NEP ಅಥವಾ SEP: ಪದವಿ ಕೋರ್ಸ್ ಪ್ರವೇಶ ಗೊಂದಲ ರಾಜ್ಯವ್ಯಾಪಿ; ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳ ಹಪಾಹಪಿ
May 03, 2024 02:56 PM IST
ಎನ್‌ಇಪಿ ಅಥವಾ ಎಸ್‌ಇಪಿ: ಪದವಿ ಕೋರ್ಸ್ ಪ್ರವೇಶ ಗೊಂದಲ ರಾಜ್ಯವ್ಯಾಪಿ (ಸಾಂದರ್ಭಿಕ ಚಿತ್ರ)
- ಎನ್‌ಇಪಿ ಮತ್ತು ಎಸ್‌ಇಪಿ, ಈ ಎರಡರಲ್ಲಿ ರಾಜ್ಯದ ಕಾಲೇಜುಗಳಲ್ಲಿ ಯಾವ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರುವುದು ಎಂಬ ಕುರಿತು ಕರ್ನಾಟಕ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಹೀಗಾಗಿ ಪಿಯುಸಿ ಮುಗಿಸಿರುವ ಕರ್ನಾಟಕದ ವಿದ್ಯಾರ್ಥಿಗಳು ಮುಂದೆ 3 ವರ್ಷದ ಡಿಗ್ರಿ ಕೋರ್ಸ್ ಅಥವಾ 4 ವರ್ಷದ ಡಿಗ್ರಿ ಕೋರ್ಸ್ ಎಂಬುದನ್ನು ನಿರ್ಧರಿಸಲಾಗದೆ ಗೊಂದಲದಲ್ಲಿದ್ದಾರೆ.
ಕರ್ನಾಟಕದ ಡಿಗ್ರಿ ವಿದ್ಯಾರ್ಥಿಗಳು ಸದ್ಯ ಸಂಕಷ್ಟದಲ್ಲಿದ್ದಾರೆ. 2024-25ನೇ ಸಾಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಕಾಲೇಜು ಪ್ರವೇಶಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಕಡ್ಡಾಯಗೊಳಿಸಲಾಗಿದ್ದು, ಏಕೀಕೃತ ವಿಶ್ವವಿದ್ಯಾಲಯ ಕಾಲೇಜು ನಿರ್ವಹಣಾ ವ್ಯವಸ್ಥೆ (UUCMS) ಪೋರ್ಟಲ್‌ನಲ್ಲಿನ ತಾಂತ್ರಿಕ ದೋಷಗಳಿಂದಾಗಿ ವಿದ್ಯಾರ್ಥಿಗಳು ಪ್ರವೇಶಕ್ಕಾಗಿ ಹೆಣಗಾಡುವಂತಾಗಿದೆ. ಅಲ್ಲದೆ, ರಾಜ್ಯದಲ್ಲಿ ಎನ್‌ಇಪಿ ಮತ್ತು ಎಸ್‌ಇಪಿಯಲ್ಲಿ ಯಾವ ಶಿಕ್ಷಣ ನೀತಿಯನ್ನು ಅಳವಡಿಸಲಾಗುತ್ತದೆ ಎಂಬುದನ್ನು ಸರ್ಕಾರ ಇನ್ನೂ ಸ್ಪಷ್ಟಪಡಿಸಿಲ್ಲ. ಇದು ವಿದ್ಯಾರ್ಥಿಗಳ ಗೊಂದಲಕ್ಕೆ ಪ್ರಮುಖ ಕಾರಣವಾಗಿದೆ.
ಪದವಿ ಕಾಲೇಜು ಪ್ರವೇಶಕ್ಕೆ ವಿದ್ಯಾರ್ಥಿಗಳಿಗೆ ಹಾರ್ಡ್ ಕಾಪಿ ರೂಪದಲ್ಲಿ ಅರ್ಜಿಗಳನ್ನು ಈಗಾಗಲೇ ವಿತರಿಸಲಾಗಿದೆ. ಇದರೊಂದಿಗೆ ಕಾಲೇಜುಗಳು ಗೊಂದಲದಲ್ಲೇ ದಾಖಲಾತಿ ಪ್ರಕ್ರಿಯೆ ಆರಂಭಿಸಿವೆ. ಇದರ ನಡುವೆ ಯುಯುಸಿಎಂಎಸ್ ಪೋರ್ಟಲ್ ಸಕ್ರಿಯಗೊಳಿಸಿ, ಆನ್‌ಲೈನ್ ಮೂಲಕವೂ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಇದು ವಿದ್ಯಾರ್ಥಿಗಳ ಕೆಲಸವನ್ನು ದುಪ್ಪಟ್ಟಾಗಿಸಿದೆ. ಈಗ ವಿದ್ಯಾರ್ಥಿಗಳು ಎರಡು ಬಾರಿ ಅರ್ಜಿ ಸಲ್ಲಿಸಬೇಕಾಗಿದೆ. ಆದರೂ, ವಿದ್ಯಾರ್ಥಿಗಳ ಗೊಂದಲ ಮಾತ್ರ ಪರಿಹಾರವಾಗಿಲ್ಲ.
ಎಸ್‌ಇಪಿ ಅಥವಾ ಎನ್‌ಇಪಿ
ಇಷ್ಟಾದರೆ ಸಮಸ್ಯೆ ಇಲ್ಲ. ವಿದ್ಯಾರ್ಥಿಗಳು ಮೂರು ವರ್ಷದ ಡಿಗ್ರಿ ಕೋರ್ಸ್ ಅಥವಾ ನಾಲ್ಕು ವರ್ಷದ ಡಿಗ್ರಿ ಕೋರ್ಸ್ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಕಾಲೇಜಿನಲ್ಲಿ ವಿಚಾರಿಸಿದರೆ, ಸ್ಪಷ್ಟನೆ ಸಿಗುತ್ತಿಲ್ಲ ಎಂಬುದಾಗಿ ವಿದ್ಯಾರ್ಥಿಗಳು ದೂರುತ್ತಿದ್ದಾರೆ. ಇದಕ್ಕೆ ಕಾರಣ ರಾಜ್ಯ ಸರ್ಕಾರದ ಗೊಂದಲ. ಎನ್‌ಇಪಿ ಮತ್ತು ಎಸ್‌ಇಪಿ, ಈ ಎರಡರಲ್ಲಿ ರಾಜ್ಯದ ಕಾಲೇಜುಗಳಲ್ಲಿ ಯಾವುದನ್ನು ಅನುಷ್ಠಾನಕ್ಕೆ ತರುವುದು ಎಂಬ ಕುರಿತು ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ.
“ಯುಯುಸಿಎಂಎಸ್ ಪೋರ್ಟಲ್‌ನಲ್ಲಿ ಆನ್‌ಲೈನ್ ಮೂಲಕವೇ ಶುಲ್ಕ ಪಾವತಿಸುವುದು ಕಡ್ಡಾಯಗೊಳಿಸಿದ್ದಾರೆ. ಹೀಗಾಗಿ ಪೋರ್ಟಲ್ ಸಕ್ರಿಯಗೊಳಿಸಿದ ನಂತರ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ ನಾವು ನಾಲ್ಕು ವರ್ಷಗಳ ಪದವಿ ಕೋರ್ಸ್‌ಗೆ ಅಥವಾ ಮೂರು ವರ್ಷಗಳ ಪದವಿ ಕೋರ್ಸ್‌ಗೆ ಅರ್ಜಿ ಸಲ್ಲಿಸಬೇಕೇ ಎಂದು ಕಾಲೇಜಿನಲ್ಲಿ ವಿಚಾರಿಸಿದಾಗ ಅವರಿಂದ ಸ್ಪಷ್ಟ ಉತ್ತರ ಸಿಗುತ್ತಿಲ್ಲ" ಎಂದು ವಿದ್ಯಾರ್ಥಿಯೊಬ್ಬರು ದೂರಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಇನ್ನೂ ಓಪನ್ ಆಗದ ವೆಬ್‌ಸೈಟ್
ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಪ್ರಕಟಗೊಂಡು 22 ದಿನಗಳು ಕಳೆದಿವೆ. ಆದರೂ, ಇನ್ನೂ UUCMS ಪೋರ್ಟಲ್ ತೆರೆದಿಲ್ಲ. ಇದರಿಂದಾಗಿ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಅರ್ಜಿಗಳನ್ನು ವಿತರಿಸುವ ಮೂಲಕ ಪ್ರವೇಶ ಪ್ರಕ್ರಿಯೆ ಆರಂಭಿಸಿವೆ.
ಎಸ್‌ಇಪಿ ಜಾರಿಗೆ ತರುವಂತೆ ಮಧ್ಯಂತರ ವರದಿ ಸಲ್ಲಿಕೆ
ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಅನ್ನು ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದರ ಬದಲಾಗಿ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಜಾರಿಗೆ ತರಲು ಆಯೋಗ ರಚನೆ ಮಾಡಲಾಗಿದೆ. ಈ ಆಯೋಗವು ರಾಜ್ಯ ಸರ್ಕಾರಕ್ಕೆ ಈಗಾಗಲೇ ಮಧ್ಯಂತರ ವರದಿ ಸಲ್ಲಿಸಿದೆ. ಅದರ ಪ್ರಕಾರ ನಾಲ್ಕು ವರ್ಷಗಳ ಪದವಿ ಕೋರ್ಸ್ ಬದಲಿಗೆ ಮೂರು ವರ್ಷದ ಪದವಿ ಕೋರ್ಸ್ ಆರಂಭಿಸಲು ಶಿಫಾರಸು ಮಾಡಿದೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಈ ಕುರಿತು ಯಾವುದೇ ಅಧಿಕೃತ ಆದೇಶ ಹೊರಬಿದ್ದಿಲ್ಲ. ಅತ್ತ ಎನ್‌ಇಪಿ, ಇತ್ತ ಎಸ್‌ಇಪಿ, ಈ ಎರಡರಲ್ಲಿ ಯಾವುದು ಎಂಬ ಸ್ಪಷ್ಟ ನಿರ್ಧಾರಕ್ಕೆ ಬರುವಲ್ಲಿ ಸರ್ಕಾರ ವಿಫಲವಾಗಿದೆ. ಇದರ ನಡುವೆ ವಿದ್ಯಾರ್ಥಿಗಳು ಕೋರ್ಸ್ ಆರಂಭದಲ್ಲೇ ಭವಿಷ್ಯದ ಕುರಿತು ಚಿಂತಿಸುವಂತಾಗಿದೆ.
ಎನ್‌ಇಪಿ ಅಡಿಯಲ್ಲಿ ಪದವಿ ಕೋರ್ಸ್‌ಗಳಿಗೆ ಅರ್ಜಿ ವಿತರಣೆ ಆರಂಭ
ಅತ್ತ ವಿಶ್ವವಿದ್ಯಾಲಯಗಳಿಗೂ ಸರ್ಕಾರ ಈ ಕುರಿತ ಕನಿಷ್ಠ ಮೌಖಿಕ ಸೂಚನೆಯನ್ನೂ ನೀಡಿಲ್ಲ. ಹೀಗಾಗಿ, ಬೇರೆ ದಾರಿ ಇಲ್ಲದೆ ಶಿಕ್ಷಣ ಸಂಸ್ಥೆಗಳು ಎನ್‌ಇಪಿ ಅಡಿಯಲ್ಲಿ 4 ವರ್ಷಗಳ ಪದವಿ ಕೋರ್ಸ್‌ಗಳಿಗೆ ಅರ್ಜಿಗಳನ್ನು ವಿತರಿಸುತ್ತಿವೆ. ಇದು ಹೆಚ್ಚಿನ ಗೊಂದಲಕ್ಕೆ ಕಾರಣವಾಗುತ್ತದೆ.
“ಎನ್‌ಇಪಿ ಅಥವಾ ಎಸ್‌ಇಪಿ, ಈ ಎರಡರಲ್ಲಿ ಯಾವುದರ ಅಡಿಯಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಬೇಕು ಎಂಬುದರ ಕುರಿತು ನಮಗೆ ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಪ್ರಸ್ತುತ, ಈ ಹಿಂದಿನ ಮಾದರಿಯಂತೆ ಎನ್‌ಇಪಿ ಅಡಿಯಲ್ಲಿ 4 ವರ್ಷಗಳ ಕೋರ್ಸ್‌ಗಳಿಗೆ ಅರ್ಜಿಗಳ ವಿತರಣೆ ನಡೆಯುತ್ತಿದೆ. ಮುಂದೆ ಈ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ನಿರ್ಧಾರದಂತೆ ಮುಂದುವರಿಯುತ್ತೇವೆ” ಎಂದು ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಜಯಕರ ಎಸ್‌ಎಂ ತಿಳಿಸಿದ್ದಾರೆ.
ಮೇ 8ರಂದು ಉನ್ನತ ಶಿಕ್ಷಣ ಸಚಿವರ ಸಭೆ
ಉನ್ನತ ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಎನ್‌ಇಪಿ ಮತ್ತು ಎಸ್‌ಇಪಿ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಮೇ 7ಕ್ಕೆ ಕೊನೆಗೊಳ್ಳಲಿದ್ದು, ಮೇ 8ರಂದು ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂಬ ವರದಿಗಳಿವೆ. ನಾಲ್ಕು ವರ್ಷಗಳ ಬದಲಿಗೆ ಮೂರು ವರ್ಷಗಳ ಪದವಿ ಕೋರ್ಸ್‌ಗಳನ್ನು ಮರು ಪರಿಚಯಿಸಲು ನಿರ್ಧರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.