logo
ಕನ್ನಡ ಸುದ್ದಿ  /  ಕರ್ನಾಟಕ  /  R Ashoka Profile: ಒಕ್ಕಲಿಗ ಸಮುದಾಯದ ಆರ್ ಅಶೋಕ ಈಗ ಬಿಜೆಪಿಯ 'ಸಾಮ್ರಾಟ', ಪ್ರತಿಪಕ್ಷ ನಾಯಕನ ಕಿರುಪರಿಚಯ ಹೀಗಿದೆ

R Ashoka Profile: ಒಕ್ಕಲಿಗ ಸಮುದಾಯದ ಆರ್ ಅಶೋಕ ಈಗ ಬಿಜೆಪಿಯ 'ಸಾಮ್ರಾಟ', ಪ್ರತಿಪಕ್ಷ ನಾಯಕನ ಕಿರುಪರಿಚಯ ಹೀಗಿದೆ

Umesh Kumar S HT Kannada

Nov 17, 2023 08:47 PM IST

ಒಕ್ಕಲಿಗ ಸಮುದಾಯದ ಆರ್ ಅಶೋಕ ಅವರು ಈಗ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ. (ಕಡತ ಚಿತ್ರ)

  • ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಹಿರಿಯ ನಾಯಕ ಆರ್ ಅಶೋಕ ಅವರು ಆಯ್ಕೆಯಾಗಿದ್ದಾರೆ. ವಿಧಾನ ಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿಯೂ ಆರ್ ಅಶೋಕ ಅವರು ಕರ್ತವ್ಯ ನಿರ್ವಹಿಸಬೇಕಾಗಿದ್ದು, ಅವರ ಮೇಲೆ ಹೊಣೆಗಾರಿಕೆ ಹೆಚ್ಚಾಗಿದೆ. ಅವರ ಕಿರುಪರಿಚಯ ಹೀಗಿದೆ.

ಒಕ್ಕಲಿಗ ಸಮುದಾಯದ ಆರ್ ಅಶೋಕ ಅವರು ಈಗ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ. (ಕಡತ ಚಿತ್ರ)
ಒಕ್ಕಲಿಗ ಸಮುದಾಯದ ಆರ್ ಅಶೋಕ ಅವರು ಈಗ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ. (ಕಡತ ಚಿತ್ರ)

ವಿಧಾನಸಭೆ ಚುನಾವಣೆ ಮುಗಿದು ಕಾಂಗ್ರೆಸ್ ಪಕ್ಷದ ಆಡಳಿತ ಶುರುವಾಗಿ ಆರು ತಿಂಗಳಾಗುತ್ತ ಬಂತು. ಈಗ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಆಗಿದ್ದು, ಅಳೆದೂ ತೂಗಿ ಪಕ್ಷದ ವರಿಷ್ಠರು ಈ ಹೊಣೆಗಾರಿಕೆಯನ್ನು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅವರಿಗೆ ವಹಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hubli News: ಅಂಜಲಿ ಹತ್ಯೆ, ಹುಬ್ಬಳ್ಳಿಯಲ್ಲಿ ಇಂದು ಪರಮೇಶ್ವರ್‌ ಸಭೆ, ಸಿಬಿಐ ತನಿಖೆಗೆ ಜೋಶಿ ಆಗ್ರಹ

Bangalore News: ತಮಿಳುನಾಡಿನಲ್ಲಿ ಗುಂಡು ತಗುಲಿ ಬೆಂಗಳೂರಿನ ಯೋಧ ಸಾವು

Hassan Scandal: ಗೃಹ ಇಲಾಖೆ ಬೇರೆಯವರಿಂದ ಹೈಜಾಕ್‌‌, ಪ್ರಜ್ವಲ್‌ ರೇವಣ್ಣ ಪ್ರಕರಣ ಮುಚ್ಚಿಹಾಕಲು ಎಸ್‌ಐಟಿ ಸಿದ್ಧತೆ, ಅಶೋಕ ಆರೋಪ

Karnataka Rains: ಬೆಂಗಳೂರು, ಚಿಕ್ಕಮಗಳೂರು, ಕೊಡಗು, ಹೊಸದುರ್ಗ,ಚನ್ನಗಿರಿಯಲ್ಲಿ ಭಾರೀ ಮಳೆ, ನಿಮ್ಮೂರಲ್ಲಿ ಎಷ್ಟು ಮಳೆಯಾಗಿದೆ ?

ಒಕ್ಕಲಿಗ ಸಮುದಾಯದ ಆರ್‌. ಅಶೋಕ್ ಅವರು ಬಿಜೆಪಿಯ ಹಿರಿಯ ನಾಯಕರು. ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವರು ಪ್ರಭಾವಿ ಕೂಡ ಹೌದು. ಆರು ತಿಂಗಳ ಕಾಯುವಿಕೆ ಬಳಿಕ ಅನಿರೀಕ್ಷಿತವಾಗಿ ಈ ಹೊಣೆಗಾರಿಕೆಯನ್ನು ಪಕ್ಷ ಅವರಿಗೆ ವಹಿಸಿದೆ.

ವಿಧಾಸಭೆ ಚುನಾವಣೆಯಲ್ಲಿ ಬಹಳ ಕಠಿಣ ಸವಾಲು ಎದುರಿಸಿದ್ದ ಸಾಮ್ರಾಟ್‌

ಕಳೆದ ಎರಡು ದಶಕಗಳಿಂದ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ನೈಜ ಸ್ಪರ್ಧೆ ನಡೆದಿರಲಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ (ಕೆಪಿಸಿಸಿ)ಯ ಅಧ್ಯಕ್ಷ ಡಿಕೆ ಶಿವಕುಮಾರ್‌ ಸ್ಪರ್ಧೆಗೆ ಪ್ರಬಲ ಎದುರಾಳಿ ಇರಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ತಂತ್ರಗಾರಿಕೆಯನ್ನು ಬದಲಾಯಿಸಿ ಆರ್‌ ಅಶೋಕ ಅವರನ್ನೇ ಕಣಕ್ಕೆ ಇಳಿಸಿತ್ತು. ಪದ್ಮನಾಭ ನಗರ ಕ್ಷೇತ್ರದಲ್ಲೂ ಅವರಿಗೆ ಟಿಕೆಟ್‌ ನೀಡಿತ್ತು. ಅವರಿಗೆ ನೀಡಿದ ಎರಡು ಟಾಸ್ಕ್‌ಗಳನ್ನು ಸಮರ್ಥವಾಗಿ ನಿಭಾಯಿಸಿದರು.

ಬಿಜೆಪಿಯ ಮಟ್ಟಿಗೆ ಈಗಲೂ ಆರ್‌ ಅಶೋಕ ಪ್ರಬಲ ಮತ್ತು ಪ್ರಭಾವಿ ಒಕ್ಕಲಿಗ ನಾಯಕ. ಆದರೆ ಕನಕಪುರದಲ್ಲಿ ಡಿಕೆ ಶಿವಕುಮಾರ್ ಅವರನ್ನು ಸೋಲಿಸುವುದು ಸಾಧ್ಯವಾಗಲಿಲ್ಲ. ಆದರೆ ಬಿಜೆಪಿ ಸ್ಪರ್ಧೆಯನ್ನು ದಾಖಲಿಸುವಲ್ಲಿ, ಒಂದು ಛಾಪನ್ನು ಒತ್ತುವಲ್ಲಿ ಆರ್ ಅಶೋಕ್ ಯಶಸ್ವಿಯಾದರು.

ಉಪಮುಖ್ಯಮಂತ್ರಿ ಆಗಿದ್ದ ಆರ್ ಅಶೋಕ

ಬೆಂಗಳೂರು ಭಾಗದಲ್ಲಿ ಆರ್‌ ಅಶೋಕ ಪ್ರಭಾವಿ ಒಕ್ಕಲಿಗ ಮುಖಂಡ. ಜಗದೀಶ್‌ ಶೆಟ್ಟರ್‌ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ (2012-2013) ಆಗಿನ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದವರು. ದಶಕಗಳ ನಂತರ ಮೊದಲ ಬಾರಿಗೆ ಬಿಜೆಪಿ ಅಸಾಧಾರಣ ಅಭ್ಯರ್ಥಿಯನ್ನು ಕನಕಪುರದಲ್ಲಿ ಕಣಕ್ಕಿಳಿಸಿತ್ತು.

ಬಿಜೆಪಿಯ ಒಕ್ಕಲಿಗ ಮುಖದ ಕಂದಾಯ ಸಚಿವ ಆರ್ ಅಶೋಕ ಅವರು ಕನಕಪುರದಲ್ಲಿ ಬಿಜೆಪಿಯನ್ನು ಕಟ್ಟುವ ಕಾರ್ಯವನ್ನು ಹೊಂದಿದ್ದಾರೆ, ಅಲ್ಲಿ ಪಕ್ಷವು 1983 ರಿಂದ ಸರಾಸರಿ 2.6 ಶೇಕಡಾ ಮತಗಳನಷ್ಟೆ ಹೊಂದಿತ್ತು. ಈ ಸಲದ ಚುನಾವಣೆಯಲ್ಲಿ ಅಲ್ಲಿ ಪಕ್ಷ ಕಟ್ಟುವ ಕೆಲಸಕ್ಕೆ ತೀವ್ರತೆ ನೀಡಿದ್ದಾರೆ.

ರಾಜಕೀಯ ರಂಗದಲ್ಲಿ ಆರ್‌ ಅಶೋಕ ಬೆಳೆದು ಬಂದ ದಾರಿ

ತುರ್ತು ಪರಿಸ್ಥಿತಿಯ ಸಮಯದಲ್ಲಿ (1975-77) ಶಿಕ್ಷಣ ಮುಗಿಸಿದ ಬಳಿಕ ಆರ್‌ ಅಶೋಕ ಅವರು ಅಂದಿನ ಹೋರಾಟದಲ್ಲಿ ಭಾಗಿಯಾಗಿದ್ದರು. ಅದೇ ಕಾರಣ ಬಂಧನಕ್ಕೆ ಕೂಡ ಒಳಗಾಗಿದ್ದರು. ಹಿರಿಯ ನಾಯಕರಾದ ಎಲ್.ಕೆ. ಆಡ್ವಾಣಿ ಜತೆಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸಿದವರು.

ಹೀಗೆ ರಾಜಕೀಯ ರಂಗದಲ್ಲಿ ಕೆಲಸ ಶುರುಮಾಡಿದ ಆರ್‌ ಅಶೋಕ, ಕರ್ನಾಟಕ ವಿಧಾನಸಭೆಗೆ 1997 ರ ಉಪಚುನಾವಣೆಯಲ್ಲಿ ಉತ್ತರಹಳ್ಳಿಯಿಂದ ಮೊದಲ ಬಾರಿಗೆ ಚುನಾಯಿತರಾದರು. ಕ್ಷೇತ್ರ ಮರುವಿಂಗಡನೆಗೆ ಮೊದಲು ಭಾರತದ ಅತಿದೊಡ್ಡ ವಿಧಾನಸಭಾ ಕ್ಷೇತ್ರವಾಗಿತ್ತು ಉತ್ತರಹಳ್ಳಿ ವಿಧಾನಸಭಾ ಕೇತ್ರ. ಅವರು ಅದೇ ಕ್ಷೇತ್ರದಿಂದ 1999 ಮತ್ತು 2004 ರ ಅಸೆಂಬ್ಲಿ ಚುನಾವಣೆಗಳಲ್ಲಿ ದೊಡ್ಡ ಅಂತರದ ಗೆಲುವು ದಾಖಲಿಸಿ ಮರು ಆಯ್ಕೆಯಾದರು. 2004 ರ ಚುನಾವಣೆಯಲ್ಲಿ, ಅಶೋಕ ಅವರು 84,001 ಮತಗಳ ಅಂತರದಿಂದ ಗೆದ್ದರು. ಇದು ಯಾವುದೇ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಅತ್ಯಧಿಕ ಅಂತರದ ಗೆಲುವು ಎಂಬುದು ಅಂದಿನ ದಾಖಲೆಯಾಗಿತ್ತು.

ಕ್ಷೇತ್ರಮರುವಿಂಗಡನೆ ಆದ ಬಳಿಕವೂ ಪ್ರಾಬಲ್ಯ ಉಳಿಸಿಕೊಂಡ ಆರ್ ಅಶೋಕ

2004ರ ಚುನಾವಣೆ ಬಳಿಕ ಕ್ಷೇತ್ರ ಮರುವಿಂಗಡನೆ ಆಗಿದ್ದು, ಉತ್ತರಹಳ್ಳಿ ಕ್ಷೇತ್ರ ಪದ್ಮನಾಭ ನಗರ ಮತ್ತು ಯಶವಂತಪುರ ಎಂದು ಪ್ರತ್ಯೇಕವಾಯಿತು. ಆರ್.‌ ಅಶೋಕ ಅವರು ಪದ್ಮನಾಭನಗರದಲ್ಲಿ 2008ರಿಂದ 2018ರ ತನಕ ಗೆಲುವು ಕಂಡಿದ್ದಾರೆ. ಹಾಗೆ ತಮ್ಮ ಪ್ರಾಬಲ್ಯವನ್ನು ಈ ಕ್ಷೇತ್ರದಲ್ಲಿ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಆರ್‌ ಅಶೋಕ ಅತ್ಯಂತ ಪ್ರಭಾವಿ. 2010 ಮತ್ತು 2015 ರ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷಕ್ಕೆ ಐತಿಹಾಸಿಕ ವಿಜಯ ದೊರಕಿಸಿಕೊಟ್ಟ ಕೀರ್ತಿ ಅವರದ್ದು.

ಸಚಿವರಾಗಿ ಆರ್‌ ಅಶೋಕ...

1. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ 2008 ರಲ್ಲಿ ರಚನೆಯಾದಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದರು. ಹೊಸ ಯೋಜನೆಗಳನ್ನು ಜಾರಿಗೊಳಿಸಿ ಇಲಾಖೆಯ ಆಡಳಿತಕ್ಕೆ ಚುರುಕುಮುಟ್ಟಿಸಿದರು.

2. ಯಡಿಯೂರಪ್ಪ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಅವರು ಇಲಾಖೆಯನ್ನು ಆಧುನೀಕರಣಗೊಳಿಸಿದರಲ್ಲದೆ ವಿನೂತನ ಹೈಟೆಕ್‌ ಸ್ಪರ್ಶ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು.

3. ಜಗದೀಶ್ ಶೆಟ್ಟರ್ ಅವರು 2012ರ ಜೂನ್‌ನಲ್ಲಿ ಮುಖ್ಯಮಂತ್ರಿಯಾದಾಗ, ಅಶೋಕ ಅವರನ್ನು ಇಬ್ಬರು ಉಪಮುಖ್ಯಮಂತ್ರಿಗಳಲ್ಲಿ ಒಬ್ಬರನ್ನಾಗಿ ನೇಮಿಸಲಾಯಿತು. ಗೃಹ ಮತ್ತು ಸಾರಿಗೆ ಸಚಿವಾಲಯಗಳ ಹೊಣೆಗಾರಿಕೆ ನೀಡಲಾಗಿತ್ತು.

4. ಮುಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದಾಗ, 2019ರ ಆಗಸ್ಟ್‌ ಕೊನೆಯ ವಾರದಲ್ಲಿ ಅಶೋಕ ಅವರನ್ನು ಮುಜರಾಯಿ ಹೊರತುಪಡಿಸಿದ ಕಂದಾಯ ಇಲಾಖೆಯ ಹೊಣೆಗಾರಿಕೆ ನೀಡಲಾಗಿತ್ತು.

5. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರು ಮತ್ತು ಬೆಂಗಳೂರು ಗ್ರಾಮಾಂತರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು.

6. ಈ ಹಿಂದೆ ಕರ್ನಾಟಕದ 6ನೇ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕರಾಗಿ (2014-2018)ಯೂ ಕೆಲಸ ಮಾಡಿದ್ದಾರೆ.

ಆರ್‌ ಅಶೋಕ ಅವರ ವೈಯಕ್ತಿಕ ವಿವರ

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಅಶೋಕ ಅವರು ಕಬಡ್ಡಿ ಚಾಂಪಿಯನ್ ಆಗಿದ್ದರು. ಬೆಂಗಳೂರಿನ ವಿಶ್ವೇಶ್ವರಪುರಂ ಕಾಲೇಜಿನಲ್ಲಿ ವಿಜ್ಞಾನದಲ್ಲಿ ಪದವಿ ಪಡೆದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕಡೆಗೆ ಸೆಳೆಯಲ್ಪಟ್ಟರು. ಭಾರತೀಯ ಜನತಾ ಪಕ್ಷವನ್ನು ಸೇರುವ ಮೂಲಕ ಕ್ರಮೇಣ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟರು.

ಪೂರ್ಣ ಹೆಸರು - ಜಾಲಹಳ್ಳಿ ರಾಮಯ್ಯ ಅಶೋಕ

ಜನನ - 01.07.1957

ತಂದೆ - ರಾಮಯ್ಯ

ತಾಯಿ - ಅಂಜನಮ್ಮ

ಹುಟ್ಟೂರು - ಬೆಂಗಳೂರು

ಪತ್ನಿ - ಪರಿಮಳರಾಣಿ

ಮಕ್ಕಳು - ಇಬ್ಬರು ಪುತ್ರರು

ಶಿಕ್ಷಣ - ವಿವಿ ಪುರಂ ವಿಜ್ಞಾನ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ (ಕಾಲೇಜು ದಿನಗಳಿಂದ ವಿದ್ಯಾರ್ಥಿ ನಾಯಕ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ