logo
ಕನ್ನಡ ಸುದ್ದಿ  /  ಕರ್ನಾಟಕ  /  Ysv Datta: ಮರಳಿ ಗೂಡು ಸೇರಿದ ವೈಎಸ್​ವಿ ದತ್ತ.. ಜೆಡಿಎಸ್​ನಿಂದ ಕಡೂರು​ ಟಿಕೆಟ್​ ಕೂಡ ಫಿಕ್ಸ್

YSV Datta: ಮರಳಿ ಗೂಡು ಸೇರಿದ ವೈಎಸ್​ವಿ ದತ್ತ.. ಜೆಡಿಎಸ್​ನಿಂದ ಕಡೂರು​ ಟಿಕೆಟ್​ ಕೂಡ ಫಿಕ್ಸ್

Meghana B HT Kannada

Apr 13, 2023 09:21 PM IST

google News

ವೈಎಸ್‌ವಿ ದತ್ತ ( twitter/@Jds_news)

    • ವೈಎಸ್‌ವಿ ದತ್ತ ಎಂದೇ ಜನಪ್ರಿಯರಾಗಿರುವ ಮಾಜಿ ಶಾಸಕ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಅವರು ಮರಳಿ ಗೂಡು ಸೇರಿದ್ದಾರೆ. ಅಷ್ಟೇ ಅಲ್ಲ ಕಡೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್​ ಕೂಡ ಫಿಕ್ಸ್ ಆಗಿದೆ.
ವೈಎಸ್‌ವಿ ದತ್ತ ( twitter/@Jds_news)
ವೈಎಸ್‌ವಿ ದತ್ತ ( twitter/@Jds_news)

ಕಡೂರು (ಚಿಕ್ಕಮಗಳೂರು): ಜೆಡಿಎಸ್​ ಬಿಟ್ಟು, ಕಾಂಗ್ರೆಸ್​​ನಿಂದ ಸೇರಿ ಕೊನೆಗೆ ಅಲ್ಲಿ ಟಿಕೆಟ್​ ಸಿಗದೆ ಹತಾಶರಾಗಿ, ಸ್ವತಂತ್ರವಾಗಿ ಸ್ಪರ್ಧಿಸಲು ಹೊರಟಿದ್ದ ವೈಎಸ್‌ವಿ ದತ್ತ ಎಂದೇ ಜನಪ್ರಿಯರಾಗಿರುವ ಮಾಜಿ ಶಾಸಕ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತ ಅವರು ಮರಳಿ ಗೂಡು ಸೇರಿದ್ದಾರೆ. ಅಷ್ಟೇ ಅಲ್ಲ ಕಡೂರು ಕ್ಷೇತ್ರದಿಂದ ಜೆಡಿಎಸ್ ಟಿಕೆಟ್​ ಕೂಡ ಫಿಕ್ಸ್ ಆಗಿದೆ.

ಮಾಜಿ ಸಚಿವ ಹೆಚ್.ಡಿ. ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರ ಸಮ್ಮುಖದಲ್ಲಿ ಇಂದು ದತ್ತಾ ಅವರು ಜೆಡಿಎಸ್​ಗೆ ಸೇರ್ಪಡೆಯಾದವರು. ಇದಕ್ಕೂ ಮುನ್ನ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿರುವ ದತ್ತಾ ನಿವಾಸಕ್ಕೆ ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿ, ದತ್ತಾ ಅವರ ಜತೆ ಮಾತುಕತೆ ನಡೆಸಿದ್ದರು.

ಬಳಿಕ ಮಾತನಾಡಿದ ಪ್ರಜ್ವಲ್ ರೇವಣ್ಣ, "ವೈಎಸ್‌ವಿ ದತ್ತಾ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕೆಂದು ಹೆಚ್​ ಡಿ ದೇವೇಗೌಡರು ಹೇಳಿದ್ದಾರೆ. ಕಾಂಗ್ರೆಸ್​​ ಅವರಿಗೆ ಟಿಕೆಟ್ ನೀಡುವುದಿಲ್ಲ ಎನ್ನುವುದು ಗೊತ್ತಿತ್ತು. ಅವರನ್ನು ಉಳಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿದ್ದೆವು" ಎಂದರು.

"ಪಕ್ಷೇತರವಾಗಿ ಸ್ಪರ್ಧಿಸುವುದು ಬೇಡ ಎಂದು ದೇವೇಗೌಡರು ಹೇಳಿದ್ದಾರೆ. ದೇವೇಗೌಡರ ಮಾತಿಗೆ ಬೆಲೆ ಕೊಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯ ಪಡೆದು ಜೆಡಿಎಸ್​ ಸೇರಿದ್ದೇನೆ. ಏಪ್ರಿಲ್​ 18 ರಂದು ನಾಮಪತ್ರ ಸಲ್ಲಿಸಲಿದ್ದೇನೆ" ಎಂದು ದತ್ತಾ ಅವರು ಹೇಳಿದರು. ನಾಮಪತ್ರ ಸಲ್ಲಿಸುವ ದಿನ ದೇವೇಗೌಡರು ಆಗಮಿಸುವ ಸಾಧ್ಯತೆಯಿದೆ.

ಹೆಚ್​ ಡಿ ದೇವೇಗೌಡರ ಮಾನಸಪುತ್ರ (ಮಗನಂತಿದ್ದ) ವೈಎಸ್​​ವಿ ದತ್ತ ಅವರು ಕಳೆದ ವರ್ಷ ಡಿಸೆಂಬರ್​ನಲ್ಲಿ ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರ್ಪಡೆಯಾಗಿದ್ದರು. ಕಾಂಗ್ರೆಸ್​​ನಿಂದ ಟಿಕೆಟ್​ ನೀಡುವ ಭರವಸೆ ಸಿಕ್ಕ ಬಳಿಕ ಜೆಡಿಎಸ್​ತೊರೆದಿದ್ದರು. ವೈಎಸ್‌ವಿ ದತ್ತ ಅವರು ಜೆಡಿಎಸ್‌ನಿಂದ ಹೊರಬರಲು ದೇವೇಗೌಡರ ಕುಟುಂಬದೊಂದಿಗಿನ ಆಂತರಿಕ ಭಿನ್ನಾಭಿಪ್ರಾಯವೂ ಒಂದು ಕಾರಣ ಎಂದು ಹೇಳಲಾಗಿದೆ. ಏಪ್ರಿಲ್​ 6 ರಂದು ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್​​ ದತ್ತ ಅವರ ಬದಲಾಗಿ 2018ರ ಚುನಾವಣೆಯಲ್ಲಿ ಸೋಲುಂಡಿದ್ದ, ಕುರುಬ ಸಮುದಾಯಕ್ಕೆ ಸೇರಿದ ಕೆ.ಎಸ್.ಆನಂದ ಅವರಿಗೆ ಟಿಕೆಟ್​ ನೀಡಿತ್ತು.

ಬಳಿಕ, ಜೆಡಿಎಸ್ ನಾಯಕರಾದ ಪ್ರಜ್ವಲ್ ರೇವಣ್ಣ, ನಿಖಿಲ್​​ ಕುಮಾರಸ್ವಾಮಿ ದತ್ತ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಯತ್ನಿಸಿದರೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ ಎನ್ನಲಾಗಿದೆ. ನಮ್ಮದು ಸಣ್ಣ ಪಕ್ಷ, ಅವರು ಇಂಟರ್​ನ್ಯಾಷನಲ್​ ಪಕ್ಷ ಸೇರಲು ಹೋದವರು. ನಮ್ಮ ಪಕ್ಷದಲ್ಲಿ ಅವರಿಗೇನು ಸಿಗುತ್ತದೆ ಎಂದು ಬೀರೂರಿನಲ್ಲಿ ಸುದ್ದಿಗಾರರಿಗೆ ಹೆಚ್​ಡಿಕೆ ಹೇಳಿದ್ದರು.

ಕಾಂಗ್ರೆಸ್​​ನಿಂದ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡ ದತ್ತ ಅವರು ಕಳೆದ ಭಾನುವಾರ ಕಡೂರಿನಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು.

ಕಾಂಗ್ರೆಸ್​​​ನಿಂದ ತಮಗೆ ಆಗಿರುವ ಅನ್ಯಾಯದ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದರು. ಮುಂದಿನ ಕ್ರಮದ ಬಗ್ಗೆ ಕಾರ್ಯಕರ್ತರ ಬಳಿ ಸಲಹೆ ಕೇಳಿದರು. ಇವರೆಲ್ಲರೂ ಈ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ತಕ್ಕ ಪಾಠ ಕಲಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ದತ್ತ, ''ಚುನಾವಣೆ ಗೆಲ್ಲಲು ಮತದಾರರಿಗೆ ಕೋಟಿಗಟ್ಟಲೆ ಖರ್ಚು ಮಾಡಲು ಮತ್ತು ಲಂಚ ನೀಡಲು ನನ್ನ ಬಳಿ ಇಲ್ಲ. ಹಾಗಾಗಿ ನನ್ನ ಬೆಂಬಲಿಗರ ಮುಂದೆ ಟವೆಲ್ ಇಟ್ಟು ಭಿಕ್ಷೆ ಬೇಡುತ್ತಿದ್ದೇನೆ'' ಎಂದು ಹೇಳಿದ್ದರು. ''ಕ್ಷೇತ್ರದಲ್ಲಿ ಸಾವಿರಾರು ಬೆಂಬಲಿಗರು ಇರುವುದರಿಂದ ನಾನು ಸ್ವತಂತ್ರವಾಗಿ ಸ್ಪರ್ಧಿಸುತ್ತೇನೆ. ಅವರು ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿದೆ. ಟವೆಲ್ ನನ್ನ ಗುರುತು. ಟವಲ್ ಹಿಡಿದು ನಿಮ್ಮ ಮನೆಗೆ ಬರುತ್ತೇನೆ'' ಎಂದು ಸಾಂಕೇತಿಕವಾಗಿ ನೆರೆದಿದ್ದ ಬೆಂಬಲಿಗರಿಗೆ ಟವಲ್ ಹಿಡಿದು ಭಿಕ್ಷೆ ಬೇಡಿದ್ದರು.

ಸಭೆಯಲ್ಲಿ ಬೆಂಬಲಿಗರು 100 ರೂಪಾಯಿಯಿಂದ ಹಿಡಿದು 2 ಲಕ್ಷ ರೂ. ಚೆಕ್​​ಗಳನ್ನು ನೀಡಿದರು. ಅಲ್ಲದೇ, ಚುನಾವಣಾ ವೆಚ್ಚವನ್ನು ಭರಿಸಲು ತಮ್ಮ ನಾಯಕನಿಗೆ ಹೆಚ್ಚಿನ ನೆರವು ನೀಡುವುದಾಗಿ ಬೆಂಬಲಿಗರು ಭರವಸೆ ನೀಡಿದ್ದರು. ಇದೀಗ ಮರಳಿ ಜೆಡಿಎಸ್​ಗೆ ಸೇರ್ಪಡೆಯಾಗಿದ್ದಾರೆ ದತ್ತ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ