logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Tirupati Temple: ತಿರುಪತಿ ತಿಮ್ಮಪ್ಪನ ಖಜಾನೆ ಮೌಲ್ಯ ಎಷ್ಟು? ವಿಪ್ರೋ, ನೆಸ್ಲೆ ಕಂಪನಿಗಿಂತಲೂ ವೆಂಕಟೇಶ್ವರ ಶ್ರೀಮಂತ!

Tirupati temple: ತಿರುಪತಿ ತಿಮ್ಮಪ್ಪನ ಖಜಾನೆ ಮೌಲ್ಯ ಎಷ್ಟು? ವಿಪ್ರೋ, ನೆಸ್ಲೆ ಕಂಪನಿಗಿಂತಲೂ ವೆಂಕಟೇಶ್ವರ ಶ್ರೀಮಂತ!

HT Kannada Desk HT Kannada

Nov 07, 2022 06:14 AM IST

google News

ತಿರುಪತಿ ದೇವಸ್ಥಾನ(ಸಂಗ್ರಹ ಚಿತ್ರ)

    • ಏಳು ಬೆಟ್ಟಗಳ ಒಡೆಯ ಎಷ್ಟು ಶ್ರೀಮಂತ ಎಂದರೆ, ಇಷ್ಟೊಂದು ಆದಾಯ ದೇಶದ ಹಲವು ಪ್ರಮುಖ ಕಂಪನಿಗಳಿಗೆ ಇಲ್ಲ.
ತಿರುಪತಿ ದೇವಸ್ಥಾನ(ಸಂಗ್ರಹ ಚಿತ್ರ)
ತಿರುಪತಿ ದೇವಸ್ಥಾನ(ಸಂಗ್ರಹ ಚಿತ್ರ) (PTI)

ನವದೆಹಲಿ: ವಿಶ್ವವಿಖ್ಯಾತ ತಿರುಪತಿ ವೆಂಕಟೇಶ್ವರನ ಸನ್ನಿಧಾನ ಜಗತ್ತಿನ ಶ್ರೀಮಂತ ದೇಗುಲಗಳಲ್ಲಿ ಒಂದು ಎಂಬುದು ತಿಳಿದಿರುವ ಸಂಗತಿ. ಏಳು ಬೆಟ್ಟಗಳ ಮೇಲಿರುವ ವೆಂಕಟೇಶ್ವರನ್ನು ನೋಡಲು ದೇಶ ವಿದೇಶಗಳಿಂದ ಪ್ರತಿನಿತ್ಯ ಸಾವಿರ, ಲಕ್ಷ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಈಗಲೂ ಕೋಟಿಗಟ್ಟಲೆ ಬೆಲೆಬಾಳುವ ಚಿನ್ನಾಭರಣವನ್ನು ತಿಮ್ಮಪ್ಪನಿಗೆ ದೇಣಿಗೆಯಾಗಿ ನೀಡುವವರಿದ್ದಾರೆ.

ಏಳು ಬೆಟ್ಟಗಳ ಒಡೆಯ ಎಷ್ಟು ಶ್ರೀಮಂತ ಎಂದರೆ, ಇಷ್ಟೊಂದು ಆದಾಯ ದೇಶದ ಹಲವು ಪ್ರಮುಖ ಕಂಪನಿಗಳಿಗೆ ಇಲ್ಲ. ತಿರುಪತಿಯ ವಿಶ್ವವಿಖ್ಯಾತ ವೆಂಕಟೇಶ್ವರ ದೇವಸ್ಥಾನದ ಖಜಾನೆಯ ನಿವ್ವಳ ಆಸ್ತಿ ಮೌಲ್ಯ 2.5 ಲಕ್ಷ ಕೋಟಿ ರೂಪಾಯಿ. ವಿಶೇಷವೆಂದರೆ; ಐಟಿ ಸೇವಾ ಸಂಸ್ಥೆಯಾದ ವಿಪ್ರೋ, ಆಹಾರ ಮತ್ತು ಪಾನೀಯ ಕಂಪನಿ ನೆಸ್ಲೆ ಮತ್ತು ಸರ್ಕಾರಿ ಸ್ವಾಮ್ಯದ ತೈಲ ದೈತ್ಯ ONGC ಮತ್ತು IOCಗಳ ಮಾರುಕಟ್ಟೆ ಬಂಡವಾಳ ಕೂಡಾ ಇಷ್ಟು ಪ್ರಮಾಣದಲ್ಲಿಲ್ಲ.

1933ರಲ್ಲಿ ದೇವಸ್ಥಾನದ ಉಸ್ತುವಾರಿ ನೋಡಿಕೊಳ್ಳಲು ಸ್ಥಾಪನೆಯಾದ ತಿರುಮಲ ತಿರುಪತಿ ದೇವಸ್ಥಾನಮ್ಸ್(TTD), ಇದೇ ಮೊದಲ ಬಾರಿಗೆ ತನ್ನ ನಿವ್ವಳ ಮೌಲ್ಯವನ್ನು ಘೋಷಿಸಿದೆ. ಇದರ ಆಸ್ತಿಯಲ್ಲಿ ಬ್ಯಾಂಕ್‌ಗಳಲ್ಲಿ 10.25 ಟನ್ ಚಿನ್ನದ ಠೇವಣಿ, 2.5 ಟನ್ ಚಿನ್ನಾಭರಣ, ಬ್ಯಾಂಕ್‌ಗಳಲ್ಲಿ ಸುಮಾರು 16,000 ಕೋಟಿ ರೂಪಾಯಿ ಠೇವಣಿ ಮತ್ತು ಭಾರತದಾದ್ಯಂತ 960 ಆಸ್ತಿಗಳು ಸೇರಿವೆ. ಇವೆಲ್ಲದರ ಒಟ್ಟು ಮೌಲ್ಯ 2.5 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು. ಅಂದರೆ ಸುಮಾರು 30 ಬಿಲಿಯನ್ ಡಾಲರ್‌.

ಸ್ಟಾಕ್ ಎಕ್ಸ್ಚೇಂಜ್ ಡೇಟಾ ಪ್ರಕಾರ, ದೇವಸ್ತಾನದ ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯವು, ದೇಶದ ಹಲವಾರು ಉನ್ನತ ಕಂಪನಿಗಳಿಗಿಂತ ಹೆಚ್ಚು ಎಂಬುದು ವಿಶೇಷ. ಶುಕ್ರವಾರದ ವಹಿವಾಟಿನ ಅಂತ್ಯದ ವೇಳೆಗ ಬೆಂಗಳೂರು ಮೂಲದ ವಿಪ್ರೋ ಕಂಪನಿಯು 2.14 ಲಕ್ಷ ಕೋಟಿ ರೂಪಾಯಿಯಷ್ಟು ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಅಲ್ಟ್ರಾಟೆಕ್ ಸಿಮೆಂಟ್ 1.99 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ಸ್ವಿಟ್ಜರ್ಲ್ಯಾಂಡ್‌ ಮೂಲದ ಬಹುರಾಷ್ಟ್ರೀಯ ಆಹಾರ ಮತ್ತು ಪಾನೀಯದ ದೈತ್ಯ ನೆಸ್ಲೆಯ ಭಾರತ ಘಟಕವು 1.96 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಇದರ ಮೌಲ್ಯ ಕೂಡಾ ತಿರುಪತಿಗಿಂತ ಕಡಿಮೆಯಾಗಿದೆ.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಕೂಡಾ ದೇವಾಲಯದ ಟ್ರಸ್ಟ್‌ಗಿಂತ ಕಡಿಮೆ ಮಾರುಕಟ್ಟೆ ಮೌಲ್ಯವನ್ನು ಹೊಂದಿವೆ. ವಾಹನ ತಯಾರಕ ಕಂಪನಿ ಮಹೀಂದ್ರಾ ಮತ್ತು ಮಹೀಂದ್ರಾ ಮತ್ತು ಟಾಟಾ ಮೋಟಾರ್ಸ್, ವಿಶ್ವದ ಅತಿದೊಡ್ಡ ಕಲ್ಲಿದ್ದಲು ಉತ್ಪಾದಕ ಕೋಲ್ ಇಂಡಿಯಾ ಲಿಮಿಟೆಡ್, ಮೈನಿಂಗ್ ಕಾಂಗ್ಲೋಮರೇಟ್ ವೇದಾಂತ, ರಿಯಲ್ ಎಸ್ಟೇಟ್ ಸಂಸ್ಥೆ DLF ಮತ್ತು ಹಲವಾರು ಕಂಪನಿಗಳು ತಿರಪತಿಯಷ್ಟು ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿಲ್ಲ.

ಭಾರತದ ಕೇವಲ 10-12 ಕಂಪನಿಗಳು ಮಾತ್ರ ದೇವಾಲಯದ ಟ್ರಸ್ಟ್‌ನ ನೆಟ್‌ವರ್ತ್‌ಗಿಂತ ಹೆಚ್ಚಿನ ಮಾರುಕಟ್ಟೆ ಮೌಲ್ಯವನ್ನು ಹೊಂದಿವೆ. ಬಿಲಿಯನೇರ್ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (17.53 ಲಕ್ಷ ಕೋಟಿ ರೂ), ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (11.76 ಲಕ್ಷ ಕೋಟಿ ರೂ), ಎಚ್‌ಡಿಎಫ್‌ಸಿ ಬ್ಯಾಂಕ್ (8.34 ಲಕ್ಷ ಕೋಟಿ ರೂ), ಇನ್ಫೋಸಿಸ್ (6.37 ಲಕ್ಷ ಕೋಟಿ ರೂ), ಐಸಿಐಸಿಐ ಬ್ಯಾಂಕ್ (6.31 ಲಕ್ಷ ಕೋಟಿ ರೂ), ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (5.92 ಲಕ್ಷ ಕೋಟಿ ರೂ), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (5.29 ಲಕ್ಷ ಕೋಟಿ ರೂ), ಭಾರ್ತಿ ಏರ್‌ಟೆಲ್ (4.54 ಲಕ್ಷ ಕೋಟಿ ರೂ) ಮತ್ತು ಐಟಿಸಿ (4.38 ಲಕ್ಷ ಕೋಟಿರೂ) ತಿರುಪತಿ ದೇವಸ್ಥಾನಕ್ಕಿಂತ ಶ್ರೀಮಂತವಾಗಿದೆ.

ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರ ಅಥವಾ ಲಕ್ಷ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುತ್ತಾರೆ. ತಿಮ್ಮಪ್ಪನಿಗೆ ಭಕ್ತರು ಸಲ್ಲಿಸುವ ನಗದು ಮತ್ತು ಚಿನ್ನದ ಕಾಣಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಹೀಗಾಗಿ ಶ್ರೀಮಂತ ದೇವಸ್ಥಾನ ಮತ್ತಷ್ಟು ಶ್ರೀಮಂತವಾಗಿ ಬೆಳೆಯುತ್ತಿದೆ. ಬಡ್ಡಿದರಗಳ ಹೆಚ್ಚಳದ ದೃಷ್ಟಿಯಿಂದ ಬ್ಯಾಂಕ್‌ಗಳಲ್ಲಿನ ಸ್ಥಿರ ಠೇವಣಿಗಳು ಹೆಚ್ಚಿನ ಆದಾಯವನ್ನು ಗಳಿಸುತ್ತಿವೆ ಎಂದು ದೇವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ