logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Next Cm Live: ಹೈಕಮಾಂಡ್‌ಗೆ ಮುಖ್ಯಮಂತ್ರಿ ಆಯ್ಕೆ ನಿರ್ಧಾರ, ಡಿಕೆಶಿ-ಸಿದ್ದು ನಡುವೆ ಮೂಡದ ಒಮ್ಮತ
Karnataka Next CM Live: ಹೈಕಮಾಂಡ್‌ಗೆ ಮುಖ್ಯಮಂತ್ರಿ ಆಯ್ಕೆ ನಿರ್ಧಾರ, ಡಿಕೆಶಿ-ಸಿದ್ದು ನಡುವೆ ಮೂಡದ ಒಮ್ಮತ

Karnataka Next CM Live: ಹೈಕಮಾಂಡ್‌ಗೆ ಮುಖ್ಯಮಂತ್ರಿ ಆಯ್ಕೆ ನಿರ್ಧಾರ, ಡಿಕೆಶಿ-ಸಿದ್ದು ನಡುವೆ ಮೂಡದ ಒಮ್ಮತ

May 17, 2023 04:55 PM IST

ಕರ್ನಾಟಕ ಚುನಾವಣೆ (Karnataka Election) ಫಲಿತಾಂಶ ಪ್ರಕಟವಾಗಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾಂಗ್ರೆಸ್‌ ಪಕ್ಷವು ಸರಕಾರ ಕಟ್ಟುವ ಕೆಲಸದಲ್ಲಿದೆ. ಇಂದು ಸಂಜೆ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. ಇದು ಮುಂದಿನ ಸಿಎಂ (Karnataka Next Chief Minister)ಆಯ್ಕೆಗೆ ವೇದಿಕೆಯಾಗಲಿದೆ.

May 14, 2023 09:38 PM IST

ಯಾರಿಗೆ ಒಲಿಯಲಿದೆ ಸಿಎಂ ಸೀಟು, ಸಿದ್ದರಾಮಯ್ಯ, ಡಿಕೆಶಿ ಕಣ್ಣು ಸೀಟು ಮೇಲೆ

May 14, 2023 09:19 PM IST

ಹೈಕಮಾಂಡ್‌ಗೆ ಮುಖ್ಯಮಂತ್ರಿ ಆಯ್ಕೆ ನಿರ್ಧಾರ, ಡಿಕೆಶಿ-ಸಿದ್ದು ನಡುವೆ ಮೂಡದ ಒಮ್ಮತ

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡುವ ನಿರ್ಧಾರವನ್ನು ಎಐಸಿಸಿಗೆ ಬಿಡಲಾಗಿದೆ ಎಂದು ಬೆಂಗಳೂರಿನಲ್ಲಿ ಭಾನುವಾರ ಸಂಜೆ ನಡೆದ ಕಾಂಗ್ರೇಸ್ ಶಾಸಕಾಂಗ ಪಕ್ಷದ ಸಭೆ ನಿರ್ಣಯ ಕೈಗೊಂಡಿದೆ. 

May 14, 2023 08:44 PM IST

ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ರಾಹುಲ್‌ ಗಾಂಧಿ ರೋಡ್‌ಶೋ

ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಗೆಲುವಿಗಾಗಿ ಪರಿಶ್ರಮಿಸಿದ ರಾಹುಲ್‌ ಗಾಂಧಿಗೆ ಶಾಸಕಾಂಗ ಸಭೆ ಧನ್ಯವಾದ ಅರ್ಪಿಸಿದೆ. "ಈ ಬಾರಿ ಚುನಾವಣೆಯಲ್ಲಿ ನಿರಂತರವಾಗಿ ಪ್ರಚಾರ ಕಾರ್ಯಕ್ರಮಗಳನ್ನು ನಡೆಸುತ್ತಾ ರಾಜ್ಯದ ಜನರಿಗೆ ಪಕ್ಷದ ಐದು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ತಲುಪಿಸಿ ಚುನಾವಣೆಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಶ್ರೀಯುತ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳು ತಿಳಿಸಲಾಗಿದೆ. 2022ರ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ರಾಹುಲ್ ಗಾಂಧಿಯವರು ನಡೆಸಿದ ಭಾರತ್ ಜೋಡೋ ಯಾತ್ರೆ ಕರ್ನಾಟಕ ರಾಜ್ಯದಲ್ಲಿ 21 ದಿನಗಳ ಕಾಲ 600 ಕಿಲೋಮೀಟರ್ ದೂರದಷ್ಟು ಪಾದಯಾತ್ರೆ ಮಾಡಲಾಗಿತ್ತು. ಈ ಮೂಲಕ ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಅಕ್ರಮಗಳ ಬಗ್ಗೆ ಜನರಿಗೆ ತಲುಪಿಸಿ ಚುನಾವಣಾ ಪ್ರಚಾರವನ್ನು ಆರಂಭಿಸಲಾಗಿತ್ತು.

ಕಾಂಗ್ರೆಸ್ ಶಾಸಕಾಂಗ ಪಕ್ಷವು ಈ ಬಾರಿ ಚುನಾವಣೆಯಲ್ಲಿ ಬಹಳ ಪ್ರಭಾವಶಾಲಿ ಪ್ರಚಾರ ಹಾಗೂ ರೋಡ್ ಶೋ ಗಳನ್ನು ನಡೆಸಿ ಆ ಮೂಲಕ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಪರಿಣಾಮಕಾರಿಯಾಗಿ ಮುಟ್ಟಿಸಿದ ಶ್ರೀಮತಿ ಪ್ರಿಯಾಂಕ ಗಾಂಧಿ ವಾದ್ರ ಅವರಿಗೂ ಧನ್ಯವಾದ ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಲಾಗಿದೆ.

May 14, 2023 08:42 PM IST

ಸೋನಿಯಾ ಗಾಂಧಿ, ಖರ್ಗೆಗೆ ಅಭಿನಂದನೆ ಸಲ್ಲಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷ

ಕಾಂಗ್ರೆಸ್ ಶಾಸಕಾಂಗ ಪಕ್ಷವು ಒಕ್ಕೊರಲಿನಿಂದ ಪಕ್ಷಕ್ಕೆ ಆಧಾರ ಸ್ತಂಭವಾಗಿ ಮಾರ್ಗದರ್ಶನ ನೀಡುತ್ತಿರುವ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳು ತಿಳಿಸಿತು. ಕರ್ನಾಟಕ ರಾಜ್ಯ ಚುನಾವಣೆಯಲ್ಲಿ ಅವರತವಾಗಿ ಪ್ರಚಾರ ಮಾಡುತ್ತಾ, ಸೂಕ್ತ ತಂತ್ರಗಾರಿಕೆ ಹಾಗೂ ಮಾರ್ಗದರ್ಶನಗಳನ್ನು ನೀಡಿಕೊಂಡು ಬಂದಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕರ್ನಾಟಕ ಶಾಸಕಾಂಗ ಪಕ್ಷವು ಧನ್ಯವಾದ ಅರ್ಪಿಸಿದೆ.

May 14, 2023 08:40 PM IST

ಆರುವರೆ ಕೋಟಿ ಕನ್ನಡಿಗರಿಗೆ ಧನ್ಯವಾದ ಅರ್ಪಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷ

ರಾಜ್ಯದ ಆರುವರೆ ಕೋಟಿ ಕನ್ನಡಿಗರು ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಪಕ್ಷಕ್ಕೆ ನೀಡಿರುವ ಪ್ರಚಂಡ ಬಹುಮತಕ್ಕೆ ಪಕ್ಷವು ಮೊದಲ ಶಾಸಕಾಂಗ ಪಕ್ಷ ಸಭೆಯಲ್ಲಿ ಹೃತ್ಪೂರ್ವಕ ಧನ್ಯವಾದಗಳು ತಿಳಿಸುತ್ತದೆ. ಕರ್ನಾಟಕ ರಾಜ್ಯಕ್ಕೆ ಸಿಕ್ಕಿರುವ ಈ ಗೆಲುವು ಸ್ವಾಭಿಮಾನ ಹಾಗೂ ಬ್ರಾಂಡ್ ಕರ್ನಾಟಕದ ಮರುಸ್ಥಾಪನೆಯ ಸೌಹಾರ್ದತೆಗೆ ಸಿಕ್ಕಿರುವ ಜಯವಾಗಿದೆ.  ಭಗವಾನ್ ಬಸವಣ್ಣನವರಿಂದ ಅಕ್ಕಮಹಾದೇವಿಯವರವರೆಗೆ, ಕನಕದಾಸರು, ಮಹರ್ಷಿ ವಾಲ್ಮೀಕಿಗಳು, ಶ್ರೀ ನಾರಾಯಣ ಗುರುಗಳು, ಸಂತ ಸೇವಾಲಾಲರು, ಶಿಶುನಾಳ ಶರೀಫರು, ಕೆಂಪೇಗೌಡರು, ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಕುವೆಂಪುರವರವರೆಗೂ ಇತರೆ ಎಲ್ಲ ಮಹನೀಯರ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯದಲ್ಲಿ ಪ್ರಜಾಪ್ರಭುತ್ವ, ಸಮಾನತೆ, ಸಾಮಾಜಿಕ ನ್ಯಾಯ, ಸಮಾಜ ಸುಧಾರಣೆ, ಪಾರದರ್ಶಕ ಹಾಗೂ ದಕ್ಷ ಆಡಳಿತವನ್ನು ನಡೆಸಿಕೊಂಡು ಬರಲಾಗಿದೆ. 2023ರ ಮೇ 13 ರಂದು ಪ್ರಕಟವಾಗಿರುವ ಐತಿಹಾಸಿಕ ಫಲಿತಾಂಶದಲ್ಲಿ ರಾಜ್ಯದ ಒಳಗೆ ಹಾಗೂ ಹೊರಗೆ ದ್ವೇಷ ಹಾಗೂ ವಿಭಜನೆ ರಾಜಕೀಯದಿಂದಾಗಿ ಅಪಾಯದಲ್ಲಿ ಸಿಲುಕಿರುವ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ರಕ್ಷಣೆಗೆ ಮತ್ತೊಮ್ಮೆ ಕರ್ನಾಟಕ ಮತ್ತೊಮ್ಮೆ ಶಕ್ತಿ ತುಂಬಿದೆ ಎಂದು ಕರ್ನಾಟಕ ಕಾಂಗ್ರೆಸ್‌ನ ಶಾಸಕಾಂಗ ಸಭೆಯು ತಿಳಿಸಿದೆ. 

May 14, 2023 08:38 PM IST

ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆಯ ವಿಡಿಯೋ

May 14, 2023 08:32 PM IST

ಕಾಂಗ್ರೆಸ್ ನಾಯಕರ ಜತೆಗಿನ ಸಭೆ ಅಂತ್ಯ, ಇನ್ನು ಶಾಸಕರ ಜತೆ ಸಭೆ

ಬೆಂಗಳೂರಿನ ಶಾಂಗ್ರಿಲಾ ಹೋಟೆಲ್​ನಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆ ನಡೆಯುತ್ತಿದೆ. ಈಗಾಗಲೇ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಜತೆಗೆ ಪ್ರತ್ಯೇಕ ಸಭೆಯನ್ನು ವೀಕ್ಷಕರು ನಡೆಸಿದ್ದಾರೆ. ಇನ್ನು ಮುಂದೆ ಶಾಸಕರೊಂದಿಗೆ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

May 14, 2023 08:31 PM IST

ಮುಖ್ಯಮಂತ್ರಿ ಹುದ್ದೆಗೆ ಹಲವರ ಬೇಡಿಕೆ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಮಾತ್ರವಲ್ಲದೆ ಡಾ.ಜಿ. ಪರಮೇಶ್ವರ್‌, ಎಂಬಿ ಪಾಟೀಲ್‌, ಶಾಮನೂರು ಶಿವಶಂಕರಪ್ಪ ಸೇರಿದಂತೆ ಹಲವು ಮುಖಂಡರು ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಸಲ್ಲಿಸಿದ್ದಾರೆ. ವೀಕ್ಷಕರು ಇಂದು ಶಾಸಕಾಂಗ ಸಭೆಯಲ್ಲಿ ಅಭಿಪ್ರಾಯಪಡೆದು ಹೈಕಮಾಂಡ್‌ಗೆ ವರದಿ ನೀಡಲಿದ್ದಾರೆ. ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಕುರಿತು ಹೈಕಮಾಂಡ್‌ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

May 14, 2023 08:00 PM IST

ಕಾಂಗ್ರೆಸ್‌ ಶಾಸಕಾಂಗ ಸಭೆ, ಸಿದ್ದರಾಮಯ್ಯ ಪರ ಅಧಿಕ ಶಾಸಕರು, ಡಿಕೆಶಿಗೂ ಸಾಕಷ್ಟು ಶಾಸಕರ ಬೆಂಬಲ

ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತು ಚರ್ಚೆಗಳಾಗುತ್ತಿವೆ. ಡಿಕೆ ಶಿವಕುಮಾರ್‌ ಪರವಾಗಿ 48 ಮಂದಿ ಶಾಸಕರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು 72 ಶಾಸಕರು ಹೇಳುತ್ತಿದ್ದಾರೆ ಎನ್ನಲಾಗಿದೆ. ಹದಿನೈದು ಶಾಸಕರು ಸಿಎಂ ಆಯ್ಕೆಯನ್ನು ಪಕ್ಷಕ್ಕೆ ಬಿಟ್ಟಿದ್ದಾರೆ. ಕೆಲವರು ಮತದಾನದ ಮೂಲಕ ಸಿಎಂ ಆಯ್ಕೆಯಾಗಲಿ ಎನ್ನುತ್ತಿದ್ದಾರೆ.

May 14, 2023 07:38 PM IST

ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಆರಂಭ

ತಡವಾಗಿ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆ ಆರಂಭವಾಗಿದೆ. ಈ ಸಭೆಯಲ್ಲಿ ಸಿದ್ದರಾಮಯ್ಯ ಸಿಎಂ ಎಂದು ಘೋಷಿಸಿದರೆ, ಇನ್ನು ಕೆಲವರು ಡಿಕೆ ಶಿವಕುಮಾರ್‌ ಎಂದು ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ. 

May 14, 2023 07:20 PM IST

ಸಭೆ ನಡೆಯುವ ಹೋಟೆಲ್‌ಗೆ ಆಗಮಿಸಿದ ಎಐಸಿಸಿ ವೀಕ್ಷಕರು

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಎಐಸಿಸಿ ವೀಕ್ಷಕರು ಆಗಮಿಸಿದ್ದಾರೆ. ದೀಪಕ್ ಬಬಾರಿಯಾ, ಸುಶೀಲ್​ ಕುಮಾರ್ ಶಿಂಧೆ, ಜಿತೇಂದ್ರ ಸಿಂಗ್ ಆಗಮಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಲುವಾಗಿ ಈ ವೀಕ್ಷಕರನ್ನು ನೇಮಿಸಲಾಗಿದೆ.

May 14, 2023 07:13 PM IST

ಶಾಸಕಾಂಗ ಸಭೆ ನಡೆಯಲಿರುವ ಶಾಂಗ್ರಿಲಾ ಹೋಟೆಲ್‌ಗೆ ಆಗಮಿಸಿದ ಡಿಕೆ ಶಿವಕುಮಾರ್‌

ಸಂಜೆ ಆರು ಗಂಟೆಗೆ ಆರಂಭವಾಗಬೇಕಿದ್ದ ಕಾಂಗ್ರೆಸ್‌ ಶಾಸಕಾಂಗ ಸಭೆಯು ತುಸು ತಡವಾಗಿ ಆರಂಭವಾಗುವ ಸೂಚನೆಯಿದೆ. ಇದೀಗ ಬೆಂಗಳೂರಿನ ವಸಂತನಗರದಲ್ಲಿರುವ ಶಾಂಗ್ರಿಲಾ ಹೊಟೇಲ್​ಗೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್‌ ಆಗಮಿಸಿದ್ದಾರೆ. 

May 14, 2023 07:10 PM IST

ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್‌ ನಿರ್ಧಾರಕ್ಕೆ ಬಿಡಲು ತೀರ್ಮಾನ

ಕಾಂಗ್ರೆಸ್‌ ಶಾಸಕಾಂಗ ಸಭೆ ಆರಂಭವಾಗುತ್ತಿದೆ. ಇಂದಿನ ಸಭೆಯಲ್ಲಿ ಮುಖ್ಯಮಂತ್ರಿ ಹೆಸರನ್ನು ಅಂತಿಮಗೊಳಿಸಲಾಗುವುದಿಲ್ಲ. ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆಯು ಮುಖ್ಯಮಂತ್ರಿ ಆಯ್ಕೆಯನ್ನು ಹೈ ಕಮಾಂಡ್ ನಿರ್ಧಾರಕ್ಕೆ ಬಿಡುವ ಸಾಧ್ಯತೆಯಿದೆ. ನಾಳೆ ಎಲ್ಲಾ ಮುಖಂಡರು ದೆಹಲಿಗೆ ದೌಡಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

May 14, 2023 06:21 PM IST

ಸಭೆ ಬಳಿಕ  ನಾಳೆ ದೆಹಲಿಗೆ ತೆರಳಲಿರುವ ಕೈ ನಾಯಕರು 

ಕಾಂಗ್ರೆಸ್ ಶಾಸಕಾಂಗ ಸಭೆ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಸಿಎಲ್​ಪಿ ಸಭೆಯು ಮುಖ್ಯಮಂತ್ರಿ ಆಯ್ಕೆಯನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಡಲು ತೀರ್ಮಾನ ಮಾಡುತ್ತದೆ. ಎಲ್ಲ ಮುಖಂಡರು ನಾಳೆ ದೆಹಲಿಗೆ ದೌಡಾಯಿಸುತ್ತಾರೆ.

May 14, 2023 06:09 PM IST

ಮುಖ್ಯಮಂತ್ರಿ ಆಯ್ಕೆಗೆ ಮೂವರು ವೀಕ್ಷಕರ ನೇಮಕ

ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂದು ಆಯ್ಕೆ ಮಾಡಲು ಮೂವರು ವೀಕ್ಷಕರನ್ನು ನೇಮಕ ಮಾಡಲಾಗಿದೆ. ಕೇಂದ್ರದ ಮಾಜಿ ಗೃಹ ಸಚಿವ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ಮತ್ತು ಪಕ್ಷದ ನಾಯಕರಾದ ಜಿತೇಂದ್ರ ಸಿಂಗ್ ಮತ್ತು ದೀಪಕ್ ಬಬಾರಿಯಾ ಅವರನ್ನು ವೀಕ್ಷಕರಾಗಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇಮಕ ಮಾಡಿದ್ದಾರೆ.

May 14, 2023 06:06 PM IST

ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ಕಾಂಗ್ರೆಸ್‌ ನೂತನ ಶಾಸಕಾಂಗ ಸಭೆ

ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕುವ ನಿಟ್ಟಿನಲ್ಲಿ ಮಹತ್ವದ ಸಭೆಯಾಗಿರುವ ಕಾಂಗ್ರೆಸ್‌ ಶಾಸಕಾಂಗ ಸಭೆ ಇನ್ನು ಕೆಲವೇ ನಿಮಿಷದಲ್ಲಿ ಆರಂಭವಾಗಲಿದೆ. ಶಾಂಗ್ರಿಲಾ ಹೋಟೆಲ್‌ಗೆ ಈಗಾಗಲೇ ಬಹುತೇಕ ಶಾಸಕರು ಆಗಮಿಸಿದ್ದಾರೆ. ಇಲ್ಲಿ ಈಗಾಗಲೇ ಶಾಸಕಾಂಗ ಸಭೆಗೆ ಸಕಲ ಸಿದ್ಧತೆ ನಡೆಸಲಾಗಿದೆ.

May 14, 2023 06:04 PM IST

224 ವಿಧಾನಸಭಾ ಸದಸ್ಯರುಗಳ ಅಧಿಸೂಚಿತ ಪಟ್ಟಿ ಸಲ್ಲಿಕೆ

ಕರ್ನಾಟಕ ಸಾರ್ವತ್ರಿಕ ವಿಧಾನಸಭೆ ಚುನಾವಣೆ - 2023 ರಲ್ಲಿ ಕರ್ನಾಟಕ ವಿಧಾನಸಭೆಗೆ ಆಯ್ಕೆಗೊಂಡ 224 ವಿಧಾನಸಭಾ ಸದಸ್ಯರುಗಳ ಅಧಿಸೂಚಿತ ಪಟ್ಟಿಯನ್ನು ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಭಾರತ ಚುನಾವಣಾ ಆಯೋಗದ ಉಪ ಚುನಾವಣಾ ಆಯುಕ್ತರಾದ ಶ್ರೀ ಅಜಯ್ ಬಾಡೂ, ಆಯೋಗದ ಪ್ರಧಾನ ಕಾರ್ಯದರ್ಶಿ ಯಾದ ನರೇಂದ್ರ ಎನ್ ಬುಟೋಲಿಯ ಹಾಗೂ ಕಾರ್ಯದರ್ಶಿ ಬಿ.ಸಿ.ಪಾತ್ರ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರು ಇಂದು ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಪರ ಮುಖ್ಯ ಚುನಾವಣಾಧಿಕಾರಿಗಳಾದ ರಾಜೇಂದ್ರ ಚೋಳನ್ ಹಾಗೂ ವೆಂಕಟೇಶ್ ಕುಮಾರ್ ಅವರು ಸಹ ಉಪಸ್ಥಿತರಿದ್ದರು.

May 14, 2023 06:04 PM IST

ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ರಾಜೀನಾಮೆ

ಬೆಂಗಳೂರು:  ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಕಾಂಗ್ರೆಸ್ ಗೆ ಬಹುಮತ ಸಿಗುತ್ತಿದ್ದಂತೆ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ರಾಜೀನಾಮೆ ನೀಡಿದ್ದಾರೆ.

ಇಂದು ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ನಾವದಗಿ ರಾಜೀನಾಮೆ ನೀಡಿದರು. 2018ರ ಮೇ 18ರಂದು ನಾವದಗಿ ಅವರು ರಾಜ್ಯದ ಅಡ್ವೋಕೇಟ್ ಜನರಲ್ ಆಗಿ ನೇಮಕಗೊಂಡಿದ್ದರು. 2018ಕ್ಕೂ ಮುನ್ನ ಮಧುಸೂದನ್ ನಾಯಕ್ ಅವರು ಅಡ್ವೋಕೇಟ್ ಜನರಲ್ ಆಗಿದ್ದರು. ಅ ನಂತರ 2019ರಲ್ಲಿ ಜೆಡಿಎಸ್ ಕಾಂಗ್ರೆಸ್ ಸರ್ಕಾರದಲ್ಲಿ ಉದಯ್ ಹೊಳ್ಳ ಅವರು ಅಡ್ವೋಕೇಟ್ ಜನರಲ್ ಆಗಿದ್ದರು. ಈ ಸಮಿಶ್ರ ಸರ್ಕಾರ ಪತನಗೊಂಡ ನಂತರ ಉದಯ್ ಹೊಳ್ಳ ರಾಜೀನಾಮೆ ನೀಡಿದ್ದರು.

May 14, 2023 05:01 PM IST

ಸಿದ್ದರಾಮಯ್ಯ ಅವರಿಗೆ ಒಲಿಯುತ್ತ ಕರ್ನಾಟಕ ಸಿಎಂ ಸ್ಥಾನ

May 14, 2023 05:00 PM IST

ಸಿದ್ದರಾಮಯ್ಯ ಜತೆ ನನಗೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದ ಸಿಎಂ ಸ್ಥಾನದ ಆಕಾಂಕ್ಷಿ

May 14, 2023 04:58 PM IST

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಕುರುಬ ಸಮುದಾಯದ ಆಗ್ರಹ

May 14, 2023 04:56 PM IST

ಸಿಎಂ ಸ್ಥಾನದ ಆಕಾಂಕ್ಷಿಗಳಿಗೆ ಹಂಗಾಮಿ ಸಿಎಂ‌ ಬೊಮ್ಮಾಯಿ‌ ಶುಭಾಶಯ

ಕಾಂಗ್ರೆಸ್ ಇಡೀ ದೇಶದಲ್ಲಿ ಸೋತಿದೆ. ಇದು ಮೋದಿಯವರ ಸೋಲಲ್ಲ. ಮೋದಿಯವರು ಕೇವಲ ಇಲ್ಲಿ ಪ್ರಚಾರಕ್ಕೆ ಬಂದಿದ್ದರು ಎಂದು ಹಂಗಾಮಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು.  ಇಂದು ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಕಾಂಗ್ರೆಸ್ ನಲ್ಲಿ ಸಿಎಂಗಾಗಿ ಸಿದ್ದು ಡಿಕೆಶಿ ನಡುವೆ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇಬ್ಬರಿಗೂ ಶುಭಾಶಯ ಕೋರಿದ ಬೊಮ್ಮಾಯಿಯವರು, ನಗುತ್ತಲೇ ಅವರಿಬ್ಬರೂ ಆಲ್ ದಿ ಬೆಸ್ಟ್ ಎಂದರು.

May 14, 2023 04:52 PM IST

Election Result:  ವಿಜಯಪುರದಲ್ಲಿ ತಲವಾರ್‌ ಝಳಪಿಸಿದ ಬೆಂಬಲಿಗ

ವಿಜಯಪುರ: ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬೆಂಬಲಿಗ ಎನ್ನಲಾದ ವ್ಯಕ್ತಿಯೋರ್ವ ತಲವಾರ ಝಳಪಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಸಿದ್ದೇಶ್ವರ ದೇವಸ್ಥಾನ ಎದುರು ನಡೆಯುತ್ತಿದ್ದ ವಿಜಯೋತ್ಸವದಲ್ಲಿ ಶಾಸಕ ಯತ್ನಾಳ ಬೆಂಬಲಿಗ ತಲವಾರ ಝಳಪಿಸಿದ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್‌ ಆಗಿದೆ.

ವಿಜಯಪುರ ನಗರ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಗೆಲುವು ಸಾಧಿಸುತ್ತಿದ್ದಂತೆಯೆ ವಿಜಯಪುರ‌ ನಗರದಲ್ಲಿ ವಿಜಯೋತ್ಸವ ನಡೆಯಿತು. ಆಗ ಶಾಸಕ ಯತ್ನಾಳ ಅಭಿಮಾನಿಯೋರ್ವ ತಲವಾರ ಪ್ರದರ್ಶನ ಮಾಡಿದ್ದಾನೆ.

ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

May 14, 2023 04:42 PM IST

ಇಂದು ಸಂಜೆ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆ

ಶನಿವಾರ ಸಂಜೆ ಬೆಂಗಳೂರಿನಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಮುಂದಿನ ಮುಖ್ಯಮಂತ್ರಿ ಆಯ್ಕೆಗೆ ಈ ಸಭೆ ವೇದಿಕೆಯಾಗಲಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ. ನೂತನವಾಗಿ ಆಯ್ಕೆಯಾದ 135 ಕಾಂಗ್ರೆಸ್ ಶಾಸಕರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಮುಂದಿನ ನಾಯಕ ಮತ್ತು ಕರ್ನಾಟಕದ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ. ಸಂಜೆ ಆರು ಗಂಟೆಗೆ ಕಾಂಗ್ರೆಸ್‌ ಸಭೆ ಆರಂಭವಾಗಲಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಮಾತ್ರವಲ್ಲದೆ ಎಂ.ಬಿ. ಪಾಟೀಲ್, ಶಾಮನೂರು ಶಿವಶಂಕರಪ್ಪ, ಡಾ.ಜಿ. ಪರಮೇಶ್ವರ, ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್ ಕೂಡ ಸಿಎಂ ಆಕಾಂಕ್ಷಿಗಳಾಗಿದ್ದಾರೆ.

May 14, 2023 04:42 PM IST

ಡಿಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಇಬ್ಬರಿಗೂ ಅವಕಾಶ?

ಮುಖ್ಯಮಂತ್ರಿ ರೇಸ್‌ನಲ್ಲಿರುವ ಪ್ರಮುಖರಾದ ಡಿಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಇಬ್ಬರಿಗೂ ಮುಖ್ಯಮಂತ್ರಿ ಹುದ್ದೆ ನೀಡುವ ಕುರಿತು ಪಕ್ಷ ಆಲೋಚಿಸುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಅಂದರೆ, ಮೊದಲ ಎರಡು ವರ್ಷ ಸಿದ್ದರಾಮಯ್ಯ ಮತ್ತು ಬಳಿಕ ಡಿಕೆ ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡುವ ಆಲೋಚನೆಯೂ ಇದೆ ಎಂದು ವರದಿಗಳು ತಿಳಿಸಿವೆ. ಆದರೆ, ಪಕ್ಷವು ಈ ವಿಷಯವನ್ನು ಅಧಿಕೃತವಾಗಿ ಇಲ್ಲಿಯವರೆಗೆ ಸ್ಪಷ್ಟಪಡಿಸಿಲ್ಲ.

May 14, 2023 04:42 PM IST

ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ ಸ್ವತಂತ್ರ ಅಭ್ಯರ್ಥಿ ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿರುವ ಲತಾ ಮಲ್ಲಿಕಾರ್ಜುನ್ ಅವರು ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೆ ವಾಲಾ ಅವರನ್ನು ಭೇಟಿಗೆ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸಿದ್ದಾರೆ. ಇವರು ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಪುತ್ರಿಯೂ ಹೌದು.

May 14, 2023 04:42 PM IST

ಡಿಕೆ ಶಿವಕುಮಾರ್‌ ಅವರಿಂದ ದೇಗುಲ ದರ್ಶನ

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತುಮಕೂರು ಜಿಲ್ಲೆ ತಿಪಟೂರಿನ ನೊಣವಿನಕೆರೆ ಸೋಮೆಕಟ್ಟೆಯ ಕಾಡುಸಿದ್ದೇಶ್ವರ ಮಠಕ್ಕೆ ಭಾನುವಾರ ಭೇಟಿ ನೀಡಿ ಶ್ರೀ ಗಳ ಆಶೀರ್ವಾದ ಪಡೆದರು.

ತಮ್ಮ ಕುಟುಂಬ ಸದಸ್ಯರ ಜತೆ ಮಠಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ಅವರು ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿ, ದೇವರಿಗೆ ಪೂಜೆ ಸಲ್ಲಿಸಿದರು.

ಇದಾದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭಾನುವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು.

    ಹಂಚಿಕೊಳ್ಳಲು ಲೇಖನಗಳು