logo
ಕನ್ನಡ ಸುದ್ದಿ  /  ಕರ್ನಾಟಕ  /  Political Analysis: ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬಂದ ಆರ್ ಅಶೋಕ್ ಎದುರು ಇರುವ 10 ಸವಾಲುಗಳಿವು, ನಿಭಾಯಿಸುವುದು ಕಷ್ಟ

Political Analysis: ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಬಂದ ಆರ್ ಅಶೋಕ್ ಎದುರು ಇರುವ 10 ಸವಾಲುಗಳಿವು, ನಿಭಾಯಿಸುವುದು ಕಷ್ಟ

HT Kannada Desk HT Kannada

Nov 18, 2023 06:30 AM IST

ಪ್ರತಿಪಕ್ಷ ನಾಯಕ ಆರ್ ಅಶೋಕ

    • ಅಶೋಕ ಅವರಿಗೆ ಪ್ರತಿಪಕ್ಷ ನಾಯಕನ ಸ್ಥಾನ ಎನ್ನುವುದು ಸುಖದ ಸುಪ್ಪತ್ತಿಗೆಯಾಗಿಲ್ಲ. ಅವರ ಎದುರು ಇರುವ 10 ಪ್ರಮುಖ ಸವಾಲುಗಳನ್ನು ಗುರುತಿಸುವ ಪ್ರಯತ್ನ ಇಲ್ಲಿದೆ. (ಬರಹ: ಎಚ್.ಮಾರುತಿ)
ಪ್ರತಿಪಕ್ಷ ನಾಯಕ ಆರ್ ಅಶೋಕ
ಪ್ರತಿಪಕ್ಷ ನಾಯಕ ಆರ್ ಅಶೋಕ

ಅಳೆದೂ ತೂಗಿ ಆರು ತಿಂಗಳ ನಂತರ ವಿಧಾನಸಭೆ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಒಕ್ಕಲಿಗ ಸಮುದಾಯದ ಹಿರಿಯ ಮುಖಂಡ ಆರ್.ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ನಿರ್ಧಾರ ತೆಗೆದುಕೊಳ್ಳುವುದು ಬಿಜೆಪಿಗೆ ಅಷ್ಟು ಸುಲಭವಾಗಿರಲಿಲ್ಲ. ಅಧ್ಯಕ್ಷ ಸ್ಥಾನವನ್ನು ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಿದ ನಂತರ ವಿಪಕ್ಷ ನಾಯಕ ಹುದ್ದೆಯನ್ನು ಒಕ್ಕಲಿಗರಿಗೆ ನೀಡುವುದು ಬಿಜೆಪಿ ಹೈಕಮಾಂಡ್‌ಗೆ ಅನಿವಾರ್ಯವಾಗಿತ್ತು. ಒಕ್ಕಲಿಗ ಶಾಸಕರಲ್ಲಿ ಈ ಸ್ಥಾನಕ್ಕೆ ಅರ್ಹತೆ ಇದ್ದವರು ಎಂದರೆ ಆರ್.ಅಶೋಕ್ ಮತ್ತು ಡಾ ಸಿ.ಎನ್.ಅಶ್ವತ್ಥನಾರಾಯಣ ಮಾತ್ರ. ವಿಧಾನಸಭೆಗೆ 7 ಬಾರಿ ಆಯ್ಕೆಯಾಗಿ, ಉಪ ಮುಖ್ಯಮಂತ್ರಿಯಾಗಿ ಆರೋಗ್ಯ, ಸಾರಿಗೆ, ಗೃಹ ಕಂದಾಯದಂತಹ ಮಹತ್ವದ ಖಾತೆಗಳನ್ನು ನಿಭಾಯಿಸಿರುವ ಅನುಭವ ಅಶೋಕ್ ಅವರಿಗೆ ಇದೆ. ಅಶ್ವತ್ಥನಾರಾಯಣ ಅವರು ಒಮ್ಮೆ ಮಾತ್ರ ಉಪಮುಖ್ಯಮಂತ್ರಿ ಹುದ್ದೆಯಾಗಿ ಸಚಿವರಾಗಿದ್ದರು. ಆದರೆ ಅಶೋಕ ಅವರಿಗೆ ಪ್ರತಿಪಕ್ಷ ನಾಯಕನ ಸ್ಥಾನ ಎನ್ನುವುದು ಸುಖದ ಸುಪ್ಪತ್ತಿಗೆಯಾಗಿಲ್ಲ. ಅವರ ಎದುರು ಇರುವ 10 ಪ್ರಮುಖ ಸವಾಲುಗಳನ್ನು ಗುರುತಿಸುವ ಪ್ರಯತ್ನ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಸೈಬರ್ ವಂಚಕರಿಗೆ ಸಿಮ್ ಕಾರ್ಡ್‌ ಪೂರೈಸುತ್ತಿದ್ದ ನಾರಾ ಶ್ರೀನಿವಾಸ್ ರಾವ್ ಬಂಧನ: ಗೋವಾ ಮಹಿಳೆಯ ಬ್ಲಾಕ್ ಮೇಲ್, ಬೆಂಗಳೂರಿನ ವ್ಯಕ್ತಿ ಸೆರೆ

ಬೆಂಗಳೂರು: ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿ ಜಾಯ್‌ ರೈಡ್‌, ಯುವಕನ ಬಂಧನ, ಡಿಎಲ್ ಅಮಾನತಿಗೆ ಶಿಫಾರಸು

ಕರ್ನಾಟಕ ಹವಾಮಾನ ಮೇ 20; ದಕ್ಷಿಣ ಕನ್ನಡ, ಉಡುಪಿ ಸೇರಿ 8ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್‌, 4 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಮಳೆ ಮುನ್ಸೂಚನೆ

Hubli News: ಅಂಜಲಿ ಹತ್ಯೆ, ಹುಬ್ಬಳ್ಳಿಯಲ್ಲಿ ಇಂದು ಪರಮೇಶ್ವರ್‌ ಸಭೆ, ಸಿಬಿಐ ತನಿಖೆಗೆ ಜೋಶಿ ಆಗ್ರಹ

1) ಲೋಕಸಭಾ ಚುನಾವಣೆಯ ನೆರಳು: ಪಕ್ಷ ಅಥವಾ ಸರ್ಕಾರದಲ್ಲಿ ಯಾವುದೇ ನೇಮಕಾತಿ ನಡೆದರೂ ಅದರ ಮೇಲೆ ಚುನಾವಣೆಯ ನೆರಳು ಇದ್ದೇ ಇರುತ್ತದೆ. ಮುಂಬರುವ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿಟ್ಟು ಒಕ್ಕಲಿಗ ಸಮುದಾಯವನ್ನು ಓಲೈಸುವುದೇ ಈ ಆಯ್ಕೆಯ ಹಿಂದಿನ ರಹಸ್ಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಅರ್ಹತೆ ನಂತರದ ಆಯ್ಕೆಯಾಗುತ್ತದೆ.

2) ಒಕ್ಕಲಿಗ ಸಮುದಾಯದ ಪ್ರಭಾವ: ಅಶೋಕ್ ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರೂ ಒಕ್ಕಲಿಗ ಸಮುದಾಯದ ಮೇಲೆ ಅವರ ಪ್ರಭಾವ ಎಷ್ಟರಮಟ್ಟಿಗೆ ಇದೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

3) ದೇವೇಗೌಡ, ಡಿಕೆ ಶಿವಕುಮಾರ್ ಹಿಡಿತ: ಕರ್ನಾಟಕದ ಒಕ್ಕಲಿಗ ಸಮುದಾಯದ ಮೇಲೆ ಈವರೆಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬ ಹಿಡಿತ ಹೊಂದಿತ್ತು. ಕಳೆದ ಚುನಾವಣೆಯಲ್ಲಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಡಿ.ಕೆ.ಶಿವಕುಮಾರ್ ಅವರನ್ನು ಈ ಸಮುದಾಯ ಬೆಂಬಲಿಸಿತ್ತು. ಆದರೆ ಲೋಕಸಭಾ ಚುನಾವಣೆಯಲ್ಲಿ ಒಕ್ಕಲಿಗರ ಬೆಂಬಲ ಯಾರಿಗೆ ಸಿಗಬಹುದು ಎಂದು ಅಷ್ಟು ಸುಲಭವಾಗಿ ಹೇಳಲು ಆಗುವುದಿಲ್ಲ.

4) ಬಿಜೆಪಿಯಲ್ಲಿ ಮನೆಯೊಂದು ಹತ್ತಾರು ಬಾಗಿಲು: ಪಕ್ಷದ ಅದ್ವಿತೀಯ ನಾಯಕ ಬಿ.ಎಸ್. ಯಡಿಯೂರಪ್ಪ ನಿರ್ಗಮನದ ನಂತರ ಬಿಜೆಪಿ ಮನೆಯಲ್ಲಿ ಎಲ್ಲವೂ ಸರಿ ಇಲ್ಲ. ಮನೆಯೊಂದು ಬಾಗಿಲುಗಳು ಹತ್ತಾರು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಎಸ್‌ವೈ ಇದ್ದಾಗ ಯಾರೊಬ್ಬರೂ ಅವರ ಮಾತಿಗೆ ಎದುರಾಡುತ್ತಿರಲಿಲ್ಲ. ಸರ್ಕಾರ ಮತ್ತು ಪಕ್ಷ ಎರಡರ ಮೇಲೂ ಹಿಡಿತ ಸಾಧಿಸಿದ್ದರು. ಅಂತಹ ವರ್ಚಸ್ಸು ಅವರಿಗಿತ್ತು. ಆದರೆ ಈಗ ಅವರ ಪುತ್ರ ಪಕ್ಷದ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರಿಗಾಗಲೀ ಅಥವಾ ಪ್ರತಿಪಕ್ಷದ ನಾಯಕ ಅಶೋಕ್ ಅವರಿಗಾಗಲೀ ಈ ವರ್ಚಸ್ಸು ಇಲ್ಲ ಎನ್ನುವುದು ಸುಳ್ಳಲ್ಲ.

5) ಆಕಾಂಕ್ಷಿಗಳಾಗಿದ್ದವರು ಹಲವರು: ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಂತೆ ವಿಪಕ್ಷ ನಾಯಕ ಹುದ್ದೆಯ ಮೇಲೂ ಹಲವು ಮುಖಂಡರು ಆಸೆ ಇಟ್ಟುಕೊಂಡಿದ್ದರು. ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಸುನೀಲ್ ಕುಮಾರ್, ಅಶ್ವತ್ಥನಾರಾಯಣ ಅವರೂ ತೆರೆಮರೆಯ ಹಿಂದೆ ಕಸರತ್ತು ನಡೆಸಿದ್ದರು. ಒಮ್ಮೊಮ್ಮೆ ದೂರವುಳಿದಿದ್ದರೂ ಅಶೋಕ್ ಅವರು ಯಡಿಯೂರಪ್ಪ ಅವರ ಜೊತೆ ಗುರುತಿಸಿಕೊಂಡಿದ್ದರು.

6) ಹೊಂದಾಣಿಕೆ ರಾಜಕಾರಣದ ಆರೋಪ: ಯಾರೊಂದಿಗೂ ಹಗೆತನ ಸಾಧಿಸುವ ವ್ಯಕ್ತಿತ್ವ ಅಶೋಕ್ ಅವರದ್ದಲ್ಲ. ಆಡಳಿತ ಪಕ್ಷದೊಂದಿಗೂ ಉತ್ತಮ ಬಾಂಧವ್ಯ ಇಟ್ಟುಕೊಂಡೇ ಬೆಂಗಳೂರಿನಲ್ಲಿ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಬೆಂಗಳೂರಿನ ಸಾಮ್ರಾಟ್ ಎಂಬ ಪದವಿ ಕಳೆದುಕೊಂಡಿದ್ದು ಸುಳ್ಳಲ್ಲ. ಆಗ ಬೆಂಗಳೂರಿನ ಮೇಲೆ ಹಿಡಿತ ಸಾಧಿಸಿದ್ದು ಡಾ ಸಿ.ಎನ್. ಅಶ್ವತ್ಥನಾರಾಯಣ ಅವರು.

7) ಸಿಗುವುದೇ ಶಾಸಕರ ಸಹಕಾರ: ಆರ್. ಆಶೋಕ್ ಅವರಿಗೆ ಸದನದಲ್ಲಿ ತಮ್ಮದೇ ಶಾಸಕರ ಸಹಕಾರ ಸಿಗುವುದೇ ಎಂಬ ಪ್ರಶ್ನೆಯೂ ಉದ್ಭವವಾಗುತ್ತದೆ. ಇವರ ಆಯ್ಕೆಗೆ ಯತ್ನಾಳ್, ಅರವಿಂದ ಬೆಲ್ಲದ, ರಮೇಶ್ ಜಾರಕಿಹೊಳಿ ಬೇಸರ ವ್ಯಕ್ತಪಡಿಸಿರುವುದು ಗುಟ್ಟಾಗಿ ಉಳಿದಿಲ್ಲ. ಯತ್ನಾಳ್ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉತ್ತರ ಕರ್ನಾಟಕದವರನ್ನೇ ಆಯ್ಕೆ ಮಾಡಬೇಕು ಎಂದು ಆಗ್ರಹಪಡಿಸಿದ್ದರು. ಹಾಗೆ ನೋಡಿದರೆ ಉತ್ತರ ಕರ್ನಾಟಕದ ಯಾರೊಬ್ಬರಿಗೂ ಸೂಕ್ತ ಸ್ಥಾನಮಾನ ನೀಡಿಲ್ಲ ಎಂದೇ ಹೇಳಬೇಕಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪ ಆಗಲೂಬಹುದು.

8) ಸಿದ್ದು ಸರ್ಕಾರ ಎದುರಿಸಬಲ್ಲರೇ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರಕ್ಕೆ ನಿಚ್ಚಳ ಬಹುಮತವಿದೆ. ವಿಪಕ್ಷ ನಾಯಕರಾಗಿ ಅಶೋಕ್ ಸರಕಾರವನ್ನು ಎದುರಿಸುವಷ್ಟು ಸಾಮರ್ಥ್ಯವಿದೆಯೇ ಎಂಬ ಪ್ರಶ್ನೆಗೆ ಉತ್ತರ ಸುಲಭ ಅಲ್ಲ. ವೇದಿಕೆಗಳ ಮೇಲೆ ರಾಜಕೀಯ ಭಾಷಣಗಳನ್ನು ಮಾಡುವುದು ಬೇರೆ. ಸದನದಲ್ಲಿ ಸರಕಾರವನ್ನು ಅಂಕಿಅಂಶಗಳ ಮೂಲಕ ಕಟ್ಟಿ ಹಾಕುವುದು ಬೇರೆ. ಸರಕಾರದಲ್ಲಿ ಸಿಎಂ ಆದಿಯಾಗಿ ಘಟಾನುಘಟಿ ಸಚಿವರಿದ್ದಾರೆ. ಅವರನ್ನು ಬಾಯಿ ಮುಚ್ಚಿಸುವುದು ಸುಲಭದ ಕೆಲಸ ಅಲ್ಲ. ಅದೆಷ್ಟೋ ಬಾರಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

9) ತೆಗೆದುಕೊಳ್ಳಬಲ್ಲರೇ ಗಟ್ಟಿ ನಿರ್ಧಾರ: ಬಿಜೆಪಿಯಲ್ಲಿ ಇಂದಿಗೂ ಯಡಿಯೂರಪ್ಪ ಅವರನ್ನು ಫೈರ್‌ಬ್ರಾಂಡ್ ನಾಯಕ ಎಂದೇ ಗುರುತಿಸಲಾಗುತ್ತದೆ. ಸಹಜವಾಗಿಯೇ ಅಶೋಕ್ ಅವರನ್ನು ಹಲವರು ಯಡಿಯೂರಪ್ಪ ಅವರೊಂದಿಗೆ ಹೋಲಿಸುತ್ತಿದ್ದಾರೆ. ಅಶೋಕ್ ಅವರು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡ ಉದಾಹರಣೆ ಕಡಿಮೆ. ಅವರು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲರೇ ಎಂಬ ಪ್ರಶ್ನೆಗೆ ಕಾಲವೇ ಉತ್ತರಿಸಬೇಕಾಗಿದೆ.

10) ಅಸಹಕಾರದ ತಲೆಬಿಸಿ: ಬಿಜೆಪಿ ಮತ್ತು ಇದೀಗ ಅದರ ಮಿತ್ರಪಕ್ಷವಾಗಿರುವ ಜೆಡಿಎಸ್‌ನ ಎಲ್ಲ ಶಾಸಕರ ಬೆಂಬಲ ದೊರಕಿದರೆ ಮಾತ್ರ ಪ್ರತಿಪಕ್ಷ ನಾಯಕನಾಗಿ ಅಶೋಕ್ ಅವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯ. ಈಗಾಗಲೇ ಅಸಮಾಧಾನ ಹೊಂದಿರುವ ಶಾಸಕರ ಪಡೆ ಹೆಚ್ಚುತ್ತಿದೆ. ಅವರ ಅಸಹಕಾರ ಧೋರಣೆ ಮುಂದುವರೆದರೆ ಅಶೋಕ್ ಅವರಿಗೆ ಕಷ್ಟವಾಗುತ್ತದೆ ಎನ್ನುವುದು ಎಷ್ಟು ನಿಜವೋ, ಕಾಂಗ್ರೆಸ್ ಸರ್ಕಾರಕ್ಕೆ ದಿನದೂಡುವುದು ಸುಲಭವಾಗುತ್ತದೆ ಎನ್ನುವುದೂ ಅಷ್ಟೇ ನಿಜ.

ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಬಂದಿರುವ ಅಶೋಕ್ ಈ ಸವಾಲುಗಳನ್ನು ಹೇಗೆ ನಿರ್ವಹಿಸಬಲ್ಲರು ಎನ್ನುವ ಕುತೂಹಲ ಆಡಳಿತದಲ್ಲಿ ಆಸಕ್ತಿ ಇರುವ ಹಲವರು ಕುತೂಹಲದಿಂದ ಗಮನಿಸುತ್ತಿದ್ದಾರೆ.

ಬರಹ: ಎಚ್.ಮಾರುತಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ