logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Home Loan: ನಿಮ್ಮ ವಯಸ್ಸು 45 ವರ್ಷ ದಾಟಿದೆಯೇ? ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲವೇ? 45+ ಬಳಿಕ ಗೃಹಸಾಲ ಪಡೆಯಲು ಬಯಸುವವರಿಗೆ ಗೈಡ್‌

Home Loan: ನಿಮ್ಮ ವಯಸ್ಸು 45 ವರ್ಷ ದಾಟಿದೆಯೇ? ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲವೇ? 45+ ಬಳಿಕ ಗೃಹಸಾಲ ಪಡೆಯಲು ಬಯಸುವವರಿಗೆ ಗೈಡ್‌

Praveen Chandra B HT Kannada

Dec 09, 2022 10:23 PM IST

Home Loan: 45 ವರ್ಷ ಕಳೆದ ಬಳಿಕ ಬ್ಯಾಂಕ್‌ಗೆ ಸಾಲ ಕೇಳಲು ಹೋಗುವಿರಾ? ಈ ಸಲಹೆ ಗಮನಿಸಿ

    • ಇತ್ತೀಚೆಗೆ ಆರ್‌ಬಿಐ ರೆಪೊ ದರ ಹೆಚ್ಚಿಸಿದೆ. ಇದರಿಂದ ಬ್ಯಾಂಕ್‌ ಸಾಲ ದುಬಾರಿಯಾಗಿದೆ. ಬ್ಯಾಂಕ್‌ಗಳು ಕೈತುಂಬಾ ವೇತನ ಪಡೆಯುವವರಿಗೆ, ಉದ್ಯೋಗಸ್ಥ ಯುವ ಜನತೆಗೆ, ಸರಕಾರಿ ಉದ್ಯೋಗಿಗಳಿಗೆ ಹೆಚ್ಚು ಯೋಚಿಸದೆ ಸಾಲ ನೀಡುತ್ತವೆ. ಆದರೆ, 40, 45 ವರ್ಷ ದಾಟಿದವರಿಗೆ ಸಾಲ ನೀಡುವಾಗ ಸಾಕಷ್ಟು ಯೋಚಿಸುತ್ತವೆ. ಇಂದಿನ ಲೇಖನದಲ್ಲಿ 45 ವರ್ಷ ಕಳೆದ ಬಳಿಕ ಬ್ಯಾಂಕ್‌ಗೆ ಮನೆ ಸಾಲ ಕೇಳಲು ಹೋಗುವವರಿಗೆ ಅಮೂಲ್ಯ ಸಲಹೆಗಳನ್ನು ನೀಡಲಾಗಿದೆ.
Home Loan: 45 ವರ್ಷ ಕಳೆದ ಬಳಿಕ ಬ್ಯಾಂಕ್‌ಗೆ ಸಾಲ ಕೇಳಲು ಹೋಗುವಿರಾ? ಈ ಸಲಹೆ ಗಮನಿಸಿ
Home Loan: 45 ವರ್ಷ ಕಳೆದ ಬಳಿಕ ಬ್ಯಾಂಕ್‌ಗೆ ಸಾಲ ಕೇಳಲು ಹೋಗುವಿರಾ? ಈ ಸಲಹೆ ಗಮನಿಸಿ

Home Loan Tips: ಕೆಲವು ದಿನಗಳ ಹಿಂದೆ ಹಣಕಾಸು ನೀತಿ ಸಮಿತಿ ಸಭೆಯ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೊ ದರವನ್ನು(Repo Rate) 35 ಮೂಲಾಂಶದಷ್ಟು ಹೆಚ್ಚಿಸಿದೆ. ಈ ಮೂಲಕ ಪರಿಷ್ಕೃತ ರೆಪೊ ದರ ಶೇಕಡಾ 6.25 ತಲುಪಿದೆ. ತಕ್ಷಣದಿಂದ ಜಾರಿಯಾದ ಈ ದರವು ಮುಖ್ಯವಾಗಿ ಗೃಹಸಾಲ (Home Loan Interest Rate) ಪಡೆಯಲು ಬಯಸುವವರಿಗೆ ಹೊರೆಯಾಗಲಿದೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ಈ ಹಿಂದೆ ಕೊರೊನಾ ಕಾಲದಲ್ಲಿ ಬ್ಯಾಂಕ್‌ನಲ್ಲಿ ಗೃಹಸಾಲ ಬಡ್ಡಿದರ ಅತ್ಯಂತ ಕಡಿಮೆ ದರದಲ್ಲಿ ದೊರಕುತ್ತಿತ್ತು. ಈಗ ಬಡ್ಡಿದರ ಒಂದಿಷ್ಟು ಹೆಚ್ಚಳವಾಗಿದೆ. ಈ ವರ್ಷದ ಅಂತ್ಯದ ಈ ಡಿಸೆಂಬರ್‌ನಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಗೃಹಸಾಲ ಪಡೆಯಲು ಬಯಸುವ 45 ವರ್ಷ ಮೇಲ್ಪಟ್ಟವರು ಒಂದಿಷ್ಟು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಪ್ರತಿಯೊಬ್ಬರ ಹಣಕಾಸು ಸ್ಥಿತಿಗೆ ತಕ್ಕಂತೆ ತಮ್ಮ ಜೀವಿತಾವಧಿಯ ವಿವಿಧ ಘಟ್ಟದಲ್ಲಿ ಮಾತ್ರ ಸ್ವಂತ ಮನೆ ಹೊಂದುವ ಕನಸು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೆಲವರು ತಮ್ಮ ಜೀವನದ ಆರಂಭಿಕ ಹಂತದಲ್ಲಿಯೇ ಸ್ವಂತ ಮನೆಗೆ ಪ್ರವೇಶಿಸುತ್ತಾರೆ. ಕೆಲವರು ತಮ್ಮ ಕರಿಯರ್‌ ಆರಂಭದಲ್ಲಿ ಅಂದರೆ 20-30 ವರ್ಷದ ನಡುವೆಯೇ ಸ್ವಂತ ಮನೆ ಕಟ್ಟುತ್ತಾರೆ ಅಥವಾ ಅಪಾರ್ಟ್‌ಮೆಂಟ್‌ಗೆ ಪ್ರವೇಶಿಸುತ್ತಾರೆ. ಇನ್ನು ಕೆಲವರು 30ರಿಂದ 45 ವರ್ಷದ ನಡುವೆ ಸ್ವಂತ ಮನೆ ಕನಸು ಈಡೇರಿಸಿಕೊಳ್ಳುತ್ತಾರೆ. ಇನ್ನು ಕೆಲವರು 45 ವರ್ಷದ ಬಳಿಕ ಸ್ವಂತ ಮನೆ ಖರೀದಿಸುತ್ತಾರೆ.

ಈಗ ಗೃಹಸಾಲ ಪಡೆಯದೆ ಸ್ವಂತ ಮನೆ ಕನಸು ಈಡೇರಿಸಿಕೊಳ್ಳುವುದು ಕಷ್ಟ. ಕಳೆದ ಎರಡು ದಶಕಗಳಲ್ಲಿ ದೇಶದ ವಸತಿ ಮಾರುಕಟ್ಟೆಯು ಸಾಕಷ್ಟು ಪ್ರಗತಿ ಕಂಡಿದೆ. ಅತ್ಯುತ್ತಮ ಸಾಲದ ಆಯ್ಕೆಗಳಿಂದ ಬಹುತೇಕ ಎಲ್ಲರಿಗೂ ತಮ್ಮ ಕನಸಿನ ಮನೆ ಹೊಂದಲು ಸಾಧ್ಯವಾಗಿದೆ. 20-30 ವರ್ಷ ಪ್ರಾಯದಲ್ಲಿ ಸ್ವಂತ ಮನೆ ಖರೀದಿಸಿದವರು ಬೇಗನೇ ಇಎಂಐ ಪಾವತಿಸಿ ಸಾಲ ಮುಕ್ತರಾಗುತ್ತಾರೆ. 45 ವರ್ಷದ ಬಳಿಕ ಗೃಹಸಾಲ ಪಡೆದವರಿಗೆ ಒಂದಿಷ್ಟು ಅನಿಶ್ಚಿತತೆಗಳು ಸಾಮಾನ್ಯ, 55 ಅಥವಾ 60 ವರ್ಷ ಕಳೆದ ಬಳಿಕ ಉದ್ಯೋಗವಿಲ್ಲದೆ ಇಲ್ಲದ ಸಂದರ್ಭದಲ್ಲಿ ಬಾಕಿ ಇಎಂಐ ಪಾವತಿಸುವುದು ಹೇಗೆ? ಎಂಬ ಪ್ರಶ್ನೆ ಎದುರಾಗುತ್ತದೆ.

ಬ್ಯಾಂಕ್‌ಗಳು ಕೂಡ ಸಾಲ ನೀಡುವ ಸಮಯದಲ್ಲಿ ನಿಮ್ಮ ವಯಸ್ಸನ್ನು ಪರಿಗಣಿಸುತ್ತಾರೆ. 45 ವರ್ಷದ ನೀವು 30 ವರ್ಷ ಅವಧಿಯ ಸಾಲ ಪಡೆಯಲು ಹೊರಟರೆ ಬ್ಯಾಂಕ್‌ಗಳು ನಿರಾಕರಿಸಬಹುದು. ನಿಮ್ಮ ನಿವೃತ್ತಿಗೆ ಮೊದಲು ಪಾವತಿಸುವಂತೆ ಇದ್ದರೆ ಮಾತ್ರ ಓಕೆ ಎನ್ನುತ್ತವೆ. 15- 20 ವರ್ಷದ ಅವಧಿಯ ಸಾಲವನ್ನು ಮಾತ್ರ ಬ್ಯಾಂಕ್‌ಗಳು ನೀಡಬಹುದು. ಆದರೆ, ಸರಕಾರಿ ಉದ್ಯೋಗಿಗಳಿಗೆ, ಉನ್ನತ ಉದ್ಯೋಗದಲ್ಲಿದ್ದವರಿಗೆ ನಿವೃತ್ತಿಯ ಬಳಿಕವೂ ಕೈತುಂಬಾ ಪಿಂಚಣಿ, ಪಿಎಫ್‌ ಇತ್ಯಾದಿಗಳು ದೊರಕುವುದರಿಂದ ಕೆಲವು ಬ್ಯಾಂಕ್‌ಗಳು ಹೆಚ್ಚು ಯೋಚಿಸದೆ ಸಾಲ ನೀಡಬಹುದು.

ವಯಸ್ಸಾಗಿದೆ ಇನ್ನು ಗೃಹಸಾಲವೇಕೆ? ಸ್ವಂತ ಮನೆಯೇಕೆ? ಎಂದು ಹಿಂಜರಿಯುವ ಅಗತ್ಯವಿಲ್ಲ. ಯಾವಾಗ ಬೇಕಾದರೂ ನಿಮ್ಮ ಕನಸಿನ ಮನೆ ಹೊಂದುವ ಬಯಕೆಯನ್ನು ಈಡೇರಿಸಿಕೊಳ್ಳಬಹುದು. 45 ವರ್ಷ ಕಳೆದ ಬಳಿಕ ಮನೆ ಖರೀದಿಸುವುದಾದರೆ ನಿಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡಲು ಒಂದಿಷ್ಟು ಎಚ್ಚರಿಕೆಯನ್ನು ವಹಿಸಬಹುದು.

ಎಷ್ಟು ಸಾಲ ಪಡೆಯುವಿರಿ?

ನೀವು ನಿಮ್ಮ 20ನೇ ವಯಸ್ಸಿನಿಂದ ಅಥವಾ 25ನೇ ವಯಸ್ಸಿನಿಂದ ಉದ್ಯೋಗಿಯಾಗಿದ್ದು, 45 ವರ್ಷದ ವೇಳೆಗೆ ಕನಿಷ್ಠ 20 ವರ್ಷ ಉದ್ಯೊಗ ಮಾಡಿರುತ್ತೀರಿ. ಈ ಸಮಯದಲ್ಲಿ ಕೊಂಚ ಹಣ ಉಳಿತಾಯ ಮಾಡಿರುತ್ತೀರಿ. ಈಗ ಬ್ಯಾಂಕ್‌ಗಳು ಶೇಕಡ 90ರಷ್ಟು ಸಾಲ ನೀಡುತ್ತವೆ. ಆದರೆ, ನೀವು ಹೆಚ್ಚು ಡೌನ್‌ಪೇಮೆಂಟ್‌ ಮಾಡಿ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಹಣಕಾಸು ಸಂಸ್ಥೆಗಳು ಸ್ಟೆಪ್‌ ಡೌನ್‌ ಮರುಪಾವತಿ ಆಯ್ಕೆಯನ್ನೂ ನೀಡುತ್ತವೆ. ಇಂತಹ ಸನ್ನಿವೇಶದಲ್ಲಿ ಆರಂಭದಲ್ಲಿ ಇಎಂಐ ಅಧಿಕವಾಗಿರುತ್ತವೆ ಮತ್ತು ಮುಂದಿನ ಹಂತಗಳಲ್ಲಿ ಇಎಂಐ ಮೊತ್ತ ಕಡಿಮೆಯಾಗುತ್ತದೆ. ಪೆನ್ಷನ್‌ ಆದಾಯ ಇರುವುದರಿಂದ ನಿವೃತ್ತಿಯ ನಂತರದ ಐದು ವರ್ಷವನ್ನೂ ಬ್ಯಾಂಕ್‌ಗಳು ಪರಿಗಣಿಸುತ್ತವೆ. ಜೊತೆಗೆ ನಿಮ್ಮ ಸಹ-ಸಾಲದಾರರಾಗಿ ಎರಡನೇ ತಲೆಮಾರಿನವರನ್ನು ಸೇರಿಸಿಕೊಳ್ಳಲು ಅವಕಾಶವಿದೆ. ಅಂದರೆ, ಈಗಷ್ಟೇ ಉದ್ಯೋಗ ಆರಂಭಿಸಿದ ನಿಮ್ಮ ಮಕ್ಕಳನ್ನೂ ಸಹ-ಸಾಲದಾರರನ್ನಾಗಿ ಮಾಡಬಹುದು. ನಿಮ್ಮ ಸಂಗಾತಿ ಉದ್ಯೋಗಿಯಾಗಿದ್ದರೆ ಅವರನ್ನೂ ಸಹ-ಸಾಲಗಾರರನ್ನಾಗಿ ಮಾಡಿಕೊಂಡು ಸಾಲದ ಕಂತುಗಳನ್ನು ಬೇಗ ಮುಗಿಸಬಹುದು.

ಅತ್ಯಂತ ಕಡಿಮೆ ಬಡ್ಡಿದರಕ್ಕೆ ಸಾಲ ನೀಡುವ ಬ್ಯಾಂಕ್‌ ಸಾಲಗಾರರನ್ನು ಸೆಳೆಯುವುದು ಸಹಜ. ಒಂದು ಸಣ್ಣ ಪ್ರಮಾಣದಲ್ಲಿ ಕಡಿಮೆ ಬಡ್ಡಿದರವಿದ್ದರೂ ಮರುಪಾವತಿ ಮೊತ್ತದಲ್ಲಿ ದೊಡ್ಡ ಬದಲಾವಣೆಯೇ ಉಂಟಾಗುತ್ತದೆ. ಆದರೆ, ಕೇವಲ ಬಡ್ಡಿದರವೊಂದನ್ನೇ ಸಾಲ ಪಡೆಯುವವರು ನೋಡಿದರೆ ಸಾಲದು. ಗೃಹ ಸಾಲದ ಬಡ್ಡಿದರದ ಜೊತೆಗೆ ವಿಧಿಸಿರುವ ಇತರೆ ಶುಲ್ಕಗಳ ಕಡೆಗೂ ಗಮನ ನೀಡಬೇಕು. ಸಂಸ್ಕರಣಾ ಶುಲ್ಕ, ಟೆಕ್ನಿಕಲ್‌ ಅಸಿಸ್ಟೆಂಟ್‌ ಮತ್ತು ಡಾಕ್ಯುಮೆಂಟೇಷನ್‌ ಶುಲ್ಕ ಇತ್ಯಾದಿಗಳನ್ನು ಗಮನಿಸಿ.

ಎಷ್ಟು ಮೊತ್ತದ ಸಾಲಕ್ಕೆ ಅರ್ಹರು ಎನ್ನುವುದಕ್ಕೆ ಕ್ರೆಡಿಟ್‌ ಸ್ಕೋರ್‌ ಯಾವಾಗಲೂ ಪ್ರಮುಖ ನಿರ್ಧಾರಕವಾಗಿದೆ. ಜೊತೆಗೆ ಬ್ಯಾಂಕ್‌ ನಿಮಗೆ ವಿಧಿಸುವ ಬಡ್ಡಿದರದ ಮೇಲೂ ಕ್ರೆಡಿಟ್‌ ಸ್ಕೋರ್‌ ಪರಿಣಾಮ ಬೀರುತ್ತದೆ. ಸಾಲಗಾರರ ರಿಸ್ಕ್‌ ಪ್ರೊಫೈಲ್‌ಗೆ ತಕ್ಕಂತೆ ಕೆಲವು ಬ್ಯಾಂಕ್‌ಗಳು ಬಡ್ಡಿದರ ವಿಧಿಸುತ್ತವೆ. ನೀವು ಮನೆ ಅಥವಾ ನಿವೇಶನ ಖರೀದಿಸುವಾಗ ನಂಬಲು ಅರ್ಹವಾದ ಬಿಲ್ಡರ್‌ ಅಥವಾ ಡೆವಲಪರ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಪ್ರಯತ್ನಿಸುವಿರಿ ಅಲ್ಲವೇ? ಇದೇ ರೀತಿ ಸಾಲ ಪಡೆಯುವಾಗಲೂ ನಂಬಲು ಅರ್ಹವಾದ ಬ್ಯಾಂಕನ್ನೇ ಆಯ್ಕೆ ಮಾಡಿ. ಇದರೊಂದಿಗೆ ಬ್ಯಾಂಕ್‌ನ ಹಣಕಾಸು ಸ್ಥಿತಿಯತ್ತಲೂ ಗಮನ ನೀಡಿ. ಈ ಕುರಿತು ಮಾಹಿತಿಗಳನ್ನು ಗೂಗಲ್‌ನಲ್ಲಿ ಹುಡುಕಬಹುದು.

ಬ್ಯಾಂಕ್‌ನ ಸಾಲದ ನಿಯಮಗಳು ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ. ಗೃಹಸಾಲ ಮುಂಗಡ ಪಾವತಿಗೆ ಬ್ಯಾಂಕ್‌ಗಳು ದಂಡ ಹಾಕುವುದನ್ನು ಆರ್‌ಬಿಐ ನಿಷೇಧಿಸಿದ್ದರೂ, ಹಣಕಾಸು ಸಂಸ್ಥೆಗಳು ಪೆನಾಲ್ಟಿ ಹಾಕುತ್ತವೆ. ನೀವು ಬೇರೆ ಬ್ಯಾಂಕ್‌ಗೆ ಸಾಲವನ್ನು ವರ್ಗಾಯಿಸಲು ಬಯಸಿದರೆ ಅಲ್ಲೂ ಯಾವುದಾದರೂ ದಂಡ ಹಾಕಬಹುದು. ನೀವು ಬ್ಯಾಂಕ್‌ನ ಷರತ್ತು ಮತ್ತು ನಿಯಮಗಳನ್ನು ಎಚ್ಚರಿಕೆಯಿಂದ ಓದದೆ ಮುಂದುವರೆದರೆ ಇಂತಹ ಹಲವು ತೊಂದರೆಗಳಿಗೆ ನೀವು ಪಕ್ಕಾಗಬಹುದು.

ಒಂದಿಷ್ಟು ಚೌಕಾಶಿ ಮಾಡಿ ಬಡ್ಡಿದರ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಗೃಹಸಾಲದಲ್ಲಿ ಅಲ್ಪ ಪ್ರಮಾಣದಲ್ಲಿ ವಿನಾಯಿತಿ ದೊರಕಿದರೂ ನಿಮಗೆ ದೀರ್ಘಕಾಲದಲ್ಲಿ ಹಲವು ಸಾವಿರ ರೂ.ನಿಂದ ಲಕ್ಷ ರೂ.ವರೆಗೆ ಉಳಿತಾಯ ಮಾಡಬಹುದು. ಹೀಗಾಗಿ ಬ್ಯಾಂಕ್‌ ಸಾಲ ಬಡ್ಡಿದರದಲ್ಲಿ, ಇತರೆ ಶುಲ್ಕಗಳಲ್ಲಿ ವಿನಾಯಿತಿಗಾಗಿ ವಿನಂತಿಸಿ.

ಯಾವುದೋ ಒಂದು ಬ್ಯಾಂಕ್‌ ಸಾಲ ನೀಡಿಲ್ಲ ಎಂದು ದುಬಾರಿ ಬಡ್ಡಿದರದ ಯಾವುದೋ ಸಾಲಕ್ಕೆ ಸಿಲುಕಿಕೊಳ್ಳಬೇಡಿ. ಈ ಕ್ರಿಸ್‌ಮಸ್‌ ಅವಧಿಗೆ, ಅಥವಾ 2023ರ ಹೊಸ ವರ್ಷದ ಲೆಕ್ಕದಲ್ಲಿ ಒಳ್ಳೆಯ ಆಫರ್‌ಗಳನ್ನು ಬ್ಯಾಂಕ್‌ಗಳು ನೀಡಬಹುದು. ಹಲವು ಬ್ಯಾಂಕ್‌ಗಳಿಗೆ ಎಡಕಾಡಿ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಪ್ರಯತ್ನಿಸಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ