logo
ಕನ್ನಡ ಸುದ್ದಿ  /  ಕರ್ನಾಟಕ  /  Chikmagalur Tourism Mega Plan: ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮೆಗಾ ಯೋಜನೆ, ಸಿಎಂ ಘೋಷಣೆ

Chikmagalur Tourism Mega Plan: ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮೆಗಾ ಯೋಜನೆ, ಸಿಎಂ ಘೋಷಣೆ

HT Kannada Desk HT Kannada

Jan 19, 2023 09:32 AM IST

google News

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮೆಗಾ ಯೋಜನೆ, ಸಿಎಂ ಘೋಷಣೆ

    • ಚಿಕ್ಕಮಗಳೂರು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿಸಬೇಕಿದೆ. ಜಿಲ್ಲೆಯಲ್ಲಿ ಹೆಲಿಕಾಪ್ಟರ್ ರೈಡ್ ನ್ನು ಒಳಗೊಂಡಂತೆ ಪ್ರವಾಸಿ ಹಬ್ ಮಾಡುತ್ತಿರುವುದು ಒಳ್ಳಯ ಕೆಲಸ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಟ್ರ್ಯಾಕ್ ರೇಸಿಂಗ್, ಗ್ಲೈಡಿಂಗ್, ಗಾಲ್ಫಿಂಗ್ ಸೇರಿದಂತೆ ಅಡ್ವೆಂಚರ್ ಟೂರಿಸಂ (ಸಾಹಸ ಪ್ರವಾಸಿ ತಾಣ) ಅಭಿವೃದ್ಧಿ ಪಡಿಸಲು ಸರ್ಕಾರ ಎಲ್ಲ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮೆಗಾ ಯೋಜನೆ, ಸಿಎಂ ಘೋಷಣೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮೆಗಾ ಯೋಜನೆ, ಸಿಎಂ ಘೋಷಣೆ

ಚಿಕ್ಕಮಗಳೂರು: ಪ್ರವಾಸಿಗರನ್ನು ಕೈಬೀಸಿ ಸೆಳೆಯುವ ನಿಸರ್ಗ ಸೌಂದರ್ಯದ ತಾಣವಾದ ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ಯೋಜನೆಯನ್ನು ರಾಜ್ಯ ಸರಕಾರ ಹೊಂದಿದೆ. ಈ ಮೂಲಕ ಇಲ್ಲಿಗೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಯೋಜನೆ ರೂಪಿಸುತ್ತಿದೆ. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಿಕ್ಕಮಗಳೂರು ಹಬ್ಬದಲ್ಲಿ ಘೋಷಣೆ ಮಾಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಪ್ರವಾಸೋದ್ಯಮ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಅವಶ್ಯಕವಿರುವ ಅನುದಾನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ, ಕೃಷಿ, ಯುವ ಸಬಲೀಕರಣ ಮತ್ತು ಕ್ರೀಡಾ ಹಾಗೂ ಅರಣ್ಯ ಇಲಾಖೆ ಇವರುಗಳ ಸಹಯೋಗದಲ್ಲಿ ಆಯೋಜಿಸಿರುವ “ *ಚಿಕ್ಕಮಗಳೂರು ಹಬ್ಬ”ದಲ್ಲಿ ಈ ಮೆಗಾ ಪ್ಲಾನ್‌ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಚಿಕ್ಕಮಗಳೂರು ಅಂತರರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿಸಬೇಕಿದೆ. ಜಿಲ್ಲೆಯಲ್ಲಿ ಹೆಲಿಕಾಪ್ಟರ್ ರೈಡ್ ನ್ನು ಒಳಗೊಂಡಂತೆ ಪ್ರವಾಸಿ ಹಬ್ ಮಾಡುತ್ತಿರುವುದು ಒಳ್ಳಯ ಕೆಲಸ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಟ್ರ್ಯಾಕ್ ರೇಸಿಂಗ್, ಗ್ಲೈಡಿಂಗ್, ಗಾಲ್ಫಿಂಗ್ ಸೇರಿದಂತೆ ಅಡ್ವೆಂಚರ್ ಟೂರಿಸಂ (ಸಾಹಸ ಪ್ರವಾಸಿ ತಾಣ) ಅಭಿವೃದ್ಧಿ ಪಡಿಸಲು ಸರ್ಕಾರ ಎಲ್ಲ ಸಹಕಾರ ನೀಡಲಿದೆ. ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರ ಹಲವು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಪ್ರಧಾನಿ ಮೋದಿಯವರು ದೇಶದ ಪ್ರತಿ ಮನೆಮನೆಗೂ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಮಹತ್ವಾಕಾಂಕ್ಷೆಯ ಯೋಜನೆ ಜಾರಿಗೆ ತಂದಿದ್ದಾರೆ. ರಾಜ್ಯದಲ್ಲಿ ಕಳೆದ 2 ವರ್ಷದಲ್ಲಿ 50 ಲಕ್ಷ ಮನೆಗಳಿಗೆ ಕುಡಿಯುವ ನೀರನ್ನು ತಲುಪಿಸಲಾಗಿದೆ. ತರೀಕೆರೆ, ಕಡೂರು, ಚಿಕ್ಕಮಗಳೂರಿನಲ್ಲಿ ಸುಮಾರು 1400 ಕೋಟಿ ರೂ.ಗಳಲ್ಲಿ ಮನೆಮನೆಗೆ ಕುಡಿಯುವ ನೀರು ತಲುಪಿಸಲಾಗುತ್ತಿದೆ. ಗೋಂದಿ ಕೆರೆ ತುಂಬಿಸುವ ಯೋಜನೆಗೆ 12 ಕೋಟಿ ರೂ. ಅನುಷ್ಠಾನಗೊಳಿಸಲಾಗುವುದು ಎಂದರು.

ಬೇಲೂರು, ಹಳೇಬೀಡಿಗೆ ಯುನೆಸ್ಕೋ ಮನ್ನಣೆ ಸಿಗುವ ನಿರೀಕ್ಷೆ

ನಿಸರ್ಗದ ಸಂಪತ್ತು ಇರುವ ಜೊತೆ ಜಿಲ್ಲೆ ಐತಿಹಾಸಿಕವಾಗಿಯೂ ಶ್ರೀಮಂತವಾಗಿದೆ. ಹೊಯ್ಸಳ ಸಾಮ್ರಾಜ್ಯ ದ ಕಾಲದಲ್ಲಿ ಸಂಸ್ಕೃತಿ, ಶಿಲ್ಪಕಲೆ ಇರುವ ಬೇಲೂರು , ಹಳೇಬೀಡು ಕ್ಷೇತ್ರಕ್ಕೆ ಕೆಲವೇ ತಿಂಗಳುಗಳಲ್ಲಿ ಯೂನಿಸ್ಕೋದ ಮನ್ನಣೆ ಸಿಗುವ ನಿರೀಕ್ಷೆಯಿದೆ. ತರೀಕೆರೆ ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದೆ. ಶೃಂಗೇರಿಯ ಶಾರದಾಂಬೆ, ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರ ಜಿಲ್ಲೆಯಲ್ಲಿದ್ದು, ವಿದ್ಯೆ ಮತ್ತು ಅನ್ನವನ್ನು ಜಿಲ್ಲೆಗೆ ಕರುಣಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಚಿಕ್ಕಮಗಳೂರಿನಲ್ಲಿ ಶುದ್ಧವಾದ ಹವಾಮಾನವಿರುವುದರಿಂದ ಇಲ್ಲಿಗೆ ಬಂದರೆ ಆರೋಗ್ಯ, ಮನಸ್ಸಿಗೆ ಹೊಸ ಚೈತನ್ಯ ಬರುತ್ತದೆ. ಕೇರಳ ರಾಜ್ಯವನ್ನು ದೇವರ ನಾಡು ಎನ್ನುತ್ತಾರೆ. ಆದರೆ ಕರಾವಳಿ, ಪಶ್ಚಿಮ ಘಟ, ಬಯಲು ಸೀಮೆ, ಕನ್ನಡ ನಾಡು, ನುಡಿ ಸಂಸ್ಕೃತಿಯನ್ನು ನೋಡಿದರೆ , ದೇವರಿಂದ ಬಹುವಾಗಿ ಪ್ರೀತಿಸಲ್ಪಟ್ಟ ರಾಜ್ಯ ವೆಂದು ಹೇಳಬಹುದು. ನಿಸರ್ಗದತ್ತವಾದ ಕೊಡುಗೆಯನ್ನು ದೇವರು ನೀಡಿದ್ದಾರೆ. ಕವಿಗಳು ಹಾಡಿ ಹೊಗಳಿದ್ದಾರೆ. ಹಸುರಿನ ಗಿರಿಗಳ ಸಾಲೇ ಎಂದು ಕುವೆಂಪುರವರು ಬರೆದಿದ್ದಾರೆ. ಇಂತಹ ಹಸಿರನಾಡಿನಲ್ಲಿ ಹುಟ್ಟಿ ಬೆಳೆದು ಬದುಕುತ್ತಿರುವವರು ಪುಣ್ಯವಂತರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಕರ್ನಾಟಕದ ಜೀವನದಿಗಳಾದ ಪಂಚನದಿಗಳು ಹುಟ್ಟಿದೆ. ಪಶ್ಚಿಮ ಘಟ್ಟ ಇಲ್ಲದಿದ್ದರೆ ಇಡೀ ದಕ್ಷಿಣ ಭಾರತ ಬರಡಾಗುತ್ತಿತ್ತು. ಎಲ್ಲ ನದಿಗಳು ಪಶ್ಚಿಮದಲ್ಲಿ ಹುಟ್ಟಿ ಪೂರ್ವಕ್ಕೆ ಹರಿಯುತ್ತವೆ ಎಂದರು.

ಮುಂದಿನ ವರ್ಷ ಹೆಲಿಪೋರ್ಟ್

ಹೆಲಿಪೋರ್ಟ್‌ ನಿರ್ಮಿಸಲು ಬೇಕಾದ ಎಲ್ಲಾ ಬೆಂಬಲವನ್ನು ಒದಗಿಸಲಾಗುವುದು. ಬರುವ ದಿನಗಳಲ್ಲಿ ಬದಲಾವಣೆ ತರಲಾಗುವುದು. ಈಗಾಗಲೇ ಹೆಲಿಪೋರ್ಟ್ ಗಾಗಿ 30 ಕೋಟಿ ರೂ.ಗಳನ್ನು ನೀಡಲಾಗಿದ್ದು, ಅದನ್ನು ಕೂಡಲೇ ಕೈಗೊಳ್ಳಲಾಗುವುದು. ಸುಮಾರು 40 ಎಕರೆ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆ ಪ್ರಾರಂಭ ಮಾಡಿದರೆ, ಅದಕ್ಕೆ ಅನುದಾನ ಒದಗಿಸಲಾಗುವುದು. ಮುಂದಿನ ವರ್ಷ ಹೆಲಿಪೋರ್ಟ್ ಸಿದ್ಧವಾಗಿರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಈ ವರ್ಷ ರೋಪ್ ವೇ ಗೆ ಸಹ ಮಂಜೂರು ಮಾಡಲಾಗಿದೆ. ಅನುದಾನಕ್ಕೆ ಅನುಮತಿ ನೀಡುವ ಭರವಸೆ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.

ಮೊಬೈಲ್ ಕ್ಲಿನಿಕ್

ಸಿಎಂ ಆರೋಗ್ಯ ವಾಹಿನಿ ಎಂದು ಬಜೆಟ್ ನಲ್ಲಿ 11 ಕೋಟಿ ರೂ.ಗಳನ್ನು ಚಿಕ್ಕಮಗಳೂರಿಗೆ ನೀಡಲಾಗಿದೆ. ಪ್ರತಿ ತಾಲ್ಲೂಕಿಗೆ ಮೊಬೈಲ್ ಕ್ಲಿನಿಕ್ ಒದಗಿಸಲಾಗುತ್ತಿದ್ದು, ಮುಂದಿನ ತಿಂಗಳು ಚಾಲನೆ ನೀಡಲಾಗುವುದು ಎಂದರು.ಮೊಬೈಲ್ ಕ್ಲಿನಿಕ್ ಒದಗಿಸಲು ಆಯ್ಕೆಯಾಗಿರುವ 5 ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಕೂಡ ಒಂದು. ಚಿಕ್ಕಮಗಳೂರು ಹಬ್ಬ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯಲಿ. ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಇನ್ನೊಬ್ಬರಿಗೆ ಅನ್ಯಾಯವಾಗದಂತೆ ನ್ಯಾಯದಾನ

ಕಲೆ, ಕಲಾವಿದರು, ಭಾಷೆ, ಎಲ್ಲವೂ ಮನಸ್ಸುಗಳನ್ನು ಕೂಡಿಸುತ್ತದೆ. ನಾಗರಿಕತೆ ಸಂಸ್ಕೃತಿಯ ವ್ಯತ್ಯಾಸ ತಿಳಿದುಕೊಳ್ಳಬೇಕು. ಇದರ ಕಲ್ಪನೆ ಬರಲು ಇಂಥ ಹಬ್ಬಗಳು ಸಹಕಾರಿ. ಕಲಾವಿದರು. ಕಲೆಗೆ ಬೆಲೆ ನೀಡಬೇಕು. ಶಾಂತಿ, ಸಮಾಧಾನದಿಂದ ಕೂತು ಮಾತನಾಡಿದಾಗ ಎಲ್ಲಾ ಸಮಸ್ಯೆಗೂ ಪರಿಹಾರವಿದೆ. ದತ್ತ ಪೀಠದ ವಿಚಾರ ದಲ್ಲಿ ಅನ್ಯಾಯವಾಗಿರುವುದಕ್ಕೆ ನ್ಯಾಯ ಕೊಡೋಣ, ಆದರೆ ಇನ್ನೊಬ್ಬರಿಗೆ ಅನ್ಯಾಯವಾಗದಂತೆ ನ್ಯಾಯದಾನ ಮಾಡಬೇಕು. ಶಾಂತಿ ಸೌಹಾರ್ದತೆ, ಭಾತೃತ್ವದಲ್ಲಿ ಇನ್ನಷ್ಟು ಕೆಲಸ ಮಾಡೋಣ. ಚಿಕ್ಕಮಗಳೂರಿನ ಶ್ರೇಯಸ್ಸು ಆಕಾಶವನ್ನು ಮುಟ್ಟಲಿ ಎಲ್ಲರ ಹಬ್ಬವಾಗಲಿ ಎಂದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ