India vs South Africa 1st T20I: ಇಂದು ಭಾರತ-ದ.ಆಫ್ರಿಕಾ ನಡುವಿನ ಮೊದಲ ಟಿ20 ಪಂದ್ಯ; ಗೆಲುವಿನ ವಿಶ್ವಾಸದಲ್ಲಿ ರೋಹಿತ್ ಪಡೆ
Sep 28, 2022 10:09 AM IST
ಬ್ಯಾಟಿಂಗ್ ವೇಳೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (ಪೋಟೋ-BCCI)
ತಿರುವನಂತಪುರಂನ ಗ್ರೀನ್‌ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿಂದು ಭಾರತ-ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ. ಟೀಂ ಇಂಡಿಯಾದ ಶಕ್ತಿ ಹೇಗಿದೆ ಅನ್ನೋದರ ಮಾಹಿತಿ ಇಲ್ಲಿದೆ.
ತಿರುವನಂತಪುರಂ: ಗ್ರೀನ್‌ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿಂದು ಭಾರತ-ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿದೆ. ಆಸೀಸ್ ವಿರುದ್ಧದ ಸರಣಿ ಗೆಲುವಿನ ಬಳಿಕ ವಿಶ್ವಾಸ ಹೆಚ್ಚಿಸಿಕೊಂಡಿರುವ ಟೀಂ ಇಂಡಿಯಾ ಹರಿಣಗಳ ವಿರುದ್ಧ ಗೆಲುವಿನ ಶುಭಾರಂಭ ಮಾಡಲು ಕಾತುರವಾಗಿದೆ. ಇದಕ್ಕಾಗಿ ನಿನ್ನೆ ನೆಟ್ ನಲ್ಲಿ ಅಭ್ಯಾಸದ ಮೂಲಕ ಬೆವರು ಹರಿಸಿದೆ.
ಇನ್ನ ತಂಡದ ವಿಚಾರಕ್ಕೆ ಬರುವುದಾದರೆ ಆರಂಭಿಕರಾದ ಕೆ.ಎಲ್.ರಾಹುಲ್ ಬ್ಯಾಟ್ ನಲ್ಲಿ ಇತ್ತೀಚೆಗೆ ರನ್ ಗಳು ಸಿಡಿಯುತ್ತಿಲ್ಲ. ಆಸೀಸ್ ವಿರುದ್ಧ ಕೆಎಲ್ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಆಸೀಸ್ ನೆಲದಲ್ಲಿ ನಡೆಯುವ ಟಿ20 ವಿಶ್ವಕಪ್ ಗೂ ಮುನ್ನ ನಡೆಯುವ ಈ ಕೊನೆಯ ಟಿ20 ಸರಣಿಯಲ್ಲಿ ರಾಹುಲ್ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಬೇಕಿದೆ.
ನಾಯಕ ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ಮಾಡುವುದರಲ್ಲಿ ಎರಡು ಮಾತಿಲ್ಲ. ಆಸ್ಟ್ರೇಲಿಯಾ ವಿರುದ್ಧ ಎರಡನೇ ಟಿ20 ಪಂದ್ಯ ತಲಾ 8 ಓವರ್ ಗಳಿಗೆ ಸೀಮಿತವಾಗಿತ್ತು. ಈ ಪಂದ್ಯದಲ್ಲಿ ರೋಹಿತ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದರು. ಇಂದಿನ ಪಂದ್ಯದಲ್ಲಿ ನಾಯಕ ಬ್ಯಾಟಿಂಗ್ ಮೂಲಕ ಭಾರಿ ಸದ್ದು ಮಾಡಿದರೆ ಗೆಲುವು ತಮ್ಮದಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಕಳೆದೆರಡು ವರ್ಷಗಳಿಂದ ಫಾರ್ಮ್ ಸಮಸ್ಯೆ ಅನುಭವಿಸಿ ಮಾಜಿ ಕ್ರಿಕೆಟರ್ ಗಳು ಸೇರಿದಂತೆ ಹಲವರಿಂದ ಟೀಕೆಗೆ ಗುರಿಯಾಗಿದ್ದ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಜಿಂಬಾಬ್ವೆ ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಜೊತೆಗೆ ಟಿ20 ಪಂದ್ಯದಲ್ಲೇ ಶತಕವನ್ನೂ ಸಿಡಿಸಿ ಆ ಬರವನ್ನು ನೀಗಿಸಿಕೊಂಡಿದ್ದರು. ತಮ್ಮ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ಕಾಂಗರೂಗಳ ವಿರುದ್ಧವೂ ಮುಂದುವರೆಸಿದ್ದ ವಿರಾಟ್ ಉತ್ತಮ ಫಾರ್ಮ್ ನಲ್ಲಿ ಇದ್ದಾರೆ. ಹರಿಣಗಳ ವಿರುದ್ಧವೂ ಕೊಹ್ಲಿ ತಮ್ಮ ವಿರಾಟ ರೂಪವನ್ನು ತೋರಿಸುವ ವಿಶ್ವಾಸದಲ್ಲಿ ಇದ್ದಾರೆ.
ಇನ್ನ 3ನೇ ಕ್ರಮಾಂದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಸೂರ್ಯಕುಮಾರ್ ಯಾದವ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆಸೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸಾಕಷ್ಟು ಕಳಪೆ ಬೌಲಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶಿಸುವ ಮೂಲಕ ಸೋಲು ಕಂಡಿತ್ತು. ಆ ತಪ್ಪುಗಳನ್ನು ಸರಿಪಡಿಸಿಕೊಂಡು ಬೌಲರ್ ಗಳು ಇವತ್ತು ಮಿಂಚಬೇಕಿದೆ. ದಕ್ಷಿಣ ಆಫ್ರಿಕಾ ತಂಡದಲ್ಲೂ ಚುಟುಕಿ ಕ್ರಿಕೆಟ್ ನಲ್ಲಿ ಸ್ಫೋಟಕ ಆಟವಾಡಬಲ್ಲ ಬ್ಯಾಟರ್ ಗಳು ಇದ್ದಾರೆ. ಇವರುಗಳನ್ನು ಅತಿ ಬೇಗ ಹಾಗೂ ಕಡಿಮೆ ರನ್ ಗೆ ಕಟ್ಟಿ ಹಾಕಬೇಕಿರುವ ಜವಾಬ್ದಾರಿ ಬುಮ್ರಾ ಬೌಲಿಂಗ್ ಪಡೆಯ ಮೇಲಿದೆ.
ಇಂಡಿಯಾ ತಂಡ: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), KL ರಾಹುಲ್ , ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್, ದೀಪಕ್ ಚಾಹರ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಾಹಲ್, ಹರ್ಷಲ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ದೀಪಕ್ ಹೂಡಾ
ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ತೆಂಬಾ ಬವುಮಾ (ನಾಯಕ), ರಿಲೀ ರೊಸ್ಸೌ, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಡ್ವೈನ್ ಪ್ರಿಟೋರಿಯಸ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಆನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ, ರೀಜಾ ಹೆಂಡ್ರಿಕ್ಸ್, ಲುಂಗಿ ಎನ್‌ಗಿಡಿ, ಕೇಶವ್ ಮಹಾರಾಜ್, ಹೆನ್ರಿಚ್ ಕ್ಲಾಸೆನ್‌ವೆನ್ವಿಯಮ್
ಪಂದ್ಯ: IND vs RSA, 1 ನೇ T20I, ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ, 2022
ದಿನಾಂಕ: ಬುಧವಾರ, ಸೆಪ್ಟೆಂಬರ್ 28, 2022
ಸಮಯ: 7:00 PM
ಸ್ಥಳ: ಗ್ರೀನ್‌ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂ, ತಿರುವನಂತಪುರಂ
ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಫಾಲೋಮಾಡಿ.
ವಿಭಾಗ