logo
ಕನ್ನಡ ಸುದ್ದಿ  /  ಕರ್ನಾಟಕ  /  ಬಡಗುತಿಟ್ಟಿನ ಶ್ರೇಷ್ಠ ಹಾಗೂ ಪ್ರಸಿದ್ಧ ಭಾಗವತ, ಯಕ್ಷಗಾನದ ಮಧುರ ಧ್ವನಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

ಬಡಗುತಿಟ್ಟಿನ ಶ್ರೇಷ್ಠ ಹಾಗೂ ಪ್ರಸಿದ್ಧ ಭಾಗವತ, ಯಕ್ಷಗಾನದ ಮಧುರ ಧ್ವನಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Umesh Kumar S HT Kannada

Apr 25, 2024 07:53 AM IST

ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

  • ಯಕ್ಷಗಾನದ ಮಧುರ ಧ್ವನಿಯ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರು ಇಂದು (ಏಪ್ರಿಲ್ 25) ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು. ಯಕ್ಷ ರಂಗದ ತಜ್ಞ ಭಾಗವತರೆಂದೇ ಗುರುತಿಸಲ್ಪಡುತ್ತಿದ್ದ ಭಾಗವತರ ಅಂತ್ಯಕ್ರಿಯೆ ಇಂದು ಸಂಜೆ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ (Photo - Praveen Perdoor)

ಉಡುಪಿ: ಯಕ್ಷಗಾನದ ಬಡಗುತಿಟ್ಟಿನ ಶ್ರೇಷ್ಠ ಹಾಗೂ ಪ್ರಸಿದ್ಧ ಭಾಗವತರೂ ಆದ ಕರಾವಳಿ ಕೋಗಿಲೆ ಎಂದೇ ಹೇಳಲಾಗುವ ಸುಬ್ರಹ್ಮಣ್ಯ ಧಾರೇಶ್ವರ (ಜನನ 1957, ಸೆ.5) ತನ್ನ 67ನೇ ವಯಸ್ಸಿನಲ್ಲಿ ಬೆಂಗಳೂರಿನ ಮನೆಯಲ್ಲಿ ಏ.25ರಂದು ಬೆಳಗ್ಗೆ ನಿಧನ ಹೊಂದಿದರು. ಯಕ್ಷ ರಂಗದ ತಜ್ಞ ಭಾಗವತರೆಂದೇ ಗುರುತಿಸಲ್ಪಡುತ್ತಿದ್ದ ಭಾಗವತರ ಅಂತ್ಯಕ್ರಿಯೆ ಇಂದು ಸಂಜೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ನಡೆಯಲಿದೆ. ಸುಮಾರು 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು, ಪತ್ನಿ, ಪುತ್ರ ಹವ್ಯಾಸಿ ಕಲಾವಿದ ಕಾರ್ತಿಕ್ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hubli News:ಅಂಜಲಿ ಅಂಬಿಗೇರ ಹತ್ಯೆ, ಹುಬ್ಬಳ್ಳಿ ಐಪಿಎಸ್‌ ಅಧಿಕಾರಿ ರಾಜೀವ್‌ ಸಸ್ಪೆಂಡ್‌, ಪೊಲೀಸ್‌ ಆಯುಕ್ತರ ತಲೆದಂಡ ಸಾಧ್ಯತೆ

Environment day: ವಿಶ್ವ ಪರಿಸರ ದಿನಕ್ಕೆ ಜಾಗತಿಕ ತಾಪಮಾನದ ಮೇಲೆ ಪ್ರಬಂಧ ಬರೆಯಿರಿ, 5000 ರೂ. ಬಹುಮಾನ ಪಡೆಯಿರಿ

Vijayapura News: ವಿಜಯಪುರ ಬಿಎಲ್‌ಡಿಇಯಲ್ಲಿ ಕೌಶಲ್ಯಗಳ ಸಂಗಮ, ತಾಂತ್ರಿಕ ಹಬ್ಬದ ಸಡಗರ

Museums Day 2024: ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಮೈಸೂರು ಮ್ಯೂಸಿಯಂಗಳಿಗೆ ಹೊಸ ರೂಪ, ಏನಿದರ ವಿಶೇಷ

ಕೋಟ ‘ಅಮೃತೇಶ್ವರಿ ಮೇಳ’ ಶ್ರೀ ಪೆರ್ಡೂರು ಮೇಳದಲ್ಲಿ ಭಾಗವತರಾಗಿ, ಹೊಸರಾಗಗಳನ್ನು ಹೊಸ ತಾಂತ್ರಿಕತೆಯನ್ನು ಯಕ್ಷರಂಗದಲ್ಲಿ ಯಶಸ್ವಿಯಾಗಿ ಬಳಸಿದವರು.ಸುಮಾರು 400ಕ್ಕಿಂತಲೂ ಅಧಿಕ ಯಕ್ಷಗಾನದ ಆಡಿಯೋ ಕ್ಯಾಸೆಟ್ ಗಳಲ್ಲಿ ಧಾರೇಶ್ವರರ ಧ್ವನಿ ಇದೆ.

ಕರ್ನಾಟಕ ರಾಜ್ಯೋತ್ಸವ ರಾಜ್ಯಮಟ್ಟದ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿ, ಬಿರುದು, ಸನ್ಮಾನಗಳಿಗೆ ಪಾತ್ರರಾಗಿರುವ ಧಾರೇಶ್ವರ ಅವರು ಸುಮಾರು ನಾಲ್ಕು ದಶಕಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಭಾಗವತರಾಗಿ ತೊಡಗಿಸಿಕೊಂಡಿದ್ದಾರೆ. ಗುರುಗಳಾದ ನಾರಾಯಣಪ್ಪ ಉಪ್ಪೂರರನ್ನು ಸದಾ ಸ್ಮರಿಸುತ್ತಿದ್ದ ಅವರು, ಸಾಧನೆಯ ಮೂಲಕ ಎತ್ತರಕ್ಕೇರಿದವರು. ಸಾಂಪ್ರದಾಯಿಕ ರಾಗಗಳೊಂದಿಗೆ ಹೊಸ ರಾಗಗಳನ್ನು ತಂದು ಪೌರಾಣಿಕ ಹಾಗೂ ಸಾಮಾಜಿಕ ಪ್ರಸಂಗಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದ ಸುಬ್ರಹ್ಮಣ್ಯ ಧಾರೇಶ್ವರರು, ಕಾಳಿಂಗ ನಾವಡರರ ನಂತರ ಯಕ್ಷಗಾನ ರಂಗದಲ್ಲಿ ತನ್ನ ಇಂಪಾದ ಕಂಠದಿಂದ ಜನಪ್ರಿಯರಾದವರು.

ಮೂಲತಃ ಎಲೆಕ್ಟ್ರಿಕಲ್ ಅಂಗಡಿ ಮಾಡಿಕೊಂಡಿದ್ದ ಸುಬ್ರಹ್ಮಣ್ಯ ಧಾರೇಶ್ವರ ಕೋಟದಲ್ಲಿ ಯಕ್ಷಗಾನ ಕೇಂದ್ರಕ್ಕೆ ಸೇರಿ ಅಲ್ಲಿ ಭಾಗವತಿಕೆಯ ಮಟ್ಟುಗಳನ್ನು ಕಲಿತರು. ಉಪ್ಪೂರರಿಂದ ಭಾಗವತಿಕೆಯ ಎಲ್ಲ ಪಟ್ಟುಗಳನ್ನು ಕಲಿತರು. ಆರಂಭದಲ್ಲಿ ಎಲೆಕ್ಟ್ರಿಶಿಯನ್ ಆಗಿ ಅಮೃತೇಶ್ವರಿ ಮೇಳಕ್ಕೆ ಸೇರಿದರು. ಈ ಸಂದರ್ಭ ಗುರುಗಳಾದ ಉಪ್ಪೂರರ ಒತ್ತಾಸೆಯಿಂದ ಭಾಗವತಿಕೆ ಮಾಡಲು ಆರಂಭಿಸಿದರು. ಪೀಠಿಕೆ ಸ್ತ್ರೀವೇಷದವರೆಗೆ ಪದ್ಯ ಹೇಳಿ, ಎಲೆಕ್ಟ್ರಿಶಿಯನ್ ಆಗಿ, ಹಗಲು ಮೈಕ್ ಜಾಹೀರಾತು ನೀಡುವ ಕೆಲಸವನ್ನು ಮಾಡುತ್ತಿದ್ದ ಧಾರೇಶ್ವರರು, ಬಳಿಕ ಭಾಗವತಿಕೆಯಲ್ಲೇ ತೊಡಗಿಸಿಕೊಂಡು ಜನಪ್ರಿಯರಾದರು. ಪೆರ್ಡೂರು ಮೇಳದಲ್ಲಿ ಸುಮಾರು 26ಕ್ಕೂ ಅಧಿಕ ವರ್ಷಗಳ ತಿರುಗಾಟ ಸಹಿತ ಧಾರೇಶ್ವರ ಚಾರಿಟೇಬಲ್ ಟ್ರಸ್ಟ್ ಮೂಲಕ ಯಕ್ಷಗಾನ ಸೇವೆ ಮಾಡಿದ್ದಾರೆ.

ಸುಮಾರು 300ಕ್ಕೂ ಅಧಿಕ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪ್ರಸಂಗಗಳನ್ನು ನಿರ್ದೇಶಿಸಿದ ಕೀರ್ತಿ ಧಾರೇಶ್ವರ ಅವರಿಗಿದೆ. ಪುರಂದರದಾಸ, ಕನಕದಾಸ, ಬಸವಣ್ಣ, ಚೆನ್ನಮಲ್ಲಿಕಾರ್ಜುನರ ಕೀರ್ತನೆಗಳನ್ನೂ ಅವರು ಹಾಡಿದ್ದಾರೆ. ಕುವೆಂಪು, ಬೇಂದ್ರೆಯವರ ಹಾಡುಗಳೂ ಯಕ್ಷಗಾನದ ಹಾಡುಗಳಾಗಿದ್ದು ಧಾರೇಶ್ವರರ ಕಂಠದಲ್ಲಿ. ಅಮೃತ ವರ್ಷಿಣಿ, ಸಿಂಧೂರ ಭಾಗ್ಯ, ರಕ್ತ ತಿಲಕ, ಶೂದ್ರ ತಪಸ್ವಿನಿ, ಚಾರು ಚಂದ್ರಿಕೆ, ಗಗನ ಗಾಮಿನಿ, ವಸಂತ ಸೇನೆ ನಿರ್ದೇಶಿಸಿದ ಎಲ್ಲ ಪ್ರಸಂಗಗಳೂ ಸೂಪರ್ ಹಿಟ್ ಆಗಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ