logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Repo Rate: ರೆಪೋ ದರದಲ್ಲಿ ಬದಲಾವಣೆ ಇಲ್ಲ, ಬ್ಯಾಂಕ್ ಬಡ್ಡಿದರವೂ ಬದಲಾಗಲ್ಲ, ಆರ್‌ಬಿಐ ಸಭೆಯ 5 ಮುಖ್ಯ ಅಂಶಗಳ ವಿವರ

Repo Rate: ರೆಪೋ ದರದಲ್ಲಿ ಬದಲಾವಣೆ ಇಲ್ಲ, ಬ್ಯಾಂಕ್ ಬಡ್ಡಿದರವೂ ಬದಲಾಗಲ್ಲ, ಆರ್‌ಬಿಐ ಸಭೆಯ 5 ಮುಖ್ಯ ಅಂಶಗಳ ವಿವರ

Umesh Kumar S HT Kannada

Oct 06, 2023 12:24 PM IST

google News

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್

  • ಭಾರತೀಯ ರಿಸರ್ವ್ ಬ್ಯಾಂಕ್ ಸತತ ನಾಲ್ಕನೇ ಸಲ ರೆಪೋ ದರವನ್ನು ಶೇಕಡ 6.5ರಲ್ಲೇ ಸ್ಥಿರವಾಗಿಟ್ಟುಕೊಂಡಿದೆ. ಇಂದು ನಡೆದ ಆರ್‌ಬಿಐ ವಿತ್ತೀಯ ನೀತಿ ಸಭೆಯ ಬಳಿಕ ಈ ವಿಚಾರವನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸ್ಪಷ್ಟಪಡಿಸಿದರು. ಈ ಸಭೆಯ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ (PTI)

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರೆಪೋ ದರವನ್ನು ಶೇಕಡಾ 6.5 ರಲ್ಲೇ ಯಥಾಸ್ಥಿತಿಯಲ್ಲಿ ಇರಿಸಿದೆ. ಅದೇ ರೀತಿ ನೀತಿಯ ನಿಲುವಿನ ವಿಚಾರದಲ್ಲೂ ಯಥಾಸ್ಥಿತಿಯನ್ನೇ ಕಾಯ್ದುಕೊಂಡಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ಇಂದು (ಅ.6) ಘೋಷಿಸಿದರು.

ವಿತ್ತೀಯ ನೀತಿಗೆ ಸಂಬಂಧಿಸಿದಂತೆ, ಆರ್‌ಬಿಐನ ವಿತ್ತೀಯ ನೀತಿ ಸಮಿತಿಯ 6 ಸದಸ್ಯರ ಪೈಕಿ 5 ಸದಸ್ಯರು ವಿತ್ತೀಯ ನೀತಿ ಸ್ಥಿರವಾಗಿ ಇಟ್ಟುಕೊಳ್ಳುವುದಕ್ಕೆ ವಿತ್‌ ಡ್ರಾವಲ್ ಆಫ್ ಅಕಮೊಡೇಶನ್‌ ಪರವಾದ ನಿಲುವು ವ್ಯಕ್ತಪಡಿಸಿದರು. ಹಣದುಬ್ಬರವನ್ನು 4 ಪ್ರತಿಶತ ಗುರಿಯಲ್ಲಿ ಹೊಂದಿಸುವುದರ ಕಡೆಗೆ ವಿತ್ತೀಯ ನೀತಿಯು ಗಮನಹರಿಸಿದೆ ಎಂದು ಶಕ್ತಿಕಾಂತ್ ದಾಸ್‌ ಎಂಪಿಸಿ ಸಭೆಯ ಬಳಿಕ ಘೋಷಿಸಿದರು.

ಆರ್‌ಬಿಐ ವಿತ್ತೀಯ ನೀತಿ ಘೋಷಣೆಯಾಗುತ್ತಿರಬೇಕಾದರೆ ಭಾರತದ ಷೇರುಪೇಟೆ ಸೂಚ್ಯಂಕಗಳಾದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ ನಿಫ್ಟಿಗಳು ಧನಾತ್ಮಕವಾಗಿ ಮುಂದುವರಿದವು. ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕಗಳು ಸುಮಾರು 0.3 ಶೇಕಡಾವನ್ನು ಗಳಿಸಿದವು ಮತ್ತು ಇಂದಿನ ವಹಿವಾಟಿನಲ್ಲಿ ಹೆಚ್ಚಿನ ವಲಯಗಳು ಲಾಭ ಗಳಿಸಿದವು.

ರೆಪೋ ದರದ ವಿಚಾರವಾಗಿ ವಿಶ್ಲೇಷಕರ ನಿರೀಕ್ಷೆ ಹೀಗಿತ್ತು

ಆರ್‌ಬಿಐನ ಹಣಕಾಸು ನೀತಿಯು ವಿಶಾಲವಾಗಿ "ವಿತ್‌ಡ್ರಾವಲ್ ಆಫ್ ಅಕಮೊಡೇಶನ್‌" ಮೇಲೆ ಕೇಂದ್ರೀಕೃತವಾಗಿದೆ ಎಂದು ಗವರ್ನರ್ ಹೇಳಿದರು. ವಿತ್‌ಡ್ರಾವಲ್ ಆಫ್ ಅಕಮೊಡೇಶನ್‌ ಅಂದರೆ ಹಣದುಬ್ಬರದ ಒತ್ತಡವನ್ನು ನಿಯಂತ್ರಿಸಲು ಆರ್ಥಿಕತೆಯಲ್ಲಿ ಹಣದ ಪೂರೈಕೆಯನ್ನು ನಿಗ್ರಹಿಸುವುದರ ಕಡೆಗೆ ಆರ್‌ಬಿಐ ಗಮನಹರಿಸುತ್ತದೆ ಎಂದು ಅರ್ಥ.'

ಎಂಪಿಸಿ ಸಭೆಯ ಕೊನೆಯಲ್ಲಿ ಆರ್‌ಬಿಐ ತನ್ನ ಪ್ರಮುಖ ರೆಪೊ ದರವನ್ನು 6.5 ಪ್ರತಿಶತದಲ್ಲಿ ಬದಲಾಯಿಸದೆ ಹಾಗೆಯೇ ಮುಂದುವರಿಸುತ್ತದೆ ಎಂದು ಬಹುಪಾಲು ವಿಶ್ಲೇಷಕರು ಅಂದಾಜಿಸಿದ್ದರು. ಕೆಲವರು ಮಾತ್ರ 25 ಮೂಲ ಅಂಕಗಳ (bps) ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದರು. ಷೇರುಪೇಟೆ ವಿಶ್ಲೇಷಕರು ಸಹ ಆರ್‌ಬಿಐ ತನ್ನ ನಿಲುವನ್ನು 'ವಿತ್‌ಡ್ರಾವಲ್ ಅಫ್ ಅಕಮೊಡೇಶನ್‌' ಮೂಲಕ ಬದಲಾಯಿಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ.

ಆದಾಗ್ಯೂ, ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆಯಲ್ಲಿನ ಇತ್ತೀಚಿನ ಏರಿಕೆಯು ಮುಂಬರುವ ತ್ರೈಮಾಸಿಕಗಳಲ್ಲಿ ಭಾರತದ ಹಣದುಬ್ಬರ ಪ್ರಕ್ಷೇಪಗಳ ಮೇಲೆ ಎಂಪಿಸಿಯ ಗಮನವನ್ನು ಕೇಂದ್ರೀಕರಿಸುವ ಸಾಧ್ಯತೆಯಿದೆ.

ಸತತ ನಾಲ್ಕನೇ ಅವಧಿಗೆ ರೆಪೋ ದರ ಸ್ಥಿರ

ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಫೆಬ್ರವರಿಯಿಂದ ರೆಪೋ ದರ ಶೇಕಡ 6.5ರಲ್ಲೇ ಸ್ಥಿರವಾಗಿ ಮುಂದುವರಿಯುವಂತೆ ನೋಡಿಕೊಂಡಿದೆ. ಅದಕ್ಕೂ ಮೊದಲು ಕೋವಿಡ್ 19 ಸಾಂಕ್ರಾಮಿಕ ರೋಗದ ಸನ್ನಿವೇಶ, ರಷ್ಯಾ - ಉಕ್ರೇನ್ ಯಿದ್ಧದ ಬಳಿಕ 2022ರ ಮೇ ತಿಂಗಳಿಂದ ಸತತ ಐದು ಸಲ 250 ಮೂಲ ಅಂಕಗಳನ್ನು ರೆಪೋದರದಲ್ಲಿ ಏರಿಸಿತ್ತು. ಆರ್‌ಬಿಐಯ ಪ್ರಾಥಮಿಕ ಗುರಿ ಹಣದುಬ್ಬರವನ್ನು ತಗ್ಗಿಸುವುದು. ಆದರೆ ಅದು ಭಾರತದ ಆರ್ಥಿಕ ಬೆಳವಣಿಗೆಯನ್ನು ಹಾನಿ ಮಾಡಲು ಬಯಸುವುದಿಲ್ಲ ಎಂಬುದು ಸ್ಪಷ್ಟ.

ಜುಲೈನಲ್ಲಿ ದೇಶೀಯ ಹಣದುಬ್ಬರವು ಶೇಕಡ 7.4 ಕ್ಕೆ ಏರಿತ್ತು. ಆಗಸ್ಟ್ ತಿಂಗಳು ಶೇಕಡಾ 6.8 ಕ್ಕೆ ಇಳಿಯಿತು ಮತ್ತು ಬಹುಶಃ ಡಿಸೆಂಬರ್ ವೇಳೆಗೆ ಶೇಕಡ 5.5 ಕ್ಕೆ ಇಳಿಯಬಹುದು ಎಂದು ತಜ್ಞರು ಗಮನಸೆಳೆದಿದ್ದಾರೆ. ಆದಾಗ್ಯೂ, ಶೇಕಡ 4ರಲ್ಲಿ ಹಣದುಬ್ಬರವನ್ನು ನಿಲ್ಲಿಸುವ ಗುರಿಯೊಂದಿಗೆ ಆರ್‌ಬಿಐ ಪ್ರಯತ್ನ ಮುಂದುವರಿದಿದೆ.

ಆರ್‌ಬಿಐ ಎಂಪಿಸಿ ಸಭೆಯ ಫಲಿತಾಂಶದ 5 ಪ್ರಮುಖ ಅಂಶಗಳು

ದರಗಳು ಮತ್ತು ನೀತಿಯ ನಿಲುವಿನ ಮೇಲೆ ಯಥಾಸ್ಥಿತಿ

ಆರ್‌ಬಿಐ ನೀತಿ ದರಗಳು ಮತ್ತು ಅದರ ಹಣಕಾಸು ನೀತಿಯ ನಿಲುವಿನ ಮೇಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್‌ಬಿಐ ರೆಪೊ ದರವನ್ನು ಶೇ 6.5 ಕ್ಕೆ ಸ್ಥಿರವಾಗಿಟ್ಟುಕೊಂಡು ಮತ್ತು "ವಿತ್‌ಡ್ರಾವೆಲ್ ಆಫ್ ಅಕಮೊಡೇಶನ್‌" ಎಂಬ ನಿಲುವನ್ನು ಸ್ಪಷ್ಟಪಡಿಸಿದೆ.

ವಿತ್ತೀಯ ನೀತಿ ಸಮಿತಿಯು ಅವಿರೋಧವಾಗಿ ಪಾಲಿಸಿ ರೆಪೋ ದರವನ್ನು ಶೇ.6.50ರಲ್ಲೇ ಇರಿಸಲು ನಿರ್ಧರಿಸಿದೆ. ಪರಿಣಾಮವಾಗಿ, ಸ್ಥಾಯಿ ಠೇವಣಿ ಸೌಲಭ್ಯ (SDF) ದರವು 6.25 ಪ್ರತಿಶತ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (MSF) ದರ ಮತ್ತು ಬ್ಯಾಂಕ್ ದರವು 6.75 ಪ್ರತಿಶತದಲ್ಲಿ ಉಳಿಯುತ್ತದೆ.

ಹಣದುಬ್ಬರದ ವಿರುದ್ಧ ಹೋರಾಟ ಮುಂದುವರಿಕೆ

ಹಣದುಬ್ಬರದ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಸೆಂಟ್ರಲ್ ಬ್ಯಾಂಕ್ ಹಣದುಬ್ಬರವನ್ನು ಶೇಕಡಾ 4 ರ ಮಿತಿಗೆ ತರಲು ಪ್ರಯತ್ನಿಸುತ್ತಿದೆ ಮತ್ತು ಇದು ಶೇಕಡಾ 2-6 ರ ನಡುವೆ ಅಲ್ಲ ಎಂಬುದನ್ನು ಆರ್‌ಬಿಐ ಗವರ್ನರ್ ಒತ್ತಿ ಹೇಳಿದರು.

ಹಣಕಾಸು ವರ್ಷ 24 ರ ಇತ್ತೀಚಿನ ಸಿಪಿಐ ಹಣದುಬ್ಬರ ಪ್ರಕ್ಷೇಪಣವು ಶೇಕಡ 5.4, ಎರಡನೇ ತ್ರೈಮಾಸಿಕದಲ್ಲಿ ಶೇಕಡ 6.4, ಮೂರನೇ ತ್ರೈಮಾಸಿಕದಲ್ಲಿ ಶೇಕಡ 5.6 ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 5.2 ಮತ್ತು ಹಣಕಾಸು ವರ್ಷ 2025ರ ಮೊದಲ ತ್ರೈಮಾಸಿಕದಲ್ಲಿ ಸಿಪಿಯ ಹಣದುಬ್ಬರ ಶೇಕಡ 5.2 ಎಂದು ಅಂದಾಜಿಸಲಾಗಿದೆ.

ಬೆಳವಣಿಗೆಯ ಮುನ್ಸೂಚನೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ಹಣಕಾಸು ವರ್ಷ 2024ರ ಜಿಡಿಪಿ ಬೆಳವಣಿಗೆ ಮುನ್ಸೂಚನೆ ಶೇಕಡ 6.5 ಕ್ಕೆ ಸ್ಥಿರವಾಗಿ ಇಟ್ಟುಕೊಳ್ಳಲಾಗಿದೆ. ಎರಡನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಮುನ್ಸೂಚನೆ ಶೇಕಡ 6.5, ಮೂರನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಮುನ್ಸೂಚನೆಯು ಶೇಕಡ 6, ನಾಲ್ಕನೇ ತ್ರೈಮಾಸಿಕದ ಜಿಡಿಪಿ ಬೆಳವಣಿಗೆ ಮುನ್ಸೂಚನೆಯು ಶೇಕಡ 5.7 ಮತ್ತು ಹಣಕಾಸು ವರ್ಷ 2025ರ ಮೊದಲ ತ್ರೈಮಾಸಿಕದ ಬೆಳವಣಿಗೆ ಮುನ್ಸೂಚನೆಯು ಶೇಕಡ 6.6ರಲ್ಲಿ ಬದಲಾವಣೆ ಮಾಡದೇ ಭಾರತೀಯ ರಿಸರ್ವ್‌ ಬ್ಯಾಂಕ್‌ ಇರಿಸಿಕೊಂಡಿದೆ.

ಗವರ್ನಮೆಂಟ್ ಸೆಕ್ಯುರಿಟೀಸ್ ಮಾರಾಟಕ್ಕೆ ಚಿಂತನೆ

ವಿತ್ತೀಯ ನೀತಿಯ ನಿಲುವಿಗೆ ಅನುಗುಣವಾಗಿ ಆರ್ಥಿಕ ನಿರ್ವಹಣೆಗಾಗಿ ಗವರ್ನಮೆಂಟ್ ಸೆಕ್ಯುರಿಟೀಸ್‌ ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಮಾರಾಟವನ್ನು ಪರಿಗಣಿಸಬಹುದು ಎಂದು ದಾಸ್ ಹೇಳಿದರು.

ಕಾರ್ಡ್‌ ಆನ್ ಫೈಲ್‌ ಟೋಕನೈಸೇಷನ್‌ಗೆ ಹೊಸ ದಾರಿಗಳು

ಕಾರ್ಡ್-ಆನ್-ಫೈಲ್ ಟೋಕನೈಸೇಶನ್ (CoFT) ರಚನೆ ಸೌಲಭ್ಯಗಳನ್ನು ನೇರವಾಗಿ ವಿತರಕರ ಬ್ಯಾಂಕ್ ಮಟ್ಟದಲ್ಲಿ ಪರಿಚಯಿಸುವ ವಿಷಯವನ್ನು ದಾಸ್ ಪ್ರಸ್ತಾಪಿಸಿದರು.

"ಈ ಕ್ರಮವು ಕಾರ್ಡುದಾರರಿಗೆ ವಿವಿಧ ಇ-ಕಾಮರ್ಸ್ ಅಪ್ಲಿಕೇಶನ್‌ಗಳೊಂದಿಗೆ ಟೋಕನ್‌ಗಳನ್ನು ರಚಿಸಲು ಮತ್ತು ಅವರ ಅಸ್ತಿತ್ವದಲ್ಲಿರುವ ಖಾತೆಗಳಿಗೆ ಲಿಂಕ್ ಮಾಡಲು ಹೆಚ್ಚಿನ ಅನುಕೂಲ ಮಾಡಿಕೊಡುತ್ತದೆ" ಎಂದು ಶಕ್ತಿಕಾಂತ ದಾಸ್ ಹೇಳಿದರು.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ