logo
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿ ಸಹದ್ಯೋಗಿಗಳ ಸಹಕಾರದ ನಿರೀಕ್ಷೆಯಲ್ಲಿ ಆರ್ ಅಶೋಕ್, ಬಿವೈ ವಿಜಯೇಂದ್ರ ಜೋಡಿ; ಆದರೆ ಪ್ರಬಲವಾಗುತ್ತಲೇ ಇದೆ ವಿರೋಧಿ ಬಣ

ಬಿಜೆಪಿ ಸಹದ್ಯೋಗಿಗಳ ಸಹಕಾರದ ನಿರೀಕ್ಷೆಯಲ್ಲಿ ಆರ್ ಅಶೋಕ್, ಬಿವೈ ವಿಜಯೇಂದ್ರ ಜೋಡಿ; ಆದರೆ ಪ್ರಬಲವಾಗುತ್ತಲೇ ಇದೆ ವಿರೋಧಿ ಬಣ

HT Kannada Desk HT Kannada

Nov 25, 2023 08:38 PM IST

ವಿರೋಧ ಪಕ್ಷದ ನಾಯಕರಾಗಿ ಆರ್ ಅಶೋಕ್ ಆಯ್ಕೆಯಾದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಭಿನಂದಿಸಿದರು.

  • ವಿರೋಧ ಪಕ್ಷದ ನಾಯಕರಾಗಿ ಆರ್ ಅಶೋಕ್, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ನೇಮಕ ವಿರುದ್ಧ ಬಿಜೆಪಿಯ ವಿರೋಧ ಬಣ ಬೆಳೆಯುತ್ತಲೇ ಇರುವುದು ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ.

ವಿರೋಧ ಪಕ್ಷದ ನಾಯಕರಾಗಿ ಆರ್ ಅಶೋಕ್ ಆಯ್ಕೆಯಾದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಭಿನಂದಿಸಿದರು.
ವಿರೋಧ ಪಕ್ಷದ ನಾಯಕರಾಗಿ ಆರ್ ಅಶೋಕ್ ಆಯ್ಕೆಯಾದ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಭಿನಂದಿಸಿದರು.

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ತಮ್ಮ ಪುತ್ರ ಶಿಕಾರಿಪುರ ಶಾಸಕ ಬಿವೈ ವಿಜಯೇಂದ್ರ (BY Vijayendra) ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆಯೇ ತಮ್ಮ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹಿರಿಯ ಶಾಸಕ ಆರ್ ಅಶೋಕ್ (R Ashok) ಅವರನ್ನು ವಿಧಾನಸಭೆ ಪ್ರತಿಪಕ್ಷದ ನಾಯಕರನ್ನಾಗಿ ಮಾಡುವಲ್ಲಿಯೂ ಮೇಲುಗೈ ಸಾಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hubli News: ಅಂಜಲಿ ಹತ್ಯೆ, ಹುಬ್ಬಳ್ಳಿಯಲ್ಲಿ ಇಂದು ಪರಮೇಶ್ವರ್‌ ಸಭೆ, ಸಿಬಿಐ ತನಿಖೆಗೆ ಜೋಶಿ ಆಗ್ರಹ

Bangalore News: ತಮಿಳುನಾಡಿನಲ್ಲಿ ಗುಂಡು ತಗುಲಿ ಬೆಂಗಳೂರಿನ ಯೋಧ ಸಾವು

Hassan Scandal: ಗೃಹ ಇಲಾಖೆ ಬೇರೆಯವರಿಂದ ಹೈಜಾಕ್‌‌, ಪ್ರಜ್ವಲ್‌ ರೇವಣ್ಣ ಪ್ರಕರಣ ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ, ಅಶೋಕ ಆರೋಪ

Karnataka Rains: ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹೊಸದುರ್ಗ,ಚನ್ನಗಿರಿಯಲ್ಲಿ ಭಾರೀ ಮಳೆ, ನಿಮ್ಮೂರಲ್ಲಿ ಎಷ್ಟು ಮಳೆಯಾಗಿದೆ ?

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಕಂಡಿದ್ದರಿಂದ ಬಿಜೆಪಿ ವರಿಷ್ಠರು ಮತ್ತೆ ಯಡಿಯೂರಪ್ಪ ಅವರ ಹುಕುಂಗೆ ತಲೆ ಬಾಗಿದೆ. ವಿಜಯೇಂದ್ರ ಅವರಿಗೆ ಪಟ್ಟ ಕಟ್ಟದಿದ್ದರೆ ಬಿಜೆಪಿಯನ್ನು ತ್ಯಜಿಸುವ ಬೆದರಿಕೆಯನ್ನೂ ಬಿಎಸ್‌ವೈ ಒಡ್ಡಿದ್ದರು ಎನ್ನುವುದು ರಹಸ್ಯವಾಗಿ ಉಳಿದಿಲ್ಲ. ಅತ್ತ ಹೈಮಾಂಡ್ ಕೂಡಾ ರಾಜ್ಯ ಮುಖಂಡರ ಅಭಿಪ್ರಾಯಗಳನ್ನು ಆಲಿಸದೆ ಏಕಪಕ್ಷೀಯ ನಿರ್ಧಾರವನ್ನು ಕೈಗೊಂಡು ದೆಹಲಿ ಆಜ್ಞೆಯನ್ನು ಪಾಲಿಸುತ್ತಾರೆ ಎಂದು ಉದಾಸೀನ ಮಾಡಿದ್ದಕ್ಕೆ ಬೆಲೆ ತೆರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬೆಳೆಯುತ್ತಿರುವ ವಿರೋಧಿ ಬಣ:

ಪಕ್ಷದ ಹಿರಿಯ ಮತ್ತು ಕಿರಿಯರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಬೆಳಗಾವಿಯಿಂದ ಬೆಂಗಳೂರಿನವರೆಗೆ ಒಬ್ಬೊಬ್ಬರಾಗಿ ತಮ್ಮ ಅಸಮಾಧಾನವನ್ನು ಹೊರಹಾಕುತ್ತಿದ್ದಾರೆ. ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್, ಯತ್ನಾಳ್, ಅರವಿಂದ ಬೆಲ್ಲದ, ರಮೇಶ್ ಜಿಗಜಿಣಗಿ, ವಿ.ಸೋಮಣ್ಣ, ವಿ ಸುನೀಲ್ ಕುಮಾರ್, ಅರವಿಂದ ಲಿಂಬಾವಳಿ, ಕೆಎಸ್ ಈಶ್ವರಪ್ಪ, ಸಿಟಿ ರವಿ ಹೀಗೆ ಅಸಮಾಧಾನಿತರ ಪಟ್ಟಿ ಬೆಳೆಯುತ್ತಲೇ ಇದೆ. ಶಾಸಕರಾದ ಎಸ್‌ಟಿ ಸೋಮಶೇಖರ್, ಶಿವರಾಂ ಹೆಬ್ಬಾರ್ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ.

ಅಶೋಕ್ ಓಕೆ ವಿಜಯೇಂದ್ರ ಯಾಕೆ ಎನ್ನುತ್ತಿರುವ ವಿರೋಧಿ ಬಣ

ಪಕ್ಷದ ಅಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕನ ಹುದ್ದೆಗೆ ಮೇಲ್ಕಂಡ ಬಹುತೇಕ ನಾಯಕರು ಕಣ್ಣಿಟ್ಟಿದ್ದರು ಮತ್ತು ಬಹಿರಂಗವಾಗಿಯೇ ತಾವು ಕೂಡ ಆಕಾಂಕ್ಷಿಗಳು ಎಂದು ಹೇಳಿಕೊಂಡಿದ್ದರು. ಆದರೆ ಹೈಕಮಾಂಡ್ ಇವರ ಆಸೆ ಆಕಾಂಕ್ಷೆಗಳಿಗೆ ತಣ್ಣೀರೆರಚಿದೆ. ವಿಪಕ್ಷ ನಾಯಕನ ಸ್ಥಾನಕ್ಕೆ ಅಶೋಕ್ ಅವರನ್ನು ಒಪ್ಪಿಕೊಳ್ಳಬಹುದಾದರೂ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸ್ಥಾನದಲ್ಲಿ ವಿಜಯೇಂದ್ರ ಅವರನ್ನು ಊಹಿಸಿಕೊಳ್ಳುವುದೇ ಸಾಧ್ಯವೇ ಇಲ್ಲ. ಏಳು ಭಾರಿ ಶಾಸಕರಾಗಿ ಆಯ್ಕೆಯಾಗಿರುವ ಅಶೋಕ್ ಕೈ ಕೆಳಗೆ ಕೆಲಸ ಮಾಡಬಹುದು. ಆದರೆ ಇದೇ ಮೊದಲ ಬಾರಿಗೆ ವಿಧಾನಸಭೆ ಮೆಟ್ಟಿಲೇರಿರುವ ಮತ್ತು ವಯಸ್ಸಿನಲ್ಲೂ ಕಿರಿಯನಾಗಿರುವ ವಿಜಯೇಂದ್ರ ಅವರ ಕೈ ಕೆಳಗೆ ಕೆಲಸ ಮಾಡುವುದು ಸಾಧ್ಯವೇ ಎಂದು ಮರು ಪ್ರಶ್ನೆ ಹಾಕುತಾರೆ.

ಯಡಿಯೂರಪ್ಪ ಪಕ್ಷವನ್ನು ಕಟ್ಟಿ ಬೆಳಸಿದವರು. ಅವರ ನಾಯಕತ್ವವನ್ನು ಒಪ್ಪಿಕೊಳ್ಳಬಹುದು. ಯಡಿಯೂರಪ್ಪ ಅವರಿಗೆ ಹೆಗಲು ಕೊಟ್ಟು ದುಡಿದಿರುವ ನಾವು ಅವರ ಪುತ್ರನ ಆಜ್ಞೆಗಳನ್ನು ಪಾಲಿಸಲು ಸಾಧ್ಯವೇ ಇಲ್ಲ ಎಂದು ಕೋಪ ವ್ಯಕ್ತಪಡಿಸುತ್ತಾರೆ. ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಹಿರಿಯ ಮುಖಂಡ ವಿ.ಸೋಮಣ್ಣ ಡಿ.6ರ ನಂತರ ನನ್ನ ನಿರ್ಧಾರ ಪ್ರಕಟಿಸುತ್ತೇನೆ. ಪಕ್ಷ ನನಗೆ ಹೇಗೆಲ್ಲಾ ಅನ್ಯಾಯ ಮಾಡಿದೆ ಎಂದು ವಿವರಿಸುತ್ತೇನೆ ಎಂದು ಗುಡುಗಿದ್ದಾರೆ.

ವಿಜಯೇಂದ್ರ ಕಿರಿಯ ಅನ್ನೋದೇ ದೊಡ್ಡ ವಿಷ್ಯ

ಒಮ್ಮೊಮ್ಮೆ ಯಡಿಯೂರಪ್ಪ ವಿರುದ್ಧವೇ ಅವಕಾಶ ಸಿಕ್ಕಾಗಲೆಲ್ಲಾ ಈಶ್ವರಪ್ಪ, ಸಿಟಿ ರವಿ ಯತ್ನಾಳ್ ಇವರೆಲ್ಲರೂ ಕಿಡಿ ಕಾರಿದ್ದವರು. ಈಗ ಅವರ ಪುತ್ರನನ್ನು ತಮ್ಮ ನಾಯಕನನ್ನಾಗಿ ಅವರು ಒಪ್ಪಿಕೊಳ್ಳಲಾರರು. ಬಿಜೆಪಿಯ ಬಹುತೇಕ ನಾಯಕರು ವಯಸ್ಸು ಮತ್ತು ಅನುಭವದಲ್ಲಿ ವಿಜಯೇಂದ್ರ ಅವರಿಗಿಂತ ಹಿರಿಯರು ಎನ್ನುವುದು ಗಮನಾರ್ಹ.

ಅಶೋಕ್ ಅವರೇನೋ ಜೋಡೆತ್ತುಗಳಂತೆ ದುಡಿಯುತ್ತೇವೆ ಎಂದು ಹೇಳಿದ್ದಾರೆ. ಆದರೆ ಅವರಿಗೆ ಪಕ್ಷದೊಳಗೆ ಸಹಕಾರ ಸಿಗುವುದೇ ಎನ್ನುವುದೇ ಪ್ರಶ್ನೆ. ಮುಂಬರುವ ಲೋಕಸಭಾ ಚುನಾವಣೆ ಪ್ರಮುಖ ಟಾಸ್ಕ್. ಈ ಅಗ್ನಿ ಪರೀಕ್ಷೆಯಲ್ಲಿ ಅವರು ವಿಜಯೀಭವವಾಗುವರೇ? ಇವರಿಗಾಗಿ ದುಡಿದು ಯಶಸ್ಸು ಮತ್ತು ಕೀರ್ತಿಯನ್ನು ಈ ಜೋಡಿಗೆ ಧಾರೆಯೆರೆಯುವರೇ ಎಂಬ ಪ್ರಶ್ನೆ ಕಾಡುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ದಡ ಮುಟ್ಟಿಸಬೇಕು ಎಂಬ ಷರತ್ತು ವಿಧಿಸಿಯೇ ಈ ಜೋಡಿಯನ್ನು ಹೈ ಕಮಾಂಡ್ ಆಯ್ಕೆ ಮಾಡಿದೆ. ಇನ್ನು ವಿಜಯೇಂದ್ರ ಅವರಿಗೆ ವೀರಶೈವ ಮಠ ಮಾನ್ಯಗಳ ಬೆಂಬಲವಿದೆ. ಆದರೆ ಅಷ್ಟೇ ಸಾಕಾಗುವುದಿಲ್ಲ. ಈಗಿನ ಬೆಳವಣಿಗೆಗಳನ್ನು ನೋಡಿದರೆ ಸ್ಥಳೀಯ ಶಾಸಕರು ಮತ್ತು ಪದಾಧಿಕಾರಿಗಳು ಅಷ್ಟಾಗಿ ಸಹಕಾರ ನೀಡಲಾರರು.

ಬಿಜೆಪಿಯಿಂದ ಹೊರ ಹೋಗಲು ಮುಂದಾದವರ ಮನವೊಲಿಕೆ

ಅತೃಪ್ತರ ಮನವೊಲಿಕೆಗೆ ವಿಜಯೇಂದ್ರ ಕಸರತ್ತು ನಡೆಸುತ್ತಿದ್ದಾರೆ. ಜಾರಕಿಹೊಳಿ ಸೇರಿದಂತೆ ಅನೇಕ ನಾಯಕರನ್ನು ಭೇಟಿ ಮಾಡಿ ಸಹಕಾರ ಕೋರಿದ್ದಾರೆ. ಬಿಜೆಪಿ ತೊರೆಯಲು ಚಿಂತನೆ ನಡೆಸುತ್ತಿರುವ ಶಂಕರ ಪಾಟೀಲ ಮುನೇನಕೊಪ್ಪ ಮತ್ತು ಎಸ್‌ಐ ಚಿಕ್ಕನಗೌಡರ ಅವರನ್ನೂ ಭೇಟಿ ಮಾಡಿ ಪಕ್ಷದಲ್ಲೇ ಉಳಿಯುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರಾಜಕಾರಣ ನಿಂತ ನೀರಲ್ಲ. ಸದಾ ಹರಿಯುತ್ತಲೇ ಇರುತ್ತದೆ. ಲೋಕಸಭಾ ಚುನಾವಣೆ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಮತ್ತಷ್ಟು ಬೆಳವಣಿಗೆಗಳನ್ನು ನಿರೀಕ್ಷಿಸಬಹುದು. ಒಟ್ಟಿನಲ್ಲಿ ಮುಂದಿನ ಆರು ತಿಂಗಳು ರಾಜ್ಯ ಬಿಜೆಪಿ ರಾಜಕಾರಣ ಮತ್ತೆ ಯಡಿಯೂರಪ್ಪ ಅವರ ಕುಟುಂಬದ ಸುತ್ತಲೂ ಗಿರಕಿ ಹೊಡೆಯಲಿದೆ. ಕಲಾಯ ತಸ್ಮೈ ನಮಃ!

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ