Vote From Home: ಕರ್ನಾಟಕದ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ: ಯಾರೆಲ್ಲಾ ಅರ್ಹರು? ಸರಳ ನಿಯಮಗಳು
Mar 29, 2023 01:30 PM IST
ಸಾಂದರ್ಭಿಕ ಚಿತ್ರ
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿರುವ ಕೇಂದ್ರ ಚುನಾವಣಾ ಆಯೋಗ, ರಾಜ್ಯದಲ್ಲಿ ಮೇ 10ರಂದು ಒಂದು ಹಂತದ ಮತದಾನ ನಡೆಯಲಿದೆ ಎಂದು ತಿಳಿಸಿದೆ. ಮೇ 13ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ಇದೇ ಮೊದಲ ಬಾರಿಗೆ ಹಿರಿಯ ಮತ್ತು ವಿಶೇಷ ಚೇತನ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ (ವೋಟ್ ಫ್ರಮ್ ಹೋಮ್) ಸೌಲಭ್ಯ ಕಲ್ಪಿಸಲಾಗಿದೆ. ಈ ಕುರಿತು ಇಲ್ಲಿದೆ ಮಾಹಿತಿ..
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ ಮಾಡಿರುವ ಕೇಂದ್ರ ಚುನಾವಣಾ ಆಯೋಗ, ರಾಜ್ಯದಲ್ಲಿ ಮೇ 10ರಂದು ಒಂದು ಹಂತದ ಮತದಾನ ನಡೆಯಲಿದೆ ಎಂದು ತಿಳಿಸಿದೆ. ಅದೇ ರೀತಿ ಮೇ 13ಕ್ಕೆ ಮತ ಎಣಿಕೆ ಪ್ರಕ್ರಿಯೆ ನಡೆದು, ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯಕ್ತ ರಾಜೀವ್ ಕುಮಾರ್, ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಈ ವೇಳೆ ಇದೇ ಮೊದಲ ಬಾರಿಗೆ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ (ವೋಟ್ ಫ್ರಮ್ ಹೋಮ್) ಸೌಲಭ್ಯ ಕಲ್ಪಿಸಲಾಗಿದೆ ಎಂದು ರಾಜಿವ್ ಕುಮಾರ್ ಹೇಳಿದರು.
ಏನಿದು ವೋಟ್ ಫ್ರಮ್ ಹೋಮ್ ಸೌಲಭ್ಯ?:
ದೇಶದಲ್ಲಿ ಇದೇ ಮೊದಲ ಬಾರಿಗೆ ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರ ಅನುಕೂಲಕ್ಕಾಗಿ ವೋಟ್ ಫ್ರಮ್ ಹೋಮ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಈ ಸೌಲಭ್ಯವನ್ನು ಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
80 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ಮತದಾನಕ್ಕಾಗಿ ಮತಗಟ್ಟೆಗೆ ಹೋಗದೇ, ತಮ್ಮ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಅದೇ ರೀತಿ ವಿಶೇಷ ಚೇತನ ಮತದಾರರು ಕೂಡ ಈ ಸೌಲಭ್ಯವನ್ನು ಬಳಸಿಕೊಂಡು, ತಮ್ಮ ಮನೆಯಿಂದಲೇ ಮತದಾನ ಮಾಡಬಹುದಾಗಿದೆ.
ನಿಯಮವೇನು?
ಈ ಅವಕಾಶವನ್ನು ಬಳಸಿಕೊಳ್ಳುವ ಅಪೇಕ್ಷೆ ಹೊಂದಿರುವವರು, ಮತದಾನಕ್ಕೂ 5 ದಿನಕ್ಕೂ ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಹೀಗೆ ನೋಂದಾಯಿತರಾದ ಮತದಾರರ ಮನೆಗೆ ತೆರಳುವ ಚುನಾವಣಾ ಸಿಬ್ಬಂದಿ, ಅಲ್ಲಿಂದಲೇ ಅವರ ಮತವನ್ನು ದಾಖಲಿಸುತ್ತಾರೆ. ಹೆಸರು ನೋಂದಾವಣೆ ಮಾಡಿಕೊಳ್ಳದ ಹಿರಿಯ ಮತ್ತು ವಿಶೇಷ ಚೇತನ ಮತದಾರರು, ಮತಗಟ್ಟೆಗೆ ತೆರಳಿ ಮತದಾನ ಮಾಡುವುದು ಕಡ್ಡಾಯವಾಗಿದೆ.
ಹಿರಿಯ ಮತ್ತು ವಿಶೇಷ ಚೇತನ ಮತದಾರರಿಗೆಂದೇ ಈ ಸೌಲಭ್ಯ ಕಲ್ಪಿಸಲಾಗಿದ್ದು, ಈ ಮತದಾರರು ಈ ಸೌಲಭ್ಯ ಬಳಸಿಕೊಂಡು ಮತದಾನ ಮಾಡಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮನವಿ ಮಾಡಿದ್ದಾರೆ. ಅಲ್ಲದೇ ಕರ್ನಾಟಕದಲ್ಲಿ ಈ ಸೌಲಭ್ಯದ ಪರಿಣಾಮಗಳನ್ನು ನೋಡಿಕೊಂಡು, ಭವಿಷ್ಯದಲ್ಲಿ ದೇಶದ ಇತರ ರಾಜ್ಯಗಳಲ್ಲಿ ನಡೆಯುವ ಚುನಾವಣೆಯಲ್ಲೂ, ಈ ಸೌಲಭ್ಯವನ್ನು ಪರಿಚಯಿಸಲು ಚುನಾವಣಾ ಆಯೋಗ ಮುಂದಾಗಿದೆ.
ಮತದಾನಕ್ಕಾಗಿ ರಾಜ್ಯಾದ್ಯಂತ 58,282 ಮತಗಟ್ಟೆಗಳು ಸಿದ್ಧವಾಗಿದ್ದು, ತೃತೀಯ ಲಿಂಗಿಗಳಿಗೆ ಮತ್ತು ವಿಶೇಷ ಚೇತನರಿಗೆ ವಿಶೇಷ ಬೂತ್‌ಗಳನ್ನು ಸಿದ್ಧಪಡಿಸಲಾಗಿದೆ. ಇನ್ನು ಈ ಮತಗಟ್ಟೆಗಳ ಪೈಕಿ, 100 ಮತಗಟ್ಟೆಗಳನ್ನು ವಿಶೇಷ ಚೇತನ ಸಿಬ್ಬಂದಿ ಮತ್ತು 1,320 ಮತಗಟ್ಟೆಗಳನ್ನು ಮಹಿಳಾ ಸಿಬ್ಬಂದಿ ನಿರ್ವಹಣೆ ಮಾಡಲಿದ್ದಾರೆ.
ರಾಜ್ಯದಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದ್ದು, ಸರ್ಕಾರ ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸುವಂತಿಲ್ಲ. ಅದೇ ರೀತಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಬಲ್ಲ ಯಾವುದೇ ಹೊಸ ಘೋಷಣೆಗಳನ್ನು ಮಾಡುವಂತಿಲ್ಲ. ಅಭ್ಯರ್ಥಿಗಳ ಹಣದ ಬಳಕೆಯ ಮೇಲೆ ಚುನಾವಣಾ ಆಯೋಗ ಕೂಡ ಹದ್ದಿನ ಕಣ್ಣಿಡಲಿದೆ.
ಒಟ್ಟಿನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಖ ಘೋಷಣೆಯಾಗಿದ್ದು, ರಾಜ್ಯದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಸಿದ್ಧತೆಗೆ ಮತ್ತಷ್ಟು ವೇಗ ನೀಡಿವೆ. ಇನ್ನೆರೆಡು ತಿಂಗಳ ಅವಧಿಯೊಳಗಾಗಿ ಕರ್ನಾಟಕದ ಜನ ಹೊಸ ಸರ್ಕಾರವನ್ನು ಚುನಾಯಿಸಲಿದ್ದಾರೆ. ರಾಜ್ಯದಲ್ಲು ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ ಎಂಬುದು ಇಲ್ಲಿ ಗಮನಾರ್ಹ.