logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Aap National Party: ಹಿಮಾಚಲ-ಗುಜರಾತ್‌ನಲ್ಲಿ ಸೋತರೂ, ಎಎಪಿ 'ರಾಷ್ಟ್ರೀಯ ಪಕ್ಷ'ವಾಗಿದ್ದು ಹೇಗೆ?

AAP National Party: ಹಿಮಾಚಲ-ಗುಜರಾತ್‌ನಲ್ಲಿ ಸೋತರೂ, ಎಎಪಿ 'ರಾಷ್ಟ್ರೀಯ ಪಕ್ಷ'ವಾಗಿದ್ದು ಹೇಗೆ?

HT Kannada Desk HT Kannada

Dec 09, 2022 06:40 PM IST

google News

ದೆಹಲಿ ಸಿಎಂ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್

    • ಹಿಮಾಚಲ ಮತ್ತು ಗುಜರಾತ್ ಎರಡೂ ಚುನಾವಣೆಗಳಲ್ಲಿ ಸೋಲು ಅನುಭವಿಸಿದರೂ, ಗುರುವಾರ ರಾತ್ರಿ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆಗಳು ಜೋರಾಗಿತ್ತು. ಸೋತರೂ ಸಂಭ್ರಮ ನಡೆದಿದ್ದುಒಂದೇ ಒಂದು ಕಾರಣಕ್ಕಾಗಿ. ಅದುವೇ ತನ್ನ ಪಕ್ಷಕ್ಕೆ ಸಿಕ್ಕ ಮತದ ಪ್ರಮಾಣದ ಆಧಾರದಲ್ಲಿ ಪಕ್ಷವು ರಾಷ್ಟ್ರೀಯ ಪಕ್ಷವಾಗಿದೆ ಎಂಬ ಕಾರಣಕ್ಕೆ.
ದೆಹಲಿ ಸಿಎಂ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್
ದೆಹಲಿ ಸಿಎಂ ಹಾಗೂ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್

ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು ಆರು ಕ್ಷೇತ್ರಗಳ ಉಪಚುನಾವಣೆಗಳ ಫಲಿತಾಂಶ ನಿನ್ನೆಯಷ್ಟೇ ಪ್ರಕಟಗೊಂಡಿದೆ. ದೇಶದ ಪ್ರಬಲ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯು, ಫಲಿತಾಂಶದಲ್ಲಿ ಸಿಹಿ-ಕಹಿಯನ್ನು ಸಮಾನವಾಗಿ ಹಂಚಿಕೊಂಡಿತು. ಉಭಯ ಪಕ್ಷಗಳು ತಲಾ ಒಂದೊಂದು ರಾಜ್ಯವನ್ನು ಗೆದ್ದು ಅಲ್ಲಿಂದಲ್ಲಿಗೆ ಸಮಾಧಾನಪಟ್ಟಿತು.

ಅತ್ತ ಈಗಾಗಲೇ ದೆಹಲಿಯಲ್ಲಿ ರಾಜ್ಯಭಾರ ನಡೆಸುತ್ತಿರುವ ಆಮ್‌ ಆದ್ಮಿ ಪಕ್ಷ, ಕಳೆದ ಬಾರಿಯ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪಂಜಾಬ್‌ನಲ್ಲೂ ಸರ್ಕಾರ ನಡೆಸುತ್ತಿದೆ. ಎರಡು ರಾಜ್ಯಗಳನ್ನು ವ್ಯಾಪಿಸುವ ಮೂಲಕ, ಮುಂದೆ ಮತ್ತಷ್ಟು ರಾಜ್ಯಗಳಲ್ಲಿ ಅಧಿಕಾರ ವಿಸ್ತರಿಸುವ ಪ್ರಯತ್ನ ಮಾಡುತ್ತಿದೆ. ಈ ನಡುವೆ ಇತ್ತೀಚೆಗಷ್ಟೇ ಪ್ರಕಟಗೊಂಡ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಗೆದ್ದು, ಬಿಜೆಯ 15 ವರ್ಷಗಳ ಸುದೀರ್ಘ ಆಡಳಿತವನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಸ್ಥಳೀಯ ಪಕ್ಷ ತನ್ನ ಬಲ ಹೆಚ್ಚಿಸಿಕೊಳ್ಳುತ್ತಿದೆ.

ಆಮ್ ಆದ್ಮಿ ಪಕ್ಷವು ಹಿಮಾಚಲ ಪ್ರದೇಶದಲ್ಲಿ ಯಾವುದೇ ಸ್ಥಾನಗಳನ್ನು ಗೆದ್ದಿಲ್ಲ. ಆದರೆ, ಇದೇ ಮೊದಲ ಬಾರಿಗೆ ಬಿಜೆಪಿ ಭದ್ರಕೋಟೆ ಗುಜರಾತ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ಆಪ್‌, ಅಂತಿಮವಾಗಿ 5 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಂಖ್ಯೆಯ ಲೆಕ್ಕದಲ್ಲಿ ಇದು ತುಂಬಾ ಕಡಿಮೆ ಇರಬಹುದು. ಆದರೆ, ಸ್ಥಳೀಯ ಪಕ್ಷವೆಂಬ ಹಣೆಪಟ್ಟಿ ಹೊತ್ತಿದ್ದ ಆಮ್‌ ಆದ್ಮಿ ಪಕ್ಷವು, ತನ್ನ ಆರಂಭಿಕ ಪ್ರಯತ್ನದಲ್ಲೇ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದ್ದಂತೂ ಸತ್ಯ.

ಹಿಮಾಚಲ ಮತ್ತು ಗುಜರಾತ್ ಎರಡೂ ಚುನಾವಣೆಗಳಲ್ಲಿ ಸೋಲು ಅನುಭವಿಸಿದರೂ, ಗುರುವಾರ ರಾತ್ರಿ ಆಮ್ ಆದ್ಮಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆಗಳು ಜೋರಾಗಿತ್ತು. ಸೋತರೂ ಸಂಭ್ರಮ ನಡೆದಿದ್ದುಒಂದೇ ಒಂದು ಕಾರಣಕ್ಕಾಗಿ. ಅದುವೇ ತನ್ನ ಪಕ್ಷಕ್ಕೆ ಸಿಕ್ಕ ಮತದ ಪ್ರಮಾಣದ ಆಧಾರದಲ್ಲಿ ಪಕ್ಷವು ರಾಷ್ಟ್ರೀಯ ಪಕ್ಷವಾಗಿದೆ ಎಂಬ ಕಾರಣಕ್ಕೆ.

ಎಎಪಿಗೆ ‘ರಾಷ್ಟ್ರೀಯ ಪಕ್ಷ’ ಎಂಬ ಸ್ಥಾನಮಾನ ಯಾಕೆ?

ಗುಜರಾತ್‌ನಲ್ಲಿ ಎಎಪಿ ಐದು ಸ್ಥಾನಗಳಲ್ಲಿ ಗೆದ್ದಿದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿಇದು ಪಡೆದ ಮತಗಳ ಪ್ರಮಾಣ ಸುಮಾರು 13 ಪ್ರತಿಶತ. ಕಾಂಗ್ರೆಸ್‌ 27 ಶೇಕಡ ಮತ ಪಡೆದರೆ, ಬಿಜೆಪಿಯು 52.5 ಪ್ರತಿಶತ ಮತ ಪಡೆದಿದೆ. ಎಎಪಿಯು 5 ಕ್ಷೇತ್ರಗಳಲ್ಲಿ ಗೆದ್ದು 13 ಶೇಕಡ ಮತ ಪ್ರಮಾಣ ಪಡೆದಿದೆ ಎಂದರೆ, ಇದರರ್ಥ ಭಾರತೀಯ ಚುನಾವಣಾ ಆಯೋಗವು ಶೀಘ್ರದಲ್ಲೇ ಎಎಪಿಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ನೀಡಲಿದೆ.

ಹೆಸರೇ ಸೂಚಿಸುವಂತೆ, ರಾಷ್ಟ್ರೀಯ ಪಕ್ಷವು ರಾಷ್ಟ್ರೀಯ ಅಸ್ತಿತ್ವವನ್ನು ಹೊಂದಿರುವ ರಾಜಕೀಯ ಪಕ್ಷವೆಂದು ವ್ಯಾಖ್ಯಾನಿಸಲಾಗಿದೆ. ಇದು ಕೇವಲ ಒಂದು ರಾಜ್ಯದಲ್ಲಿನ ಅಸ್ತಿತ್ವಕ್ಕೆ ಸೀಮಿತವಲ್ಲ. ರಾಜಕೀಯ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಹೇಗೆ ನೀಡಬಹುದು ಎಂಬುದಕ್ಕೆ ಚುನಾವಣಾ ಆಯೋಗವೇ ಕೆಲವು ನಿರ್ದಿಷ್ಟ ನಿಯಮಗಳನ್ನು ನಿಗದಿಪಡಿಸಿದೆ.

ಚುನಾವಣಾ ಆಯೋಗದ ಪ್ರಕಾರ, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಪಕ್ಷವು ಗುರುತಿಸಲ್ಪಟ್ಟರೆ ರಾಷ್ಟ್ರೀಯ ಟ್ಯಾಗ್ ನೀಡಬಹುದು. ಒಂದು ನಿರ್ದಿಷ್ಟ ರಾಜ್ಯದಲ್ಲಿ ಅಧಿಕೃತ ಮಾನ್ಯತೆ ಪಡೆಯಲು, ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷವು ಶೇಕಡ ಆರಕ್ಕಿಂತ ಹೆಚ್ಚು ಮತಗಳನ್ನು ಪಡೆದಿರಬೇಕು.

ಈ ವರ್ಷ ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಆರು ಪ್ರತಿಶತಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ರಾಷ್ಟ್ರೀಯ ಪಕ್ಷವಾಗಿ ಘೋಷಿಸುವ ಹಾದಿಯಲ್ಲಿದೆ. ಇದಕ್ಕೂ ಮೊದಲು, ಪಕ್ಷವು ಗೋವಾದಲ್ಲಿ 6 ಪ್ರತಿಶತ ಮತದ ಗಡಿ ದಾಟಿದೆ. ಅತ್ತ ದೆಹಲಿ ಮತ್ತು ಪಂಜಾಬ್‌ನಲ್ಲಿ ಈಗಾಗಲೇ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿದೆ.

ದೇಶದಲ್ಲಿ ಈವರೆಗೆ ಒಟ್ಟು ಎಂಟು ಪಕ್ಷಗಳನ್ನು ಮಾತ್ರ ರಾಷ್ಟ್ರೀಯ ಪಕ್ಷಗಳೆಂದು ಗುರುತಿಸಿಕೊಂಡಿವೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ