logo
ಕನ್ನಡ ಸುದ್ದಿ  /  ಕರ್ನಾಟಕ  /  Dk Shivakumar: "ಕೈ ಮುಗಿದು ಕೇಳುತ್ತಿದ್ದೇವೆ, ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ" - ಹಾಸನ ಜನತೆ ಬಳಿ ಡಿಕೆಶಿ ಮನವಿ

DK Shivakumar: "ಕೈ ಮುಗಿದು ಕೇಳುತ್ತಿದ್ದೇವೆ, ನಿಮ್ಮ ಸೇವೆ ಮಾಡಲು ಅವಕಾಶ ಕೊಡಿ" - ಹಾಸನ ಜನತೆ ಬಳಿ ಡಿಕೆಶಿ ಮನವಿ

HT Kannada Desk HT Kannada

Jan 22, 2023 04:47 PM IST

ಹಾಸನ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್

    • ನಿಮಗೆ ಕೈ ಮುಗಿದು ಕೇಳುತ್ತಿದ್ದೇವೆ. ನಿಮ್ಮ ಸೇವೆ ಮಾಡಲು, ಅಧಿಕಾರಕ್ಕೆ ಬಂದು ನಿಮ್ಮ ಋಣ ತೀರಿಸಲು ಒಂದು ಅವಕಾಶ ಮಾಡಿ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹೇಳಿದರು.
ಹಾಸನ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್
ಹಾಸನ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್

ಹಾಸನ: ನೀವು ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಆಶೀರ್ವಾದ ಮಾಡಿದ್ದೀರಿ. ಕುಮಾರಸ್ವಾಮಿ ಅವರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದ್ದೀರಿ. ಕಾಂಗ್ರೆಸ್ ಬೆಂಬಲದೊಂದಿಗೆ ದೇವೇಗೌಡರು ಪ್ರಧಾನಮಂತ್ರಿ ಆದರು. ನೀವು ಅವರಿಗೆ ಅವಕಾಶ ನೀಡಿದ್ದೀರಿ. ನಿಮಗೆ ಕೈ ಮುಗಿದು ಕೇಳುತ್ತಿದ್ದೇವೆ. ನಿಮ್ಮ ಸೇವೆ ಮಾಡಲು, ಅಧಿಕಾರಕ್ಕೆ ಬಂದು ನಿಮ್ಮ ಋಣ ತೀರಿಸಲು ಒಂದು ಅವಕಾಶ ಮಾಡಿ ಕೊಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಹೇಳಿದರು.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು; ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ

ಕೊಚ್ಚಿಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ, ಬೆಂಗಳೂರು ವಿಮಾನನಿಲ್ದಾಣದಲ್ಲಿ ತುರ್ತುಭೂಸ್ಪರ್ಶ, 150 ಪ್ರಯಾಣಿಕರು ಸೇಫ್

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಹಾಸನದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿಕೆಶಿ, ಹಾಸನದ ಜನ ಕೊಟ್ಟ ಸ್ವಾಗತ, ಪ್ರೀತಿ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಈ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಒಬ್ಬ ಶಾಸಕರು ಇಲ್ಲದಿದ್ದರೂ ಇಷ್ಟು ದೊಡ್ಡ ಜನಸಾಗರ ಸೇರುವ ಮೂಲಕ ಹಾಸನದಲ್ಲಿ ಬದಲಾವಣೆ ತರುತ್ತೇವೆ ಎಂಬ ಸಂದೇಶ ನೀಡಿದ್ದೀರಿ. ಇದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ಆಗಿದೆ ಎಂದರು.

ರಾಜ್ಯದ ಜನರ ನೋವು, ಅಭಿಪ್ರಾಯವನ್ನು ಆಲಿಸಿ ನಿಮ್ಮ ಪರ ಧ್ವನಿಯಾಗಲು ನಾವು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ರಾಜ್ಯದ ರೈತರು, ಕಾರ್ಮಿಕರು, ಮಕ್ಕಳು ಯುವಕರು ತಮ್ಮದೇ ಆದ ನೋವು ಅನುಭವಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 80 ಸೀಟುಗಳು ಬಂದಿದ್ದವು. ಬಹುಮತ ಬರಲಿಲ್ಲ. ಹೀಗಾಗಿ ಈ ರಾಜ್ಯದ ಆಡಳಿತ ಕೆಟ್ಟ ಬಿಜೆಪಿ ಸರ್ಕಾರದ ಕೈಗೆ ಹೋಗಬಾರದು ಎಂದು ನಾವು ಜಾತ್ಯಾತೀತ ತತ್ವದ ಆಧಾರದ ಮೇಲೆ ಎಲ್ಲಾ ವರ್ಗದವರ ರಕ್ಷಣೆ ಮಾಡಲೆಂದು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು 5 ವರ್ಷಗಳ ಕಾಲ ಅಧಿಕಾರ ಮಾಡಿ ಎಂದು ಬೆಂಬಲ ನೀಡಿದೆವು ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಶಾಸಕಾಂಗ ಪಕ್ಷದ ನಾಯಕರಾಗಿ, ನಾನು ಪಕ್ಷದ ನಾಯಕನಾಗಿ ಕುಮಾರಸ್ವಾಮಿ ಅವರ ಜತೆ ಸರ್ಕಾರ ಮಾಡುವುದಾಗಿ ರಾಜ್ಯಪಾಲರಿಗೆ ಪತ್ರ ನೀಡಿದೆವು. ಕುಮಾರಸ್ವಾಮಿ ಅವರ ಮೇಲೆ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇತ್ತು. ಬಿಜೆಪಿ ಆಪರೇಷನ್ ಕಮಲ ಮಾಡಿದ ಪರಿಣಾಮ ಸರ್ಕಾರ ಉಳಿಸಿಕೊಳ್ಳಲು ಆಗಲಿಲ್ಲ. ಕೆಟ್ಟ ಬಿಜೆಪಿ ಕೈಗೆ ಅಧಿಕಾರ ಹೋಗಬಾರದು ಎಂದು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ನಾವು ತಪ್ಪು ಮಾಡಿದ್ದರೆ, ನಿಮ್ಮ ವಿವೇಚನೆಗೆ ತಕ್ಕಂತೆ ಶಿಕ್ಷೆ ನೀಡಿ, ಅನುಭವಿಸುತ್ತೇವೆ. ನಾಯಕನಾದವನಿಗೆ ಯೋಗಕ್ಕಿಂತ ಯೋಗಕ್ಷೇಮ ಮುಖ್ಯ. ಆಪರೇಶನ್ ಕಮಲದಲ್ಲಿ ನಮ್ಮ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಬಲಿಯಾಗಿ ಇಂದು ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ ಎಂದರು.

ರಾಜ್ಯದಲ್ಲಿ ಈಗ ಅತ್ಯಂತ ಭ್ರಷ್ಟ ಸರ್ಕಾರ ಇದೆ. ಇದು ಕಳಂಕಿತ ಸರ್ಕಾರ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ಮಾಡಲಿಲ್ಲ. ಪೊಲೀಸ್, ಇಂಜಿನಿಯರ್, ಸಹಾಯಕ ಪ್ರಾಧ್ಯಾಪಕ ಹುದ್ದೆಯಿಂದ ಹಿಡಿದು ಎಲ್ಲಾ ನೇಮಕಾತಿಯಲ್ಲೂ ಅಕ್ರಮ ಮಾಡಿದರು. ಈ ಸರ್ಕಾರ ಬರಲು ಯಾರು ಕಾರಣ, ಇದನ್ನು ನೀವೇ ಆಲೋಚಿಸಿ. ನಮ್ಮ ಆಡಳಿತ ನಾವು ಸರಿಯಾಗಿ ನಡೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಾವು ಕಳೆದ ಚುನಾವಣೆ ಸೋಲು ಒಪ್ಪಿದ್ದೇವೆ. ಈ ಜಿಲ್ಲೆಯಲ್ಲಿ ಒಂದು ಬಿಜೆಪಿ, ಉಳಿದ ಎಲ್ಲರನ್ನೂ ಜೆಡಿಎಸ್ ಪಕ್ಷದಿಂದ ಆರಿಸಿದ್ದೀರಿ.

ಇತ್ತೀಚೆಗೆ ನಿಮ್ಮ ಜಿಲ್ಲೆಯ ನಾಯಕರಾದ ವೈಎಸ್​​ವಿ ದತ್ತಾ ಅವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇನ್ನು ಇಬ್ಬರು ಶಾಸಕರು ಸಂಪರ್ಕದಲ್ಲಿ ಇದ್ದಾರೆ . ಅವರ ಹೆಸರು ಹೇಳುವುದಿಲ್ಲ. ಪಕ್ಕದ ಜಿಲ್ಲೆಯ ಗುಬ್ಬಿ ಶಾಸಕ ಶ್ರೀನಿವಾಸ್, ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ, ಕೋಲಾರದ ಶ್ರೀನಿವಾಸಗೌಡರು, ದಾವಣಗೆರೆಯ ದೇವೇಂದ್ರಪ್ಪ ಸೇರಿದಂತೆ ಹಲವು ನಾಯಕರು ಪಕ್ಷ ಸೇರಿದ್ದಾರೆ. ಇವರು ಸುಮ್ಮನೆ ಕಾಂಗ್ರೆಸ್ ಸೇರಲು ದಡ್ಡರೇ? ಕಳೆದ ಚುನಾವಣೆಯಲ್ಲಿ ಪರಿಷತ್ ಸದಸ್ಯರಾಗಿದ್ದ, ಕೋಲಾರದ ಮನೋಹರ್ ಕೂಡ ಪಕ್ಷ ಸೇರಿದ್ದಾರೆ.

ಕಾಂಗ್ರೆಸ್ ಪಕ್ಷ ಜನರಿಗೆ ಉತ್ತಮವಾದ, ಭ್ರಷ್ಟ ರಹಿತ, ನುಡಿದಂತೆ ನಡೆವ ಆಡಳಿತ ನೀಡುತ್ತದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ. ರೈತರ ಬದುಕು ಹಸನ ಮಾಡುತ್ತೇವೆ. ಇದು ನಮ್ಮ ಸಂಕಲ್ಪ. ಅದಕ್ಕಾಗಿ ನಮಗೆ ಶಕ್ತಿ ನೀಡಿ ಎಂದು ಕೇಳುತ್ತಿದ್ದೇನೆ. ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡಲು ಬೆಂಬಲ ನೀಡಿದೆವು. ಆದರೆ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ ಯಾಕೆ ಎಂದು ನೀವು ಅವರನ್ನು ಕೇಳಬೇಕು.

ಹಾಸನದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಕಾರ್ಯಕರ್ತರಿಗೆ ಕೈ ಮುಗಿದು ಕೇಳುತ್ತಿದ್ದೇನೆ, ಹೊಸ ಬದಲಾವಣೆ ನೀಡಲು ನೀವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ. ಎಸ್.ಎಂ ಕೃಷ್ಣ ಅವರ ನಾಯಕತ್ವದಲ್ಲಿ ನೀವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೀರಿ. ಅದೇ ರೀತಿ ಈ ಬಾರಿ ನನ್ನ ಹಾಗೂ ಸಿದ್ದರಾಮಯ್ಯ ಅವರ ನಾಯಕತ್ವದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಬೇಕು. ಕರ್ನಾಟಕದಿಂದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದು, ಅವರ ನಾಯಕತ್ವಕ್ಕೆ ಶಕ್ತಿ ನೀಡಬೇಕು.

ರೈತರ ಬದುಕು ಹಸನು ಮಾಡಲು, ಕೃಷ್ಣ, ಮಹದಾಯಿ, ಮೇಕೆದಾಟು ಸೇರಿದಂತೆ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲು ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ರೂ. ಮೀಸಲಿಟ್ಟು, ನಿಮ್ಮ ಬದುಕಿನಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಿದ್ದೇವೆ. ಇದಲ್ಲದೆ ಪ್ರಜಾಧ್ವನಿ ಯಾತ್ರೆ ಆರಂಭದ ಸಮಯದಲ್ಲಿ ರಾಜ್ಯಕ್ಕೆ ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರೆಂಟಿ ಯೋಜನೆ ಗೃಹ ಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ ನೀಡಲು ಘೋಷಣೆ ಮಾಡಿದ್ದೇವೆ. ಅಂದರೆ ತಿಂಗಳಿಗೆ 1500 ರಂತೆ ವರ್ಷಕ್ಕೆ 18 ಸಾವಿರ ಉಳಿತಾಯವಾಗುತ್ತದೆ. ಇನ್ನು ಮಹಿಳೆಯರ ಕಷ್ಟ ಅರಿತು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರದಂತೆ ವರ್ಷಕ್ಕೆ 24 ಸಾವಿರ ರೂ ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಪಕ್ಷದ ಎರಡನೇ ಗ್ಯಾರೆಂಟಿ ಯೋಜನೆ ಆಗಿ ಘೋಷಣೆ ಮಾಡಿದ್ದೇವೆ. ಇಂದಿರಾ ಗಾಂಧಿ ಅವರ ಮೊಮ್ಮಗಳು, ರಾಜೀವ್ ಗಾಂಧಿ ಹಾಗೂ 10 ವರ್ಷ ಪ್ರಧಾನ ಮಂತ್ರಿ ಹುದ್ದೆ ತ್ಯಾಗ ಮಾಡಿದ ಸೋನಿಯಾ ಗಾಂಧಿ ಅವರ ಮಗಳು ಪ್ರಿಯಾಂಕಾ ಗಾಂಧಿ ಅವರು ಈ ಯೋಜನೆ ಘೋಷಣೆ ಮಾಡಿದರು. ನಮ್ಮ ಪಕ್ಷದ ಎಲ್ಲಾ ನಾಯಕರು ಸೇರಿ ಚರ್ಚೆ ಮಾಡಿ ಈ ತೀರ್ಮಾನ ಮಾಡಿದ್ದೇವೆ. ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ.

ಹಿಂದೆ ಸಿದ್ದರಾಮಯ್ಯ ಅವರು ನಿಮಗೆ ಉಚಿತವಾಗಿ ಅಕ್ಕಿ ನೀಡುತ್ತೇವೆ ಎಂದು ಮಾತು ಕೊಟ್ಟಿದ್ದರು. ನಾವು ಅಧಿಕಾರಕ್ಕೆ ಬಂದ ಮೊದಲ ದಿನ ಸಂಪುಟ ಸಭೆ ಮಾಡಿ 5 ಕೆ.ಜಿ ಅಕ್ಕಿ ಬಸವಣ್ಣ ಹುಟ್ಟಿದ ದಿನ ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆವು. ಮುಂದಿನ ಬಾರಿ 10 ಕೆ.ಜಿ ಅಕ್ಕಿ ನೀಡುವ ಭರವಸೆ ನೀಡಿದ್ದೇವೆ. ಇದು ಪಕ್ಷದ ಮೂರನೇ ಗ್ಯಾರೆಂಟಿ ಯೋಜನೆ ಆಗಿದೆ. ಈಗ ಬಿಜೆಪಿ ಅವರು ನಾವು ಈ ಕಾರ್ಯಕ್ರಮ ನೀಡುತ್ತೇವೆ ಎಂದು ಜಾಹೀರಾತು ನೀಡುತ್ತಿದ್ದಾರೆ. ನೀವು ಮನೆ ಮನೆಗೆ ಹೋಗಿ ಇದು ಕಾಂಗ್ರೆಸ್ ಪಕ್ಷದ ಯೋಜನೆ ನಾವು ನುಡಿದಂತೆ ನಡೆಯುತ್ತೇವೆ ಎಂದು ಜನರಿಗೆ ಸಂದೇಶ ಮುಟ್ಟಿಸಬೇಕು. ಈ ಜಿಲ್ಲೆಯಲ್ಲಿ 7 ಕ್ಕೆ 7 ಸೀಟು ಗೆಲ್ಲಿಸಿ ನಮ್ಮನ್ನು ವಿಧಾನಸೌಧದ ಮೂರನೇ ಮಹಡಿಗೆ ಕೂರಿಸುವ ಜವಾಬ್ದಾರಿ ನಿಮ್ಮದು.

ನಾವು ಬಿಜೆಪಿಯ ಪಾಪದ ಪುರಾಣ ಬಿಡುಗಡೆ ಮಾಡಿದ್ದೇವೆ. ಬಿಜೆಪಿಗೆ ಮತ್ತೆ ಅವಕಾಶ ಬೇಡ, ಜನತಾ ದಳಕ್ಕೆ ಬೆಂಬಲ ಸಾಕು. ನಮಗೆ ಒಂದು ಅವಕಾಶ ಮಾಡಿಕೊಡಿ. ನಾವು ಎಲ್ಲರಿಗೂ ಅಧಿಕಾರ ಹಂಚುತ್ತೇವೆ. ಕಾಂಗ್ರೆಸ್ ಪಕ್ಷ ಇರುವುದೇ ಜನರಿಗಾಗಿ. ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ವಿವಿಧ ಘಟಕಗಳ ಬೆಂಬಲದಲ್ಲಿ ಈ ಐತಿಹಾಸಿಕ ಕಾರ್ಯಕ್ರಮ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು. ನನಗೆ ಹೊಳೆನರಸೀಪುರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ. ಕಾಂಗ್ರೆಸ್ 135ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ ಎಂದು ಡಿಕೆಶಿ ಹೇಳಿದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ