ಇಂದು ಮತ್ತೆ 49 ಸಂಸದರು ಅಮಾನತು; ಒಟ್ಟು 141 ವಿಪಕ್ಷ ಎಂಪಿಗಳು ಚಳಿಗಾಲದ ಸಂಸತ್ ಕಲಾಪಕ್ಕೆ ಬರುವಂತಿಲ್ಲ
Dec 19, 2023 02:33 PM IST
ಸಂಸತ್ ಕಲಾಪದಿಂದ ಅಮಾತನಾಗಿರುವ ವಿಪಕ್ಷದ ಸಂಸದರು ಪ್ರತಿಭಟನೆ ನಡೆಸಿದ್ದಾರೆ.
ಸಂಸತ್ ಚಳಿಗಾಲದ ಅಧಿವೇಶನದಿಂದ ಇಂದು ಮತ್ತೆ 49 ವಿರೋಧ ಪಕ್ಷದ ಸದಸ್ಯರನ್ನು ಅಮಾನತು ಮಾಡಲಾಗಿದೆ. ಒಟ್ಟು ಅಮಾನತಾದವರ ಸಂಖ್ಯೆ 141ಕ್ಕೆ ಏರಿಕೆಯಾಗಿದೆ.
ದೆಹಲಿ: ದುರ್ನಡೆತೆಯ ಗಂಭೀರ ಆರೋಪದ ಮೇಲೆ ಸಂಸತ್ತಿನ ಚಳಿಗಾಲದ ಅಧಿವೇಶನದಿಂದ ಮತ್ತೆ ವಿರೋಧ ಪಕ್ಷಗಳ 49 ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿದೆ. ಈವರೆಗೆ ಒಟ್ಟು 141 ಸದಸ್ಯರನ್ನು ಅಮಾನತುಗೊಳಿಸಿದಂತಾಗಿದೆ. ಈ ಸದಸ್ಯರು ಚಳಿಗಾಳಿಲದ ಅಧಿವೇಶನದ ಉಳಿದ ಅವಧಿಗೆ ಹಾಜರಾಗುವಂತಿಲ್ಲ.
ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಮನೀಸ್ ತಿವಾರಿ, ಕಾರ್ತಿ ಚಿದಂಬರಂ, ಎನ್‌ಸಿಪಿ ನಾಯಕಿ ಸುಪ್ರಿಯಾ ಸುಳೆ, ಸಮಾಜವಾದಿ ಪಕ್ಷದ ಡಿಂಪಲ್ ಯಾದವ್ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅಮಾನತಾಗಿರುವ ಪ್ರಮುಖ ಸಂಸದರು. ವಿರೋಧ ಪಕ್ಷದ ಸದಸ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸದನದಲ್ಲಿ ಘೋಷಣೆಗಳನ್ನು ಕೂಗಿ ಫಲಕಗಳನ್ನು ಪ್ರದರ್ಶಿಸಿದರು. ಈ ವೇಳೆ ಸದನವನ್ನು ಮುಂದೂಡಲಾಯಿತು. ಬಳಿಕ ಕಲಾಪ ಸಮಾವೇಶಗೊಂಡಾಗ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಸದನದಲ್ಲಿ ಪ್ರತಿಭಟನೆ ನಡೆಸಿ ಫಲಕಗಳನ್ನು ಪ್ರದರ್ಶಿಸಿದ ಸದಸ್ಯರನ್ನು ಅಮಾನತುಗೊಳಿಸುವ ಪ್ರಸ್ತಾಪವನ್ನು ತಂದರು.
ಕಳೆದ ಕೆಲ ದಿನಗಳ ಹಿಂದೆ ಸಂಸತ್ತಿನ ಭದ್ರತೆಯನ್ನು ಉಲ್ಲಂಘಿಸಿ ಇಬ್ಬರು ವ್ಯಕ್ತಿಗಳು ಸದನಕ್ಕೆ ನುಗ್ಗಿ ಹೊಗೆ ಬಾಂಬ್ ಸಿಡಿಸಿದ ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಹೇಳಿಕೆ ಹಾಗೂ ಭದ್ರತೆ ಉಲ್ಲಂಘನೆ ಸಂಬಂಧ ಚರ್ಚೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು. ಅಧಿವೇಶನ ಆರಂಭವಾಗಿನಿಂದ ಈವರೆಗೆ 141 ಸದಸ್ಯರನ್ನು ಅಮಾನತು ಮಾಡಲಾಗಿದೆ. ಚಳಿಗಾಲದ ಅಧಿವೇಶನದ ಮುಗಿಯುವವರೆಗೆ ಅಮಾನತಾಗಿರುವ ಸದಸ್ಯರು ಲೋಕಸಭೆ ಹಾಗೂ ರಾಜ್ಯಸಭೆಗಳಿಗೆ ಹಾಜರಾಗುವಂತಿಲ್ಲ.
‘ಲೋಕಸಭೆಗೆ ನುಗ್ಗಿದವರಿಗೆ ಅನುಕೂಲ ಮಾಡಿಕೊಟ್ಟವರನ್ನ ಹೊಗಳುತ್ತಿದ್ದಾರೆ’
ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನ ಉಸ್ತುವಾರಿ ಜೈರಾಮ್ ರಮೇಶ್, ಯಾವುದೇ ರೀತಿಯ ಅರ್ಥಪೂರ್ಣ ಚರ್ಚೆಯಿಲ್ಲದೆ ಕಠಿಣ ಮಸೂದೆಗಳನ್ನು ಅಂಗೀಕರಿಸಲಾಗುತ್ತಿದೆ. ಲೋಕಸಭೆಯೊಳಕ್ಕೆ ನುಗ್ಗುವವರಿಗೆ ಅನುಕೂಲ ಮಾಡಿಕೊಟ್ಟ ಬಿಜೆಪಿ ಸಂಸದಸರನ್ನು ಹೋಗಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸ ಸಂಸಸತ್ತು ಅದರಲ್ಲಿ ಎಲ್ಲಾ ದಬ್ಬಾಳಿಕೆಯಲ್ಲಿ ನ್ಯಾಮೋಕ್ರಸಿಯನ್ನು ಪ್ರತಿಬಿಂದಿಸುತ್ತದೆ ಎಂದು ಜೈರಾಮಾ ರಮೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಹೊಸ ಕ್ರಿಮಿನಲ್ ಕೋಡ್ ಬಿಲ್‌ಗಳನ್ನು ಅಂಗೀಕರಿಸಲು ಸರ್ಕಾರ ತುಂಬಾ ಉತ್ಸಕವಾಗಿದೆ. ಇಂದು (ಡಿಸೆಂಬರ್ 19, ಮಂಗಳವಾರ) ಅಥವಾ ನಾಳೆ (ಡಿಸೆಂಬರ್ 20, ಬುಧವಾರ) ಈ ಬಿಲ್‌ಗಳನ್ನು ಅಂಗೀಕರಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
‘ಅದಾನಿ ಅವರ ಮುಂದಿನ ಷೇರುದಾರರ ಸಭೆ ಲೋಕಸಭೆ ಚೇಂಬರಲ್ಲಿ ನಡೆಯುತ್ತೆ’
ಕಾಸಿಗಾಗಿ ಪ್ರಶ್ನೆ ಪ್ರಕರಣದಲ್ಲಿ ಈಗಾಗಲೇ ಸಂಸತ್ ಕಲಾಪದಿಂದ ಅಮಾನತುಗೊಂಡಿರುವ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಅದಾನಿ ಅವರು ಮುಂದಿನ ಷೇರುದಾರರ ವಾರ್ಷಿಕ ಸಭೆ ಲೋಕಸಭೆಯ ಚೇಂಬರ್‌ನಲ್ಲಿ ನಡೆಯಲಿದೆ ಎಂದು ಪೋಸ್ಟ್ ಮಾಡಿದ್ದಾರೆ.
‘ಸಂಸತ್ತಿನಲ್ಲಿ ಕೊಳಕು ರಾಜಕೀಯವನ್ನು ಜನ ನೋಡುತ್ತಿದ್ದಾರೆ’
ಸತ್ಯವನ್ನು ಮಾತನಾಡುವ ಮತ್ತು ಪ್ರಶ್ನೆ ಕೇಳುವವರನ್ನು ಇಂದು ಸದನದಿಂದ ಅಮಾತನುಗೊಳಿಸಲಾಗಿದೆ. ಸಂಸತ್ತಿನಲ್ಲಿ ನಡೆಯುತ್ತಿರುವ ಕೊಳಕು ರಾಜಕೀಯವನ್ನು ಸಾರ್ವಜನಿಕರು ನೋಡುತ್ತಿದ್ದಾರೆ ಎಂದು ಎಎಪಿಯ ಸಂಸದ ಸುಶೀಲ್ ಕುಮಾರ್ ರಿಂಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.