logo
ಕನ್ನಡ ಸುದ್ದಿ  /  latest news  /  Karnataka Election 2023 Live: ಚಿತ್ರದುರ್ಗದಲ್ಲಿ ಪ್ರಿಯಾಂಕಾ ಗಾಂಧಿ ರೋಡ್​ ಶೋ
ಚಿತ್ರದುರ್ಗದಲ್ಲಿ ಪ್ರಿಯಾಂಕಾ ಗಾಂಧಿ ರೋಡ್​ ಶೋ

Karnataka Election 2023 LIVE: ಚಿತ್ರದುರ್ಗದಲ್ಲಿ ಪ್ರಿಯಾಂಕಾ ಗಾಂಧಿ ರೋಡ್​ ಶೋ

Apr 26, 2023 09:34 PM IST

ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಮೇ 10ರಂದು ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಈಗ ಚುನಾವಣಾ ಪ್ರಚಾರ ರಂಗೇರಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಆಮ್‌ಆದ್ಮಿ, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪರವಾಗಿ ಪ್ರಚಾರ ಜೋರಾಗಿದೆ.

Apr 26, 2023 09:34 PM IST

ಬಸವನಬಾಗೇವಾಡಿಯಲ್ಲಿ ಯುಪಿ ಸಿಎಂ 

ಮಂಡ್ಯದ ಬಳಿಕ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಗೆ ಆಗಮಿಸಿದ ಯೋಗಿ ಪ್ರಚಾರ ಸಭೆಯನ್ನುದ್ದೇಶಿ ಮಾತನಾಡಿದರು. ಕನ್ನಡದಲ್ಲಿಯೇ ಭಾಷಣ ಆರಂಭಿಸಿದರು. ಜಗಜ್ಯೋತಿ ಬಸವಣ್ಣನವರ ಪವಿತ್ರ ಭೂಮಿಗೆ ಬಂದಿದ್ದು ನನ್ನ ಸೌಭಾಗ್ಯ ಎಂದು ಹೇಳಿದರು.  

Apr 26, 2023 03:40 PM IST

ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್ ರೋಡ್​ಶೋ

ಚುನಾವಣಾ ಪ್ರಚಾರಕ್ಕೆ ಮಂಡ್ಯಕ್ಕೆ ಆಗಮಿಸಿರುವ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರೋಡ್​ಶೋ ನಡೆಸಿದ್ದಾರೆ. ಈ ವೇಳೆ ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್​, ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಸೇರಿ ಹಲವರು ಭಾಗಿಯಾಗಿದ್ದರು. 

Apr 26, 2023 02:56 PM IST

ಮಂಡ್ಯಕ್ಕೆ ಬಂದಿಳಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ. ಬಿಜೆಪಿ ಪರವಾಗಿ ಪ್ರಚಾರ ನಡೆಸಲು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮಂಡಕ್ಕೆ ಬಂದಿಳಿದಿದ್ದಾರೆ.

Apr 26, 2023 12:10 PM IST

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಮತ್ತು ಬೊಮ್ಮಾಯಿ ನಡುವೆ ಆಕಸ್ಮಿಕ ಭೇಟಿ

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ಭೇಟಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ, ಪ್ರತಿಪಕ್ಷ ನಾಯಕ  ಸಿದ್ದರಾಮಯ್ಯ ಅವರು ಉಭಯ ಕುಶಲೋಪಹರಿ ನಡೆಸಿದರು.

Apr 26, 2023 12:32 PM IST

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಭದ್ರಕೋಟೆ ಛಿದ್ರವಾಗಲಿದೆ: ಕಟೀಲ್‌ ಭವಿಷ್ಯವಾಣಿ

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಭದ್ರಕೋಟೆ ಛಿದ್ರವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಹೆಚ್ಚಿನ ಸೀಟುಗಳನ್ನು ಗೆಲ್ಲಬೇಕು ಎಂಬ ಗುರಿಯೊಂದಿಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

Apr 26, 2023 10:27 AM IST

ದೇಶಭಕ್ತ ಮುಸಲ್ಮಾನರು ಬಿಜೆಪಿಗೆ ಮತ ಹಾಕುತ್ತಾರೆ: ಸಿ.ಟಿ. ರವಿ ಅಭಿಮತ

ದೇಶಭಕ್ತ ಮುಸಲ್ಮಾನರು ಬಿಜೆಪಿಗೆ ಮತ ಹಾಕುತ್ತಿದ್ದು, ಪಾಕಿಸ್ತಾನವನ್ನು ಬೆಂಬಲಿಸುವ ಮತ್ತು ವಿಭಜಕ ಸಿದ್ಧಾಂತ ಹೊಂದಿರುವ ಕೆಲವು ಮುಸ್ಲಿಮರು ಮಾತ್ರ ಕಾಂಗ್ರೆಸ್ ಮತ್ತು ಜನತಾದಳಕ್ಕೆ ಮತ ಹಾಕುತ್ತಾರೆ. ಪಾಕಿಸ್ತಾನದ ಮನಸ್ಥಿತಿ ಇರುವವರ ಮತಗಳು ನಮಗೆ ಬೇಡ. ಅಬ್ದುಲ್ ಕಲಾಂ, ಶಿಶುನಾಳ ಷರೀಫರಂತಹವರು ಬಿಜೆಪಿಗೆ ಮತ ಹಾಕುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

Apr 26, 2023 09:03 AM IST

ಮಾಜಿ ಸಿಎಂ ಬಿಎಸ್‌ ಯಡಿಯೂರಪ್ಪ ರಾಜ್ಯ ಪ್ರವಾಸ: ಈ ಕ್ಷೇತ್ರಗಳಲ್ಲಿ ಮಾಡಲಿದ್ದಾರೆ ಪ್ರಚಾರ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ. ಬೆಳಗ್ಗೆ 11 ಗಂಟೆಗೆ ಅಥಣಿ, ಮಧ್ಯಾಹ್ನ 2 ಗಂಟೆಗೆ ಕುಡಚಿ, ಸಾಯಂಕಾಲ 4:20ಕ್ಕೆ ಸವದತ್ತಿ ಹಾಗೂ ಸಂಜೆ 6 ಗಂಟೆಗೆ ಹುಬ್ಬಳ್ಳಿಯಲ್ಲಿ ರೋಡ್‌ ಶೋ ನಡೆಸಲಿದ್ದಾರೆ.

Apr 26, 2023 08:06 AM IST

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ರಾಜ್ಯ ಪ್ರವಾಸ: ಇಲ್ಲಿದೆ ಕಾರ್ಯಕ್ರಮಗಳ ವಿವರ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಇಂದು (ಏ.26) ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ರಾಜನಾಥ್‌ ಸಿಂಗ್‌ ಅವರು, ಕಾಗವಾಡ, ಬೈಲಹೊಂಗಲ ಹಾಗೂ ಜಮಖಂಡಿಯಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Apr 26, 2023 06:47 AM IST

ಏಪ್ರಿಲ್‌ 27ಕ್ಕೆ ರಾಜ್ಯದ 50 ಲಕ್ಷ ಬಿಜೆಪಿ ಕಾರ್ಯಕರ್ತರ ಜೊತೆ  ಸಂವಾದ ನಡೆಸಲಿರುವ ಪ್ರಧಾನಿ ಮೋದಿ

ಕರ್ನಾಟಕದ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ (ಏ.27) ರಾಜ್ಯದ ಬರೋಬ್ಬರಿ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ವರ್ಚುವಲ್‌ ಸಂವಾದ ನಡೆಸಲಿದ್ದಾರೆ.

Apr 25, 2023 09:13 PM IST

ಬೆಳಗಾವಿಯಲ್ಲಿ ಜಾತಿ, ಹಣದ ರಾಜಕಾರಣ ನಡೆಯುವುದಿಲ್ಲ - ಸಿಎಂ ಬೊಮ್ಮಾಯಿ

ಬೆಳಗಾವಿ ಜಿಲ್ಲೆ ಅಭಿವೃದ್ಧಿ ಪರ ಜಿಲ್ಲೆ. ಇಲ್ಲಿ ಜಾತಿ ರಾಜಕಾರಣ, ಹಣದ ರಾಜಕಾರಣ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾಗೇಶ್ ಮನ್ನೋಳಕರ ಪರ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವ ಸಿಎಂ, ಬೆಳಗಾವಿ ಇದು ಗಂಡು ಮೆಟ್ಟಿದ ನಾಡು. ಚೆನ್ನಮ್ಮ, ರಾಯಣ್ಣನ ನಾಡು. ಕಾಂಗ್ರೆಸ್ ನ ಗ್ಯಾರೆಂಟಿ ಕಾರ್ಡು ಚುನಾವಣೆ ಮುಗಿಯುವವರೆಗೂ ಮಾತ್ರ ಆಮೇಲೆ ಗಳಗಂಟಿ ಆಗುತ್ತದೆ ಎಂದಿದ್ದಾರೆ.

Apr 25, 2023 08:29 PM IST

ದೆಹಲಿಯಲ್ಲಿ ಕೂತು ರಾಜ್ಯಗಳನ್ನು ಆಳಲು ಇದು ರಾಜಪ್ರಭುತ್ವ ಅಲ್ಲ, ಪ್ರಜಾಪ್ರಭುತ್ವ: ಸಿದ್ದರಾಮಯ್ಯ

ಕರ್ನಾಟಕವನ್ನು ನರೇಂದ್ರ ಮೋದಿ ಅವರ ಕೈಗೆ ಕೊಡುವ ಚುನಾವಣೆಯಿದು ಎಂಬ ಅಮಿತ್ ಶಾ ಅವರ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ವಾರೆ ವ್ಹಾ ಅಮಿತ್ ಶಾ ಜೀ, ದೆಹಲಿಯಲ್ಲಿ ಕೂತು ರಾಜ್ಯಗಳನ್ನು ಆಳಲು ಇದು ರಾಜಪ್ರಭುತ್ವ ಅಲ್ಲ, ಪ್ರಜಾಪ್ರಭುತ್ವ. ಕರ್ನಾಟಕದ ಭವಿಷ್ಯವನ್ನು ನರೇಂದ್ರ ಮೋದಿ ಅವರ ಕೈಯಲ್ಲಿ ಕೊಡುವ ಚುನಾವಣೆ ಎಂಬ ಸತ್ಯವನ್ನೇ ಹೇಳಿದ್ದೀರಿ, ಧನ್ಯವಾದಗಳು. ಇದೆಂತ ಅವಮಾನ ಕನ್ನಡಿಗರಿಗೆ ಎಂದು ಹೇಳಿದ್ದಾರೆ.

ಕರ್ನಾಟಕದ ಭವಿಷ್ಯವನ್ನು ನೋಡಿಕೊಳ್ಳಲು ಒಬ್ಬ ಕನ್ನಡಿಗನೂ ಇಲ್ಲದಷ್ಟು ನಿಮ್ಮ ಪಕ್ಷ ದಿವಾಳಿಯಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.

Apr 25, 2023 07:26 PM IST

ಖಾನಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಸಿಎಂ ಬೊಮ್ಮಾಯಿ ಪ್ರಚಾರ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು ಖಾನಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಠಲ ಹಲಗೇಕರ ಅವರ ಪರವಾಗಿ ರೋಡ್ ಶೊ ನಡೆಸಿ ಮತಯಾಚನೆ ಮಾಡಿದರು.

ಖಾನಾಪುರ ಅಭ್ಯರ್ಥಿ ವಿಠಲ ಹಲಗೇಕರ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಶಾಸಕರಾದ ಸಂಜಯ್ ಪಾಟೀಲ್, ಅರವಿಂದ ಪಾಟೀಲ್ ಮತ್ತಿತರರು ಹಾಜರಿದ್ದರು.

Apr 25, 2023 06:32 PM IST

ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಚಿವ ಡಿಬಿ ಇನಾಮದಾರ ಅಂತ್ಯಕ್ರಿಯೆ - ಸಿಎಂ ಬೊಮ್ಮಾಯಿ

ಬೆಳಗಾವಿ: ಮಾಜಿ ಸಚಿವ ಡಿಬಿ ಇನಾಮದಾರ ಅವರ ಕುಟುಂಬದವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಭೇಟಿಯ ಬಳಿಕ ಮಾಧ್ಯಮದವರಿಗೆ ಮಾತನಾಡಿದ್ದು,  ನಾಳೆ ಸಕಲ ಸರ್ಕಾರಿ ಗೌರವದೊಂದಿಗೆ ಮಾಜಿ ಸಚಿವ ಡಿಬಿ ಇನಾಮದಾರ ಅವರ ಅಂತ್ಯಕ್ರಿಯೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

Apr 25, 2023 04:55 PM IST

ಇಂದಿರಾ ಗಾಂಧಿ ಎಂದಿಗೂ ಜನರ ನಂಬಿಕೆ ಮುರಿಯಲಿಲ್ಲ - ಪ್ರಿಯಾಂಕಾ

ನಿಮಗೆಲ್ಲ ಇಂದಿರಾ ಗಾಂಧಿ ಗೊತ್ತು. ಆಕೆಯ ವಿಶೇಷತೆ ಏನೆಂದರೆ ಆಕೆ ನಿಮ್ಮ ನಂಬಿಕೆಯನ್ನು ಎಂದಿಗೂ ಮುರಿಯಲಿಲ್ಲ. ಇಂದು ನೀವು ನನ್ನ ಮೇಲೆ ನಂಬಿಕೆ ಇಟ್ಟಿದ್ದರೆ ಅದಕ್ಕೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರೇ ಕಾರಣ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

Apr 25, 2023 04:44 PM IST

ಟಿ ನರಸೀಪುರದಲ್ಲಿ ಪ್ರಿಯಾಂಕಾ ಗಾಂಧಿ ಬಿಜೆಪಿಗೆ ಟಾಂಗ್ 

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಟಿ.ನರಸಿಪುರದಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಪ್ರತಿಯೊಬ್ಬರು ನಾವು ಒಳ್ಳೆಯವರು, ಬೇರೆಯವರು ಕೆಟ್ಟವರು, ಅವರು ತಪ್ಪು ಮಾಡಿದ್ದು, ನಾವು ಸರಿಪಡಿಸುತ್ತೇವೆ ಎಂದು ಹೇಳುತ್ತಾರೆ. ನೀವು ಎಲ್ಲರ ಮಾತುಗಳನ್ನು ಆಲಿಸಿ. ಯಾರು ಸತ್ಯ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಿದ್ದಾರೆ ಎಂಬುದು ಗೊತ್ತಾಗಲಿದೆ ಅಂತ ಹೇಳಿದ್ದಾರೆ.

Apr 25, 2023 03:56 PM IST

ಬಿಜೆಪಿಯ ಚುನಾವಣಾ ಪ್ಲಾನ್ ಚೇಂಜ್; ಇಂದು ರಾತ್ರಿ ಹೊಸ ತಂತ್ರಗಳ ಬಗ್ಗೆ ಪರಿಶೀಲನೆ

ಅಮಿತ್ ಶಾ ಅವರು ಚುನಾವಣಾ ವಿಚಾರವಾಗಿ ಕೆಲ‌ವು ಸಲಹೆ ಸೂಚನೆಗಳನ್ನ ನೀಡಿದ್ದಾರೆ. ಪ್ರಧಾನಿಯಿಂದ ಹಿಡಿದು ಪ್ರಮುಖರ ಕಾರ್ಯಕ್ರಮಗಳ ಮರು ಅವಲೋಕನ ಮಾಡಲು ಹೇಳಿದ್ದು, ಕೆಲವು ಕಾರ್ಯಕ್ರಮಗಳನ್ನು ಇಂದು ರಾತ್ರಿ ಪರಿಶೀಲಿಸುವುದಾಗಿ ಸಿಎಂ ಬೊಮ್ಮಾಯಿ ಅವರು ಹುಬ್ಬಳ್ಳಿಯಲ್ಲಿ ತಿಳಿಸಿದ್ದಾರೆ.

Apr 25, 2023 03:52 PM IST

ಅಮಿತ್ ಶಾ, ಪ್ರಿಯಾಂಕಾ ಗಾಂಧಿ ಅವರ ಆಟ ರಾಜ್ಯದಲ್ಲಿ ನಡೆಯಲ್ಲ - ಹೆಚ್ಡಿಕೆ

ಕೇಂದ್ರ ಗೃಹಸಚಿವ ಅಮಿತ್ ಶಾ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಆಟ ರಾಜ್ಯದಲ್ಲಿ ಏನೂ ನಡೆಯಲ್ಲ. ರಾಜ್ಯಕ್ಕೆ ಅವರ ಕೊಡುಗೆ ಏನೂ ಇಲ್ಲಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕೂ ಮುನ್ನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಯ ದರ್ಶನ ಪಡೆದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿಗಿಂತ ನಮ್ಮ ಜೆಡಿಎಸ್ ಹೆಚ್ಚಿನ ಸ್ಥಾನ ಪಡೆಯಲಿದೆ. ಅಮಿತ್ ಶಾಗೆ ರಾಜ್ಯದಲ್ಲಿ ಜನಬೆಂಬಲ ವ್ಯಕ್ತವಾಗುತ್ತಿಲ್ಲ. ಅವರ ಕಾರ್ಯಕ್ರಮಗಳಿಗೆ ಹೆಚ್ಚಿನ ಜನರು ಬರುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಜನಬೆಂಬಲ ಕಳೆದುಕೊಂಡಿದ್ದು, ಈ ಬಾರಿ ಅವರ ಆಟ ನಡೆಯಲ್ಲ ಎಂದಿದ್ದಾರೆ.

Apr 25, 2023 03:01 PM IST

ಸಿದ್ದರಾಮಯ್ಯ ಸುಳ್ಳಿ ಹೇಳಿ ಸಿಕ್ಕಿಹಾಕಿಕೊಂಡಿದ್ದಾರೆ - ಸಿಎಂ ಬೊಮ್ಮಾಯಿ

ಸಿದ್ದರಾಮಯ್ಯ ಅವರಿಗೆ ಚಾಲೆಂಜ್ ಮಾಡಿದ್ದೇನೆ. ನನ್ನ ಮೇಲೆ ಮಾಡಿರುವ ಆರೋಪ ಸಾಬೀತು ಮಾಡಲಿ. ನನ್ನ ಮೇಲೆ ಸುಮ್ಮನೆ ಆರೋಪ ಮಾಡುತ್ತಿರುವುದು ಜನರಿಗೆ ಗೊತ್ತಿದೆ. 

ಸಿದ್ಧರಾಮಯ್ಯ ಅವರ ಮೇಲೆ ಸಾಕಷ್ಟು ಪ್ರಕರಣಗಳಿವೆ. ಸಿದ್ದರಾಮಯ್ಯ ಅವರು ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರ ಮೇಲಿನ ಪ್ರಕರಣಗಳ ಕುರಿತು ಲೋಕಾಯುಕ್ತ ತನಿಖೆಗೆ ಸಹ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ.

Apr 25, 2023 02:52 PM IST

ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಸಿದ್ದರಾಮಯ್ಯ ಪ್ರಚಾರ

ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭೆ ಕ್ಷೇತ್ರದ ಹೂಗಾರ ಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಪಕ್ಷದ ಅಭ್ಯರ್ಥಿ ರಾಜು ಕಾಗೆ ಅವರ ಪರ ಮತ ಯಾಚಿಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಪ್ರಕಾಶ್ ರಾಥೋಡ್, ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಜರಿದ್ದರು.

Apr 25, 2023 04:56 PM IST

ಏಪ್ರಿಲ್‌ 27ರಂದು ಕರ್ನಾಟಕದ 50 ಲಕ್ಷ ಬಿಜೆಪಿ ಕಾರ್ಯಕರ್ತರ ಜತೆ ಪ್ರಧಾನಿ ಮೋದಿ ಸಂವಾದ

- ಕಾರ್ಯಕರ್ತರ ವಿಶ್ವಾಸಗೊಳಿಸಲು ಬಿಜೆಪಿ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.

- ಏಪ್ರಿಲ್‌ 27ರಂದು ಕರ್ನಾಟಕದ 50 ಲಕ್ಷ ಬೂತ್‌ಮಟ್ಟದ ಬಿಜೆಪಿ ಕಾರ್ಯಕರ್ತರ ಜತೆ ಪ್ರಧಾನಿ ನರೇಂದ್ರ ಮೋದಿ ನೇರ ಸಂವಾದ ನಡೆಸಲಿದ್ದಾರೆ.

- ಇದಕ್ಕಾಗಿ ವಿಶೇಷ ಮೊಬೈಲ್‌ ಆಪ್‌ ಸಿದ್ದಪಡಿಸಿದ್ದು, ಅದರ ಲಿಂಕ್‌ ಬಿಡುಗಡೆ ಮಾಡಲಾಗಿದೆ.

- ಡಿಜಿಟಲ್ ತಂತ್ರಜ್ಞಾನದ​ ಮೂಲಕ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ರಾಜ್ಯದ 50 ಲಕ್ಷ ಬೂತ್​​ ಮಟ್ಟದ ಕಾರ್ಯಕರ್ತರ ಜೊತೆ ಸಂವಾದ ನಡೆಯಲಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ.

Apr 25, 2023 02:03 PM IST

ರಾಜು ಕಾಗೆ ಅವರ ಪರ ಮತ ಯಾಚಿಸಿದ ಸಿದ್ದರಾಮಯ್ಯ

ಬೆಳಗಾವಿ ಜಿಲ್ಲೆಯ ಕಾಗವಾಡ ವಿಧಾನಸಭೆ ಕ್ಷೇತ್ರದ ಹೂಗಾರ ಪಟ್ಟಣದಲ್ಲಿ ಇಂದು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಪಕ್ಷದ ಅಭ್ಯರ್ಥಿ ರಾಜು ಕಾಗೆ ಅವರ ಪರ ಮತ ಯಾಚಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಪ್ರಕಾಶ್ ರಾಥೋಡ್, ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹಾಜರಿದ್ದರು.

Apr 25, 2023 01:18 PM IST

ಡಿಕೆಶಿ ಪರವಾಗಿ ಅವರ ಪತ್ನಿ ಉಷಾ ಮತಯಾಚನೆ

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಪರವಾಗಿ ಅವರ ಪತ್ನಿ ಉಷಾ ಅವರು ಕನಕಪುರ ಟೌನ್ ನಲ್ಲಿ ಮಂಗಳವಾರ ಮತ ಯಾಚಿಸಿದರು.

Apr 25, 2023 01:05 PM IST

ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದುಕೊಂಡಿರಲಿಲ್ಲ, ಬಸವರಾಜ ಬೊಮ್ಮಾಯಿ ಹೇಳಿಕೆ

ನಾನು ಒಂದು ದಿನ ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದೇನೆ ಎಂದುಕೊಂಡಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ "ನಾನು ಸಿಎಂ ಆಗುತ್ತೇನೆ ಎಂದುಕೊಂಡಿರಲಿಲ್ಲ. ಅದು ಪಕ್ಷದ ವರಿಷ್ಠರ ನಿರ್ಧಾರ. ಈಗಲೂ ಈ ಕುರಿತು ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಲಿದೆ" ಎಂದರು.

Apr 25, 2023 11:57 AM IST

ಹಾವೇರಿ ಜಿಲ್ಲೆಯ ಹಾನಗಲ್​ ತಾಲೂಕು ಕ್ರೀಡಾಂಗಣದಲ್ಲಿ ಜಗದೀಶ್‌ ಶೆಟ್ಟರ್‌ ಪ್ರಚಾರ

ಹಾವೇರಿ ಜಿಲ್ಲೆಯ ಹಾನಗಲ್​ ತಾಲೂಕು ಕ್ರೀಡಾಂಗಣದಲ್ಲಿ ನಿನ್ನೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಶ್ರೀ ರಾಹುಲ್ ಗಾಂಧಿಯವರ ಜೊತೆ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು, ಮಾತನಾಡಿದ ಕ್ಷಣ.

ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಶಾಲು ಹಾಗೂ ಧ್ವಜಗಳೊಂದಿಗೆ ಮೈದಾನದಲ್ಲಿ ಜಮಾಯಿಸಿದ್ದರು ಎಂದು ಜಗದೀಶ್‌ ಶೆಟ್ಟರ್‌ ಟ್ವೀಟ್‌ ಮಾಡಿದ್ದಾರೆ. 

Apr 25, 2023 11:04 AM IST

ವೈದ್ಯರು 3 ದಿನ ರೆಸ್ಟ್‌ ಮಾಡಿ ಅಂದ್ರೂ ಚುನಾವಣಾ ಪ್ರಚಾರಕ್ಕೆ ಹೊರಟ ಹೆಚ್‌ಡಿ ಕುಮಾರಸ್ವಾಮಿ

ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಡಿಸ್‌ಚಾರ್ಜ್‌ ಆಗಿದ್ದು, ಚುನಾವಣಾ ಪ್ರಚಾರಕ್ಕೆ ತೆರಳಿದ್ದಾರೆ. "ವೈದ್ಯರು ಮೂರು ದಿನ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಆದರೆ ನಾನು ವಿಶ್ರಾಂತಿ ಪಡೆಯುವ ಸ್ಥಿತಿಯಲ್ಲಿ ಇಲ್ಲ, ಕೆಲಸದ ಒತ್ತಡ ಇದೆ. ಇವತ್ತು ಮೈಸೂರಿನ ಕೆ.ಆರ್.ಕ್ಷೇತ್ರ, ಚಾಮರಾಜ,ವರುಣಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತೇನೆ. ಇವತ್ತಿನಿಂದ ಮೇ 8 ರವರೆಗೆ ನಿರಂತರ ಪ್ರಚಾರ ನಡೆಸುತ್ತೇನೆ" ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

"ನನ್ನ ಆರೋಗ್ಯದ ಬಗ್ಗೆ ದೇವೇಗೌಡರಿಗೆ ಸ್ವಲ್ಪ ಆತಂಕ ಇದೆ. ನಿನ್ನೆಯಿಂದ ಮೂರು ಕಡೆ ಬಿಸಿಲಿನಲ್ಲಿ ಶಿರಾ, ಮಧುಗಿರಿ ಕೊರಟಗೆರೆ‌ ಸಭೆಗಳಲ್ಲಿ ಅವರು ಭಾಗಿಯಾಗಿದ್ದಾರೆ. ಇವತ್ತು ಪಿರಿಯಾಪಟ್ಟಣ, ಕೆ.ಆರ್.ನಗರಕ್ಕೆ ಹೊರಟಿದ್ದಾರೆ. 123 ಕ್ಷೇತ್ರಗಳ ಗುರಿ ಮುಟ್ಟಲು ಇಳಿ ವಯಸ್ಸಲ್ಲಿ ಅವರು ಶ್ರಮ ಹಾಕ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

Apr 25, 2023 06:40 AM IST

ಹುಬ್ಬಳ್ಳಿಯಲ್ಲಿ ಶೆಟ್ಟರ್‌ಗೆ ಸೋಲು, ಬಿಜೆಪಿಗೆ ಗೆಲುವು ಖಚಿತ, ಅಮಿತ್‌ ಶಾ ಅಭಿಪ್ರಾಯ

ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಜಗದೀಶ್‌ ಶೆಟ್ಟರ್‌ಗೆ ಹುಬ್ಬಳ್ಳಿಯಲ್ಲಿ ಸೋಲು ಖಚಿತ ಎಂಬ ಅಭಿಪ್ರಾಯವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಜನರು ಯಾವಾಗಲೂ ಬಿಜೆಪಿಗೆ ಮತ ಚಲಾಯಿಸುತ್ತಾರೆ ಎಂದು ಅವರು ಹೇಳಿದ್ದಾರೆ. "ಇಲ್ಲಿ ಸೋಲು ಇಲ್ಲ. ಜಗದೀಶ್‌ ಶೆಟ್ಟರ್‌ಗೆ ಸೋಲಾಗಲಿದೆ. ಹುಬ್ಬಳ್ಳಿ ಜನರು ಯಾವತ್ತಿಗೂ ಬಿಜೆಪಿ ಪರ. ಬಿಜೆಪಿಯ ಎಲ್ಲಾ ಕಾರ್ಯಕರ್ತರು ಒಗಟ್ಟಾಗಿದ್ದೇವೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಶೆಟ್ಟರ್‌ಗೆ ಸೋಲು, ಬಿಜೆಪಿಗೆ ಗೆಲುವು ಖಚಿತ, ಅಮಿತ್‌ ಶಾ ಅಭಿಪ್ರಾಯ’ (PTI)
ಹುಬ್ಬಳ್ಳಿಯಲ್ಲಿ ಶೆಟ್ಟರ್‌ಗೆ ಸೋಲು, ಬಿಜೆಪಿಗೆ ಗೆಲುವು ಖಚಿತ, ಅಮಿತ್‌ ಶಾ ಅಭಿಪ್ರಾಯ’ (PTI) (HT_PRINT)

Apr 25, 2023 06:39 AM IST

ಹುಬ್ಬಳ್ಳಿಯಲ್ಲಿ ಅಮಿತ್‌ ಶಾ, ಪ್ರಹ್ಲಾದ್‌ ಜೋಶಿ ಸಭೆ

ಕರ್ನಾಟಕದಲ್ಲಿ ಬಿಜೆಪಿಯು ಚುನಾವಣಾ ಗೆಲುವಿಗಾಗಿ ಶ್ರಮಿಸುತ್ತಿದ್ದು, ಕೇಂದ್ರದ ನಾಯಕರು ರಾಜ್ಯದತ್ತ ಮುಖ ಮಾಡಿದ್ದಾರೆ. ನಿನ್ನೆ ಅಮಿತ್‌ ಶಾ ಅವರು ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡರ ಜತೆ ಸಭೆ ನಡೆಸಿದ್ದು, ಗೆಲುವಿನ ಹಾದಿಗಾಗಿ ಐಡಿಯಾ ಮಾಡುತ್ತಿದ್ದಾರೆ. ಅಮಿತ್ ಶಾ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಬಿಜೆಪಿಯಿಂದ ಹೊರನಡೆದ ಜಗದೀಶ್‌ ಶೆಟ್ಟರ್‌ ಸೋಲಿಸಿ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ಗೆಲ್ಲಿಸಲು ಮತ್ತು ಜಿಲ್ಲೆಯ ಏಳು ಜಿಲ್ಲೆಗಳಲ್ಲಿ ಗೆಲುವಿಗಾಗಿ ರಣತಂತ್ರ ರೂಪಿಸಲಾಗುತ್ತಿದೆ ಎನ್ನಲಾಗಿದೆ.

Apr 25, 2023 06:38 AM IST

ನಾವು ಯಾವುದೇ ಮುಖ್ಯಮಂತ್ರಿ ಕಣ್ಣಲ್ಲಿ ನೀರು ಹಾಕಿಸಿಲ್ಲ: ಡಿಕೆ ಶಿವಕುಮಾರ್‌

‘ಬಿಜೆಪಿ ಪಕ್ಷದಂತೆ ಕಾಂಗ್ರೆಸ್ ಯಾವುದೇ ಲಿಂಗಾಯತ ನಾಯಕ ಹಾಗೂ ಮುಖ್ಯಮಂತ್ರಿ ಕಣ್ಣಲ್ಲಿ ನೀರು ಹಾಕಿಸಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಲಿಂಗಾಯತ ಮುಖ್ಯಮಂತ್ರಿಗಳಿಗೆ ತಮ್ಮ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಿಲ್ಲ ಎಂಬ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಯಾಗಿ ಡಿಕೆಶಿ ಪ್ರತಿಕ್ರಿಯೆ ನೀಡಿದ್ದಾರೆ.

Apr 25, 2023 06:38 AM IST

ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಸವಣೂರಿನಲ್ಲಿ ಬೊಮ್ಮಾಯಿ ರೋಡ್ ಶೋ

ಒಂದು ವರ್ಷದೊಳಗೆ ಕ್ಷೇತ್ರದ ಎಲ್ಲಾ 27 ವಾರ್ಡ್ ಗಳಿಗೆ 24/7 ನೀರು ಸಿಗುವಂತೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಿಮ್ಮೆಲ್ಲರ ಆಶೀರ್ವಾದದಿಂದ ಈ ಕ್ಷೇತ್ರದ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಕಳೆದ 15 ವರ್ಷದಲ್ಲಿ ಇಲ್ಲಿ ಆಗಿರುವ ಅಭಿವೃದ್ಧಿ ನೋಡಿದ್ದೀರಿ. 6-7 ವರ್ಷಗಳಲ್ಲಿ ಮೋತಿ ತಾಲಾಬ್ ಕೆರೆ ಸಹಿತ 120 ಕೆರೆಗಳಿಗೆ ನೀರು ತುಂಬಿಸಲಾಗಿದೆ. ಮೋತಿ ತಾಲಾಬ್ ಕೆರೆ ಅಭಿವೃದ್ಧಿಗೆ ಕಾಂಗ್ರೆಸ್ ಇದ್ದಾಗ ಹೋರಾಟ ಮಾಡಿದ್ದೆವು. ಕೆರೆಯಲ್ಲಿ ಗೋಲಿ, ಚಿನ್ನಿದಾಂಡು ಆಡುತ್ತಿದ್ದರು. ಈಗ ಏತ ನೀರಾವರಿಗೆ ಬಳಕೆ ಆಗ್ತಿದೆ. ಶಿಗ್ಗಾಂವ್ ಸವಣೂರು ರಸ್ತೆ ಸೇರಿದಂತೆ ಹಲವಾರು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ರೀತಿಯಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

Apr 25, 2023 06:38 AM IST

ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಕಾಂಗ್ರೆಸ್‌ ಸಮಾವೇಶ

ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ಇಂದು ಆಯೋಜಿಸಿದ್ದ ಕಾಂಗ್ರೆಸ್ ಬೃಹತ್ ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ ಅವರು ಭಾಗವಹಿಸಿ ಪಕ್ಷದ ಅಭ್ಯರ್ಥಿ ವಿಶ್ವಾಸ್ ವೈದ್ಯ ಅವರ ಪರ ಮತ ಯಾಚಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಶಾಸಕರಾದ ಪ್ರಕಾಶ್ ರಾಥೋಡ್, ಲಕ್ಷ್ಮಿ ಹೆಬ್ಬಾಳಕರ್, ಮಹಂತೇಶ ಕೌಜಲಗಿ ಹಾಜರಿದ್ದರು.

Apr 25, 2023 06:37 AM IST

ಪಕ್ಷಗಳ ಬಲಾಬಲ

ಕರ್ನಾಟಕದಲ್ಲಿ ಹಾಲಿ ಅಸ್ತಿತ್ವದಲ್ಲಿರುವ 15ನೇ ವಿಧಾನಸಭೆಯ ಅವಧಿ ಮೇ 23ಕ್ಕೆ ಕೊನೆಯಾಗಿದೆ. ಪ್ರಸ್ತುತ ಬಿಜೆಪಿ 119, ಕಾಂಗ್ರೆಸ್ 75, ಜೆಡಿಎಸ್‌ 28 ಶಾಸಕ ಬಲ ಹೊಂದಿವೆ. ಬಿಜೆಪಿಯ ಉಮೇಶ್ ಕತ್ತಿ ಹಾಗೂ ಆನಂದ್ ಮಾಮನಿ ನಿಧನರಾದ ಹಿನ್ನೆಲೆಯಲ್ಲಿ 2 ಸ್ಥಾನಗಳು ಖಾಲಿಯಿವೆ. ಈ ಸ್ಥಾನಗಳಿಗೆ ಉಪ ಚುನಾವಣೆ ನಡೆದಿರಲಿಲ್ಲ.

Apr 25, 2023 06:37 AM IST

5.24 ಕೋಟಿ ಮತದಾರರು

ಕರ್ನಾಟಕದಲ್ಲಿ ಈ ಬಾರಿ 5.24 ಕೋಟಿ ಮತದಾರರು ಮತಚಲಾಯಿಸಲಿದ್ದಾರೆ. ಈ ಪೈಕಿ 2.63 ಕೋಟಿ ಪುರುಷರು ಮತ್ತು 2.60 ಕೋಟಿ ಮಹಿಳೆಯರು. 100 ವರ್ಷ ದಾಟಿರುವ 16,976 ಮತದಾರರಿದ್ದರೆ, 18ರಿಂದ 19 ವರ್ಷದ ಯುವ ಮತದಾರರ ಸಂಖ್ಯೆ 9.58 ಲಕ್ಷ. 80 ವರ್ಷ ದಾಟಿದವರ ಸಂಖ್ಯೆಯೂ (12.15 ಲಕ್ಷ) ಗಣನೀಯ ಪ್ರಮಾಣದಲ್ಲಿದೆ.

Apr 25, 2023 06:37 AM IST

ಬೇಕಾಬಿಟ್ಟಿ ವೆಚ್ಚಕ್ಕೆ ಕಡಿವಾಣ

ಕರ್ನಾಟಕದಲ್ಲಿ ಹಾಲಿ ಅಸ್ತಿತ್ವದಲ್ಲಿರುವ 15ನೇ ವಿಧಾನಸಭೆಯ ಅವಧಿ ಮೇ 23ಕ್ಕೆ ಕೊನೆಯಾಗಿದೆ. ಪ್ರಸ್ತುತ ಬಿಜೆಪಿ 119, ಕಾಂಗ್ರೆಸ್ 75, ಜೆಡಿಎಸ್‌ 28 ಶಾಸಕ ಬಲ ಹೊಂದಿವೆ. ಬಿಜೆಪಿಯ ಉಮೇಶ್ ಕತ್ತಿ ಹಾಗೂ ಆನಂದ್ ಮಾಮನಿ ನಿಧನರಾದ ಹಿನ್ನೆಲೆಯಲ್ಲಿ 2 ಸ್ಥಾನಗಳು ಖಾಲಿಯಿವೆ. ಈ ಸ್ಥಾನಗಳಿಗೆ ಉಪ ಚುನಾವಣೆ ನಡೆದಿರಲಿಲ್ಲ.

    ಹಂಚಿಕೊಳ್ಳಲು ಲೇಖನಗಳು