logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi: ವಿದೇಶಿ ನೆಲದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿಲ್ಲ: ರಾಹುಲ್‌ ಗಾಂಧಿ ಸ್ಪಷ್ಟನೆ

Rahul Gandhi: ವಿದೇಶಿ ನೆಲದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿಲ್ಲ: ರಾಹುಲ್‌ ಗಾಂಧಿ ಸ್ಪಷ್ಟನೆ

HT Kannada Desk HT Kannada

Mar 16, 2023 01:40 PM IST

ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ)

    • ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ತಾವು ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ನನಗೆ ಅವಕಾಶ ನೀಡಿದರೆ ಖಂಡಿತ ಈ ಕುರಿತು ಮಾತನಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಇಲ್ಲಿದೆ ಮಾಹಿತಿ..
ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ)
ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ) (HT_PRINT)

ನವದೆಹಲಿ: ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ತಾವು ಅಂತಹ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲೋಕಸಭೆಯಲ್ಲಿ ನನಗೆ ಅವಕಾಶ ನೀಡಿದರೆ ಖಂಡಿತ ಈ ಕುರಿತು ಮಾತನಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ನಾನು ವಿದೇಶದಲ್ಲಿ ಭಾರತ ವಿರೋಧಿ ಹೇಳಿಕೆಯನ್ನು ನೀಡಿಲ್ಲ. ಭಾರತದ ಸದ್ಯದ ಪರಿಸ್ಥಿತಿಯ ಕುರಿತು ಮಾತ್ರ ಮಾತನಾಡಿದ್ದೇನೆ. ಭಾರತದ ಪ್ರಜಾಪ್ರಭುತ್ವ ಉಳಿಸಲು ನಾನು ವಿದೇಶಿ ನೆರವು ಕೇಳಿದ್ದೇನೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾದುದು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ಲಂಡನ್‌ನಲ್ಲಿ ನಾನು ಮಾಡಿದ ಭಾಷಣಕ್ಕೆ ಕ್ಷಮೆ ಕೋರಬೇಕು ಎಂದು ಆಡಳಿತಾರೂಢ ಬಿಜೆಪಿ ಆಗ್ರಹಿಸಿದೆ. ಕ್ಷಮೆ ಕೇಳುವಂತಹ ಯಾವುದೇ ಹೇಳಿಕೆಯನ್ನು ನಾನು ನೀಡಿಲ್ಲ. ಈ ಕುರಿತು ನಾನು ಇಂದು ಲೋಕಸಭೆಯಲ್ಲಿ ಮಾತನಾಡಲು ಸಿದ್ಧವಿದ್ದು, ಆಡಳಿತಾರೂಢ ಸದಸ್ಯರು ನನ್ನ ಮಾತನ್ನು ಕೇಳುವ ಸಂಯಮ ತೋರಬೇಕಷ್ಟೇ ಎಂದು ರಾಹುಲ್‌ ಗಾಂಧಿ ಮಾರ್ಮಿಕವಾಗಿ ಹೇಳಿದ್ದಾರೆ.

ಅದಾನಿ ವಿವಾದದಿಂದ ದೇಶದ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದಲೇ, ತಮ್ಮ ಭಾಷಣದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಅದಾನಿ ವಿವಾದ ಪ್ರಧಾನಿ ಮೋದಿ ಅವರ ಕೊರಳಿಗೆ ಸುತ್ತಿಕೊಂಡಿರುವುದನ್ನು ಮನಗಂಡಿರುವ ಬಿಜೆಪಿ, ಪ್ರಧಾನಿ ರಕ್ಷಣೆಗಾಗಿ ಸಂಸತ್ತಿನಲ್ಲಿ ಇಷ್ಟೆಲ್ಲಾ ನಾಟಕವಾಡುತ್ತಿದೆ ಎಂದು ರಾಹುಲ್‌ ಗಾಂಧಿ ಹರಿಹಾಯ್ದರು.

ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬುದು ಸತ್ಯ. ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನು ವಶಪಡಿಸಿಕೊಂಡಿದ್ದು, ವಿಪಕ್ಷಗಳ ಅಸ್ತಿತ್ವವನ್ನೇ ನಾಶ ಮಾಡಲು ಹೊರಟಿದೆ. ಸರ್ಕಾರದ ವಿರುದ್ಧ ಮಾತನಾಡುವವರನ್ನು ಗುರಿ ಮಾಡಲಾಗುತ್ತಿದೆ. ಈ ಸತ್ಯವನ್ನೇ ನಾನು ಲಂಡನ್‌ನ ನನ್ನ ಭಾಷಣದಲ್ಲಿ ಉಲ್ಲೇಖಿಸಿದ್ದೇನೆ. ಭಾರತದ ಇಂದಿನ ಸ್ಥಿತಿ ಜಗತ್ತಿನ ಪ್ರಜಾತಂತ್ರವಾದಿಗಳಿಗೆ ಆತಂಕ ತರಿಸಿರುವುದು ಸುಳ್ಳಲ್ಲ ಎಂದು ರಾಹುಲ್‌ ಗಾಂಧಿ ಹೇಳಿದರು.

ಭಾರತದ ಪ್ರಜಾತಂತ್ರ ಅದೆಷ್ಟು ಅಪಾಯದಲ್ಲಿದೆ ಎಂಬುದಕ್ಕೆ, ಸಂಸತ್ತಿನಲ್ಲಿ ಆಡಳಿತಾರೂಢ ಸದಸ್ಯರು ಎಬ್ಬಿಸಿರುವ ಗದ್ದಲವೇ ಸಾಕ್ಷಿ. ತಮ್ಮ ಭ್ರಷ್ಟಾಚಾರ, ಪ್ರಜಾತಂತ್ರ ವಿರೋಧಿ ನಿಲುವನ್ನು ಮುಚ್ಚಿಕೊಳ್ಳಲು, ವಿಪಕ್ಷ ನಾಯಕರ ವಿರುದ್ಧ ಸುಳ್ಳು ಆರೋಪಗಳನ್ನು ಅವರು ಮಾಡುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವದ ಪರವಾಗಿ ಹಾಗೂ ಸತ್ಯದ ಪರವಾಗಿ ನಾನು ನನ್ನ ಧ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇನೆ ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದರು.

ರಾಹುಲ್‌ ಗಾಂಧಿ ಅವರ ಲಂಡನ್‌ ಭಾಷಣವನ್ನು ಖಂಡಿಸಿರುವ ಆಡಳಿತಾರೂಢ ಬಿಜೆಪಿ, ವಿದೇಶಿ ನೆಲದಲ್ಲಿ ಭಾರತ ವಿರೋಧಿ ಹೇಳಿಕೆ ನೀಡಿರುವ ರಾಹುಲ್‌ ಗಾಂಧಿ ದೇಶದ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದೆ.

ದಿನಬೆಳಗಾದರೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸುವ ರಾಹುಲ್‌ ಗಾಂಧಿ, ವಿದೇಶಕ್ಕೆ ಹೋಗಿ ಭಾರತದ ಪ್ರಜಾತಂತ್ರ ಅಪಾಯದಲ್ಲಿದೆ ಎಂದು ಹೇಳುತ್ತಾರೆ. ಅಲ್ಲದೇ ಭಾರತದಲ್ಲಿ ಪರಿಸ್ಥಿತಿ ಬದಲಾಯಿಸಲು ವಿದೇಶಿ ನೆರವು ಕೇಳುತ್ತಾರೆ. ಇದು ಭಾರತ ವಿರೋಧಿ ನಡೆ ಎಂದು ಬಿಜೆಪಿ ಕಿಡಿಕಾರಿದೆ.

ನಿತ್ಯವೂ ಸರ್ಕಾರವನ್ನು ಟೀಕಿಸುವ ರಾಹುಲ್‌ ಗಾಂಧಿ ಅವರಿಗೆ, ದೇಶದಲ್ಲಿ ವಾಕ್‌ ಸ್ವಾತಂತ್ರ್ಯ ಕಾಣದಿರುವುದು ನೋವಿನ ಸಂಗತಿ. ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದನ್ನು ಬಿಟ್ಟು, ರಾಹುಲ್‌ ತಮ್ಮ ಸಂಸದೀಯ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಲಿ ಎಂದು ಬಿಜೆಪಿ ತಿರುಗೇಟು ನೀಡಿದೆ.

ಒಟ್ಟಿನಲ್ಲಿ ರಾಹುಲ್‌ ಗಾಂಧಿ ಅವರ ಲಂಡನ್‌ ಭಾಷಣ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ ಎಂದು ಹೇಳಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ