ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ
May 01, 2024 06:00 AM IST
ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ
- Paris Olympic 2024: ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 4 ವಿಭಾಗಗಳಲ್ಲಿ ಭಾರತದ 7 ಷಟ್ಲರ್ಗಳು ಪಾಲ್ಗೊಳ್ಳಲಿದ್ದಾರೆ. ಪಿವಿ ಸಿಂಧು, ಅಶ್ವಿನಿ ಪೊನ್ನಪ್ಪ, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಈ ಪಟ್ಟಿಯಲ್ಲಿದ್ದಾರೆ.
ಜುಲೈ 26ರಿಂದ ಶುರುವಾಗುವ ಬಹುನಿರೀಕ್ಷಿತ ಪ್ಯಾರಿಸ್ ಒಲಿಂಪಿಕ್ಸ್ಗೆ ಕನ್ನಡತಿ ಅಶ್ವಿನಿ ಪೊನ್ನಪ್ಪ (Ashwini Ponnappa), ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು (PV Sindhu) ಸೇರಿ ಭಾರತದ 7 ಷಟ್ಲರ್ಗಳು ಅರ್ಹತೆ ಪಡೆದಿದ್ದಾರೆ. ಕರ್ನಾಟಕದ ಅಶ್ವಿನಿ ಪೊನ್ನಪ್ಪ ಅವರಿಗೆ ಮಹಿಳಾ ಡಬಲ್ಸ್‌ನಲ್ಲಿ ಒಲಿಂಪಿಕ್ಸ್ ಟಿಕೆಟ್ ದೊರೆತಿದೆ. 2024ರ ಪ್ಯಾರಿಸ್ ಒಲಿಂಪಿಕ್ಸ್ 4 ವಿಭಾಗಗಳಲ್ಲಿ ಈ 7 ಷಟ್ಲರ್ಗಳು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಲಕ್ಷ್ಯ ಸೇನ್ ಮತ್ತು ಎಚ್‌ಎಸ್ ಪ್ರಣಯ್ ಪುರುಷರ ಸಿಂಗಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. 3ನೇ ಒಲಿಂಪಿಕ್ಸ್ ಪದಕ ಗೆಲ್ಲುವ ತವಕದಲ್ಲಿರುವ ಪಿವಿ ಸಿಂಧು ಮಹಿಳೆಯರ ಸಿಂಗಲ್ಸ್‌ನಲ್ಲಿ ಭಾರತದ ಏಕೈಕ ಪ್ರತಿನಿಧಿಯಾಗಲಿದ್ದಾರೆ. ಸ್ಟಾರ್ ಷಟ್ಲರ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಪುರುಷರ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದರೆ, ತನಿಶಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪ ಜೋಡಿ ಮಹಿಳೆಯರ ಡಬಲ್ಸ್‌ನಲ್ಲಿ ಭಾಗವಹಿಸಲಿದ್ದಾರೆ.
ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಫೆಡರೇಷನ್ನ ಒಲಿಂಪಿಕ್ಸ್ ಅರ್ಹತಾ ಶ್ರೇಯಾಂಕದ ಅನ್ವಯ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ಏಪ್ರಿಲ್ 29ರ ಸೋಮವಾರ ಅಂತಿಮ ಗಡುವು ಆಗಿತ್ತು. ಒಲಿಂಪಿಕ್ಸ್ ಅರ್ಹತಾ ರ್ಯಾಂಕಿಂಗ್ ಅನ್ವಯ ಸಿಂಗಲ್ಸ್ ವಿಭಾಗದಲ್ಲಿ ಅಗ್ರ 16 ಷಟ್ಲರ್ಗಳಿಗೆ ಅರ್ಹತೆ ನೀಡಲಾಗಿದೆ. ಮಾಜಿ ವಿಶ್ವ ಚಾಂಪಿಯನ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು 12ನೇ ಸ್ಥಾನವನ್ನು ಪಡೆದುಕೊಂಡರೆ, ಪುರುಷರ ಸಿಂಗಲ್ಸ್‌ನಲ್ಲಿ ಪ್ರಣಯ್ ಮತ್ತು ಸೇನ್ ಕ್ರಮವಾಗಿ 9 ಮತ್ತು 13ನೇ ಸ್ಥಾನ ಪಡೆದಿದ್ದಾರೆ.
ಕಳೆದೊಂದು ವರ್ಷದಿಂದ ಸಿಂಧು ಕಳಪೆ ಪ್ರದರ್ಶನ
2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ, 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಪಿವಿ ಸಿಂಧು, ಮತ್ತೊಂದು ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಅವರು ಕಳಪೆ ಪ್ರದರ್ಶನ ನೀಡಿದ್ದಾರೆ. ಭಾರತದ ಅಸಾಧಾರಣ ಪುರುಷರ ಡಬಲ್ಸ್ ಜೋಡಿ, ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಒಲಿಂಪಿಕ್ ಅರ್ಹತಾ ಸುತ್ತು ಮುಕ್ತಾಯದಲ್ಲಿ ಮೂರನೇ ಸ್ಥಾನವನ್ನು ಪಡೆದರು.
ಸಾತ್ವಿಕ್ ಮತ್ತು ಚಿರಾಗ್ ಅವರು ಬ್ಯಾಡ್ಮಿಂಟನ್‌ನಲ್ಲಿ ದೇಶದ ಪ್ರಧಾನ ಪದಕ ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ಜೋಡಿ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ ಅರ್ಹತಾ ಶ್ರೇಯಾಂಕದಲ್ಲಿ 13 ನೇ ಸ್ಥಾನ ಗಳಿಸಿದ್ದಾರೆ. ಆದರೆ, ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿ ಅರ್ಹತೆ ಪಡೆಯುವಲ್ಲಿ ಸ್ವಲ್ಪದರಲ್ಲೇ ವಂಚಿತವಾಯಿತು.
ಬ್ಯಾಡ್ಮಿಂಟ್ನಲ್ಲಿ ಭಾರತಕ್ಕೆ 3 ಪದಕ
ಭಾರತವು ಬ್ಯಾಡ್ಮಿಂಟನ್‌ನಲ್ಲಿ ಒಟ್ಟು ಮೂರು ಒಲಿಂಪಿಕ್ ಪದಕಗಳನ್ನು ಗೆದ್ದಿದೆ. ಇವೆಲ್ಲವೂ ಮಹಿಳಾ ಸಿಂಗಲ್ಸ್‌ನಲ್ಲಿ ಬಂದಿರುವುದು ವಿಶೇಷ. ಸಿಂಧು ಸತತ ಆವೃತ್ತಿಗಳಲ್ಲಿ ಪದಕ ಗೆಲ್ಲುವ ಮುನ್ನ ಸೈನಾ ನೆಹ್ವಾಲ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದರು. ಭಾರತವು 2020 ರಲ್ಲಿ ಟೋಕಿಯೊ ಗೇಮ್ಸ್‌ನಲ್ಲಿ ಮೂರು ವಿಭಾಗಗಳಲ್ಲಿ 4 ಷಟ್ಲರ್‌ಗಳನ್ನು ಕಳುಹಿಸಿತ್ತು. ಪುರುಷರ ಸಿಂಗಲ್ಸ್‌ನಲ್ಲಿ ಬಿ ಸಾಯಿ ಪ್ರಣೀತ್ ಭಾರತದ ಏಕೈಕ ಪ್ರತಿನಿಧಿಯಾಗಿದ್ದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಸಿಂಧು ಮತ್ತು ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್-ಚಿರಾಗ್ ಭಾಗವಹಿಸಿದ್ದರು. ಈ ಒಲಿಂಪಿಕ್ಸ್‌ನಲ್ಲಿ ಸಿಂಧು ಕಂಚು ಗೆದ್ದರೆ, ಸಾಯಿ ಪ್ರಣೀತ್ ಗ್ರೂಪ್ ಸ್ಟೇಜ್‌ನಲ್ಲಿ ತನ್ನ ಎರಡೂ ಪಂದ್ಯಗಳನ್ನು ಸೋತ ನಂತರ ಎಲಿಮಿನೇಷನ್ ಸುತ್ತಿಗೆ ಮುನ್ನಡೆಯಲು ವಿಫಲರಾದರು. ಸಾತ್ವಿಕ್-ಚಿರಾಗ್ ಕೂಡ ಮೂರರಲ್ಲಿ ಎರಡರಲ್ಲಿ ಗೆದ್ದರೂ ಗುಂಪು ಹಂತವನ್ನು ಮೀರಿ ಮುನ್ನಡೆಯಲು ಸಾಧ್ಯವಾಗಲಿಲ್ಲ.