logo
ಕನ್ನಡ ಸುದ್ದಿ  /  ಕರ್ನಾಟಕ  /  Karwar News:ಗೋಕರ್ಣ ಸಮುದ್ರದಲ್ಲಿ ಮುಳುಗುತ್ತಿದ್ದ ಬೆಂಗಳೂರು ಪ್ರವಾಸಿಗರ ರಕ್ಷಣೆ

Karwar News:ಗೋಕರ್ಣ ಸಮುದ್ರದಲ್ಲಿ ಮುಳುಗುತ್ತಿದ್ದ ಬೆಂಗಳೂರು ಪ್ರವಾಸಿಗರ ರಕ್ಷಣೆ

HT Kannada Desk HT Kannada

Sep 19, 2023 07:17 AM IST

google News

ಗೋಕರ್ಣದಲ್ಲಿ ಸಮುದ್ರದ ಅಲೆಗೆ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಲಾಯಿತು

    • Gokarna News ಗಣೇಶ ಹಬ್ಬದ ರಜೆಯಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ಬಂದಿದ್ದ ಬೆಂಗಳೂರು ಮೂಲದ ಪ್ರವಾಸಿಗರ ತಂಡದ ಐವರು ಸಮುದ್ರದ ಅಲೆಗಳಿಗೆ ಸಿಲುಕಿದ್ದಾರೆ. ಅವರನ್ನು ಸ್ಥಳೀಯರ ಸಹಕಾರದಿಂದ ಕೂಡಲೇ ರಕ್ಷಿಸಲಾಗಿದೆ. 
ಗೋಕರ್ಣದಲ್ಲಿ ಸಮುದ್ರದ ಅಲೆಗೆ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಲಾಯಿತು
ಗೋಕರ್ಣದಲ್ಲಿ ಸಮುದ್ರದ ಅಲೆಗೆ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಲಾಯಿತು

ಕಾರವಾರ: ಗಣೇಶ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಬಂದು ಸಮುದ್ರದ ಅಲೆಗಳ ನಡುವೆ ಸಿಲುಕಿದ್ದ ಬೆಂಗಳೂರು ಮೂಲದ ಪ್ರವಾಸಿಗರನ್ನು ಗೋಕರ್ಣದಲ್ಲಿ ರಕ್ಷಣೆ ಮಾಡಲಾಗಿದೆ.

ಐವರನ್ನು ರಕ್ಷಿಸಲಾಗಿದ್ದು, ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ . ಕರಾವಳಿ ಪಡೆಯ ರಕ್ಷಣಾ ಸಿಬ್ಬಂದಿ, ಸ್ಥಳೀಯ ಪೊಲೀಸರು ಹಾಗೂ ಸ್ಥಳೀಯ ಯುವಕರು ನಾಲ್ವರನ್ನು ರಕ್ಷಿಸಲು ಸಹಕರಿಸಿದರು.

ಉತ್ತರ ಕನ್ನಡ ಜಿಲ್ಲೆಯ ಪುಣ್ಯಕ್ಷೇತ್ರವಾದ ಗೋಕರ್ಣ ಮುಖ್ಯ ಕಡಲ ತೀರದಲ್ಲಿ ಸೋಮವಾರ ಸಂಜೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಗಣೇಶನ ಹಬ್ಬದ ರಜೆಗಳು ಸಾಲು ಇರುವ ಕಾರಣದಿಂದ ಸಾಕಷ್ಟು ಪ್ರವಾಸಿಗರು ಸಮುದ್ರದ ಕಡೆಗೆ ಆಗಮಿಸಿದ್ದರು. ಈ ವೇಳೆ ಬೆಂಗಳೂರು ಮೂಲದ ಋತುರಾಜ್(26), ಶ್ರೀಖಾಂಚು ಗುಪ್ತಾ(28), ಪ್ರಶಾಂತ ಚಂದ್ರಶೇಖರ್(28), ಆರುಷಿ ಬನ್ಸಾಲ್(27), ರೀತು ಪರ್ಹಾದಾಸ್ ಮತ್ತಿತರಿದ್ದ ತಂಡ ಸಮುದ್ರದಲ್ಲಿ ಆಟವಾಡುತ್ತಿತ್ತು.

ಸಮುದ್ರದ ಆಳಕ್ಕೆ ಒಂದಿಬ್ಬರು ಹೋಗಲು ಪ್ರಯತ್ನಿಸಿದ್ದು. ಅಲೆಗಳಿಗೆ ಸಿಲುಕಿದ್ದಾರೆ. ತಂಡದಲ್ಲಿದ್ದವರು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ಸಂದರ್ಭಲ್ಲಿ ಅವರೂ ಅಲೆಗೆ ಸಿಲುಕಿಕೊಂಡಿದ್ದಾರೆ.

ಇದನ್ನು ಗಮನಿಸಿದ ತಂಡದ ಇತರೆ ಸದಸ್ಯರು ಹಾಗೂ ಅಲ್ಲಿದ್ದ ಇತರರು ಸ್ಥಳೀಯರಿಗೆ ಮಾಹಿತಿ ನೀಡಿದರು. ಅಲ್ಲದೇ ಸಮೀಪದಲ್ಲೇ ಇರುವ ಕರಾವಳಿ ಪಡ ಸಿಬ್ಬಂದಿಗೂ ಮಾಹಿತಿ ಮುಟ್ಟಿಸಿದರು.

ಕೂಡಲೇ ಎಚ್ಚೆತ್ತ ಲೈಫ್‌ಗಾರ್ಡ್ ಸಿಬ್ಬಂದಿಗಳ ತಂಡ ಅಲ್ಲಿಗೆ ಧಾವಿಸಿ ಅಲೆಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿತು. ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿದ ಸ್ಥಳೀಯರು ಬಳಿಕ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರು. ಅಸ್ವಸ್ಥಗೊಂಡಿದ್ದ ಪ್ರವಾಸಿಗರಿಗೆ ಗೋಕರ್ಣ ಪಿಹೆಚ್‌ಸಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು ಎಲ್ಲರೂ ಸುರಕ್ಷಿತವಾಗಿದ್ದಾರೆ.

ಬೆಂಗಳೂರಿನ ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುವ ಉತ್ತರ ಭಾರತ ಮೂಲದವರು ತಂಡವಾಗಿ ಕರಾವಳಿ ಭಾಗಕ್ಕೆ ಪ್ರವಾಸ ಬಂದಿದ್ದು, ವಿವಿಧೆಡೆ ಪ್ರವಾಸ ಮುಗಿಸಿ ಮಧ್ಯಾಹ್ನದ ನಂತರ ಗೋಕರ್ಣ ಬೀಚ್‌ಗೆ ಬಂದಿದ್ದರು. ಈ ವೇಳೆ ಘಟನೆ ನಡೆದಿದೆ.

ಅಲೆಯಲ್ಲಿ ಸಿಲುಕಿ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದ ಐವರನ್ನೂ ಕರೆ ತರಲಾಗಿದ್ದು, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಯಾವುದೇ ಆತಂಕವಿಲ್ಲ. ಇನ್ನೂ ಕೆಲ ಸಮಯವಾಗಿದ್ದರೆ ಅನಾಹುತ ಆಗುತ್ತಿತ್ತು ಎಂದು ಪಿಎಚ್‌ಸಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಗೋಕರ್ಣ ಸಮುದ್ರದ ಕೆಲವು ಭಾಗದಲ್ಲಿ ಆಗಾಗ ಇಂತಹ ಸಮಸ್ಯೆ ಆಗುತ್ತಲೇ ಇರುತ್ತದೆ. ಇಲ್ಲಿಗೆ ಬರುವವರಿಗೆ ಮುನ್ನೆಚ್ಚರಿಕೆ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಆದರೂ ಸಮುದ್ರದ ಆಳಕ್ಕೆ ಹೋಗಲು ಪ್ರಯತ್ನಿಸುತ್ತಾರೆ. ಈ ಮೂಲಕ ಅನಾಹುತವನ್ನು ತಾವೇ ತಂದೊಡ್ಡಿಕೊಳ್ಳುತ್ತಾರೆ. ಈ ಕುರಿತು ಜಾಗೃತಿ ಮೂಡಿಸುತ್ತಲೇ ಇರುತ್ತೇವೆ. ಇನ್ನಷ್ಟು ಹೆಚ್ಚಿಸುತ್ತೇವೆ ಎಂದು ರಕ್ಷಣಾ ಸಿಬ್ಬಂದಿ ಹೇಳುತ್ತಾರೆ.

ಗೋಕರ್ಣ ಠಾಣೆಯ ಸಿಬ್ಬಂದಿಯೂ ರಜೆಯ ಸಮಯ ಸೇರಿದಂತೆ ಹೆಚ್ಚು ಪ್ರವಾಸಿಗರು ಇದ್ದಾಗ ಮುನ್ನೆಚ್ಚರಿಕೆ ವಹಿಸುವಂತೆ ಧ್ವನಿ ವರ್ಧಕದ ಮೂಲಕ ಪ್ರಕಟಣೆ ನೀಡುತ್ತಲೇ ಇರುತ್ತಾರೆ. ಕರಾವಳಿ ರಕ್ಷಣಾ ಪಡೆಯೂ ಕ್ರಮ ವಹಿಸುತ್ತಿದೆ. ಹೀಗಿದ್ದಾಗೂ ಇಂತಹ ಘಟನೆಗಳು ನಡೆದಾಗ ಅವರನ್ನು ತತ್‌ಕ್ಷಣವೇ ರಕ್ಷಿಸಲು ತಂಡ ಸದಾ ಸನ್ನದ್ದವಾಗಿರುತ್ತದೆ ಎನ್ನುವುದು ಸ್ಥಳೀಯರ ವಿವರಣೆ.

( ವರದಿ: ಹರೀಶ್‌ ಮಾಂಬಾಡಿ, ಮಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ