logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Jio Anniversary: ಜಿಯೋಗೆ 7ನೇ ಅನಿವರ್ಸರಿ, ಗ್ರಾಹಕರಿಗೆ ಬಂಪರ್‌ ಕೊಡುಗೆ, ದೇಶದಲ್ಲಿ ಜಿಯೋ ಮಾಡಿದ 7 ಮೋಡಿ ಹೀಗಿದೆ ನೋಡಿ

Jio Anniversary: ಜಿಯೋಗೆ 7ನೇ ಅನಿವರ್ಸರಿ, ಗ್ರಾಹಕರಿಗೆ ಬಂಪರ್‌ ಕೊಡುಗೆ, ದೇಶದಲ್ಲಿ ಜಿಯೋ ಮಾಡಿದ 7 ಮೋಡಿ ಹೀಗಿದೆ ನೋಡಿ

HT Kannada Desk HT Kannada

Sep 05, 2023 04:47 PM IST

ದೇಶದಲ್ಲಿ ಜಿಯೋ ಮಾಡಿದ 7 ಮೋಡಿ ಹೀಗಿದೆ ನೋಡಿ

    • Reliance Jio 7th anniversary offers: ರಿಲಯೆನ್ಸ್‌ ಜಿಯೋಗೆ ಏಳು ವರ್ಷದ ಸಂಭ್ರಮ. ಈ ಸಮಯದಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಒಂದಿಷ್ಟು ಹೊಸ ಫೀಚರ್‌ಗಳನ್ನು, ಬದಲಾವಣೆಗಳನ್ನು ರಿಲಯೆನ್ಸ್‌ ಘೋಷಿಸಿದೆ. ರಿಲಯೆನ್ಸ್‌ ಜಿಯೋದಲ್ಲಿ ಆಗಿರುವ ಪ್ರಮುಖ ಏಳು ಬದಲಾವಣೆಗಳ ವಿವರ ಇಲ್ಲಿದೆ.
ದೇಶದಲ್ಲಿ ಜಿಯೋ ಮಾಡಿದ 7 ಮೋಡಿ ಹೀಗಿದೆ ನೋಡಿ
ದೇಶದಲ್ಲಿ ಜಿಯೋ ಮಾಡಿದ 7 ಮೋಡಿ ಹೀಗಿದೆ ನೋಡಿ (Bloomberg)

ಬೆಂಗಳೂರು: ಸೆಪ್ಟೆಂಬರ್‌ 5 ಅಂದರೆ ಇಂದು ರಿಲಯೆನ್ಸ್‌ ಜಿಯೋಗೆ ಏಳು ವರ್ಷದ ವಾರ್ಷಿಕೋತ್ಸವದ ಸಂಭ್ರಮ. ಏಳು ವರ್ಷದ ಹಿಂದೆ ಲಯನ್ಸ್ ಮಾಲೀಕ ಮುಕೇಶ್ ಅಂಬಾನಿ ಜಿಯೋ ಪ್ರಾರಂಭಿಸಿದ್ದರು. "ಕಳೆದ 7 ವರ್ಷಗಳಲ್ಲಿ ಜಿಯೋದಿಂದಾಗಿ ದೇಶದಲ್ಲಿ ಸಾಕಷ್ಟು ಬದಲಾಗಿದೆ. ಇದು ಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುತ್ತಿದೆ. ಈ ಏಳು ವರ್ಷಗಳಲ್ಲಿ ಜಿಯೋ ಬೀರಿದ 7 ಪರಿಣಾಮಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇದು ಬಳಕೆದಾರರಿಗೂ ಗೊತ್ತಿದೆ ಹಾಗೂ ಅನುಭವಕ್ಕೂ ಬಂದಿದೆ" ಎಂದು ರಿಲಯೆನ್ಸ್‌ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಅದರ ಪ್ರಕಾರ ಆ ಏಳು ಬದಲಾವಣೆ ಈ ಮುಂದಿನಂತೆ ಇದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

1) ಉಚಿತ ಹೊರಹೋಗುವ ಕರೆಗಳು

ಸೆಪ್ಟೆಂಬರ್ 5 , 2016ರಂದು ಬಿಡುಗಡೆಯಾದ ಮೊದಲ ದಿನ ರಿಲಯನ್ಸ್ ಜಿಯೋ ದೇಶದಲ್ಲಿ ದುಬಾರಿ ಆಗಿದ್ದ ಹೊರಹೋಗುವ ಕರೆಗಳ (ಔಟ್ ಗೋಯಿಂಗ್ ಕಾಲ್) ಯುಗವನ್ನು ಕೊನೆಗೊಳಿಸಿತು. ಹೊರಹೋಗುವ ಕರೆಗಳನ್ನು ಉಚಿತ ಮಾಡಿದ ಭಾರತದ ಮೊದಲ ಕಂಪನಿ ರಿಲಯನ್ಸ್ ಜಿಯೋ. ಇದು ಇಂದಿಗೂ ಮುಂದುವರಿದಿದೆ.

2) ಕಡಿಮೆಯಾದ ಡೇಟಾ ಮತ್ತು ಮೊಬೈಲ್ ಬಿಲ್‌ಗಳು

ಮೊಬೈಲ್ ಡೇಟಾದ ಬೆಲೆಗಳು ಮುಂಚೆ ಎಷ್ಟಿದ್ದವು ಅನ್ನೋದು ನೆನಪಿದೆಯಾ? ಏಳು ವರ್ಷ ಆಗಿಹೋಗಿದೆಯಲ್ಲಾ ಅದಕ್ಕೆ ಈ ಪ್ರಶ್ನೆ ಅಷ್ಟೇ. ಆಗ ಬಳಕೆದಾರರು ಪಾವತಿ ಮಾಡುತ್ತಿದ್ದದ್ದು ಪ್ರತಿ ಜಿಬಿಗೆ ಸುಮಾರು 255 ರೂಪಾಯಿ. ಜಿಯೋ ಡೇಟಾ ಬೆಲೆಗಳನ್ನು ಬಹಳಷ್ಟು ಕಡಿಮೆ ಮಾಡಿದೆ. ಡೇಟಾವು ಪ್ರತಿ ಜಿಬಿಗೆ 10 ರೂಪಾಯಿಗಿಂತಲೂ ಕಡಿಮೆ ದರಕ್ಕೆ ಲಭ್ಯವಾಯಿತು. ಉಚಿತ ಕರೆ ಮತ್ತು ಕಡಿಮೆ ಡೇಟಾ ಬೆಲೆಗಳಿಂದಾಗಿ, ಮೊಬೈಲ್ ಬಿಲ್‌ಗಳು ಗಮನಾರ್ಹವಾಗಿ ಕಡಿಮೆಯಾಗಿದೆ. ಡೇಟಾ ಬಳಕೆಯಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ - ಡೇಟಾ ಬೆಲೆಗಳಲ್ಲಿನ ಕಡಿತವು ಡೇಟಾ ಬಳಕೆಯ ಮೇಲೆ ನೇರ ಪರಿಣಾಮ ಬೀರಿತು. ಜಿಯೋ ಬರುವ ಮೊದಲು, ಡೇಟಾ ಬಳಕೆ ವಿಷಯದಲ್ಲಿ ಭಾರತವು ವಿಶ್ವದಲ್ಲಿ 155ನೇ ಸ್ಥಾನದಲ್ಲಿತ್ತು. ಮತ್ತು ಇಂದು ಭಾರತವು ಮೊದಲ ಎರಡರಲ್ಲಿದೆ. ಈಗ ಜಿಯೋ ನೆಟ್‌ವರ್ಕ್‌ನಲ್ಲಿ ಪ್ರತಿ ತಿಂಗಳು 1,100 ಕೋಟಿ ಜಿಬಿ ಡೇಟಾವನ್ನು ಬಳಸಲಾಗುತ್ತಿದೆ. ಜಿಯೋ ಗ್ರಾಹಕರು ತಿಂಗಳಿಗೆ ಸರಾಸರಿ 25 ಜಿಬಿ ಡೇಟಾವನ್ನು ಬಳಸುತ್ತಾರೆ. ಇದು ಟೆಲಿಕಾಂ ಉದ್ಯಮದಲ್ಲಿ ಅತಿ ಹೆಚ್ಚು ಎನಿಸಿಕೊಂಡಿದೆ.

3) ಮೊಬೈಲ್‌ನ ಸಣ್ಣ ಪರದೆಯಲ್ಲಿ ಸಂಪೂರ್ಣ ಶಾಪ್‌

ಜಿಯೋ ಕಾರಣದಿಂದಾಗಿ ಡೇಟಾ ಅಗ್ಗವಾಯಿತು ಮತ್ತು ಜಗತ್ತು ಕೇವಲ ಮೊಬೈಲ್ ನಲ್ಲೇ ಸಿಕ್ಕಿಹೋಯಿತು. ಈಗ ಮನರಂಜನೆಯ ವ್ಯಾಖ್ಯಾನವೇ ಬದಲಾಗಿದೆ. ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ಮನರಂಜನೆಯು ಕೇವಲ ಒಂದು ಕ್ಲಿಕ್ ಅಷ್ಟೇ ದೂರ. ರೈಲು, ವಿಮಾನ, ಸಿನಿಮಾ ಹೀಗೆ ಎಲ್ಲದರ ಟಿಕೆಟ್‌ಗಳು ಆನ್‌ಲೈನ್‌ನಲ್ಲಿ ಬುಕ್ ಆಗತೊಡಗಿದವು. ಹೋಟೆಲ್ ಬುಕಿಂಗ್ ಮತ್ತು ಆಹಾರ ಸೈಟ್‌ಗಳು ಮತ್ತು ಅಪ್ಲಿಕೇಷನ್‌ಗಳು ಹೊಸ ಎತ್ತರ ಕಾಣಲು ಆರಂಭವಾದವು. ಪ್ರವಾಸೋದ್ಯಮ ಅಭಿವೃದ್ಧಿ ಕಂಡಿದೆ. ಇ-ಕಾಮರ್ಸ್ ಕಂಪನಿಗಳು ಇಡೀ ಅಂಗಡಿಯನ್ನು ಮೊಬೈಲ್‌ಗೆ ತಂದಿವೆ. ಆನ್‌ಲೈನ್ ತರಗತಿ ಮತ್ತು ಕಚೇರಿ- ಕೋವಿಡ್‌ನ ಕೆಟ್ಟ ದಿನಗಳನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳುತ್ತಾರೆ. ಶಿಕ್ಷಣ ಮತ್ತು ಕಚೇರಿ ಮನೆಯಿಂದಲೇ ನಡೆದವು, ಇಂದಿಗೂ ನಡೆಯುತ್ತಿವೆ. ಗಂಟೆಗಟ್ಟಲೆ ಇಂಟರ್ ನೆಟ್ ಬಳಸಲಾಗುತ್ತಿತ್ತು. ಕೈಗೆಟುಕುವ ಬೆಲೆಯಲ್ಲಿ ಡೇಟಾ ಸಿಗದಿದ್ದರೆ ಇದು ಸಾಧ್ಯವಿತ್ತಾ?! ಜಿಯೋ ಬಿಡುಗಡೆಯ ಮೊದಲಿನ ಡೇಟಾ ದರಗಳು ಅಂದರೆ ಪ್ರತಿ ಜಿಬಿಗೆ 255 ರೂಪಾಯಿ ಇದ್ದಿದ್ದರೆ ಆಗ ಏನಾಗುತ್ತಿತ್ತು ಎಂದು ಊಹಿಸಿ.

4) ಡಿಜಿಟಲ್ ಪಾವತಿ

ಎಲ್ಲ ಕಡೆಗೆ ಹಣ ಹಿಡಿದುಕೊಂಡೇ ಹೋಗಬೇಕು, ನಗದು ಇರದಿದ್ದರೆ ಆಗಲ್ಲ ಎಂಬ ಸ್ಥಿತಿ ಈಗಿಲ್ಲ. ಭಾರತ ಸರ್ಕಾರದ ಯುಪಿಐ ಓಪನ್ ಡಿಜಿಟಲ್ ಪಾವತಿ ವ್ಯವಸ್ಥೆಯು ಎಲ್ಲವನ್ನೂ ಬದಲಾಯಿಸಿದೆ. ದೊಡ್ಡ ಮತ್ತು ಸಣ್ಣ ಬ್ಯಾಂಕ್‌ಗಳು, ಪೇಟಿಎಂ (Paytm) ಮತ್ತು PhonePe (ಫೋನ್ ಪೇ)ನಂತಹ ವ್ಯಾಲೆಟ್ ಕಂಪನಿಗಳು ಸೇರಿದಂತೆ ಹಣಕಾಸು ದೈತ್ಯ ಕಂಪನಿಗಳು ಈ ಉಪಕ್ರಮದಲ್ಲಿ ಸೇರಿಕೊಂಡವು. ಪ್ರತಿ ಮೊಬೈಲ್‌ನಲ್ಲಿ ಪಾವತಿ ವ್ಯವಸ್ಥೆಯ ಮೂಲಕ ಹಣದ ವಹಿವಾಟು ನಡೆಸುವುದು ಇದರ ಉದ್ದೇಶವಾಗಿತ್ತು. ಇಂದು ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಫೈವ್ ಸ್ಟಾರ್ ಹೋಟೆಲ್‌ಗಳವರೆಗೆ ಇದನ್ನು ಬಳಸಲಾಗುತ್ತಿದೆ. ಜಿಯೋ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳ ಡಿಜಿಟಲ್ ಮೂಲಸೌಕರ್ಯಗಳು ಇದರ ನೆರವಿಗೆ ಬಂದವು. ಆದರೆ ಯುಪಿಐ ಯಶಸ್ಸಿನ ಶ್ರೇಯವು, ಹೆಚ್ಚಿನ ಪ್ರಮಾಣದಲ್ಲಿ ಡೇಟಾದ ದರ ಕಡಿಮೆ ಆಗಿರುವುದಕ್ಕೇ ಹೋಗುತ್ತದೆ. ಇದು ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಬಳಸಲು ಸಾಮಾನ್ಯ ಭಾರತೀಯರನ್ನು ಉತ್ತೇಜಿಸಿತು. ಜಿಯೋ ಪ್ರಾರಂಭದೊಂದಿಗೆ ಡೇಟಾ ದರಗಳು 25 ಪಟ್ಟು ಕಡಿಮೆಯಾಗಿದೆ.

5) 2ಜಿ ಯಿಂದ 4ಜಿಗೆ

ಜಿಯೋ ಆರಂಭವಾದ ಮರು ವರ್ಷದಲ್ಲಿ, ಅಂದರೆ 2017ರಲ್ಲಿ, ಕಂಪನಿಯು ಮಾರುಕಟ್ಟೆಯಲ್ಲಿ ಜಿಯೋ ಫೋನ್ ಅನ್ನು ಬಿಡುಗಡೆ ಮಾಡಿತು. 2ಜಿ ಗ್ರಾಹಕರನ್ನು 4ಜಿಗೆ ಬದಲಾಯಿಸುವುದು ಇದರ ಉದ್ದೇಶವಾಗಿತ್ತು. ಇದರಿಂದ ಅವರೂ ಡಿಜಿಟಲ್ ಆರ್ಥಿಕತೆಯ ಭಾಗವಾಗಬಲ್ಲರು. 13 ಕೋಟಿಗೂ ಹೆಚ್ಚು ಜಿಯೋಫೋನ್ ಮೊಬೈಲ್‌ಗಳು ಮಾರಾಟವಾಗಿವೆ. ಇದು ಯಾವುದೇ ಒಂದೇ ದೇಶದಲ್ಲಿ ಯಾವುದೇ ಒಂದೇ ಮಾದರಿಗಿಂತ ಹೆಚ್ಚು ಮಾರಾಟವಾದ ಮೊಬೈಲ್ ಆಗಿತ್ತು. ಅದರ ಮುಂದುವರಿದ ಭಾಗವಾಗಿ, ಕಂಪನಿಯು 2ಜಿ ಗ್ರಾಹಕರನ್ನು 4ಜಿ ಗೆ ಕರೆತರಲು ಜಿಯೋಭಾರತ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ. ಜಿಯೋ ಜೊತೆಗೆ ಕಾರ್ಬನ್ ಎಂಬ ಕಂಪನಿಯು 'ಭಾರತ್' ಎಂಬ 4ಜಿ ಫೀಚರ್ ಫೋನ್ ಅನ್ನು ತಯಾರಿಸುತ್ತಿದೆ. ಶೀಘ್ರದಲ್ಲೇ ಇನ್ನೂ ಕೆಲವು ಕಂಪನಿಗಳು ಈ ಅಭಿಯಾನಕ್ಕೆ ಸೇರುವ ನಿರೀಕ್ಷೆಯಿದೆ.

6) ಕಡಿಮೆಯಾದ ಡಿಜಿಟಲ್ ವಿಭಜನೆ

ಮೊದಲು ಶ್ರೀಮಂತರು ಮಾತ್ರ ಡೇಟಾವನ್ನು ಬಳಸಬಹುದಾಗಿತ್ತು, ಅದಕ್ಕೆ ಕಾರಣ ಏನೆಂದರೆ ದುಬಾರಿ ಡೇಟಾ ಬೆಲೆಗಳು. ಶ್ರೀಮಂತ ಮತ್ತು ಬಡವರ ನಡುವಿನ ಈ ಅಂತರವನ್ನು ಜಿಯೋ ಕಡಿಮೆ ಮಾಡಿದೆ. ಈಗ ಪ್ರತಿಯೊಬ್ಬರೂ ಸುಲಭವಾಗಿ ಡೇಟಾವನ್ನು ಬಳಸಬಹುದು. 4ಜಿ ತಂತ್ರಜ್ಞಾನವು ನಗರಗಳನ್ನು ಮೀರಿ ಹಳ್ಳಿಗಳನ್ನು ತಲುಪಿತು. ಅದರ ಪರಿಣಾಮ ಈಗ ನಗರವಾಸಿಗಳಂತೆ ಹಳ್ಳಿಗರಿಗೂ ಪ್ರತಿಯೊಂದು ಡಿಜಿಟಲ್ ಸೌಲಭ್ಯ ಲಭ್ಯವಾಗಿದೆ. ಜನ್-ಧನ್ ಖಾತೆಗಳನ್ನು ನಿರ್ವಹಿಸುವುದು, ಸರ್ಕಾರಿ ಯೋಜನೆಗಳಲ್ಲಿ ನೋಂದಾಯಿಸುವುದು ಅಥವಾ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಶಾಪಿಂಗ್ ಮಾಡುವುದು, ಈಗ ಪ್ರತಿಯೊಂದು ರೀತಿಯ ಡಿಜಿಟಲ್ ಕೆಲಸಗಳನ್ನು ಹಳ್ಳಿಯಲ್ಲಿ ಕುಳಿತು ಸಹ ಸುಲಭವಾಗಿ ಮಾಡಬಹುದು.

7) ಯುನಿಕಾರ್ನ್ ಮಹಾಪೂರ

1 ಶತಕೋಟಿ ಡಾಲರ್‌ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಸ್ಟಾರ್ಟ್ಅಪ್ ಗಳನ್ನು ಯುನಿಕಾರ್ನ್ ಎಂದು ಕರೆಯಲಾಗುತ್ತದೆ. ಜಿಯೋ ಮಾರುಕಟ್ಟೆಗೆ ಲಗ್ಗೆ ಇಡುವ ಮೊದಲು ದೇಶದಲ್ಲಿ ಕೇವಲ 4-5 ಯುನಿಕಾರ್ನ್‌ಗಳು ಇದ್ದವು ಈಗ 108 ಯುನಿಕಾರ್ನ್‌ಗಳಿಗೆ ಏರಿಕೆಯಾಗಿದೆ. ಇವುಗಳಲ್ಲಿ ಹೆಚ್ಚಿನವು ಡಿಜಿಟಲ್ ಆರ್ಥಿಕತೆಯ ಭಾಗವಾಗಿದೆ, ಇದರ ಬೆನ್ನೆಲುಬು ರಿಲಯನ್ಸ್ ಜಿಯೋ. ಇಂದು ಭಾರತೀಯ ಯುನಿಕಾರ್ನ್‌ಗಳ ಒಟ್ಟು ಮೌಲ್ಯ 28 ಲಕ್ಷ ಕೋಟಿ ರೂಪಾಯಿ. ಝೊಮ್ಯಾಟೊ ಸಂಸ್ಥಾಪಕ, ದೀಪೇಂದ್ರ ಗೋಯಲ್ ಅಥವಾ ನೆಟ್‌ಫ್ಲಿಕ್ಸ್‌ನ ಸಿಇಒ ಆದ ರೀಡ್ ಹೇಸ್ಟಿಂಗ್ಸ್ ಎಲ್ಲರೂ ಭಾರತದಲ್ಲಿ ಅದರ ಬೆಳವಣಿಗೆಗೆ ಜಿಯೋ ಕೊಡುಗೆಯನ್ನು ಮುಕ್ತವಾಗಿ ಶ್ಲಾಘಿಸುತ್ತಾರೆ. ಭಾರತೀಯ ಡಿಜಿಟಲ್ ಆರ್ಥಿಕತೆಯು ಶೀಘ್ರದಲ್ಲೇ 1 ಟ್ರಿಲಿಯನ್ ಡಾಲರ್‌ ಗುರುತನ್ನು ಮುಟ್ಟುತ್ತದೆ ಎಂದು ಭಾರತೀಯ ಅರ್ಥಶಾಸ್ತ್ರಜ್ಞರು ನಿರೀಕ್ಷಿಸುತ್ತಿದ್ದಾರೆ.

ಭವಿಷ್ಯದ ಮಾರ್ಗಸೂಚಿ ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂದರೆ ಕೃತಕ ಬುದ್ಧಿಮತ್ತೆ. ಇತ್ತೀಚೆಗೆ ಮುಕೇಶ್ ಅಂಬಾನಿ ಅವರು ಎಲ್ಲ ಭಾರತೀಯರಿಗೆ ಕೃತಕ ಬುದ್ಧಿಮತ್ತೆಯನ್ನು ಶೀಘ್ರದಲ್ಲೇ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಡೇಟಾದಂತೆಯೇ ಪ್ರತಿ ಭಾರತೀಯರಿಗೂ ಕೃತಕ ಬುದ್ಧಿಮತ್ತೆಯ ಹಕ್ಕಿದೆ ಎಂದು ಅಂಬಾನಿ ನಂಬಿದ್ದಾರೆ. ಈ ತಂತ್ರಜ್ಞಾನವು ಅದರ ಪ್ರಾಮುಖ್ಯತೆಯ ಒಂದು ನೋಟವನ್ನು ಪ್ರದರ್ಶಿಸುವುದಕ್ಕೆ ಪ್ರಾರಂಭಿಸಿದೆ. 5ಜಿ ವೇಗದಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸವಾರಿ ಮಾಡುವುದು ಸಾಮಾನ್ಯ ಭಾರತೀಯನ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಜಿಯೋ ಏಳನೇ ವಾರ್ಷಿಕೋತ್ಸವಕ್ಕೆ ವಿಶೇಷ ಪ್ಲ್ಯಾನ್ ಗಳು

ರಿಲಯನ್ಸ್ ಜಿಯೋದ ಏಳನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಹೆಚ್ಚಿನ ಡೇಟಾ, ವಿಶೇಷ ವೋಚರ್ ಗಳ ಪ್ಲ್ಯಾನ್ ಘೋಷಣೆ ಮಾಡಿದೆ. ಅದು 299 ರೂಪಾಯಿ, 749 ರೂಪಾಯಿ, ಮತ್ತು 2,999 ರೂಪಾಯಿಯ ಪ್ರೀಪೇಯ್ಡ್ ಪ್ಲ್ಯಾನ್ ಗಳಾಗಿವೆ.

ಜಿಯೋ ರೂ. 299 ಪ್ರೀಪೇಯ್ಡ್ ಪ್ಲಾನ್ ನಲ್ಲಿ ಪ್ರತಿ ದಿನ 2ಜಿಬಿ ಡೇಟಾ, ಅನಿಯಮಿತ ವಾಯ್ಸ್ ಕಾಲ್ಸ್ (ಧ್ವನಿ ಕರೆಗಳು) ಮತ್ತು ದಿನಕ್ಕೆ 100 ಎಸ್‌ಎಂಎಸ್‌ ನೀಡುತ್ತದೆ. ಇದು 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಇದೀಗ ಸೀಮಿತ ಅವಧಿಯ ಕೊಡುಗೆ ಅಡಿಯಲ್ಲಿ ಜಿಯೋದಿಂದ 7ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ.

ಜಿಯೋ ರೂ. 749 ಪ್ರೀಪೇಯ್ಡ್ ಯೋಜನೆಯು ಪ್ರತಿ ದಿನ 2ಜಿಬಿ ಡೇಟಾ, ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿ ದಿನ 100 ಎಸ್ಸೆಮ್ಮೆಸ್ ನೀಡುತ್ತದೆ. ಇದು 90 ದಿನಗಳ ವ್ಯಾಲಿಡಿಟಿ ಹೊಂದಿರುತ್ತದೆ ಮತ್ತು ಸೀಮಿತ ಅವಧಿಯ ಕೊಡುಗೆಯಾಗಿ 14ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ.

ಜಿಯೋ ರೂ. 2,999 ಪ್ರೀಪೇಯ್ಡ್ ಪ್ಲಾನ್ ದಿನಕ್ಕೆ 2.5GB, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ಸೆಮ್ಮೆಸ್ ನೀಡುತ್ತದೆ. ಇದರ ವ್ಯಾಲಿಡಿಟಿ 365 ದಿನಗಳು. ಸೀಮಿತ ಅವಧಿ ಕೊಡುಗೆ ಅಡಿಯಲ್ಲಿ ಜಿಯೋದಿಂದ 21ಜಿಬಿ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ; ಅಜಿಯೋ ಮೇಲೆ ರೂ. 200 ರಿಯಾಯಿತಿ; ನೆಟ್ ಮೆಡ್ಸ್ (Netmeds) ಮೇಲೆ ಶೇ 20ರಷ್ಟು ರಿಯಾಯಿತಿ; ಸ್ವಿಗ್ಗಿ (Swiggy) ಮೇಲೆ ಶೇ 100ರಷ್ಟು ರಿಯಾಯಿತಿ; ರೂ. 149 ಮತ್ತು ಅದಕ್ಕಿಂತ ಹೆಚ್ಚಿನ ಖರೀದಿಗೆ ಉಚಿತ ಮೆಕ್‌ಡೊನಾಲ್ಡ್ ಮೀಲ್ಸ್; ರಿಲಯನ್ಸ್ ಡಿಜಿಟಲ್ ಮೇಲೆ ಶೇ 10ರಷ್ಟು ರಿಯಾಯಿತಿ; ಮತ್ತು ಯಾತ್ರಾದೊಂದಿಗೆ ವಿಮಾನಗಳಲ್ಲಿ ರೂ. 1,500 ವರೆಗೆ ಮತ್ತು ಹೋಟೆಲ್‌ಗಳಲ್ಲಿ ಶೇ 15ರಷ್ಟು ರಿಯಾಯಿತಿ ದೊರೆಯುತ್ತದೆ.

(ರಿಲಯೆನ್ಸ್‌ ಪತ್ರಿಕಾ ಪ್ರಕಟಣೆ ಆಧರಿತ ಬರಹ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ