logo
ಕನ್ನಡ ಸುದ್ದಿ  /  ಕರ್ನಾಟಕ  /  ಹೊರಗೂ ಬಿಸಿ, ಒಳಗೂ ಬಿಸಿ: ಸುಡುವ ಗಾಳಿ, ಕೆಂಡದಂಥ ರಸ್ತೆ, ಕಾವೇರಿದ ಎಂಜಿನ್; ಬಿಸಿಲಿಗೆ ಬಸವಳಿದ ಬಸ್ ಚಾಲಕರು

ಹೊರಗೂ ಬಿಸಿ, ಒಳಗೂ ಬಿಸಿ: ಸುಡುವ ಗಾಳಿ, ಕೆಂಡದಂಥ ರಸ್ತೆ, ಕಾವೇರಿದ ಎಂಜಿನ್; ಬಿಸಿಲಿಗೆ ಬಸವಳಿದ ಬಸ್ ಚಾಲಕರು

HT Kannada Desk HT Kannada

May 05, 2024 02:35 PM IST

ಹೊರಗೂ ಬಿಸಿ, ಒಳಗೂ ಬಿಸಿ: ಸುಡುವ ಗಾಳಿ, ಕೆಂಡದಂಥ ರಸ್ತೆ, ಕಾವೇರಿದ ಎಂಜಿನ್; ಬಿಸಿಲಿಗೆ ಬಸವಳಿದ ಬಸ್ ಚಾಲಕರು. ವಿಜಯಪುರ ಬಸ್‌ ನಿಲ್ದಾಣದಲ್ಲಿ ನಿಂತಿರುವ ಬಸ್‌ಗಳು

    • ಮಧ್ಯಾಹ್ನ 12 ರಿಂದ 4 ಗಂಟೆಯವರೆಗೂ ಬಸ್ ಓಡಿಸುವುದು ಒಂದು ರೀತಿ ಸವಾಲಿನ ಕೆಲಸ. ಅದರಲ್ಲೂ ಈ ಬಾರಿ ಬಿಸಿಗಾಳಿಯ ಹೊಡೆತ ಚಾಲಕರನ್ನು ಹೈರಾಣ ಮಾಡಿದೆ.
ಹೊರಗೂ ಬಿಸಿ, ಒಳಗೂ ಬಿಸಿ: ಸುಡುವ ಗಾಳಿ, ಕೆಂಡದಂಥ ರಸ್ತೆ, ಕಾವೇರಿದ ಎಂಜಿನ್; ಬಿಸಿಲಿಗೆ ಬಸವಳಿದ ಬಸ್ ಚಾಲಕರು. ವಿಜಯಪುರ ಬಸ್‌ ನಿಲ್ದಾಣದಲ್ಲಿ ನಿಂತಿರುವ ಬಸ್‌ಗಳು
ಹೊರಗೂ ಬಿಸಿ, ಒಳಗೂ ಬಿಸಿ: ಸುಡುವ ಗಾಳಿ, ಕೆಂಡದಂಥ ರಸ್ತೆ, ಕಾವೇರಿದ ಎಂಜಿನ್; ಬಿಸಿಲಿಗೆ ಬಸವಳಿದ ಬಸ್ ಚಾಲಕರು. ವಿಜಯಪುರ ಬಸ್‌ ನಿಲ್ದಾಣದಲ್ಲಿ ನಿಂತಿರುವ ಬಸ್‌ಗಳು (ಪ್ರಾತಿನಿಧಿಕ ಚಿತ್ರ)

ವಿಜಯಪುರ: ಹೊರಗೆ ಕಾಲಿಡುವುದು ಅಂತಿರಲಿ, ಕಣ್ಣಿನಿಂದ ನೋಡಲೂ ಕಷ್ಟ ಎನಿಸುವಂಥ ಬಿಸಿಲಿನ ಹೊಡೆತ. ಇನ್ನೊಂದೆಡೆ ಅಪ್ಪಳಿಸುವ ಬಿಸಿಗಾಳಿ. ಈ ವರ್ಷ ವಿಜಯಪುರ ಜಿಲ್ಲೆಯ ಜನರು ಉಷ್ಣಾಂಶ ಹೆಚ್ಚಳದಿಂದ ಹೈರಾಣಾಗಿದ್ದಾರೆ. ಹಲವು ಖಾಸಗಿ, ಸರ್ಕಾರಿ ಕಚೇರಿಗಳು ಕೆಲಸದ ಅವಧಿಯನ್ನು ಮರುಹೊಂದಾಣಿಕೆ ಮಾಡಿವೆ. ಬೀದಿಬದಿ ವ್ಯಾಪಾರಿಗಳೂ ಸೇರಿದಂತೆ ಸ್ವಂತ ಉದ್ಯಮಿಗಳು ತಮ್ಮ ಕೆಲಸದ ರೀತಿ ಬದಲಿಸಿಕೊಂಡಿದ್ದಾರೆ. ಆದರೆ ಬಸ್ ಚಾಲಕರಿಗೆ ಇಂಥ ಯಾವ ಅವಕಾಶಗಳೂ ಇಲ್ಲ. ಹವಾಮಾನ ಇಲಾಖೆಯು ಬಿಸಿಗಾಳಿ ಬೀಸುವ ಕುರಿತು ರೆಡ್ ಅಲರ್ಟ್ ಅಥವಾ ಆರೆಂಜ್ ಅಲರ್ಟ್‌ ಹೊರಡಿಸಿದರೂ ಬಸ್‌ಗಳು ನಿಲ್ಲುವಂತಿಲ್ಲ. ಪ್ರತಿಕೂಲ ಪರಿಸ್ಥಿತಿಯಲ್ಲಿ ಕಷ್ಟದಿಂದ ಕರ್ತವ್ಯ ನಿಭಾಯಿಸುತ್ತಿರುವ ಚಾಲಕರ ಕರ್ತವ್ಯಪ್ರಜ್ಞೆಯ ಬಗ್ಗೆ ಜಿಲ್ಲೆಯ ಜನರಲ್ಲಿ ಕೃತಜ್ಞತೆಯ ಭಾವ ಮೂಡಿದೆ. ಕೆಲ ಪ್ರಯಾಣಿಕರು ಚಾಲಕರು, ನಿರ್ವಾಹಕರ ಬಳಿಗೆ ಹೋಗಿ, 'ಎಂಥ ಬಿಸಿಲಿಗೂ ಜಗ್ಗದೆ ಬಸ್ ಓಡಿಸ್ತಿದ್ದೀರಿ, ಬಹಳ ಕಷ್ಟಪಡ್ತಿದ್ದೀರಿ' ಎಂದು ತಾರೀಪು ಮಾಡುತ್ತಿದ್ದಾರೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Environment day: ವಿಶ್ವ ಪರಿಸರ ದಿನಕ್ಕೆ ಜಾಗತಿಕ ತಾಪಮಾನದ ಮೇಲೆ ಪ್ರಬಂಧ ಬರೆಯಿರಿ, 5000 ರೂ. ಬಹುಮಾನ ಪಡೆಯಿರಿ

Vijayapura News: ವಿಜಯಪುರ ಬಿಎಲ್‌ಡಿಇಯಲ್ಲಿ ಕೌಶಲ್ಯಗಳ ಸಂಗಮ, ತಾಂತ್ರಿಕ ಹಬ್ಬದ ಸಡಗರ

Museums Day 2024: ಬೆಂಗಳೂರು, ಶಿವಮೊಗ್ಗ, ಮಡಿಕೇರಿ, ಮಂಗಳೂರು, ಮೈಸೂರು ಮ್ಯೂಸಿಯಂಗಳಿಗೆ ಹೊಸ ರೂಪ, ಏನಿದರ ವಿಶೇಷ

Bangalore Mysore Expressway: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಮೊಬೈಲ್ ನಲ್ಲಿ ಮಾತಾಡಿಕೊಂಡು ಡ್ರೈವ್ ಮಾಡಿದರೆ ದಂಡ ಗ್ಯಾರಂಟಿ

ಜನರು ಒಂದೆಡೆಯಿಂದ ಇನ್ನೊಂದೆಡೆ ಪ್ರಯಾಣಿಸಲು ಅನುಕೂಲವಾಗಲು ಬಸ್ ಚಾಲಕರು ಪಡುತ್ತಿರುವ ಪ್ರಯಾಸ ಸಾಮಾನ್ಯವಾದುದಲ್ಲ. ಅದು ಹೇಗಿರುತ್ತದೆ ಎನ್ನುವುದು ಅನುಭವಿಸಿದವರಿಗೆ ಮಾತ್ರವೇ ಗೊತ್ತು. ಬಿಸಿಲಿನ ಬೇಗೆಯಲ್ಲಿಯೇ ಬಿಸಿಬಿಸಿ ಎಂಜಿನ್ ಶಾಖವನ್ನು ಅನುಭವಿಸುತ್ತಾ ಬಸ್ ಚಲಾಯಿಸುವ ಡ್ರೈವರ್‌ಗಳ ಯಾತನೆ ಅಷ್ಟಿಷ್ಟಲ್ಲ. ಬಸ್‌ಗಳ ತಾರಸಿಯೂ ಲೋಹದಿಂದ ಮಾಡಿದ್ದಾಗಿರುತ್ತದೆ. ಬಿಸಿಲಿಗೆ ಅದೂ ಚೆನ್ನಾಗಿ ಕಾಯುತ್ತದೆ. ಒಳಭಾಗದಲ್ಲಿ ಇಂಜಿನ್ ಶಾಖವೂ ಹೆಚ್ಚಾಗುತ್ತದೆ. ಕಾರು ಚಾಲಕರಿಗೆ ಎಸಿ ಸವಲತ್ತು ಇರುತ್ತದೆ. ಆದರೆ ಬಸ್‌ಗಳಿಗೆ ಈ ಭಾಗ್ಯ ಇಲ್ಲ. ಬಿರುಬಿಸಿಲಿನಲ್ಲಿಯೇ ಸುಡುವ ಎಂಜಿನ್ ಶಾಖದ ಮಧ್ಯೆಯೇ ಸ್ಟೇರಿಂಗ್ ಹಿಡಿಯಬೇಕಾದ ಪರಿಸ್ಥಿತಿ ಚಾಲಕರದು.

ಸೂರ್ಯ ನೆತ್ತಿಯ ಮೇಲಿರುವ ಸಮಯದಲ್ಲಂತೂ ಟಾರ್ ರಸ್ತೆಯ ಶಾಖ, ಇಂಜಿನ್ ಶಾಖ, ಬಿಸಿಲಿನ ಶಾಖ ಹೀಗೆ ತ್ರಿವಳಿ ಶಾಖವನ್ನು ಅನುಭವಿಸುತ್ತಲೇ ಬಸ ಚಲಾಯಿಸುತ್ತಾ ಬಸವಳಿಯುವ ಬಸ್ ಚಾಲಕರ ಪರಿಸ್ಥಿತಿ ನೆನಪಿಸಿಕೊಂಡರೆ 'ಅಯ್ಯೋ ಪಾಪ' ಎನಿಸುತ್ತದೆ.

ಕೆಂಡದಂಥ ಟಾರ್‌ ರಸ್ತೆ ಮೇಲೆ ಕೆಂಪು ಬಸ್ಸು

ಈ ವರ್ಷ ವಿಜಯಪುರ ಜಿಲ್ಲೆಯ ತಾಪಮಾನ ಪ್ರತಿದಿನ 40 ಡಿಗ್ರಿ ದಾಟುತ್ತಿದೆ. ಹಲವು ದಿನಗಳಲ್ಲಿ ಇದು 43 ಡಿಗ್ರಿ ಮುಟ್ಟಿದ್ದೂ ಉಂಟು. ಬಿರು ಬಿಸಿಲಿನಲ್ಲಿ ಬಸ್ ಚಾಲನೆಯ ಅನುಭವವನ್ನು ಚಾಲಕರೊಬ್ಬರು ವಿವರಿಸಿದರು. ತಮ್ಮ ಹೆಸರು ಉಲ್ಲೇಖಿಸಬಾರದು ಎನ್ನುವ ಷರತ್ತನ್ನು ಅವರು ಒಡ್ಡಿದ್ದ ಕಾರಣ ಅವರ ಹೆಸರನ್ನು ಈ ವರದಿಯಲ್ಲಿ ಉಲ್ಲೇಖಿಸಿಲ್ಲ. ಅವರ ಈ ಅನುಭವ ಕಥನವು ಅವರೊಬ್ಬರದಷ್ಟೇ ಅಲ್ಲ, ಬೇಸಿಗೆಯಲ್ಲಿ ರಾಜ್ಯ, ದೇಶದ ಎಲ್ಲ ಬಸ್‌ ಚಾಲಕರ ಪರಿಸ್ಥಿತಿ ಇದು ಎನ್ನಿಸಿತು.

ನಾವು ವಾಹನ ಓಡಿಸುವ ಭಾಗದಲ್ಲಿ ಅಂದರೆ ರಸ್ತೆ ಪಕ್ಕ ಗಿಡಮರಗಳಿಲ್ಲದ ಸ್ಥಳದಲ್ಲಿ ಬಿಸಿಲಿನ ಶಾಖ ಮತ್ತಷ್ಟು ಹೆಚ್ಚಾಗುತ್ತದೆ. ವಾಹನ ಸಾಗುವ ಟಾರ್ ರಸ್ತೆಯು ಕೆಂಡದಂತೆ ಆಗಿರುತ್ತದೆ. ಗಾಜಿನ ಮೂಲಕ ಬಿಸಿ ಒಳಗೆ ಬಂದಂತೆ ಆಗುತ್ತದೆ. ಇದರ ಜೊತೆಗೆ ನಮ್ಮ ಪಕ್ಕದಲ್ಲಿಯೇ ಇರುವ ವಾಹನದ ಎಂಜಿನ್ ಸಹ ಶಾಖವನ್ನು ಹೊರಸೂಸುತ್ತದೆ. ಹೊರಗೆ ಅಪಾರ ಪ್ರಮಾಣದ ಉಷ್ಣಾಂಶ. ಹೀಗೆ ಎಲ್ಲೆಡೆಯಿಂದ ಬಿಸಿಯು ಒಮ್ಮೆಲೆ ನಮ್ಮ ಮೇಲೆ ಆಕ್ರಮಣ ಮಾಡಿದಂತೆ ಭಾಸವಾಗುತ್ತದೆ. ಇಂಥ ಸವಾಲುಗಳನ್ನು ದಾಟಿ ಬಸ್ ಚಾಲನೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಹೆಗಲಿಗೆ ಟವೆಲ್- ತಲೆಗೆ ನೀರಲ್ಲಿ ತೋಯ್ದ ಕರ್ಚೀಫ್

ಕೆಲ ಚಾಲಕರಂತೂ ಸೀಟುಗಳಲ್ಲಿ ಕುಳಿತುಕೊಳ್ಳಲೂ ಕಷ್ಟಪಡುತ್ತಾರೆ. ಪೈಲ್ಸ್ ಸಮಸ್ಯೆ ಇರುವವರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿರುತ್ತದೆ. ಇಂಥ ಸಂದರ್ಭದಲ್ಲಿ ಸ್ಟೇರಿಂಗ್ ಮೇಲಿನ ಬಿಗಿ ಹಾಗೂ ಏಕಾಗ್ರತೆ ಕೊಂಚವೂ ವಿಚಲಿತವಾಗಲು ಬಿಡದಂತೆ ಎಚ್ಚರಿಕೆ ವಹಿಸುವ ಹೊಣೆಗಾರಿಕೆ ನಮ್ಮ ಮೇಲಿರುತ್ತದೆ. ಹೀಗಾಗಿ ನೀರಿನಲ್ಲಿ ಅದ್ದಿರುವ ಒಂದು ಟವೆಲ್ ಹೆಗಲಿಗೆ ಹಾಕಿಕೊಳ್ಳುತ್ತೇವೆ. ಅದರಿಂದಲೆ ಬೆವರು ಒರೆಸಿಕೊಳ್ಳುತ್ತೇವೆ. ತಲೆಯ ಮೇಲೆ ನೀರಿನಲ್ಲಿ ಅದ್ದಿದ ಕರ್ಚೀಫ್ ಸುತ್ತಿಕೊಂಡು ಹೇಗೋ ರಕ್ಷಣೆ ಮಾಡಿಕೊಳ್ಳುತ್ತಾ ಬಸ್ ಓಡಿಸುತ್ತೇವೆ.

ಮಧ್ಯಾಹ್ನ 12 ರಿಂದ 4 ಗಂಟೆಯವರೆಗೂ ಬಸ್ ಓಡಿಸುವುದು ಒಂದು ರೀತಿ ಸವಾಲಿನ ಕೆಲಸ. ಅದರಲ್ಲೂ ಈ ಬಾರಿ ಬಿಸಿಗಾಳಿಯ ಹೊಡೆತ ನಮ್ಮನ್ನು ಹೈರಾಣ ಮಾಡಿದೆ. ಬೆಳಿಗ್ಗೆ ಮತ್ತು ಸಂಜೆಯ ಹೊತ್ತು ಹೇಗೋ ವಾಹನ ಓಡಿಸಬಹುದು. ರಾತ್ರಿ ಸಮಯದಲ್ಲಿ ಅಷ್ಟು ಸಮಸ್ಯೆಯಾಗುವುದಿಲ್ಲ. ಆದರೆ ಮಧ್ಯಾಹ್ನದ ಹೊತ್ತು ಕಷ್ಟವಾಗುತ್ತಿದೆ.

ಎಲ್ಲಿ ನೀರಿಟ್ಟರೂ ಬಿಸಿಯಾಗುತ್ತೆ

ಸಮವಸ್ತ್ರ ಕಳಚಿ, ಷರ್ಟ್‌ ತೆಗೆದು ಬಸ್ ಓಡಿಸಬೇಕು ಎಂದು ಹಲವು ಸಲ ಅನ್ನಿಸಿದ್ದು ಉಂಟು. ಆದರೆ ಆ ರೀತಿ ಮಾಡಲು ಸಾಧ್ಯವಿಲ್ಲ, ಹೀಗಾಗಿ ಕರ್ಚಿಫ್, ಟವೆಲ್‌ಗಳೇ ನಮಗೆ ಆಸರೆ. ಇನ್ನೂ ಬಸ್‌ನಲ್ಲಿ ಎಷ್ಟೇ ತಣ್ಣೀರು ಬಟ್ಟೆ ಹಾಕಿ ನೀರಿನ ಬಾಟಲ್ ಇರಿಸಿದರೂ ಐದು ಹತ್ತು ನಿಮಿಷದಲ್ಲಿ ಎಂಜಿನ್ ಶಾಖದಿಂದ ನೀರು ಬಿಸಿಯಾಗುತ್ತದೆ. ನೀರು ಕುಡಿದು ದಾಹ ತೀರಿಸಿಕೊಳ್ಳಲು ಅಸಾಧ್ಯ. ಪ್ರತಿಬಾರಿ ಕೋಲ್ಡ್ ಮಿನರಲ್ ನೀರು ಖರೀದಿಸುತ್ತಾ ಸಾಗುವುದು ನಮ್ಮ ಜೇಬಿಗೆ ಹೊರೆ. ನಿಲ್ದಾಣದಲ್ಲಿ ಬಸ್ ನಿಲ್ಲಿಸಿದಾಗ ಮುಖ ತೊಳೆದುಕೊಂಡು, ಫ್ಯಾನ್ ಇದ್ದಲ್ಲಿ ಅದರ ಗಾಳಿಗೆ ಆಯಾಸ ಪರಿಹಾರ ಮಾಡಿಕೊಳ್ಳುತ್ತೇವೆ. ಕಂಡಕ್ಟರ್ ಸೀಟಿ ಊದಿದ ತಕ್ಷಣ ಮತ್ತೆ ಇದೇ ರೀತಿ ಶಾಖದ ಜೊತೆಗೆ ಪ್ರಯಾಸದ ಪ್ರಯಾಣ ಮುಂದುವರಿಯುತ್ತದೆ ಎಂದು ಅವರು ತಮ್ಮ ಎಂಜಿನ್ ಚಾಲು ಮಾಡಿದರು.

ವರದಿ: ಸಮೀವುಲ್ಲಾ ಉಸ್ತಾದ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ