Mangalore Jackfruit Mela: ಮಂಗಳೂರಿನಲ್ಲಿ ಎರಡು ದಿನಗಳ ಹಲಸು ಮೇಳ; ಬಗೆ ಬಗೆಯ ಹಲಸಿನ ಖಾದ್ಯಗಳಿಗಾಗಿ ಜನ ಕಾತುರ
Jun 01, 2023 11:19 AM IST
ಮಂಗಳೂರಿನಲ್ಲಿ ಜೂನ 3 ಮತ್ತು 4 ರಂದು ಹಲಸು ಮೇಳ ನಡೆಯಲಿದೆ
ಮಳೆಗಾಲ ಬಂದಾಗ ಹಲಸಿನ ಘಮಘಮ ಇನ್ನಷ್ಟು ಜಾಸ್ತಿಯಾಗುತ್ತದೆ. ಮುಂಗಾರು ಆರಂಭದ ಹೊತ್ತಿನಲ್ಲೇ ಮಂಗಳೂರಲ್ಲಿ ಎರಡು ಹಲಸಿನ ಮೇಳಗಳು ಆಯೋಜನೆಯಾಗಿವೆ. ಇವುಗಳ ವಿವರ ಇಲ್ಲಿದೆ.
ಮಂಗಳೂರು: ಕರಾವಳಿ, ಮಲೆನಾಡುಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಸಂದರ್ಭ ಮನೆಯಲ್ಲಿರುವ ಸಂಪನ್ಮೂಲಗಳೇ ಆಹಾರ. ಸ್ಟಾಕ್ ಮಾಡಿಟ್ಟುಕೊಂಡ ಹಲಸಿನ ಖಾದ್ಯಗಳೆಲ್ಲವೂ ಹೊರಗೆ ಬರುತ್ತದೆ.
ಎಣ್ಣೆಯಲ್ಲಿ ಕರಿದ ಹಲಸಿನ ಹಬ್ಬಳದೊಂದಿಗೆ ಸಣ್ಣದೊಂದು ಕೊಬ್ಬರಿ ತುಂಡು, ಅಚ್ಚು ಬೆಲ್ಲದ ಕಾಫಿಯೊಂದಿಗೆ ಸವಿಯುವುದು ಆಲ್ ಟೈಮ್ ಫೇವರಿಟ್. ಇದು ಹಳ್ಳಿಯ ಸಾಂಪ್ರದಾಯಿಕ ತಿನಿಸಿನ ವಿಚಾರವಾದರೆ, ಅಲ್ಲೇ ಪಕ್ಕದ ಪಟ್ಟಣ ಪ್ರದೇಶಗಳಲ್ಲಿ ವಾಸಿಸುವವರು ದುಡ್ಡು ಕೊಟ್ಟು ಇವನ್ನೆಲ್ಲಾ ಪಡೆಯಬೇಕು ಎಂದರೂ ಸಿಗುವುದಿಲ್ಲ. ಇಂಥ ಸವಿರುಚಿಯನ್ನು ಚಪ್ಪರಿಸುವ ಬಾಯಿರುಚಿಯುಳ್ಳವರಿಗೆಂದೇ ಮಂಗಳೂರು ನಗರದಲ್ಲಿ ಎರಡು ಹಲಸು ಮೇಳಗಳು ಪ್ರತ್ಯೇಕವಾಗಿ ಆಯೋಜನೆಯಾಗಿವೆ. ಇವುಗಳ ವಿವರ ಇಲ್ಲಿದೆ.
ರೈತನಿಂದ ನೇರ ಗ್ರಾಹಕರಿಗೆ
ಜೂನ್ 3 ಮತ್ತು 4ರಂದು ಮಂಗಳೂರಿನ ಬಾಳಂಭಟ್ ಹಾಲ್‌ನಲ್ಲಿ ಎರಡು ದಿನಗಳ ಕಾಲ ನಡೆಯುವ ಹಲಸು ಹಬ್ಬದ ಕಾನ್ಸೆಪ್ಟ್ ರೈತನಿಂದ ನೇರ ಗ್ರಾಹಕರಿಗೆ ವಿತರಿಸುವುದು. ಇದರಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಸಾವಯವ ಕೃಷಿಕ ಗ್ರಾಹಕ ಬಳಗದ ವತಿಯಿಂದ 6ನೇ ವರ್ಷದ ಹಲಸು ಹಬ್ಬ ಜೂನ್ 3 ಮತ್ತು 4ರಂದು ಶರವು ದೇವಳ ಬಳಿಯ ಬಾಳಂಭಟ್ ಹಾಲ್ ನಲ್ಲಿ ನಡೆಯಲಿದೆ.
ಜೂನ್ 3ರಂದು ಬೆಳಗ್ಗೆ 9.30ಕ್ಕೆ ಮೇಯರ್ ಜಯಾನಂದ ಅಂಚನ್ ಅವರು ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಭಟ್ ಆ್ಯಂಡ್ ಭಟ್ ಯೂ ಟ್ಯೂಬ್ ಚಾನಲ್‌ನ ಸುದರ್ಶನ್ ಭಟ್ ಬೆದ್ರಾಡಿ ಹಲಸು ಹಬ್ಬಕ್ಕೆ ಚಾಲನೆ ನೀಡಲಿದ್ದಾರೆ. ಹಲಸಿನ ಹೋಳಿಗೆ ಮಾಡಿ ಹಲಸು ಮೌಲ್ಯ ವರ್ಧನೆ ಮಾಡಿದ ಲಕ್ಷ್ಮೀ ಚಿದಾನಂದರನ್ನು ಸನ್ಮಾನಿಸಲಾಗುತ್ತದೆ.
ಈ ಬಾರಿಯ ಹಲಸಿನ ಹಬ್ಬದಲ್ಲಿ ಹಲಸಿನ ವಿವಿಧ ಮೌಲ್ಯ ವರ್ಧಿತ ತಿಂಡಿಗಳು, ಬಣ್ಣದ ರುದ್ರಾಕ್ಷಿ, ಚಂದ್ರ ಹಲಸು, ಬಕ್ಕೆ ಹಲಸು, ಬಂಗಾರದ ಬಣ್ಣದ ಹಲಸು, ಹಲಸಿನ ಐಸ್ ಕ್ರೀಂ, ಹಲಸಿನ ಹೋಳಿಗೆ, ಹಲಸಿನ ಗಿಡಗಳು ಲಭ್ಯವಿವೆ. ಹಲಸಿನ ವೈವಿಧ್ಯಮಯ ಖಾದ್ಯಗಳನ್ನು ಸ್ಥಳದಲ್ಲೇ ಮಾಡಿಕೊಡುವ ಕೌಂಟರ್‌ಗಳಿವೆ.
ಅಲ್ಲದೇ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಸಾವಯವ ರೈತರು ಬೆಳೆದ ವಿವಿಧ ದಿನಸಿ, ಹಣ್ಣುಗಳ ಮಾರಾಟ, ತರಕಾರಿ ಗಿಡಗಳ ಮಾರಾಟ ವ್ಯವಸ್ಥೆ ಗಳಿವೆ. ನೇರವಾಗಿ ರೈತರೇ ಮಾರಾಟದಲ್ಲಿ ಪಾಲ್ಗೊಳ್ಳುವುದು ವಿಶೇಷ. ಬೆಳಗ್ಗೆ 7 ರಿಂದ ಸಂಜೆ 7 ರ ತನಕ ಸಾರ್ವಜನಿಕರ ಭೇಟಿಗೆ ಮುಕ್ತ ಅವಕಾಶವಿದೆ ಎಂದು ಸಾವಯವ ಕೃಷಿಕ ಗ್ರಾಹಕ ಬಳಗದವರು ತಿಳಿಸಿದ್ದಾರೆ.
ಶ್ರೀಭಾರತೀ ಸಮೂಹ ಸಂಸ್ಥೆ ಆವರಣದಲ್ಲಿ ಹಲಸು ಮೇಳ - ಆಹಾರೋತ್ಸವ
ಮಂಗಳೂರಿನ ನಂತೂರು ಶ್ರೀಭಾರತೀ ಸಮೂಹ ಸಂಸ್ಥೆಗಳ ಆವರಣದಲ್ಲಿ ಹಲಸು ಮೇಳ - ಆಹಾರೋತ್ಸವ ಜೂ.11ರಂದು ಬೆಳಗ್ಗೆ ಗಂಟೆ 8ರಿಂದ ರಾತ್ರಿ ಗಂಟೆ 8ರವರೆಗೆ ನಡೆಯಲಿದೆ. ಕೃಷಿಕರು ಬೆಳೆಸುವ, ಬಳಸುವ ಆಹಾರ ವಸ್ತುಗಳನ್ನು ನಗರದ ಜನತೆಗೆ ತಲುಪಿಸುವ ಮತ್ತು ಸಂಘಟನೆಯನ್ನು ಬಲಿಷ್ಠಗೊಳಿಸುವ ಉದ್ದೇಶದಿಂದ ಹಲಸು ಮೇಳ - ಆಹಾರೋತ್ಸವ ಏರ್ಪಡಿಸಲಾಗಿದೆ. ಮಾತೆಯರು, ಮಹನೀಯರು ತಯಾರಿಸಿದ ಅತ್ಯುತ್ತಮ ಆಹಾರವನ್ನು ಆರೋಗ್ಯಪೂರ್ಣ ಜೀವನಕ್ಕಾಗಿ ಪಡೆದುಕೊಳ್ಳಬಹುದಾಗಿದೆ.
ಮೇಳದಲ್ಲಿ ಹಲಸು, ಮಾವು, ಬಾಳೆಯವಿವಿಧ ರೀತಿಯ ತಿಂಡಿಗಳು ಸಿಗಲಿವೆ. ಹಲಸಿನ ಹಣ್ಣಿನ ಪಾಯಸ, ಬೆರಟಿ ಪಾಯಸ, ಹಲಸಿನ ಬೀಜ ಪಾಯಸ, ಹಲಸಿನ ಕಾಯಿ ದೋಸೆ/ಶುಂಠಿ ಚಟ್ನಿ, ಹಲಸಿನ ಹಣ್ಣಿನ ದೋಸೆ, ಸೊಳೆ ರೊಟ್ಟಿ, ಗುಜ್ಜೆ ಮಂಚೂರಿ, ಹಲಸಿನ ಬೀಜದ ಚಟ್ಟಂಬಡೆ, ಹಲಸಿನ ಕಾಯಿ ಸೋಂಟೆ, ಹಲಸಿನ ಕಾಯಿ ಬೋಂಡ, ಬಾಳೆಕಾಯಿ ಚಿಪ್ಸ್, ಹಲಸಿನ ಕಾಯಿ ಹಪ್ಪಳ, ಹಲಸಿನ ಹಣ್ಣಿನ ಹಪ್ಪಳ, ಬಾಳೆಹಣ್ಣಿನ ಹಲ್ವ, ಹಲಸಿನ ಹಣ್ಣಿನ ಹಲ್ವ ಸವಿಯಬಹುದು.
ಹಲಸಿನ ಬೀಜದ ಅದ್ದಿಹಿಟ್ಟು, ಮಾವಿನ ಹಣ್ಣಿನ ಮಾಂಬಳ, ಹಲಸಿನ ಹಣ್ಣಿನ ಸೊಳೆ, ಹಲಸಿನ ಕಾಯಿ ಸೊಳೆ, ಗುಜ್ಜೆ ಪಲಾವ್, ಹಲಸಿನ ಹಣ್ಣು ಕೊಟ್ಟಿಗೆ, ಹಲಸಿನ ಹಣ್ಣು ಗೆಣಸಲೆ, ಹಲಸಿನ ಹಣ್ಣು ಇಡ್ಲಿ, ಬಾಳೆಕಾಯಿ ದೋಸೆ, ಹಲಸಿನ ಕಾಯಿ ಪೋಡಿ, ಹಲಸಿನಕಾಯಿ ಅಂಬೊಡೆ, ಹಲಸಿನ ಹಣ್ಣಿನ ಬನ್ಸ್, ಹಲಸಿನ ಬೀಜ ಹೋಳಿಗೆ, ಹಲಸಿನ ಹಣ್ಣಿನ ಗುಳಿಅಪ್ಪ, ಚಕ್ಕುಲಿ, ಬಾಳೆದಂಡಿನ ಸೂಪ್ ಹಲಸಿನ ಬೀಜದ ಸೂಪ್, ಹಲಸಿನಕಾಯಿ ಕಟ್ಲೆಟ್, ಅತಿರಸ, ಸಕ್ಕರೆ ಬೆರಟಿ, ಮಾವಿನ ಹಣ್ಣಿನ ರಸಾಯನ, ಕಾಫಿ, ಟೀ, ಕಷಾಯ, ಬಿಸ್ಕೆಟ್ ರೊಟ್ಟಿ, ಮಾವಿನಹಣ್ಣಿನ ಜ್ಯೂಸ್, ಮಸಾಲೆ ಮಜ್ಜಿಗೆ ನೀರು ಪಡೆಯಬಹುದು ಎನ್ನುತ್ತಾರೆ ಸಂಘಟಕರು.
ಪುತ್ತೂರಿನಲ್ಲೂ ಇದೆ ಹಲಸು ಹಬ್ಬ:
ಪುತ್ತೂರಿನ ಜೈನ್ ಭವನದಲ್ಲಿ ಜೇಸಿ ಪುತ್ತೂರು, ನವತೇಜ ಪುತ್ತೂರು ಆಯೋಜನೆಯಲ್ಲಿ ಹಲಸುಹಬ್ಬ ಆಯೋಜನೆಯಾಗಿದೆ. ಜೂನ್ 17 ಮತ್ತು 18ರಂದು ನಡೆಯುವ ಈ ಕಾರ್ಯಕ್ರಮವೂ ಇದೇ ರೀತಿ ಇರುತ್ತದೆ. ಮಾರಾಟ, ಪ್ರದರ್ಶನ, ಕೌಂಟರ್ ಗಳು, ಫುಡ್ ಕೋರ್ಟ್, ರೈತರಿಗೆ ಜಾಗೃತಿಯ ಜೊತೆಗೆ ಮನರಂಜನಾ ಕೂಟವೂ ಇರುತ್ತದೆ. ಒಟ್ಟಾರೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ ತಿಂಗಳ ಆರಂಭದಿಂದಲೇ ನೆಲದ ಹಣ್ಣು ಹಲಸಿನ ಸ್ವಾದ ಸವಿಯಲು ಅವಕಾಶ. ಹಲಸುಪ್ರಿಯರೇ ಗಮನಿಸಿ.(ವರದಿ: ಹರೀಶ ಮಾಂಬಾಡಿ, ಮಂಗಳೂರು)
ವಿಭಾಗ