ಕನ್ನಡ ಕ್ಯಾಲೆಂಡರ್ 2024

ಕರ್ನಾಟಕದಲ್ಲಿ ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷವು ಚೈತ್ರ ಮಾಸದ ಮೊದಲ ದಿನವಾದ ಯುಗಾದಿಯಿಂದ ಪ್ರಾರಂಭವಾಗುತ್ತದೆ. ಚೈತ್ರದ ನಂತರ ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ ಮತ್ತು ಫಾಲ್ಗುಣ ಮಾಸಗಳು ಬರುತ್ತವೆ. ಚೈತ್ರ ಮಾಸದಲ್ಲಿ ಚೈತ್ರ ನವರಾತ್ರಿ, ಶ್ರೀ ರಾಮನವಮಿ ಮತ್ತು ಹನುಮ ಜಯಂತಿ ಪ್ರಮುಖ ಹಬ್ಬಗಳು. ಬ್ರಹ್ಮದೇವನು ಚೈತ್ರ ಮಾಸದ ಮೊದಲ ದಿನದಿಂದ ವಿಶ್ವದ ಸೃಷ್ಟಿಯನ್ನು ಪ್ರಾರಂಭಿಸಿದನು ಎಂದು ಪುರಾಣಗಳು ಹೇಳುತ್ತವೆ. ಕರ್ನಾಟಕದಲ್ಲಿ ರೈತರು ಯುಗಾದಿಯಂದು ಸಾಂಕೇತಿಕವಾಗಿ “ಅರಂಭ” (ಬೇಸಾಯ) ಮಾಡುವುದು ವಾಡಿಕೆ.

ಚೈತ್ರದ ನಂತರ ಬರುವ, ಎರಡನೇ ಮಾಸವಾಗಿರುವ ವೈಶಾಖ ಮಾಸವು ವಿಷ್ಣುವಿನ ಆರಾಧನೆಗೆ ವಿಶೇಷ ಖ್ಯಾತಿ ಪಡೆದಿದೆ. ಸ್ಕಂದ ಪುರಾಣವು ವೈಶಾಖ ಮಾಸದ ಬಗ್ಗೆ ಸಾಕಷ್ಟು ವಿವರಗಳನ್ನು ಕೊಟ್ಟಿದೆ. ಮೂರನೇ ತಿಂಗಳು ಅಂದರೆ ಜ್ಯೇಷ್ಠ ಮಾಸದಲ್ಲಿ ಬಿಸಿಲು ಪ್ರಖರವಾಗಿರುತ್ತದೆ. ಈ ಮಾಸದಲ್ಲಿ ನೀರು ಮತ್ತು ನೀರು ಶೇಖರಿಸುವ ಪಾತ್ರೆಗಳ ದಾನಕ್ಕೆ ವಿಶೇಷ ಮಹತ್ವ ಇದೆ. ಶೀತಲ ಅಷ್ಟಮಿ, ವಟ ಸಾವಿತ್ರಿ ವ್ರತ, ನಿರ್ಜಲ ಏಕಾದಶಿ ಮುಂತಾದ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳು ಈ ತಿಂಗಳಲ್ಲಿ ಬರುತ್ತದೆ.

ನಾಲ್ಕನೇ ತಿಂಗಳಾದ ಆಷಾಢ ಮಾಸದಲ್ಲಿ ಧಾರ್ಮಿಕ ಆಚರಣೆಗಳು ಕಡಿಮೆ. ಬೇಸಾಯದ ಚಟುವಟಿಕೆಗಳು ಹೆಚ್ಚು. ಆಷಾಢದಲ್ಲಿ ಯೋಗಿನಿ ಏಕಾದಶಿ, ಜಗನ್ನಾಥನ ರಥಯಾತ್ರೆ, ದೇವಶಯನ ಏಕಾದಶಿ ಮುಂತಾದವು ಪ್ರಮುಖ ಧಾರ್ಮಿಕ ವಿದ್ಯಮಾನಗಳಾಗಿವೆ. ಈ ಮಾಸದ ವಿಶೇಷವೆಂದರೆ ಈ ಮಾಸದ ದೇವಸಯನಿ ಏಕಾದಶಿಯಿಂದ ವಿಷ್ಣುವು ನಿದ್ರಿಸುತ್ತಾನೆ. ಅಂದಿನಿಂದಲೇ ಚಾತುರ್ಮಾಸ ಆರಂಭವಾಗುತ್ತದೆ. ಶೃಂಗೇರಿ, ಉತ್ತರಾದಿಮಠ ಸೇರಿದಂತೆ ಹಲವು ಪ್ರಮುಖ ಮಠಗಳ ಸ್ವಾಮಿಗಳು ಚಾತುರ್ಮಾಸ ವಿಶೇಷ ಕೈಂಕರ್ಯಗಳಿಗಾಗಿ ಒಂದೆಡೆ ನಿಲ್ಲುತ್ತಾರೆ.

ಆಷಾಢದ ನಂತರ ಬರುವ ಶ್ರಾವಣ ಎಂದರೆ ಉತ್ಸಾಹದ ಮಾಸ ಎಂದೇ ಹೆಸರುವಾಸಿ. ಆಷಾಢದಲ್ಲಿ ಸಾಲುಸಾಲು ಹಬ್ಬಗಳಿವೆ. ಇದನ್ನು ಹಬ್ಬಗಳ ತಿಂಗಳು ಎಂದೂ ಕರೆಯುತ್ತಾರೆ. ಶ್ರಾವಣ ಸೋಮವಾರ, ಶ್ರಾವಣ ಶುಕ್ರವಾರ ಮತ್ತು ಶ್ರಾವಣ ಶನಿವಾರಗಳಂದು ಹಲವು ಮನೆತನಗಳಲ್ಲಿ ವಿಶೇಷ ಆಚರಣೆಗಳನ್ನು ನಡೆಸುವ ಪರಂಪರೆ ಬೆಳೆದುಬಂದಿದೆ.

ಭಾದ್ರಪದ ಮಾಸದಲ್ಲಿ ವಿನಾಯಕ ಚೌತಿ (ಗಣೇಶ ಚತುರ್ಥಿ) ಮತ್ತು ಅನಂತ ಚತುರ್ದಶಿ ಪ್ರಮುಖ ಹಬ್ಬಗಳಾಗಿವೆ. ಪಂಚಾಂಗದ 7ನೇ ತಿಂಗಳಾದ ಅಶ್ವಯುಜ ಮಾಸವು ದೇವಿ ಆರಾಧನೆಗೆ ಪ್ರಸಿದ್ಧಿ. ಶುಕ್ಲಪಕ್ಷದ ಪಾಡ್ಯದಿಂದ ನವಮಿ ವರೆಗಿನ 9 ದಿನಗಳನ್ನು ನವರಾತ್ರಿ ಎಂದು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತದೆ. 10ನೇ ದಿನವು ವಿಜಯದಶಮಿ ಎಂದು ಹೆಸರುವಾಸಿಯಾಗಿದೆ. ಮೈಸೂರಿನಲ್ಲಿ ದಸರಾ ಮೆರವಣಿಗೆ, ಜಂಬೂ ಸವಾರಿ ನಡೆಯುತ್ತದೆ. ನೆರೆಯ ಆಂಧ್ರ-ತೆಲಂಗಾಣ ರಾಜ್ಯಗಳಲ್ಲಿ ಪ್ರಸಿದ್ಧ ‘ಬತುಕಮ್ಮ’ ಹಬ್ಬ ಇದೇ ಅವಧಿಯಲ್ಲಿ ನಡೆಯುತ್ತದೆ. ದುರ್ಗಾಷ್ಟಮಿ, ಮಹಾನವಮಿ ಸಹ ಇದೇ ನವರಾತ್ರಿಯಲ್ಲಿ ನಡೆಯುತ್ತವೆ.

ಆಶ್ವಯುಜದ ನಂತರ ಬರುವುದು ಕಾರ್ತಿಕ ಮಾಸ. ಇದು ದೀಪೋತ್ಸವಗಳಿಗೆ ಹೆಸರುವಾಸಿಯಾದ ತಿಂಗಳು. ಈ ತಿಂಗಳಲ್ಲಿ ಭಗವಾನ್ ವಿಷ್ಣುವು ಎಚ್ಚರಗೊಳ್ಳುತ್ತಾನೆ. ಕಾರ್ತಿಕ ಮಾಸದಲ್ಲಿ ಉಪವಾಸ ಮತ್ತು ಹಬ್ಬಗಳನ್ನು ಆಚರಿಸಲಾಗುತ್ತದೆ. ಕಾರ್ತಿಕ ಪೌರ್ಣಮಿ, ರಾಮ ಏಕಾದಶಿ, ಧನತ್ರಯೋದಶಿ, ದೀಪಾವಳಿ, ನರಕ ಚತುರ್ದಶಿ, ಭಗಿನಿ ಗೃಹೇ ಭೋಜನ, ಗೋವರ್ಧನ ಪೂಜೆ, ಅಕ್ಷಯ ನವಮಿ, ತುಳಸಿ ವಿವಾಹ ಸೇರಿದಂತೆ ಹಲವು ಹಬ್ಬಗಳಿವೆ. ಶಿವನ ದೇಗುಲಗಳಲ್ಲಿ ಲಕ್ಷ ದೀಪೋತ್ಸವಗಳು ನಡೆಯುತ್ತವೆ.

ಪಂಚಾಂಗದಲ್ಲಿ 9ನೇ ತಿಂಗಳನ್ನು ಮಾರ್ಗಶಿರ ಎಂದು ಕರೆಯುತ್ತಾರೆ. ಮೋಕ್ಷದ ಏಕಾದಶಿ ಮತ್ತು ವಿವಾಹ ಪಂಚಮಿ ಈ ಮಾಸದ ವಿಶೇಷಗಳು. ಪುಷ್ಯ ಮಾಸವು ಚಳಿಗಾಲದ ಮೊದಲ ತಿಂಗಳು. ನಂತರ ಬರುವ ಮಾಘದಲ್ಲಿ ಚಳಿ ಹೆಚ್ಚು. ಈ ತಿಂಗಳಲ್ಲಿ ಸೂರ್ಯೋದಯಕ್ಕೆ ಮೊದಲೇ ಎದ್ದು ಸ್ನಾನ, ಪೂಜೆ ಮುಗಿಸಿ ದೇವಸ್ಥಾನಗಳಿಗೆ ಭೇಟಿ ನೀಡುವ ವಾಡಿಕೆಯನ್ನು ಹಲವರು ಇರಿಸಿಕೊಂಡಿದ್ದಾರೆ. ಈ ಮಾಸದಲ್ಲಿ ಒಕ್ಕಲು ಮಕ್ಕಳ ನೆಚ್ಚಿನ ಹಬ್ಬ ಮಕರ ಸಂಕ್ರಾಂತಿ ಬರುತ್ತದೆ. ಸಂಕ್ರಮಣದ ನಂತರ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತದೆ. ಮಹಾ ಶಿವರಾತ್ರಿ ಸಹ ಇದೇ ತಿಂಗಳಲ್ಲಿ ಬರುತ್ತದೆ. ವೈದಿಕ ಕನ್ನಡ ಪಂಚಾಂಗದ 12ನೇ ತಿಂಗಳನ್ನು ಫಾಲ್ಗುಣ ಮಾಸ ಎನ್ನುತ್ತಾರೆ. ಹೋಳಿಯಂಥ ಹಲವು ಪ್ರಮುಖ ಹಬ್ಬಗಳು ಈ ಮಾಸದಲ್ಲಿ ಬರುತ್ತವೆ.

January 2024

February 2024

March 2024

April 2024

May 2024

June 2024

July 2024

August 2024

September 2024

October 2023

November 2024

December 2024


ಧಾರ್ಮಿಕ ಶ್ರದ್ಧಾಳುಗಳಿಗೆ ಪಂಚಾಂಗ ಅತ್ಯಗತ್ಯ ಮಾಹಿತಿ ಒದಗಿಸುವ ಪ್ರಮುಖ ದಾಖಲೆಯಾಗಿದೆ. ಪಂಚಾಂಗ ಎಂದರೆ ಐದು ಮುಖ್ಯ ಅಂಶಗಳನ್ನು ಒಳಗೊಂಡಿರುವ ಪರಿಪೂರ್ಣ ಮಾಹಿತಿ ಒದಗಿಸುವ ದಾಖಲೆ ಎಂದು ಅರ್ಥ. ಹಿಂದೂ ಪರಂಪರೆಯಲ್ಲಿ ತಿಥಿ, ನಕ್ಷತ್ರ, ಯೋಗ, ಕರಣ, ವಾರ ಸೇರಿ ಪಂಚಾಂಗಳು ರೂಪುಗೊಳ್ಳುತ್ತವೆ. ಕರ್ನಾಟಕದ ಬಹುತೇಕ ಕಡೆ ಚಾಂದ್ರಮಾನ ಪದ್ಧತಿ ಅನುಸರಿಸುತ್ತಾರೆ. ದಕ್ಷಿಣ ಕನ್ನಡ, ಕಾಸರಗೋಡು ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಸೌರಮಾನ ಪದ್ಧತಿಯೂ ಆಚರಣೆಯಲ್ಲಿದೆ.

ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಜನವರಿ ಹೊಸ ವರ್ಷದ ಮೊದಲ ತಿಂಗಳು. ಕರ್ನಾಟಕದ ಹಿಂದೂ ಧಾರ್ಮಿಕ ಪಂಚಾಂಗದ ಪ್ರಕಾರ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯ ಹೊಸ ವರ್ಷದ ಮೊದಲ ದಿನವಾಗುತ್ತದೆ. ಇದನ್ನು ಯುಗಾದಿ ಎನ್ನುತ್ತಾರೆ. ಫಾಲ್ಗುಣ ಮಾಸ ಕೃಷ್ಣ ಪಕ್ಷದ ಅಮಾವಾಸ್ಯೆಯು ವರ್ಷದ ಕೊನೆಯ ದಿನವಾಗುತ್ತದೆ. ಇದನ್ನೇ “ಯುಗಾದಿ ಅಮಾವಾಸ್ಯೆ” ಎನ್ನುತ್ತಾರೆ. ಹಿಂದೂ ಧಾರ್ಮಿಕ ಪರಂಪರೆಯ ಪ್ರಕಾರ ಪಂಚಾಂಗದಲ್ಲಿ ಒಟ್ಟು 12 ಮಾಸಗಳಿವೆ. 30 ದಿನಗಳಿಗೆ ಒಂದು ಮಾಸದಂತೆ ವಿಂಗಡಿಸಲಾಗಿದೆ. ಪ್ರತಿ ಮಾಸವನ್ನು ಚಂದ್ರನ ಏರಿಳಿತ ಅನುಸರಿಸಿ ಶುಕ್ಲ ಪಕ್ಷ ಮತ್ತು ಕೃಷ್ಣಪಕ್ಷ ಎಂದು ವಿಂಗಡಿಸಲಾಗಿದೆ. ಪಾಡ್ಯದಿಂದ ಚತುರ್ದಶಿಯವರೆಗಿನ 14 ದಿನಗಳು ಎರಡೂ ಪಕ್ಷಗಳಿಗೆ ಸಾಮಾನ್ಯವಾಗಿವೆ. ಪೂರ್ಣ ಚಂದ್ರ ಕಾಣುವ 15ನೇ ದಿನ ಹುಣ್ಣಿಮೆಯಾಗುತ್ತದೆ. ಚಂದ್ರನೇ ಕಾಣಿಸದ 15ನೇ ದಿನ ಅಮಾವಾಸ್ಯೆ ಆಗುತ್ತದೆ. ಪ್ರತಿ ಪಕ್ಷದ 11ನೇ ದಿನವನ್ನು ಏಕಾದಶಿ ಎಂದು ಕರೆಯುತ್ತಾರೆ. ವೈಷ್ಣವರು ಉಪವಾಸ ಮಾಡುವ ದಿನ ಇದು.

ಶುಕ್ಲ ಮತ್ತು ಕೃಷ್ಣ ಪಕ್ಷಗಳ ಮೊದಲ ದಿನವು ಪಾಡ್ಯದಿಂದ ಆರಂಭವಾಗುತ್ತದೆ. ಇದನ್ನೇ ಪ್ರತಿಪದೆ, ಪಾಡ್ಯಮಿ ಎಂದೂ ಕರೆಯಲಾಗುತ್ತದೆ. ನಂತರದ ದಿನಗಳನ್ನು ಬಿದಿಗೆ (ದ್ವಿತೀಯ), ತದಿಗೆ (ತೃತೀಯ), ಚೌತಿ (ಚತುರ್ಥಿ), ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ ಮತ್ತು ಹುಣ್ಣಿಮೆ / ಅಮವಾಸ್ಯೆ ಎಂದು ಗುರುತಿಸಲಾಗಿದೆ.

ಕೆಲವೊಮ್ಮೆ ಅಧಿಕ ಮಾಸ ಬರುವುದು ಉಂಟು. ಆಗ ಒಂದು ಸಂವತ್ಸರದಲ್ಲಿ (ವರ್ಷದಲ್ಲಿ) 13 ತಿಂಗಳುಗಳು ಬರುತ್ತವೆ. ಅಂಥ ಸಂದರ್ಭದಲ್ಲಿ ಅಧಿಕ ಮಾಸ ಮತ್ತು ನಿಜ ಮಾಸ ಎಂದು ಎರಡು ಪ್ರತ್ಯೇಕ ಹೆಸರುಗಳಿಂದ ಮಾಸಗಳನ್ನು ಗುರುತಿಸಲಾಗುತ್ತದೆ.

FAQs

ಪ್ರಶ್ನೆ: ಹಿಂದೂ ಕನ್ನಡ ಕ್ಯಾಲೆಂಡರ್, ಪಂಚಾಂಗದ ಪ್ರಕಾರ ಎಷ್ಟು ತಿಂಗಳುಗಳು, ಮಾಸಗಳು ಇವೆ?

ಉತ್ತರ: 12 ತಿಂಗಳು

ಪ್ರಶ್ನೆ: ಪಂಚಾಂಗದ ಪ್ರಕಾರ 12 ಮಾಸಗಳು ಯಾವುವು?

ಉತ್ತರ: ಚೈತ್ರ, ವೈಶಾಖ, ಜ್ಯೇಷ್ಠ, ಆಷಾಢ, ಶ್ರಾವಣ, ಭಾದ್ರಪದ, ಆಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ

ಪ್ರಶ್ನೆ: ಅಧಿಕ ಮಾಸ ಎಂದರೇನು?

ಉತ್ತರ: ಜ್ಯೋತಿಷ್ಯವು ಕಾಲಗಣನೆಗೆ ಸೂರ್ಯ ಮತ್ತು ಚಂದ್ರರನ್ನು ಅವಲಂಬಿಸಿದೆ. ಸೂರ್ಯನನ್ನು ಆಧರಿಸಿ ಲೆಕ್ಕಾಚಾರ ಮಾಡುವ ಅವಧಿಯನ್ನು ಸೌರಮಾನ ಎಂದು ಕರೆಯಲಾಗುತ್ತದೆ. ಚಂದ್ರನ ಆಧಾರದ ಮೇಲೆ ವರ್ಷದ ಲೆಕ್ಕಾಚಾರವನ್ನು ಚಾಂದ್ರಮಾನ ಎಂದು ಕರೆಯಲಾಗುತ್ತದೆ. ಚಂದ್ರ ಮಾಸವು 29.53 ದಿನಗಳು ಇರುತ್ತವೆ. ಈ ಲೆಕ್ಕಾಚಾರದಲ್ಲಿ ಒಂದು ವರ್ಷ ಎಂದರೆ 354 ದಿನಗಳು. ಪ್ರತಿ ನಾಲ್ಕು ವರ್ಷಗಳಲ್ಲಿ 31 ದಿನಗಳ ವ್ಯತ್ಯಾಸ ಬರುತ್ತದೆ. ಆಗ ಅದನ್ನು ಅಧಿಕ ಮಾಸ ಎಂದು ಸರಿದೂಗಿಸಲಾಗುತ್ತದೆ. ಕೆಲವೊಮ್ಮೆ ತಿಥಿಗಳ ಗಣನೆ ಸಹ ಏರುಪೇರಾಗುತ್ತದೆ. ಆಗ ಉಪರಿ ಎಂದು ಸರಿದೂಗಿಸಲಾಗುತ್ತದೆ. ಸಾಮಾನ್ಯವಾಗಿ ಹಬ್ಬಗಳ ಆಚರಣೆಗೆ ಸೂರ್ಯನ ಬೆಳಕು ಭೂಮಿಯನ್ನು ಸ್ಪರ್ಶಿಸುವ ಅವಧಿಯಲ್ಲಿದ್ದ ತಿಥಿಯನ್ನು ಪರಿಗಣಿಸಲಾಗುತ್ತದೆ.

ಪ್ರಶ್ನೆ: ವರ್ಷದಲ್ಲಿ ಎಷ್ಟು ಏಕಾದಶಿಗಳು ಬರುತ್ತವೆ? ಅವುಗಳ ಹೆಸರುಗಳೇನು?

ಉತ್ತರ: ತಿಂಗಳಿಗೆ (ಮಾಸಕ್ಕೆ) ಎರಡು ಏಕಾದಶಿಗಳಂತೆ ಒಂದು ವರ್ಷದಲ್ಲಿ 24 ಏಕಾದಶಿಗಳಿವೆ. ಅಧಿಕ ಮಾಸವಿದ್ದರೆ ಇನ್ನೂ 2 ಏಕಾದಶಿ ಹೆಚ್ಚುವರಿಯಾಗಿ ಇರುತ್ತವೆ.

1. ಚೈತ್ರ ಶುಕ್ಲ ಏಕಾದಶಿ - ಕಾಮದ ಏಕಾದಶಿ
2. ಚೈತ್ರ ಕೃಷ್ಣ ಏಕಾದಶಿ - ವಾರೂಧಿನಿ ಏಕಾದಶಿ
3. ವೈಶಾಖ ಶುದ್ಧ ಏಕಾದಶಿ - ಮೋಹಿನಿ ಏಕಾದಶಿ
4. ವೈಶಾಖ ಕೃಷ್ಣ ಏಕಾದಶಿ - ಅಪರ ಏಕಾದಶಿ
5. ಜ್ಯೇಷ್ಟ ಶುಕ್ಲ ಏಕಾದಶಿ - ನಿರ್ಜಲ ಏಕಾದಶಿ
6. ಜ್ಯೇಷ್ಟ ಕೃಷ್ಣ ಏಕಾದಶಿ - ಯೋಗಿನಿ ಏಕಾದಶಿ
7. ಆಷಾಢ ಶುದ್ಧ ಏಕಾದಶಿ - ದೇವಶಯನಿ ಏಕಾದಶಿ
8. ಆಷಾಢ ಕೃಷ್ಣ ಏಕಾದಶಿ - ಕಾಮಿಕಾ ಏಕಾದಶಿ
9. ಶ್ರಾವಣ ಶುಕ್ಲ ಏಕಾದಶಿ - ಪುತ್ರಾದ ಏಕಾದಶಿ
10. ಶ್ರವಣ ಕೃಷ್ಣ ಏಕಾದಶಿ - ಅಜ ಏಕಾದಶಿ
11. ಭಾದ್ರಪದ ಶುದ್ಧ ಏಕಾದಶಿ - ಪರಿವರ್ತನಾ ಏಕಾದಶಿ
12. ಭಾದ್ರಪದ ಕೃಷ್ಣ ಏಕಾದಶಿ - ಇಂದಿರಾ ಏಕಾದಶಿ
13. ಆಶ್ವಯುಜ ಶುಕ್ಲ ಏಕಾದಶಿ - ಪಾಪಾಂಕುಶ ಏಕಾದಶಿ
14. ಆಶ್ವಯುಜ ಕೃಷ್ಣ ಏಕಾದಶಿ - ರಾಮ ಏಕಾದಶಿ
15. ಕಾರ್ತಿಕ ಶುಕ್ಲ ಏಕಾದಶಿ - ಪ್ರಬೋಧಿನಿ ಏಕಾದಶಿ
16. ಕಾರ್ತಿಕ ಕೃಷ್ಣ ಏಕಾದಶಿ - ನಿರ್ಮಾಣ ಏಕಾದಶಿ
17. ಮಾರ್ಗಶಿರ ಶುಕ್ಲ ಏಕಾದಶಿ - ಮೋಕ್ಷದ ಏಕಾದಶಿ (ಸರ್ವೇಕಾದಶಿ, ಮುಕ್ಕೋಟಿ ಏಕಾದಶಿ, ವೈಕುಂಠ ಏಕಾದಶಿ)
18. ಮಾರ್ಗಶಿರ ಕೃಷ್ಣ ಏಕಾದಶಿ - ವಿಮಲಾ ಏಕಾದಶಿ
19. ಪುಷ್ಯ ಶುಕ್ಲ ಏಕಾದಶಿ - ಪುತ್ರಾದ ಏಕಾದಶಿ
20. ಪುಷ್ಯ ಕೃಷ್ಣ ಏಕಾದಶಿ - ಷಟ್ಟಿಲ ಏಕಾದಶಿ
21. ಮಾಘ ಶುಕ್ಲ ಏಕಾದಶಿ - ಕಾಮದ ಏಕಾದಶಿ
22. ಮಾಘ ಕೃಷ್ಣ ಏಕಾದಶಿ - ವಿಜಯ ಏಕಾದಶಿ
23. ಫಾಲ್ಗುಣ ಶುಕ್ಲ ಏಕಾದಶಿ - ಅಮಲಕಿ ಏಕಾದಶಿ
24. ಫಾಲ್ಗುಣ ಕೃಷ್ಣ ಏಕಾದಶಿ - ಸೌಮ್ಯ ಏಕಾದಶಿ