Pregnant Women: ಗರ್ಭಾವಸ್ಥೆಯಲ್ಲಿ ಕಾಡದಿರಲಿ ನಿರ್ಜಲೀಕರಣ ಸಮಸ್ಯೆ; ಭ್ರೂಣದ ಬೆಳವಣಿಗೆಗೂ ಬೇಕು ಸಾಕಷ್ಟು ನೀರು
May 23, 2023 05:23 PM IST
ಗರ್ಭಿಣಿಯರು ಸಾಕಷ್ಟು ನೀರು ಕುಡಿಯುವುದು ಅವಶ್ಯ
- ಗರ್ಭಾವಸ್ಥೆಯಲ್ಲಿ ನಿರ್ಜಲೀಕರಣವು ಹಲವಾರು ತೊಡಕುಗಳಿಗೆ ಕಾರಣವಾಗಬಹುದು. ಇದರಿಂದ ತಲೆನೋವು, ಆಯಾಸ, ಪ್ರಸವಪೂರ್ವ ಹೆರಿಗೆ ಮತ್ತು ಅಮ್ನಿಯೋಟಿಕ್ ದ್ರವದ ಕೊರತೆ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಆ ಕಾರಣದಿಂದ ಸಾಕಷ್ಟು ನೀರು ಕುಡಿಯುವುದು ಬಹಳ ಅವಶ್ಯ. ಇದು ಭ್ರೂಣ ಬೆಳವಣಿಗೆಗೂ ಸಹಕಾರಿ.
ಮಾನವ ದೇಹಕ್ಕೆ ನೀರು ಅತ್ಯವಶ್ಯ. ದೈಹಿಕ ಸಂಯೋಜನೆ ಹಾಗೂ ವ್ಯವಸ್ಥೆಗಳ ಸುಗಮ ಕಾರ್ಯನಿರ್ವಹಣೆಯಲ್ಲಿ ನೀರು ನಿರ್ಣಾಯಕ ಪಾತ್ರ ವಹಿಸುತ್ತದೆ. ಆ ಕಾರಣದಿಂದ ತಜ್ಞರು ಯಾವಾಗಲೂ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು ಎಂಬುದನ್ನು ಒತ್ತಿ ಹೇಳುತ್ತಾರೆ. ಇದು ಗರ್ಭಿಣಿ ಮಹಿಳೆಯರಿಗೂ ಭಿನ್ನವಾಗಿರುವುದಿಲ್ಲ. ಇದು ಕೇವಲ ಅವರೊಬ್ಬರಿಗೆ ಸಂಬಂಧಿಸಿದ್ದಲ್ಲ, ಅವರ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಹೊಸ ಜೀವಕ್ಕೂ ನೀರು ಬಹಳ ಅವಶ್ಯ. ಹೊಟ್ಟೆಯಲ್ಲಿರುವ ಮಗುವಿನ ಬೆಳವಣಿಗೆಗೂ ನೀರು ಬಹಳ ಅವಶ್ಯ.
ಗರ್ಭಾವಸ್ಥೆಯಲ್ಲಿ ನಿರ್ಜಲೀಕರಣವು ಹಲವಾರು ತೊಡಕುಗಳಿಗೆ ಕಾರಣವಾಗಬಹುದು. ಇದರಿಂದ ತಲೆನೋವು, ಆಯಾಸ, ಪ್ರಸವಪೂರ್ವ ಹೆರಿಗೆ ಮತ್ತು ಅಮ್ನಿಯೋಟಿಕ್ ದ್ರವದ ಕೊರತೆ ಸೇರಿದಂತೆ ಇನ್ನೂ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು.
ಗರ್ಭ ಧರಿಸಿರುವ ತಾಯಂದಿರು ಹೆಚ್ಚು ಹೆಚ್ಚು ನೀರು ಕುಡಿಯಬೇಕು ಎಂಬುದನ್ನು ಒತ್ತಿ ಹೇಳುವ ವೈಜ್ಞಾನಿಕ ಅಂಶಗಳು ಹೀಗಿವೆ.
ಗರ್ಭಾವಸ್ಥೆಯಲ್ಲಿ ಸಾಕಷ್ಟು ಪ್ರಮಾಣದ ನೀರನ್ನು ಕುಡಿಯುವುದರಿಂದ ಆರು ವೈಜ್ಞಾನಿಕ ಪ್ರಯೋಜನಗಳು
ಸ್ತ್ರೀರೋಗ ತಜ್ಞೆ ಡಾ. ರಮ್ಯಾ ಕಬಿಲನ್ ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಭ್ರೂಣದ ಸೂಕ್ತ ಬೆಳವಣಿಗೆ: ಗರ್ಭಾವಸ್ಥೆಯಲ್ಲಿ ಸಾಕಷ್ಟು ನೀರು ಕುಡಿಯುವುದು ಭ್ರೂಣದ ಅಸರ್ಮಪಕ ಬೆಳವಣಿಗೆಗೆ ಅತ್ಯಗತ್ಯ. ನೀರು ಆಮ್ನಿಯೋಟಿಕ್ ದ್ರವದ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ಇದು ಮಗುವಿಗೆ ರಕ್ಷಣಾತ್ಮಕ ಕುಶನ್ ರೀತಿ ಕಾರ್ಯನಿರ್ವಹಿಸುತ್ತದೆ. ಮಗುವಿನ ಚಲನೆ ಹಾಗೂ ಆರೋಗ್ಯಕರ ವಾತಾವರಣದಲ್ಲಿ ಬೆಳೆಯಲು ಇದು ಸಹಾಯ ಮಾಡುತ್ತದೆ.
ನಿರ್ಜಲೀಕರಣ ಸಂಬಂಧಿತ ತೊಂದರೆಗಳನ್ನು ತಡೆಯುತ್ತದೆ: ಗರ್ಭಾವಸ್ಥೆಯಲ್ಲಿ ನಿರ್ಜಲೀಕರಣವು ಪ್ರಸವಪೂರ್ವ ಹೆರಿಗೆ, ನರ ಕೊಳವೆ ದೋಷಗಳು, ಕಡಿಮೆ ಆಮ್ನಿಯೋಟಿಕ್ ದ್ರವದ ಮಟ್ಟಗಳು ಮತ್ತು ಗರ್ಭನಾಳಗಳಲ್ಲಿ ರಕ್ತದ ಹರಿವು ಕಡಿಮೆಯಾಗುವಂತಹ ತೊಡಕುಗಳಿಗೆ ಕಾರಣವಾಗಬಹುದು. ಸಾಕಷ್ಟು ನೀರಿನ ಸೇವನೆಯು ನಿರ್ಜಲೀಕರಣವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಈ ತೊಡಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಪೋಷಕಾಂಶಗಳನ್ನು ಹೀರಿಕೊಳ್ಳಲು ಹಾಗೂ ತ್ಯಾಜ್ಯ ನಿರ್ಮೂಲನೆ: ಬೆಳವಣಿಗೆ ಹೊಂದುತ್ತಿರುವ ಮಗುವಿಗೆ ಪೋಷಕಾಂಶವು ಬಹಳ ಅವಶ್ಯ. ಪೋಷಕಾಂಶಗಳ ಜೀರ್ಣಕ್ರಿಯೆ, ಹೀರಿಕೊಳ್ಳುವಿಕೆ ಮತ್ತು ಸಾಗಣೆಯಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಇದು ತಾಯಿ ಮತ್ತು ಮಗುವಿನ ದೇಹದಿಂದ ತ್ಯಾಜ್ಯ ಉತ್ಪನ್ನಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
ದೇಹದ ಉಷ್ಣತೆಯನ್ನು ನಿಯಂತ್ರಿಸಲು: ಕುಡಿಯುವ ನೀರು ದೇಹದ ಉಷ್ಣತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಮತ್ತು ದೇಹ ಬಿಸಿಯಾಗುವ ಅಪಾಯವನ್ನು ತಡೆಯುತ್ತದೆ.
ಮಲಬದ್ಧತೆ ಮತ್ತು ಮೂತ್ರದ ಸೋಂಕು ತಡೆಯಲು: ಗರ್ಭಿಣಿಯರ ದೇಹಕ್ಕೆ ಸಾಕಷ್ಟು ನೀರು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಮೂತ್ರಕೋಶದಿಂದ ಬ್ಯಾಕ್ಟೀರಿಯಾವನ್ನು ಹೊರ ಹಾಕಲು ನೀರು ಕುಡಿಯುವುದು ಅವಶ್ಯ. ಗರ್ಭಾವಸ್ಥೆಯಲ್ಲಿ ಹೆಚ್ಚು ಸಾಮಾನ್ಯವಾಗಿರುವ ಯುಟಿಐಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಅವಧಿಪೂರ್ವ ಜನನದ ಅಪಾಯವನ್ನು ಕಡಿಮೆ ಮಾಡುತ್ತದೆ: ನಿರ್ಜಲೀಕರಣವು ಪ್ರಸವಪೂರ್ವ ಹೆರಿಗೆಯ ಅಪಾಯವನ್ನು ಹೆಚ್ಚಿಸುತ್ತದೆ. ಹೈಡ್ರೇಟೆಡ್ ಆಗಿರುವುದು ಗರ್ಭಾಶಯದ ಸಂಕೋಚನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವಧಿಪೂರ್ವ ಜನನದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ, ಇದು ಮಗುವಿಗೆ ದೀರ್ಘಾವಧಿಯ ಆರೋಗ್ಯದ ಪರಿಣಾಮಗಳನ್ನು ಉಂಟುಮಾಡಬಹುದು.
ಗರ್ಭಾವಸ್ಥೆಯಲ್ಲಿ ಹೈಡ್ರೇಟ್ ಆಗಿರಲು ಹೀಗೆ ಮಾಡಿ
* ದಿನದಲ್ಲಿ ಕನಿಷ್ಠ 8 ರಿಂದ 10 ಲೋಟ ನೀರು ಕುಡಿಯುವುದು ಅವಶ್ಯ. ಆದರೆ ಇದು ವೈಯಕ್ತಿಕ ಆರೋಗ್ಯ, ದೈಹಿಕ ಚಟುವಟಿಕೆಯ ಮಟ್ಟ ಹಾಗೂ ಹವಾಮಾನವನ್ನು ಅವಲಂಬಿಸಿ ಬದಲಾಗಬಹುದು.
* ದೇಹದಲ್ಲಿ ಕೇವಲ ನೀರಿನಿಂದ ಮಾತ್ರ ದ್ರವ ಸಂಗ್ರಹವಾಗುವುದಿಲ್ಲ. ಹಣ್ಣು, ತರಕಾರಿಗಳು ಹಾಗೂ ಸೂಪ್‌ಗಳಂತಹ ದ್ರವಾಹಾರದಿಂದಲೂ ದೇಹದಲ್ಲಿ ಸಾಕಷ್ಟು ನೀರಿನಾಂಶ ಸಂಗ್ರಹವಾಗುತ್ತದೆ.
* ಕೆಫಿನ್ ಸೇವನೆಯನ್ನು ಮಿತಿಗೊಳಿಸಬೇಕು. ಇದು ಮೂತ್ರವರ್ಧನೆಯನ್ನು ಹೆಚ್ಚಿಸುತ್ತದೆ. ಇದು ಸಂಭಾವ್ಯವಾಗಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು.
* ಸಕ್ಕರೆ ಅಂಶ ಇರುವ ಪಾನೀಯಗಳನ್ನು ತ್ಯಜಿಸುವುದು ಅವಶ್ಯ. ಇದರಿಂದ ಬಾಯಾರಿಕೆ ಕಡಿಮೆಯಾಗಬಹುದು. ಅಲ್ಲದೆ ಒಟ್ಟಾರೆ ಆರೋಗ್ಯಕ್ಕೂ ಇದು ಒಳ್ಳೆಯದಲ್ಲ. ತೂಕ ಹೆಚ್ಚಲು, ಸಕ್ಕರೆದಲ್ಲಿ ಸಕ್ಕರೆಯ ಮಟ್ಟ ಹೆಚ್ಚಲು ಇದು ಕಾರಣವಾಗಬಹುದು.
* ಗರ್ಭಾವಸ್ಥೆಯಲ್ಲಿ ಬಾಯಿ ರುಚಿಸದೇ ಇರುವ ಕಾರಣ ನೀರು ಸಹ್ಯವಾಗದೇ ಇರಬಹುದು. ಆ ಕಾರಣಕ್ಕೆ ಅದರ ಬದಲು ನಿಂಬೆರಸ, ಸೌತೆಕಾಯಿ ಅಥವಾ ಪುದಿನ ಸೇರಿಸಿದ ಪಾನೀಯ ಕುಡಿಯಬಹುದು.
ವಿಭಾಗ