬ್ಬಳ್ಳಿಯ ಜನರೊಂದಿಗೆ ಅದೇ ಸಂಬಂಧವನ್ನು ಉಳಿಸಿಕೊಂಡಿದ್ದೇನೆ. ಆದರೆ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಮತ್ತು ಇದು ಸವಾಲಾಗಿತ್ತು. ಕಾಂಗ್ರೆಸ್‌ ಸೇರ್ಪಡೆ ಬಳಿಕ ನಾನು ನಿನ್ನೆ ನನ್ನ ಕ್ಷೇತ್ರದ ಹಲವು ಪ್ರದೇಶಗಳಿಗೆ ಭೇಟಿ ನೀಡಿದೆ. ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆ ತಿಳಿಯಿತು ಎಂದು ಹೇಳಿದರು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಶೆಟ್ಟರ್, ಕರ್ನಾಟಕದಲ್ಲಿ ಪಕ್ಷವನ್ನು (ಬಿಜೆಪಿ) "ಪಟ್ಟಭದ್ರ ಹಿತಾಸಕ್ತಿ ಹೊಂದಿರುವವ ಕೆಲವರು ನಿಯಂತ್ರಿಸುತ್ತಿದ್ದಾರೆ" ಎಂದು ಆರೋಪಿಸಿದರು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಐದು ವರ್ಷ ಪೂರೈಸಿದೆ. ಹಿರಿಯರ ಅವ್ಯವಹಾರದ ಬಗ್ಗೆ ಜನರು ಮಾತನಾಡುತ್ತಿದ್ದಾರೆಯೇ ಹೊರತು ಅಭಿವೃದ್ಧಿಯಂತಹ ಇತರ ವಿಷಯಗಳ ಬಗ್ಗೆ ಅಲ್ಲ. ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲಾಗಿದೆಯೇ? ಆದರೆ ಇದೀಗ ವರಿಷ್ಠರ (ಬಿಜೆಪಿ) ನಿರ್ಲಕ್ಷ್ಯದಿಂದ ಈ ಚರ್ಚೆ ಶುರುವಾಗಿದೆ. ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವರು ಕರ್ನಾಟಕ ಮತ್ತು ಸರ್ಕಾರದಲ್ಲಿ ಸಂಪೂರ್ಣ ಬಿಜೆಪಿಯನ್ನು ನಿಯಂತ್ರಿಸುತ್ತಿದ್ದಾರೆ,” ಎಂದು ಜಗದೀಶ್​ ಶೆಟ್ಟರ್​ ಹೇಳಿದರು.

ಆರು ಬಾರಿ ಶಾಸಕರಾಗಿದ್ದ ಜಗದೀಶ್​ ಶೆಟ್ಟರ್ ಈ ಬಾರಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಟಿಕೆಟ್​ ಸಿಗದ ಕಾರಣ ಬಿಜೆಪಿ ತೊರೆದು, ಏಪ್ರಿಲ್​ 17 ರಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸಮ್ಮುಖದಲ್ಲಿ ಕಾಂಗ್ರೆಸ್​ ಸೇರ್ಪಡೆಯಾಗಿದ್ದರು. ಇವರಿಗೆ ಕಾಂಗ್ರೆಸ್​ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಿಂದ ಟಿಕೆಟ್​ ಕೂಡ ನೀಡಿದೆ. ಅಲ್ಲದೇ ಕಾಂಗ್ರೆಸ್​​ ಸ್ಟಾರ್​ ಪ್ರಚಾರಕನ್ನಾಗಿಯೂ ಆಯ್ಕೆ ಮಾಡಲಾಗಿದೆ.

ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶೆಟ್ಟರ್​, ನನಗೆ ಅಧಿಕಾರ ಮುಖ್ಯವಾಗಿದ್ದರೆ, ಬೊಮ್ಮಾಯಿ ಅವರ ಸರ್ಕಾರದಲ್ಲಿ ನನಗೆ ಮಂತ್ರಿ ಸ್ಥಾನ ಬೇಡ ಎಂದು ಸ್ವಯಂಕೃತವಾಗಿ ಯಾಕೆ ಹೇಳಿಕೆ ನೀಡಿದ್ದೆ? ಅಧಿಕಾರ ಬೇಕಾಗಿದ್ದರೆ ಆಗಲೇ ಹಠಮಾಡಿ ಮಂತ್ರಿಗಿರಿ ಪಡೆಯುತ್ತಿದ್ದೆ. ಕೊನೆಯದಾಗಿ ನನಗೆ ಅಪಮಾನವಾಗಿದ್ದು, ಅದನ್ನು ಸರಿಪಡಿಸಲು ಶಾಸಕ ಸ್ಥಾನಕ್ಕೆ ಸ್ಪರ್ಧಿಸುತ್ತೇನೆ. ನನಗೆ ಆಗಿರುವ ವೇದನೆ ಯಾರೂ ಅರ್ಥ ಮಾಡಿಕೊಂಡಿಲ್ಲಎಂದು ಹೇಳಿದ್ದರು.

ಶೆಟ್ಟರ್ ಕಾಂಗ್ರೆಸ್​ ಸೇರ್ಪಡೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ, 'ಕರ್ನಾಟಕದ ಜನ ಜಗದೀಶ್ ಶೆಟ್ಟರ್ ಅವರನ್ನು ಕ್ಷಮಿಸುವುದಿಲ್ಲ. ನಾವು ಅವರನ್ನು ಕರ್ನಾಟಕದ ಸಿಎಂ ಮಾಡಿದ್ದೆವು, ಮತ್ತು ನಾವು ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ನೇಮಿಸಿದ್ದೆವು. ಆದರೆ ಅವರು ಈಗ ನೀಡಿರುವ ಹೇಳಿಕೆಗಳು ನಮಗೆ ಬೇಸರ ತಂದಿವೆ. ಜನರಿಗೆ ಜಗದೀಶ್ ಶೆಟ್ಟರ್ ಬಗ್ಗೆ ಗೊತ್ತಿದೆ ಎಂದರೆ ಅದು ಬಿಜೆಪಿಯಿಂದಲೇ ಎಂದು ಹೇಳಿದ್ದರು.

ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಚುನಾವಣಾ ಆಯೋಗವು ಮಾರ್ಚ್ 29ರಂದು ಘೋಷಿಸಿತ್ತು. ಏ. 20 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 3,632 ಅಭ್ಯರ್ಥಿಗಳಿಂದ 5,102 ನಾಮಪತ್ರ ಸಲ್ಲಿಕೆಯಾಗಿದೆ. ನಿನ್ನೆ (ಏ 21) ನಾಮಪತ್ರ ಪರಿಶೀಲನೆ ನಡೆದಿದ್ದು, ಏ. 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 10ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ