logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಛತ್ತೀಸ್‌ಗಡ ಬಸ್‌ ದುರಂತ; ಕುಮ್ಹಾರಿಯಲ್ಲಿ ಕಂದಕಕ್ಕೆ ಉರುಳಿದ ಬಸ್, 12 ಕಾರ್ಮಿಕರ ದುರ್ಮರಣ, 14 ಜನರಿಗೆ ಗಾಯ

ಛತ್ತೀಸ್‌ಗಡ ಬಸ್‌ ದುರಂತ; ಕುಮ್ಹಾರಿಯಲ್ಲಿ ಕಂದಕಕ್ಕೆ ಉರುಳಿದ ಬಸ್, 12 ಕಾರ್ಮಿಕರ ದುರ್ಮರಣ, 14 ಜನರಿಗೆ ಗಾಯ

Umesh Kumar S HT Kannada

Apr 10, 2024 08:47 AM IST

google News

ಛತ್ತೀಸ್‌ಗಡ ಬಸ್‌ ದುರಂತ; ಕುಮ್ಹಾರಿಯಲ್ಲಿ ಕಂದಕಕ್ಕೆ ಉರುಳಿ ಬಿದ್ದ ಬಸ್‌ನಲ್ಲಿ ಪ್ರಯಾಣಿಸಿದ್ದ 12 ಕಾರ್ಮಿಕರ ಸಾವು. ರಕ್ಷಣಾ ಕಾರ್ಯಾಚರಣೆಯ ದೃಶ್ಯ.

  • ಛತ್ತೀಸ್‌ಗಡ ಬಸ್‌ ದುರಂತ; ದುರ್ಗ್ ಜಿಲ್ಲೆಯ ಕುಮ್ಹಾರಿಯಲ್ಲಿ ಕಂದಕಕ್ಕೆ ಉರುಳಿದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ 12 ಕಾರ್ಮಿಕರ ದುರ್ಮರಣ ಸಂಭವಿಸಿದೆ. ಇನ್ನುಳಿದ 14 ಜನರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಛತ್ತೀಸ್‌ಗಡ ಬಸ್‌ ದುರಂತ; ಕುಮ್ಹಾರಿಯಲ್ಲಿ ಕಂದಕಕ್ಕೆ ಉರುಳಿ ಬಿದ್ದ ಬಸ್‌ನಲ್ಲಿ ಪ್ರಯಾಣಿಸಿದ್ದ 12 ಕಾರ್ಮಿಕರ ಸಾವು. ರಕ್ಷಣಾ ಕಾರ್ಯಾಚರಣೆಯ ದೃಶ್ಯ.
ಛತ್ತೀಸ್‌ಗಡ ಬಸ್‌ ದುರಂತ; ಕುಮ್ಹಾರಿಯಲ್ಲಿ ಕಂದಕಕ್ಕೆ ಉರುಳಿ ಬಿದ್ದ ಬಸ್‌ನಲ್ಲಿ ಪ್ರಯಾಣಿಸಿದ್ದ 12 ಕಾರ್ಮಿಕರ ಸಾವು. ರಕ್ಷಣಾ ಕಾರ್ಯಾಚರಣೆಯ ದೃಶ್ಯ. (ANI)

ದುರ್ಗ್ (ಛತ್ತೀಸ್‌ಗಡ): ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್‌ ಕಂದಕಕ್ಕೆ ಮಗುಚಿ ಬಿದ್ದ ಕಾರಣ ಕನಿಷ್ಠ 12 ಜನ ಮೃತಪಟ್ಟಿದ್ದು 14 ಜನ ಗಾಯಗೊಂಡ ಘಟನೆ ಛತ್ತೀಸ್‌ಗಡದ ದುರ್ಗ್ ಜಿಲ್ಲೆಯಲ್ಲಿ ಸಂಭವಿಸಿದೆ.

ದುರ್ಗ್ ಜಿಲ್ಲೆಯ ಕುಮ್ಹಾರಿ ಪ್ರದೇಶದಲ್ಲಿ ಮಂಗಳವಾರ (ಏಪ್ರಿಲ್ 9) ರಾತ್ರಿ 8.30ಕ್ಕೆ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್ ದುರಂತದಲ್ಲಿ 12 ಜನ ಮೃತಪಟ್ಟಿದ್ದು, 14 ಜನ ಗಾಯಗೊಂಡಿದ್ದಾರೆ ಎಂದು ದುರ್ಗ್ ಜಿಲ್ಲೆಯ ಜಿಲ್ಲಾಧಿಕಾರಿ ರಿಚಾ ಪ್ರಕಾಶ್ ಚೌಧರಿ ಖಚಿತಪಡಿಸಿದ್ದಾರೆ.

ಕಾರ್ಮಿಕರಿದ್ದ ಬಸ್‌ ಕುಮ್ಹಾರಿ ಪ್ರದೇಶದ ಸಮೀಪ ಕಂದಕಕ್ಕೆ ಮಗುಚಿ ಬಿದ್ದಿದೆ. ರಾತ್ರಿ 8.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. 12 ಜನ ಮೃತಪಟ್ಟಿರುವುದಾಗಿ ವರದಿ ಇದೆ. 14 ಗಾಯಾಳುಗಳಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ರಿಚಾ ಪ್ರಕಾಶ್ ಚೌಧರಿ ವಿವರಿಸಿದ್ದಾರೆ.

ಈ ಪೈಕಿ 12 ಗಾಯಾಳುಗಳನ್ನು ರಾಯ್‌ಪುರದ ಏಮ್ಸ್‌ಗೆ ಸ್ಥಳಾಂತರಿಸಲಾಗಿದೆ. ಇನ್ನಿಬ್ಬರು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರ ಆರೋಗ್ಯವೂ ಸ್ಥಿರವಾಗಿದ್ದು, ಅತ್ಯುತ್ತಮ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರಿಚಾ ಪ್ರಕಾಶ್ ಚೌಧರಿ ಖಾತರಿಪಡಿಸಿದರು.

ಕಂದಕದಿಂದ ಅಪಘಾತದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಇನ್ನಷ್ಟು ಮಾಹಿತಿ ಬರಬೇಕಿದೆ.

ಮುಖ್ಯಮಂತ್ರಿ ವಿಷ್ಣು ದೇವಸಾಯಿ ಸಂತಾಪ

ಇದೇ ವೇಳೆ, ಛತ್ತೀಸ್‌ಗಡ ಮುಖ್ಯಮಂತ್ರಿ ವಿಷ್ಣು ದೇವ ಸಾಯಿ ಅವರು ಸಂತಾಪ ವ್ಯಕ್ತಪಡಿಸಿದ್ದು, "ದುರ್ಗದ ಕುಮ್ಹಾರಿ ಬಳಿ ಖಾಸಗಿ ಕಂಪನಿಯೊಂದರ ನೌಕರರು ತುಂಬಿದ್ದ ಬಸ್ ಅಪಘಾತಕ್ಕೀಡಾದ ಬಗ್ಗೆ ದುಃಖದ ಸುದ್ದಿ ಬಂದಿದೆ. ಈ ದುರ್ಘಟನೆಯಲ್ಲಿ 11 ನೌಕರರು ಸಾವನ್ನಪ್ಪಿರುವ ಸುದ್ದಿ ಬಂದಿದೆ.ಭಗವಂತನು ಅಗಲಿದ ಆತ್ಮಕ್ಕೆ ಶಾಂತಿ ಮತ್ತು ದುಃಖತಪ್ತ ಕುಟುಂಬಗಳಿಗೆ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಅಪಘಾತದಲ್ಲಿ ಗಾಯಗೊಂಡಿರುವ ನೌಕರರ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಂತಾಪ

"ಛತ್ತೀಸ್‌ಗಡದ ದುರ್ಗ್‌ ಜಿಲ್ಲೆಯಲ್ಲಿ ಸಂಭವಿಸಿದ ಬಸ್ ಅಪಘಾತವು ಅತ್ಯಂತ ದುಃಖಕರ ವಿಚಾರ. ಇದರಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು. ಇದರೊಂದಿಗೆ, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ. ರಾಜ್ಯ ಸರ್ಕಾರದ ಮೇಲ್ವಿಚಾರಣೆಯಲ್ಲಿ, ಸ್ಥಳೀಯ ಆಡಳಿತವು ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡುವಲ್ಲಿ ತೊಡಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ