Chiness Loan Apps: ಆ್ಯಪ್ ಸಾಲದ ಬೃಹತ್ ವಂಚನೆ ಜಾಲ ಬಯಲು, ಚೀನಾ ಮತ್ತು ಹಾಂಕಾಂಗ್ ಲಿಂಕ್, ಸಾಲ ಪಡೆದವರೆಷ್ಟು ಸೇಫ್?
Aug 21, 2022 12:38 PM IST
ಆ್ಯಪ್ ಸಾಲದ ಬೃಹತ್ ವಂಚನೆ ಜಾಲ ಬಯಲು, ಚೀನಾ, ಹಾಂಕಾಂಗ್ ಲಿಂಕ್
- ದೆಹಲಿ ಪೊಲೀಸರು ಬೃಹತ್ ಆ್ಯಪ್ ಸಾಲದ (Loan Apps) ವಂಚನೆ ಜಾಲವನ್ನು ಪತ್ತೆಹಚ್ಚಿದ್ದಾರೆ. ಚೀನಾದ ಪ್ರಜೆಗಳು ನಡೆಸುವ ಬೃಹತ್ ಸಾಲ ಮತ್ತು ಸುಲಿಗೆಯ ಜಾಲ ಇದಾಗಿದ್ದು, ದೆಹಲಿ, ಕರ್ನಾಟಕ ಸೇರಿದಂತೆ 22 ಜನರನ್ನು ಬಂಧಿಸಲಾಗಿದೆ. ಸುಮಾರು 500 ಕೋಟಿ ರೂ.ಗೂ ಅಧಿಕ ಮೊತ್ತದ ವಂಚನೆಗೆ ಸಂಬಂಧಪಟ್ಟಂತೆ ಇವರನ್ನು ಬಂಧಿಸಲಾಗಿದೆ.
ಮೊಬೈಲ್‌ನಲ್ಲಿ ಫೇಸ್‌ಬುಕ್, ಯೂಟ್ಯೂಬ್ ನೋಡುತ್ತಿರುವಾಗ, ರೀಲ್ಸ್ ನೋಡುತ್ತಿರುವಾಗ, ಇನ್‌ಸ್ಟಾಗ್ರಾಂನಲ್ಲಿ ಫೋಟೋಸ್ ನೋಡುತ್ತಿರುವಾಗ "ಕಡಿಮೆ ಬಡ್ಡಿದರದಲ್ಲಿ ತಕ್ಷಣ ಸಾಲ" "ಯಾವುದೇ ದಾಖಲೆಗಳು ಬೇಕಾಗಿಲ್ಲ, ನಿಮಿಷದಲ್ಲಿಯೇ ಸಾಲ ನೀಡಲಾಗುವುದುʼʼ ಎಂಬರ್ಥದ ಜಾಹೀರಾತುಗಳು (Loan Apps) ಆಗಾಗ ಕಾಣಿಸುತ್ತವೆ. ಹಣದ ಮುಗ್ಗಟ್ಟಿನಲ್ಲಿರುವರಿಗೆ ಆ ಜಾಹೀರಾತುಗಳೇ ಆಪತ್‌ಬಾಂಧವವಾಗಿ ಗೋಚರಿಸುತ್ತವೆ.
ಹಿಂದೆಮುಂದೆ ಯೋಚಿಸದೆ ತಕ್ಷಣದ ಹಣದ ಅವಶ್ಯಕತೆ ಈಡೇರಿಸುವ ಸಲುವಾಗಿ ಸಾಲದ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ. ಡೌನ್‌ಲೋಡ್ ಮಾಡಿದ ಕೆಲವೇ ನಿಮಿಷಗಳಲ್ಲಿ 10,000 ರೂ., 15,000 ರೂ. ಸಾಲ ದೊರಕುತ್ತದೆ. ಅಲ್ಲಿಗೆ ಹಣದ ಅವಶ್ಯಕತೆ ಈಡೇರುತ್ತದೆ. ಬೇರೆ ಸಮಸ್ಯೆಗಳು ಶುರುವಾಗುತ್ತವೆ. ಈ ರೀತಿ ಸಾಲದ ಆ್ಯಪ್‌ಗಳಿಂದ ಪಡೆದ ಸಾಲವನ್ನು ತೀರಿಸಿದರೂ, ತೀರಿಸದೆ ಇದ್ದರೂ ಸಮಸ್ಯೆಗಳು ಶುರುವಾಗುತ್ತವೆ.
ಹತ್ತು ಸಾವಿರ ರೂ. ಸಾಲ ಪಡೆದಿದ್ದರೂ ನೀವು ಲಕ್ಷ ರೂ.ವರೆಗೆ ಬಡ್ಡಿ ಪಾವತಿಸಬೇಕಾಗಬಹುದು. ಚಕ್ರಬಡ್ಡಿ, ವಿಚಿತ್ರ ಬಡ್ಡಿಗಳ ಮೂಲಕ ನಿಮ್ಮನ್ನು ಶೋಷಿಸಬಹುದು. ನೀವು ಸಾಲ ಕಟ್ಟದೆ ಇದ್ದರೆ ನಿಮ್ಮ ಮೊಬೈಲ್ ಹ್ಯಾಕ್ ಮಾಡಿ ನಿಮ್ಮ ಸಂಪರ್ಕ ಜಾಲಕ್ಕೆಲ್ಲ ಅಶ್ಲೀಲ ಸಂದೇಶಗಳನ್ನು ಕಳುಹಿಸಬಹುದು. ಈಗಾಗಲೇ ಸಾಕಷ್ಟು ಜನರು ಇಂತಹ ಕೆಟ್ಟ ಅನುಭವಕ್ಕೆ ಈಡಾಗಿದ್ದಾರೆ. ಸಾಕಷ್ಟು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದೀಗ ದೆಹಲಿ ಪೊಲೀಸರು ಇಂತಹ ಬೃಹತ್ ಆ್ಯಪ್ ಸಾಲದ ವಂಚನೆ ಜಾಲವನ್ನು ಪತ್ತೆಹಚ್ಚಿದ್ದಾರೆ. ಚೀನಾದ ಪ್ರಜೆಗಳು ನಡೆಸುವ ಬೃಹತ್ ಸಾಲ ಮತ್ತು ಸುಲಿಗೆಯ ಜಾಲ ಇದಾಗಿದ್ದು, ದೆಹಲಿ, ಕರ್ನಾಟಕ ಸೇರಿದಂತೆ 22 ಜನರನ್ನು ಬಂಧಿಸಲಾಗಿದೆ. ಸುಮಾರು 500 ಕೋಟಿ ರೂ.ಗೂ ಅಧಿಕ ಮೊತ್ತದ ವಂಚನೆಗೆ ಸಂಬಂಧಪಟ್ಟಂತೆ ಇವರನ್ನು ಬಂಧಿಸಲಾಗಿದೆ.
ಈ ವಂಚಕರು ನೂರಕ್ಕೂ ಹೆಚ್ಚು ಆ್ಯಪ್‌ಗಳನ್ನು ಬಳಸುತ್ತಿದ್ದರು. ಬಹುತೇಕ ಎಲ್ಲಾ ಆ್ಯಪ್‌ಗಳು ಹಾಂಕಾಂಗ್, ಚೀನಾದ ಸರ್ವರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಅಂದರೆ, ಈ ಆ್ಯಪ್‌ಗಳ ಮೂಲಕ ಸಾಲ ಪಡೆದವರ, ಆ್ಯಪ್ ಇನ್‌ಸ್ಟಾಲ್ ಮಾಡಿದವರ ಮಾಹಿತಿಗಳನ್ನು ಕದಿಯಲಾಗುತ್ತಿತ್ತು.
ಈ ವಂಚಕರ ಗ್ಯಾಂಗ್ ಲಖನೌನ್‌ನಲ್ಲಿ ಒಂದು ಕಾಲ್ ಸೆಂಟರ್ ಹೊಂದಿತ್ತು. ಕಡಿಮೆ ಮೊತ್ತದ ಅಂದರೆ ಹತ್ತು, ಇಪ್ಪತ್ತು ಸಾವಿರ ಸಾಲ ನೀಡಲು ಆಪ್‌ಗಳನ್ನು ಬಳಸುತ್ತಿದ್ದವು. ಈ ಕಾಲ್‌ಸೆಂಟರ್ ಮೂಲಕ ಜನರನ್ನು ವಂಚಿಸಲಾಗುತ್ತಿತ್ತು. ಕಳೆದ ಎರಡು ತಿಂಗಳ ಕಾಲ ಈ ಗ್ಯಾಂಗ್ ಮೇಲೆ ನಿಗಾವಹಿಸಿ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಆ್ಯಪ್‌ಗಳು ಸಾಲವನ್ನು ಸುಲಭವಾಗಿ ನೀಡುತ್ತಿದ್ದವು. ಆ್ಯಪ್ ಡೌನ್‌ಲೋಡ್ ಮಾಡಿದ ಬಳಿಕ ಕೆಲವೊಂದು ಅನುಮತಿಗಳನ್ನು ಆ್ಯಪ್‌ಗೆ ನೀಡಿದರೆ ಸಾಕು, ಕ್ಷಣಾರ್ಧದಲ್ಲಿ ಹಣ ವರ್ಗಾವಣೆಯಾಗುತ್ತಿತ್ತು. ಈ ಕಾಲ್‌ಸೆಂಟರ್‌ನಲ್ಲಿ ನಕಲಿ ಐಡಿಗಳನ್ನು ಬಳಸಿದ ಫೋನ್ ನಂಬರ್‌ಗಳು ಇರುತ್ತಿದ್ದವು.
ಈ ರೀತಿ ಸಾಲ ಪಡೆದವರಿಗೆ ಟಾರ್ಚರ್ ನೀಡಲೆಂದೇ ಈ ಕಾಲ್‌ಸೆಂಟರ್ ಕಾರ್ಯನಿರ್ವಹಿಸುತ್ತಿತ್ತು. ಅಂದರೆ, ತಮ್ಮ ಬೇಡಿಕೆ ಈಡೇರಿಸದ, ಕೇಳಿದ್ದಷ್ಟು ಬಡ್ಡಿ ಹಣ ನೀಡದ ಜನರಿಗೆ ನಾನಾ ರೀತಿಯಲ್ಲಿ ಹಿಂಸಿಸುತ್ತಿದ್ದವು. ಸಾಲ ಪಡೆದವರ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವವರಿಗಲ್ಲ ಅಶ್ಲೀಲ ವಿಡಿಯೋ ಕಳುಹಿಸುತ್ತಿತ್ತು. ಅಂದರೆ, ಸಾಲ ಪಡೆದವರ ಫೋಟೊಗಳನ್ನು ಅಶ್ಲೀಲ ವಿಡಿಯೋದಲ್ಲಿರುವ ಫೋಟೊಗಳಿಗೆ ಮತ್ತು ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಫೋಟೊಗಳನ್ನು ವಿಡಿಯೋದಲ್ಲಿರುವ ಫೋಟೊಗಳಿಗೆ ಜೋಡಿಸಿ ಎಲ್ಲರಿಗೂ ಕಳುಹಿಸಲಾಗುತ್ತಿತ್ತು.
ಇಂತಹ ಬೃಹತ್ ಜಾಲ ಪತ್ತೆಯಾಗಿದ್ದು, ಸದ್ಯಕ್ಕೆ ಒಂದಿಷ್ಟು ಜನರು ನಿಶ್ಚಿಂತರಾಗಿದ್ದಾರೆ. ಇಂತಹ ಅನೇಕ ಗ್ಯಾಂಗ್‌ಗಳು ಕಾರ್ಯನಿರ್ವಹಿಸುತ್ತಿವೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಇತ್ಯಾದಿಗಳಲ್ಲಿ ಕಾಣಿಸುವ ಇಂತಹ ಜಾಹೀರಾತಿನಲ್ಲಿ ಸಾಲ ಪಡೆಯದೆ ಎಚ್ಚರಿಕೆ ವಹಿಸಬೇಕು ಎಂದು ಪೊಲೀಸರು ಹೇಳಿದ್ದಾರೆ.
ಕ್ಯಾಶ್ ಪೋರ್ಟ್, ರುಪೀ ವೇ, ಲೋನ್ ಕ್ಯೂಬ್, ವಾವ್ ರುಪೀ, ಸ್ಮಾರ್ಟ್, ವ್ಯಾಲೆಟ್, ಜಿಯಾಂಟ್ ವ್ಯಾಲೆಟ್, ಹಾಯ್ ರುಪೀ, ಸ್ವಿಫ್ಟ್ ರುಪೀ, ವ್ಯಾಲೆಟ್‌ವಿನ್, ಫಿಶ್‌ಕ್ಲಬ್, ಯೇಹ್ ಕ್ಯಾಶ್, ಐಎಂ ಲೋನ್, ಗ್ರೋ ಟ್ರೀ, ಮ್ಯಾಜಿಕ್ ಬ್ಯಾಲೆನ್ಸ್, ಯೋಕ್ಯಾಶ್, ಫಾರ್ಚ್ಯೂನ್ ಟ್ರೀ, ಸೂಪರ್‌ಕಾಯಿನ್, ರೆಡ್ ಮ್ಯಾಜಿಕ್ ಹೆಸರಿನ ಅಪ್ಲಿಕೇಷನ್‌ಗಳ ಮೂಲಕ ಈ ವಂಚಕರು ವಂಚಿಸುತ್ತಿದ್ದರು. ಹೀಗಾಗಿ, ಹಣದ ಅವಶ್ಯಕತೆಯಿದೆ ಎಂದು ಇಂತಹ ಅಪ್ಲಿಕೇಷನ್‌ಗಳಿಂದ ಸಾಲ ಪಡೆದು ಅಪಾಯ ಮೈಮೇಲೆ ಎಳೆದುಕೊಳ್ಳಬೇಡಿ.