FIFA World Cup 2022: ಬಲಿಷ್ಠ ಬ್ರೆಜಿಲ್‌ಗೆ ಇಂದು ಸ್ವಿಟ್ಜರ್ಲೆಂಡ್ ಚಾಲೆಂಜ್; ರೊನಾಲ್ಡೊ ಬಳಗಕ್ಕೆ ಸವಾಲು ಹಾಕುತ್ತಾ ಉರುಗ್ವೆ
Nov 28, 2022 01:46 PM IST
ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ಉರುಗ್ವೆ ವಿರುದ್ಧ ಸೆಣಸಲಿದೆ
- ಇಂದಿನ ಪಂದ್ಯಗಳು…
- ಕ್ಯಾಮರೂನ್ ಮತ್ತು ಸೆರ್ಬಿಯಾ
- ದಕ್ಷಿಣ ಕೊರಿಯಾ ವಿರುದ್ಧ ಘಾನಾ
- ಬ್ರೆಜಿಲ್ ವಿರುದ್ಧ ಸ್ವಿಟ್ಜರ್ಲೆಂಡ್
- ಪೋರ್ಚುಗಲ್ ವಿರುದ್ಧ ಉರುಗ್ವೆ
ಕತಾರ್: ಫಿಫಾ ವಿಶ್ವಕಪ್ 2022ರ ಮತ್ತೊಂದು ರೋಚಕ ದಿನ ಬಂದಿದೆ. ಈಗಾಗಲೇ ನಡೆದ ಬೆರಳೆಣಿಕೆಯ ಪಂದ್ಯದಲ್ಲಿ ಕೆಲ ತಂಡಗಳು ಗ್ರೂಪ್ ಹಂತದಲ್ಲೇ ನಿರ್ಗಮಿಸಿವೆ. ಬಲಿಷ್ಠ ತಂಡಗಳಿಗೆ ‘ಸುಲಭ ತುತ್ತು’ ಎನಿಸಿದ್ದ ತಂಡಗಳು ಶಾಕ್ ಕೊಟ್ಟಿವೆ. ಇಂದು ಕೂಡಾ ಬಲಿಷ್ಠ ತಂಡಗಳ ನಡುವೆ ಪೈಪೋಟಿ ನಡೆಯಲಿದ್ದು, ಅಭಿಮಾನಿಗಳು ಕಾಯುತ್ತಿದ್ದಾರೆ.
ಜಿ ಗುಂಪಿನ ಪಂದ್ಯದಲ್ಲಿ ಇಂದು ಫುಟ್ಬಾಲ್‌ನ ಬಲಿಷ್ಠ ಬ್ರೆಜಿಲ್ ತಂಡವು ಸ್ವಿಟ್ಜರ್ಲೆಂಡ್ ವಿರುದ್ಧ ಸೆಣಸಲಿದೆ. ಇನ್ನೊಂದು ಪಂದ್ಯದಲ್ಲಿ ಕ್ಯಾಮರೂನ್ ಮತ್ತು ಸೆರ್ಬಿಯಾ ನಡುವೆ ಹಣಾಹಣಿ ನಡೆಯಲಿದೆ. ಇನ್ನೊಂದೆಡೆ ದಕ್ಷಿಣ ಕೊರಿಯಾ ಘಾನಾ ವಿರುದ್ಧ ಸೆಣಸಿದರೆ, ಹೆಚ್ ಗುಂಪಿನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತಂಡವು ಉರುಗ್ವೆ ವಿರುದ್ಧ ಸೆಣಸಲಿದೆ.
ಫಾರ್ವರ್ಡ್ ಆಟಗಾರ ನೇಮರ್ ಅವರನ್ನು ಗುಂಪು ಪಂದ್ಯಗಳಿಂದ ಹೊರಗಿಡಲಾಗಿದ್ದು, ಬ್ರೆಜಿಲ್‌ಗೆ ದೊಡ್ಡ ಹೊಡೆತ ಬಿದ್ದಂತಾಗಿದೆ. ನಾಕೌಟ್ ಹಂತಕ್ಕೆ ಪ್ರವೇಶಿಸುವ ಅವಕಾಶವನ್ನು ಬಲಪಡಿಸಲು ದಕ್ಷಿಣ ಅಮೆರಿಕದ ತಂಡವು ಇಂದು ಸ್ವಿಟ್ಜರ್ಲೆಂಡ್ ವಿರುದ್ಧ ಗೆಲ್ಲಬೇಕಾಗಿದೆ. ಈ ನಡುವೆ, ಪಂದ್ಯಾವಳಿಯಲ್ಲಿ ಮೊದಲ ಪಂದ್ಯದಲ್ಲಿ ಕ್ಯಾಮರೂನ್ ವಿರುದ್ಧ 1-0 ಅಂತರಿಂದ ಗೆದ್ದ ಬಳಿಕ ಸ್ವಿಟ್ಜರ್ಲೆಂಡ್ ಉತ್ತಮ ಜೋಶ್‌ನಲ್ಲಿದೆ. ಇತ್ತ ಕ್ಯಾಮರೂನ್ ಮತ್ತು ಸೆರ್ಬಿಯಾ ತಂಡಗಳು, ಇನ್ನೂ ತಮ್ಮ ಗೆಲುವಿನ ಖಾತೆಯನ್ನು ತೆರೆದಿಲ್ಲ. ಹೀಗಾಗಿ ಇವೆರಡರ ನಡುವೆ ಇಂದು ಸೋತ ತಂಡವು, ಪಂದ್ಯಾವಳಿಯಿಂದ ಹೊರಬೀಳುವುದು ಬಹುತೇಕ ಖಚಿತ.
ಘಾನಾ ವಿರುದ್ಧ ಸಾಗಿದ ಕಠಿಣ ಪೈಪೋಟಿಯಲ್ಲಿ ಪೋರ್ಚುಗಲ್ 3-2 ಅಂತರದಲ್ಲಿ ಜಯಗಳಿಸಿತ್ತು. ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಡ್ರಾ ಸಾಧಿಸಿದ ಉರುಗ್ವೆಯನ್ನು ಹಿಂದಿಕ್ಕಲು ರೊನಾಲ್ಡೊ ಪಡೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಈ ನಡುವೆ ಘಾನಾ ತಂಡವು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸುತ್ತದೆ. ಇಲ್ಲಿ ಕೂಡಾ ಸೋತ ತಂಡ ಪಂದ್ಯಾವಳಿಯಿಂದ ನಿರ್ಗಮಿಸುತ್ತದೆ.
ಇಂದಿನ ಪಂದ್ಯಗಳು
ಕ್ಯಾಮರೂನ್ ಮತ್ತು ಸೆರ್ಬಿಯಾ
ದಕ್ಷಿಣ ಕೊರಿಯಾ ವಿರುದ್ಧ ಘಾನಾ
ಬ್ರೆಜಿಲ್ ವಿರುದ್ಧ ಸ್ವಿಟ್ಜರ್ಲೆಂಡ್
ಪೋರ್ಚುಗಲ್ ವಿರುದ್ಧ ಉರುಗ್ವೆ
ಪಂದ್ಯದ ಸಮಯ
ಮೊದಲ ಮೂರು ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಸೋಮವಾರ ನಡೆಯಲಿವೆ. ಆದರೆ ಪೋರ್ಚುಗಲ್ ಮತ್ತು ಉರುಗ್ವೆ ನಡುವಿನ ನಾಲ್ಕನೇ ಪಂದ್ಯ ತಡರಾತ್ರಿ ನಡೆಯಲಿದೆ. ಅಂದರೆ, ಭಾರತದ ಕಾಲಮಾನದ ಪ್ರಕಾರ ಇದು ಮಂಗಳವಾರಕ್ಕೆ ಸೇರುತ್ತದೆ.
ಕ್ಯಾಮರೂನ್ ಮತ್ತು ಸೆರ್ಬಿಯಾ ನಡುವಿನ ಪಂದ್ಯವು ಭಾರತದಲ್ಲಿ ಮಧ್ಯಾಹ್ನ 3.30ಕ್ಕೆ ಪ್ರಾರಂಭವಾಗುತ್ತದೆ. ದಕ್ಷಿಣ ಕೊರಿಯಾ ವಿರುದ್ಧ ಘಾನಾ ಸೆಣಸಾಟವು ಸಂಜೆ 6.30ಕ್ಕೆ ನಡೆಯಲಿದ್ದು, ಬ್ರೆಜಿಲ್ ಹಾಗೂ ಸ್ವಿಟ್ಜರ್ಲೆಂಡ್ ಪಂದ್ಯವು ರಾತ್ರಿ 9.30ಕ್ಕೆ ನಡೆಯಲಿದೆ. ಪೋರ್ಚುಗಲ್ ಮತ್ತು ಉರುಗ್ವೆ ನಡುವಿನ ರೋಚಕ ಪಂದ್ಯವು ಮಧ್ಯರಾತ್ರಿ 12.30ಕ್ಕೆ ನಡೆಯಲಾಗಿದೆ.
ಪಂದ್ಯಗಳು ಎಲ್ಲಿ ನಡೆಯಲಿವೆ?
ಕ್ಯಾಮರೂನ್ ಮತ್ತು ಸೆರ್ಬಿಯಾ ನಡುವಿನ ಪಂದ್ಯವು ಅಲ್ ಜನೌಬ್ ಸ್ಟೇಡಿಯಂನಲ್ಲಿ ನಡೆಯಲಿದೆ. ದಕ್ಷಿಣ ಕೊರಿಯಾ ಮತ್ತು ಘಾನಾ ಪಂದ್ಯ ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ಆಡಲಾಗುತ್ತದೆ. ಬ್ರೆಜಿಲ್ ಮತ್ತು ಸ್ವಿಟ್ಜರ್ಲೆಂಡ್ ಪಂದ್ಯ ಸ್ಟೇಡಿಯಂ 974ನಲ್ಲಿ ಆಯೋಜಿಸಲಾಗುತ್ತದೆ. ಪೋರ್ಚುಗಲ್ ಮತ್ತು ಉರುಗ್ವೆ ನಡುವಿನ ಪಂದ್ಯವು ಲುಸೇಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇಂದಿನ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ವಿವರ
ಇಂದಿನ ಎಲ್ಲಾ ನಾಲ್ಕು ಪಂದ್ಯಗಳು Sports18 ಮತ್ತು Sports18 HD ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ ಈ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.