logo
ಕನ್ನಡ ಸುದ್ದಿ  /  ಕರ್ನಾಟಕ  /  ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಒಂದು ವರ್ಷ; ಪಕ್ಷದ ಚುಕ್ಕಾಣಿ ಹಿಡಿದ ಮೇಲಾದ ಬದಲಾವಣೆಗಳಿವು

ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಒಂದು ವರ್ಷ; ಪಕ್ಷದ ಚುಕ್ಕಾಣಿ ಹಿಡಿದ ಮೇಲಾದ ಬದಲಾವಣೆಗಳಿವು

HT Kannada Desk HT Kannada

Oct 26, 2023 07:57 PM IST

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

    • Mallikarjun Kharge as Congress President: ನೆಹರು- ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಪಕ್ಷವನ್ನು ಮುನ್ನಡೆಸಲು ಬೇರೆ ಯಾರಿಗೂ ಸಾಧ್ಯವಾಗುವುದಿಲ್ಲ ಎಂಬ ನಂಬಿಕೆಯನ್ನು ಹುಸಿಗೊಳಿಸಿ ಪಕ್ಷವನ್ನು ಬಿಕ್ಕಟ್ಟಿನಿಂದ ಗೆಲುವಿನ ಹಾದಿಯತ್ತ ಕೊಂಡೊಯ್ದಿರುವುದು ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವವನ್ನು ಸಾಬೀತುಪಡಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗಿ ಇಂದಿಗೆ (26-10.2023) ಒಂದು ವರ್ಷ ಪೂರ್ಣಗೊಳಿಸಿದ್ದಾರೆ. ನೆಹರು- ಗಾಂಧಿ ಕುಟುಂಬದವರನ್ನು ಹೊರತುಪಡಿಸಿ ಪಕ್ಷವನ್ನು ಮುನ್ನಡೆಸಲು ಬೇರೆ ಯಾರಿಗೂ ಸಾಧ್ಯವಾಗುವುದಿಲ್ಲ ಎಂಬ ನಂಬಿಕೆಯನ್ನು ಹುಸಿಗೊಳಿಸಿ ಪಕ್ಷವನ್ನು ಬಿಕ್ಕಟ್ಟಿನಿಂದ ಗೆಲುವಿನ ಹಾದಿಯತ್ತ ಕೊಂಡೊಯ್ದಿರುವುದು ಇವರ ನಾಯಕತ್ವವನ್ನು ಸಾಬೀತುಪಡಿಸಿದೆ. ಅವರು ಅಧ್ಯಕ್ಷರಾದ ಬಳಿಕ ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದೆ.

ಟ್ರೆಂಡಿಂಗ್​ ಸುದ್ದಿ

Environment day: ವಿಶ್ವ ಪರಿಸರ ದಿನಕ್ಕೆ ಜಾಗತಿಕ ತಾಪಮಾನದ ಮೇಲೆ ಪ್ರಬಂಧ ಬರೆಯಿರಿ, 5000 ರೂ. ಬಹುಮಾನ ಪಡೆಯಿರಿ

Vijayapura News: ವಿಜಯಪುರ ಬಿಎಲ್‌ಡಿಇಯಲ್ಲಿ ಕೌಶಲ್ಯಗಳ ಸಂಗಮ, ತಾಂತ್ರಿಕ ಹಬ್ಬದ ಸಡಗರ

Museums Day 2024: ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಮೈಸೂರು ಮ್ಯೂಸಿಯಂಗಳಿಗೆ ಹೊಸ ರೂಪ, ಏನಿದರ ವಿಶೇಷ

Bangalore Mysore Expressway: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮೊಬೈಲ್ ನಲ್ಲಿ ಮಾತಾಡಿಕೊಂಡು ಡ್ರೈವ್ ಮಾಡಿದರೆ ದಂಡ ಗ್ಯಾರಂಟಿ

ಬಿಜೆಪಿ ನೇತೃತ್ವದ ಎನ್​​ಡಿಎ ಒಕ್ಕೂಟಕ್ಕೆ ವಿರುದ್ಧವಾಗಿ ಇಂಡಿಯಾ ಒಕ್ಕೂಟ ರಚಿಸಿ ಬಿಜೆಪಿಯ ನಿದ್ದೆಗೆಡಿಸಿದ್ದಾರೆ. ಮುಂಬರುವ ಐದು ರಾಜ್ಯಗಳ ಚುನಾವಣೆಗಳಲ್ಲಿ ಪೈಕಿ ತೆಲಂಗಾಣದಲ್ಲಿ ಅಧಿಕಾರ ಹಿಡಿಯುವ ನಿಚ್ಚಳ ಸಾಧ್ಯತೆಗಳಿವೆ. ಇವರ ಸಾಮರ್ಥ್ಯಕ್ಕೆ ಮತ್ತೇನು ಪುರಾವೆಗಳು ಬೇಕು?

82 ವರ್ಷದ ಮಲ್ಲಿಕಾರ್ಜುನ ಖರ್ಗೆ, 24 ವರ್ಷಗಳ ನಂತರ ಗಾಂಧಿಯೇತರ ಕುಟುಂಬದ ಮೊದಲ ಅಧ್ಯಕ್ಷರು. ಇದುವರೆಗಿನ ಅಧ್ಯಕ್ಷರಿಗಿಂತ ಭಿನ್ನವಾಗಿ ಕಾರ್ಯಕರ್ತರು ಮತ್ತು ನಾಯಕರಿಗೆ ಸುಲಭವಾಗಿ ಲಭ್ಯವಾಗುತ್ತಾರೆ. ಒಂದು ವರ್ಷದ ಹಿಂದೆ ಈ ಹುದ್ದೆಯನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ವಹಿಸಲು ಸೋನಿಯಾ ಗಾಂಧಿ ಚಿಂತನೆ ನಡೆಸಿದ್ದರು. ಆದರೆ ಖರ್ಗೆ ಅವರ ಗಾಂಧಿ ಕುಟುಂಬದ ಮೇಲಿನ ನಿಷ್ಠೆ ಅವರಿಗೆ ಫಲ ನೀಡಿತು. ಹಾಗೆ ನೋಡಿದರೆ ಖರ್ಗೆ ಅವರ ಮೇಲೆ ಮಹತ್ವದ ನಿರೀಕ್ಷೆಗಳೇನೂ ಇರಲಿಲ್ಲ. ಖರ್ಗೆ ಮತ್ತು ಶಶಿ ತರೂರ್ ಅವರ ಮಧ್ಯೆ ಚುನಾವಣೆ ನಡೆದಾಗ ಮಾಧ್ಯಮಗಳೂ ತರೂರ್ ಪರವಾಗಿ ಪ್ರಚಾರ ನಡೆಸಿದವು. ಖರ್ಗೆ ಗಾಂಧಿ ಕುಟುಂಬದ ಕೈಗೊಂಬೆ ಎಂದು ಬಿಂಬಿಸಿದವು. ಆದರೆ ಖರ್ಗೆ ಇಂತಹ ಟೀಕೆಗಳಿಗೆ ಎದೆಗುಂದದೆ ತಮ್ಮ ಕೆಲಸಗಳ ಮೂಲಕವೇ ದಿಟ್ಟ ಉತ್ತರ ನೀಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ತಳಮಟ್ಟದಿಂದ ತಯಾರಿ ನಡೆಸಿದ್ದಾರೆ. ಕಾರ್ಯಕರ್ತರ ವಿಶ್ವಾಸ ಗಳಿಸಿದ್ದಾರೆ. ಅನೇಕ ರಾಜ್ಯಗಳಲ್ಲಿ ಸಮರ್ಥ ತಂಡಗಳನ್ನು ರಚಿಸಿದ್ದಾರೆ. ಖರ್ಗೆ ಆಯೋಜಿಸುವ ಸಭೆಗಳಲ್ಲಿ ರಾಹುಲ್ ಗಾಂಧಿ ಅವರೂ ಸಾಮಾನ್ಯ ಕಾರ್ಯಕರ್ತರಂತೆ ಗಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಇಂತಹ ಸಭೆಗಳಲ್ಲಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಮುಕ್ತವಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಈ ಹಿಂದೆ ಇಂತಹ ಚರ್ಚೆಗಳೇ ನಡೆಯುತ್ತಿರಲಿಲ್ಲ ಎಂದು ಎಐಇಸಿ ಸದಸ್ಯರೊಬ್ಬರು ಹೇಳುತ್ತಾರೆ.

ಈ ಹಿಂದೆಯೂ ಗಾಂಧಿಯೇತರ ಕುಟುಂಬದ ಪಿ.ವಿ.ನರಸಿಂಹ ರಾವ್, ಸೀತಾರಾಂ ಕೇಸರಿ ಅವರು ಕಾಂಗ್ರೆಸ್ ಆಧ್ಯಕ್ಷರಾಗಿದ್ದರೂ ಗಮನ ಸೆಳೆಯುವಲ್ಲಿ ವಿಫಲರಾಗಿದ್ದರು. ಅಧಿಕಾರ ಇದೆ ಎಂದು ಖರ್ಗೆ ಎಲ್ಲಿಯೂ ಗಾಂಧಿ ಕುಟುಂಬ ಮತ್ತು ಅವರ ನಿಷ್ಠರ ವಿರುದ್ಧ ಘರ್ಷಣೆಗೆ ಇಳಿಯಲಿಲ್ಲ. ಪಕ್ಷದ ವಿವಿಧ ಹಂತಗಳ ಘಟಕಗಳಲ್ಲಿ ಆಮೂಲಾಗ್ರ ಬದಲಾವಣೆಗೆ ಮುಂದಾಗಲಿಲ್ಲ. ಅನೇಕ ಹಂತಗಳಲ್ಲಿ ಯಥಾಸ್ಥಿತಿಯನ್ನೇ ಮುಂದುವರಸಿದ್ದಾರೆ. ಕರ್ನಾಟಕದ ಗೆಲುವು ಖರ್ಗೆ ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಿಕ್ಕಿಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಇಬ್ಬರನ್ನೂ ಸಂಬಾಳಿಸಿಕೊಂಡು ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಅದರಲ್ಲೂ ದಲಿತ ವರ್ಗಗಳನ್ನು ಒಂದುಗೂಡಿಸಿದ ಪರಿಯನ್ನು ಅವರ ವಿರೋಧಿಗಳೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ರಾಜಸ್ಥಾನದಲ್ಲಿ ಅಶೋಕ್ ಗೆಹಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಬಿಕ್ಕಟ್ಟಿನಿಂದಾಗಿ ಅಲ್ಲಿ ಪಕ್ಷ ಮತ್ತು ಸರ್ಕಾರ ಎರಡೂ ಉಳಿಯುವ ಹಾಗೆಯೇ ಇರಲಿಲ್ಲ. ಆದರೆ ತಮ್ಮ ಚತುರತೆ ಮತ್ತು ಚಾಣಾಕ್ಷತೆಯಿಂದ ಖರ್ಗೆ, ಹೊಂದಣಿಕೆಯ ಸೂತ್ರವನ್ನು ಹೆಣೆದಿದ್ದರ ಪರಿಣಾಮ ಅಲ್ಲಿ ಸರ್ಕಾರ ಸರಾಗವಾಗಿ ನಡೆದುಕೊಂಡು ಹೋಗುತ್ತಿದೆ. ಛತ್ತೀಸ್​ಗಡದಲ್ಲೂ ಭಿನ್ನಮತವನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದ ಟಿಎಸ್ ಸಿಂಗ್ ದೇವ್ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ತಂದು ತಾಮರವಜ್ರ ಸಾಹು ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ನೇಮಿಸಿದ್ದಾರೆ. ಭೂಪೇಶ್ ಭಗೇಲ್ ಸಿಎಂ ಹುದ್ದೆಯಲ್ಲಿ ಮುಂದುವರದಿದ್ದಾರೆ.

ಆದರೆ ಮಧ್ಯಪ್ರದೇಶದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಲು ಹೋಗಿಲ್ಲ. ಕಮಲ್ ನಾಥ್ ಅವರ ಹಿರಿತನವನ್ನು ಗೌರವಿಸಿ ಪಕ್ಷ ಸಂಘಟನೆಗೆ ಅವರಿಗೆ ಮುಕ್ತ ಅವಕಾಶ ನೀಡಿದ್ದಾರೆ. ಖರ್ಗೆ ಅವರೊಂದಿಗೆ ಕರ್ತವ್ಯ ನಿರ್ವಹಿಸಲು ಹೆಮ್ಮೆಯಾಗುತ್ತದೆ ಎಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಅನೇಕ ಪದಾಧಿಕಾರಿಗಳು ಹೇಳಿಕೊಳ್ಳುತ್ತಾರೆ. ಮುಂದಿನ ಹಾದಿಗಳು ಸುಗಮ ಎಂದು ಹೇಳುವಂತಿಲ್ಲ. ಐದು ರಾಜ್ಯಗಳ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಖರ್ಗೆ ಅವರ ಮುಂದಿರುವ ಬಹು ದೊಡ್ಡ ಸವಾಲು. ಮಲ್ಲಿಕಾರ್ಜುನ ಖರ್ಗೆ ಅದೃಷ್ಟವಂತ ಎಂದು ಹೇಳುವಂತಿಲ್ಲ. ಮೂರು ಬಾರಿ ಮುಖ್ಯಮಂತ್ರಿ ಪಟ್ಟವನ್ನು ತ್ಯಾಗ ಮಾಡಿದ್ದಾರೆ. ಆದರೂ ಸಂಯಮ ಕಳೆದುಕೊಂಡಿಲ್ಲ. ಅವರ ತಾಳ್ಮೆಯೇ ಇಂದು ಅವರನ್ನು ಯಶಸ್ವಿ ನಾಯಕನನ್ನಾಗಿ ರೂಪಿಸಿದೆ. ಭವಿಷ್ಯದಲ್ಲಿ ದೇಶದ ಅತಿ ದೊಡ್ಡ ಹುದ್ದೆಗೆ ಏರಿದರೂ ಅಚ್ಚರಿಪಡಬೇಕಿಲ್ಲ.

ವರದಿ: ಎಚ್​ ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ