logo
ಕನ್ನಡ ಸುದ್ದಿ  /  ಕರ್ನಾಟಕ  /  Anna Bhagya: ಅಕ್ಕಿಯ ಬದಲು ಹಣ ನೀಡಲು ಕರ್ನಾಟಕ ಸರ್ಕಾರ ನಿರ್ಧಾರ; ಸಚಿವ ಸಂಪುಟ ಸಭೆ ತೀರ್ಮಾನ

Anna Bhagya: ಅಕ್ಕಿಯ ಬದಲು ಹಣ ನೀಡಲು ಕರ್ನಾಟಕ ಸರ್ಕಾರ ನಿರ್ಧಾರ; ಸಚಿವ ಸಂಪುಟ ಸಭೆ ತೀರ್ಮಾನ

D M Ghanashyam HT Kannada

Jun 28, 2023 02:55 PM IST

Breaking News: ಅಕ್ಕಿಯ ಬದಲು ಹಣ ನೀಡಲು ಕರ್ನಾಟಕ ಸರ್ಕಾರ ನಿರ್ಧಾರ; ಸಚಿವ ಸಂಪುಟ ಸಭೆ ತೀರ್ಮಾನ

    • Anna Bhagya Scheme Karnataka: ಕರ್ನಾಟಕ ಸರಕಾರವು ಅಕ್ಕಿ ಕೊರತೆ ಹಿನ್ನೆಲೆಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲು ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ, ಫಲಾನುಭವಿಗಳಿಗೆ ತಿಂಗಳಿಗೆ 170 ರೂಪಾಯಿ ನೀಡಲು ಕರ್ನಾಟಕ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
Breaking News: ಅಕ್ಕಿಯ ಬದಲು ಹಣ ನೀಡಲು ಕರ್ನಾಟಕ ಸರ್ಕಾರ ನಿರ್ಧಾರ; ಸಚಿವ ಸಂಪುಟ ಸಭೆ ತೀರ್ಮಾನ
Breaking News: ಅಕ್ಕಿಯ ಬದಲು ಹಣ ನೀಡಲು ಕರ್ನಾಟಕ ಸರ್ಕಾರ ನಿರ್ಧಾರ; ಸಚಿವ ಸಂಪುಟ ಸಭೆ ತೀರ್ಮಾನ

ಬೆಂಗಳೂರು: ಉಚಿತ ಅಕ್ಕಿ ವಿತರಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಸುದೀರ್ಘ ಹಗ್ಗಜಗ್ಗಾಟ ನಡೆಸಿದ ಕರ್ನಾಟಕ ಸರ್ಕಾರವು ಬುಧವಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಅಕ್ಕಿ ಕೊರತೆ ಹಿನ್ನೆಲೆಯಲ್ಲಿ 5 ಕೆಜಿ ಹೆಚ್ಚುವರಿ ಅಕ್ಕಿಯ ಬದಲು ಒಂದು ಕೆಜಿ ಅಕ್ಕಿಗೆ 34 ರೂಪಾಯಿಯಂತೆ, ಫಲಾನುಭವಿಗಳಿಗೆ ತಿಂಗಳಿಗೆ 170 ರೂಪಾಯಿ ನೀಡಲು ಕರ್ನಾಟಕ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಟ್ರೆಂಡಿಂಗ್​ ಸುದ್ದಿ

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಕರ್ನಾಟಕ ಹವಾಮಾನ ಮೇ 19; ರಾಜ್ಯದಲ್ಲಿ ಮಳೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲಿ ಆರೆಂಜ್ ಅಲರ್ಟ್‌, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರಾದ ಎಚ್‌.ಕೆ.ಪಾಲೀಲ್ ಮತ್ತು ಆಹಾರ ಸಚಿವ ಮುನಿಯಪ್ಪ ಕೇಂದ್ರ ಸರ್ಕಾರದ ಅಸಹಕಾರದ ಬಗ್ಗೆ ಕಠಿಣ ದನಿಯಲ್ಲಿ ಆಕ್ಷೇಪಿಸಿದರು. "ಕೇಂದ್ರ ಸರ್ಕಾರವು ತನ್ನ ಬಳಿ ಅಕ್ಕಿ ದಾಸ್ತಾನು ಇದ್ದರೂ ರಾಜ್ಯದ ಫಲಾನುಭವಿಗಳಿಗೆ ಅಕ್ಕಿ ಕೊಡಲಿಲ್ಲ. ನಾವು ಹಣ ಕೊಡುತ್ತೇವೆ ಎಂದರೂ ಸ್ಪಂದಿಸಲಿಲ್ಲ" ಎಂದು ಮುನಿಯಪ್ಪ ದೂರಿದರು.

15 ಲಕ್ಷ ಟನ್‌ನಷ್ಟು ಅಕ್ಕಿಯನ್ನು ಮುಕ್ತ ಟೆಂಡರ್‌ ಮೂಲಕ ಕೆಜಿಗೆ 31 ರೂಪಾಯಿಯಂತೆ ಕೊಟ್ಟಿದ್ದಾರೆ. ನಾವು 34 ರೂಪಾಯಿ ಕೊಡುತ್ತೇವೆ ಎಂದರೂ ಸ್ಪಂದಿಸಲಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಬದಲಿ ಯೋಚನೆ ಮಾಡಬೇಕಾಯಿತು. ಕೇಂದ್ರದ ಅಧೀನದಲ್ಲಿರುವ ಸಂಸ್ಥೆಗಳು ನಮ್ಮ ಮನವಿಗೆ ಸ್ಪಂದಿಸಲಿಲ್ಲ. ಹೀಗಾಗಿ ಕೇಂದ್ರ ಗೋದಾಮು ನಿಗಮವು ಒಂದು ಕೆಜಿ ಅಕ್ಕಿಗೆ ನಿಗದಿಪಡಿಸಿರುವ 34 ರೂಪಾಯಿ ಮೊತ್ತವನ್ನು ಜನರಿಗೇ ನೇರವಾಗಿ ಹಂಚಿಕೆ ಮಾಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಮುನಿಯಪ್ಪ ತಿಳಿಸಿದರು.

ಕೇಂದ್ರ ಸರ್ಕಾರ ನಮಗೆ ಸಹಕರಿಸಿಲ್ಲ. ಬಡವರಿಗೆ ಅಕ್ಕಿ ಕೊಡುವುದರಲ್ಲಿ ರಾಜಕೀಯ ಮಾಡಿದ ಕಾರಣ ನಾವು ಜನರಿಗೆ ಮಾತು ಕೊಟ್ಟಂತೆ ಹಣ ಕೊಡ್ತಿದ್ದೀವಿ. ನಂತರ ಎಷ್ಟು ಬೇಗ ಆದರೆ ಅಷ್ಟು ಬೇಗ ಪಾರದರ್ಶಕವಾಗಿ ಟೆಂಡರ್ ಕರೆದು ಪ್ರತಿ ಫಲಾನುಭವಿಗೆ ತಲಾ 10 ಕೆಜಿಯಂತೆ ಅಕ್ಕಿ ಕೊಡುತ್ತೇವೆ. ಒಂದು ಕೆಜಿಗೆ 34 ರೂಪಾಯಿಯಂತೆ ಮನೆಯಲ್ಲಿ ಎಷ್ಟು ಜನರಿದ್ದಾರೆ ಲೆಕ್ಕ ಹಾಕಿ ಹಣಕೊಡುತ್ತೇವೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಈ ಯೋಜನೆಯ ಅನುಷ್ಠಾನಕ್ಕಾಗಿ ಒಂದು ತಿಂಗಳಿಗೆ ಸುಮಾರು 800 ಕೋಟಿ ರೂಪಾಯಿ ಖರ್ಚು ಮಾಡಬೇಕಾಗಬಹುದು. ಈ ಲೆಕ್ಕಾಚಾರ ನಾವು ಹಾಕಿಕೊಂಡಿದ್ದೇವೆ. 20 ಸಾವಿರ ಟನ್ ಅಕ್ಕಿ ಖರೀದಿಗೂ ಕ್ರಮ ತೆಗೆದುಕೊಂಡಿದ್ದೇವೆ ಎಂದು ಸಚಿವರು ಮಾಧ್ಯಮ ಪ್ರತಿನಿಧಿಗಳಿಗೆ ಪ್ರಶ್ನೆಗೆ ಉತ್ತರಿಸುವಾಗ ಮಾಹಿತಿ ನೀಡಿದರು.

ಅಕ್ಕಿ ಬದಲು ಹಣ ನೀಡುವ ತಾಂತ್ರಿಕ ವಿವರ ಒದಗಿಸಿದ ಸಚಿವ ಎಚ್‌.ಕೆ.ಪಾಟೀಲ, ಕುಟುಂಬದ ಯಜಮಾನರ (ಮ್ಯಾನೇಜರ್ ಆಫ್ ದಿ ಹೌಸ್‌) ಅಕೌಂಟ್‌ಗೆ ಹಣ ಹಾಕುತ್ತೇವೆ. ಅವರು ಮನೆಯ ಇತರರಿಗೆ ಆಹಾರ ಒದಗಿಸುತ್ತಾರೆ. ಈ ಕುರಿತು ನಾವು ಯೋಚಿಸಿದ್ದೇವೆ ಎಂದು ವಿವರಿಸಿದರು.

ಶೇ 95ರಷ್ಟು ಪಡಿತರ ಚೀಟಿಗಳು ಆಧಾರ್ ಕಾರ್ಡ್‌ಗೆ ಲಿಂಕ್ ಹಾಗಿವೆ. ಗೃಹಲಕ್ಷ್ಮೀ ಯೋಜನೆಗೂ ಇದು ಬಳಕೆಯಾಗಲಿದೆ. ಬ್ಯಾಂಕ್ ಖಾತೆಗಳಿಗೆ ಹಣ ಹಾಕುತ್ತೇವೆ. ಈ ತಿಂಗಳಲ್ಲಿಯೇ ನಾವು ಕೆಲಸ ಆರಂಭಿಸುತ್ತೇವೆ. ಮುಂದಿನ ತಿಂಗಳಿನಿಂದಲೇ ಹಣ ಜಮಾ ಆಗಲಿದೆ ಎಂದು ಆಹಾರ ಸಚಿವ ಮುನಿಯಪ್ಪ ಹೆಚ್ಚಿನ ವಿವರಣೆ ಒದಗಿಸಿದರು.

ಕೇಂದ್ರದ ಅಸಹಕಾರ, ತಾತ್ಸಾರ

ಕೇಂದ್ರ ಸರ್ಕಾರ ಬಡವರ ಕಾರ್ಯಕ್ರಮದ ಬಗ್ಗೆ ತಾತ್ಸಾರ ತೋರಿಸಿದರು. ನಮಗೆ ಅಸಹಕಾರ ತೋರಿಸಿದರು. ಹೀಗಾಗಿ ನಾವು ಅನಿವಾರ್ಯವಾಗಿ ಜನರಿಗೆ ಹಣ ಕೊಡುವ ನಿರ್ಧಾರ ಮಾಡಬೇಕಾಯಿತು. ಈ ಹಣದಿಂದ ಜನರು ಅಕ್ಕಿಯಷ್ಟೇ ಅಲ್ಲ, ಜೋಳ, ರಾಗಿ, ಬೇಳೆ, ಎಣ್ಣೆ ಏನು ಬೇಕಾದರೂ ಖರೀದಿಸಬಹುದು ಎಂದು ಸಚಿವ ಎಚ್‌.ಕೆ.ಪಾಟೀಲ ಕೇಂದ್ರದ ವಿರುದ್ಧ ನೇರ ಆರೋಪ ಮಾಡಿದರು.

ಒಬ್ಬ ಫಲಾನುಭವಿಗೆ 170 ರೂಪಾಯಿಯಂತೆ ಪಡಿತರ ಚೀಟಿಯಲ್ಲಿ ಎಷ್ಟು ಜನರ ಹೆಸರಿದೆಯೋ ಅಷ್ಟೂ ಜನರಿಗೆ ಕೊಡುತ್ತೇವೆ. ಇದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ನಮಗೆ ಅಕ್ಕಿ ಸಿಕ್ಕ ನಂತರ ಅಕ್ಕಿಯನ್ನೇ ಕೊಡುತ್ತೇವೆ. ಹಣ ಕೊಡುವುದು ನಿಲ್ಲಿಸುತ್ತೇವೆ ಎಂದು ತಿಳಿಸಿದರು.

ನಾವು ಅಕ್ಕಿಯನ್ನೂ ಕೊಡಬಾರದು, ರೊಕ್ಕವನ್ನೂ (ಹಣ) ಕೊಡಬಾರದು ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದನ್ನು ಕೇಳಲು ಆಗುವುದಿಲ್ಲ. ಕೇಂದ್ರ ಸರ್ಕಾರದ ಗೋದಾಮುಗಳಲ್ಲಿ 7 ಲಕ್ಷ ಟನ್ ಅಕ್ಕಿ ಇದೆ. ಇದನ್ನು ಎತ್ತುವಳಿ ಮಾಡಲು ಖಾಸಗಿಯವರಿಗೆ ಕೊಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಬಾರದು ಎಂದು ತಾಕೀತು ಮಾಡಿದೆ ಎಂದು ಆರೋಪ ಮಾಡಿದರು.

ಕರ್ನಾಟಕದಲ್ಲಿ 85 ಲಕ್ಷ ಬಿಪಿಎಲ್ ಕಾರ್ಡ್‌ದಾರರು ಇದ್ದಾರೆ. ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ವಿಶ್ವಾಸ ನಮಗಿದೆ ಎಂದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ