BJP on Sanjay Raut: 'ಸಂಜಯ್ ರಾವತ್ ಮಹಾರಾಷ್ಟ್ರದ ರಾಹುಲ್ ಗಾಂಧಿ'; 2 ಸಾವಿರ ಕೋಟಿ ಡೀಲ್ ಆರೋಪಕ್ಕೆ ಬಿಜೆಪಿ ವ್ಯಂಗ್ಯ
Feb 19, 2023 10:14 PM IST
ಬಿಜೆಪಿ ಸಂಸದ ಸಂಜಯ್ ರಾವತ್ (HT_PRINT)
ಸಂಸದ ಸಂಜಯ್ ರಾವತ್ ಮಾಡಿರುವ 2 ಸಾವಿರ ಕೋಟಿ ರೂಪಾಯಿಗಳ ಡೀಲ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಸಂಜಯ್ ರಾವತ್ ಮಹಾರಾಷ್ಟ್ರದ ರಾಹುಲ್ ಗಾಂಧಿ ಎಂದು ವ್ಯಂಗ್ಯವಾಡಿದ್ದಾರೆ.
ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ಹೆಸರು, ಪಕ್ಷದ ಚಿಹ್ನೆ ವಿಚಾರದ ರಾಜಕೀಯ ವಿದ್ಯಮಾನಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಸಂಜಯ್ ರಾವತ್ ಮಾಡಿರುವ 2 ಸಾವಿರ ಕೋಟಿ ರೂಪಾಯಿಗಳ ಡೀಲ್ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದೆ.
ಸಿಎಂ ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆ ಪಕ್ಷದ ಹೆಸರು ಮತ್ತು ಬಿಲ್ಲು ಬಾಣದ ಚಿಹ್ನೆಯನ್ನು ನೀಡುವ ವಿಚಾರದಲ್ಲಿ 2 ಸಾವಿರ ಕೋಟಿ ರೂಪಾಯಿಗಳ ಡೀಲ್ ನಡೆದಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕರು, ಸಂಜಯ್ ರಾವತ್ ಮಹಾರಾಷ್ಟ್ರದ ರಾಹುಲ್ ಗಾಂಧಿ ಎಂದು ವ್ಯಂಗ್ಯವಾಡಿದ್ದಾರೆ.
ಸಂಜಯ್ ರಾವುತ್ ನೀಡಿರುವ ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಇಧನ್ನು ತೀವ್ರವಾಗಿ ಖಂಡಿಸಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ, ಸಂಜಯ್ ರಾವತ್ ಅವರನ್ನು ಮಹಾರಾಷ್ಟ್ರದ ರಾಹುಲ್ ಗಾಂಧಿ ಎಂದು ಕರೆದಿದ್ದಾರೆ.
ರಾವತ್ ಉದ್ಧವ್ ಸೇನೆಯನ್ನು ಕಾಂಗ್ರೆಸ್ ಪಕ್ಷದ ಶೈಲಿಗೆ ಇಳಿಸುತ್ತಿದ್ದಾರೆ. ತೀರ್ಪು ವಿರುದ್ಧವಾಗಿ ಬಂದಾಗ ಕೇಂದ್ರ ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಅವಮಾನಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಶಿವಸೇನೆ ಹೆಸರು ಹಾಗೂ ಪಕ್ಷದ ಚಿಹ್ನೆ ಬಿಲ್ಲು-ಬಾಣ ಪಡೆಯಲು ಎರಡು ಸಾವಿರ ಕೋಟಿ ರೂಪಾಯಿಗಳ ಡೀಲ್ ನಡೆದಿದೆ ಎಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ರಾವತ್ ಇಂದು ಗಂಭೀರ ಆರೋಪ ಮಾಡಿದ್ದರು.
ಅತಿ ಶೀಘ್ರದಲ್ಲೇ ಈ ಡೀಲ್ ಬಗ್ಗೆ ರಿವೀಲ್ ಮಾಡುವುದಾಗಿ ಸಂಜಯ್ ರಾವತ್ ಹೇಳಿಕೆ ನೀಡಿದ್ದಾರೆ. ಸದ್ಯ ಮಹಾರಾಷ್ಟ್ರ ರಾಜಕೀಯದಲ್ಲಿ ರಾವತ್ ಅವರ ಆರೋಪ ಸಂಚಲನ ಮೂಡಿಸಿದೆ.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆ ಪಕ್ಷದ ಹೆಸರು ಮತ್ತು ಪಕ್ಷದ ಚಿಹ್ನೆಯನ್ನು ನೀಡಿ ಚುನಾವಣಾ ಆಯೋಗ ಆದೇಶ ನೀಡಿತ್ತು. ಆ ಆದೇಶದ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ವಿರುದ್ಧವೂ ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದರು.