ಕನ್ನಡ ಸುದ್ದಿ  /  Cricket  /  Sam Curran Follows Toss Coin At Punjab Kings And Mumbai Indians Ipl 2024 Toss Controversy Pbks Vs Mi Hardik Pandya Jra

ಶುಭ್ಮನ್ ಗಿಲ್ ಬಳಿಕ ಸ್ಯಾಮ್ ಕರನ್ ಸರದಿ; ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ನಾಣ್ಯವನ್ನು ಹತ್ತಿರ ಹೋಗಿ ವೀಕ್ಷಿಸಿದ ನಾಯಕ

ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ವೇಳೆ, ಪಂಜಾಬ್‌ ನಾಯಕ ಸ್ಯಾಮ್ ಕರನ್ ನಾಣ್ಯದ ಬಳಿ ಹೋಗಿ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಐಪಿಎಲ್‌ನಲ್ಲಿ ಟಾಸ್‌ ವಿವಾದದ ಕುರಿತು ಭಾರಿ ಚರ್ಚೆ ನಡೆಯುತ್ತಿರುವ ನಡುವೆ, ಈ ನಾಟಕೀಯ ಬೆಳವಣಿಗೆ ಗಮನ ಸೆಳೆದಿದೆ.

ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ನಾಣ್ಯವನ್ನು ಹತ್ತಿರ ಹೋಗಿ ವೀಕ್ಷಿಸಿದ ಸ್ಯಾಮ್ ಕರನ್
ಮುಂಬೈ ಇಂಡಿಯನ್ಸ್ ವಿರುದ್ಧ ಟಾಸ್ ನಾಣ್ಯವನ್ನು ಹತ್ತಿರ ಹೋಗಿ ವೀಕ್ಷಿಸಿದ ಸ್ಯಾಮ್ ಕರನ್

ಐಪಿಎಲ್ 2024ರ ಆವೃತ್ತಿಯ ಪಂದ್ಯಗಳಲ್ಲಿ ಟಾಸ್‌ ಪ್ರಕ್ರಿಯೆಯೇ ಹೆಚ್ಚು ಚರ್ಚೆಗೊಳಗಾಗುತ್ತಿವೆ. ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯದ ವೇಳೆ ನಡೆದ ಟಾಸ್‌ ಭಾರಿ ವೈರಲ್‌ ಆಗಿತ್ತು. ನಾಣ್ಯ ಚಿಮ್ಮಿಸುವಿಕೆಯಲ್ಲೇ ಏನೋ ತಪ್ಪಾಗಿದೆ ಎಂಬ ಕುರಿತು ಇಂಟರ್ನೆಟ್‌ನಲ್ಲಿ ವ್ಯಾಪಕ ಚರ್ಚೆ ನಡೆದಿತ್ತು. ಅದಕ್ಕೆ ಪುಷ್ಠಿ ನೀಡುವಂತೆ, ಎಸ್‌ಆರ್‌ಎಚ್‌ ನಾಯಕ ಪ್ಯಾಟ್‌ ಕಮಿನ್ಸ್‌ಗೆ ಆರ್‌ಸಿಬಿ ನಾಯಕ ಫಾಫ್‌ ಡುಪ್ಲೆಸಿಸ್ ಅವರು ಟಾಸ್ ಕುರಿತು ವಿವರಿಸಿದ ವಿಡಿಯೋ ಭಾರಿ ವೈರಲ್‌ ಆಗಿತ್ತು. ಇದೀಗ ಟಾಸ್‌ ವೇಳೆ ಎಲ್ಲಾ ತಂಡಗಳ ನಾಯಕರು ಎಚ್ಚರಿಕೆಯಿಂದ ಇರುವಂತಿದೆ. ಮುಂಬೈ ಇಂಡಿಯನ್ಸ್‌ ವಿರುದ್ಧದ ಪಂದ್ಯದ ವೇಳೆ ಪಂಜಾಬ್‌ ಕಿಂಗ್ಸ್‌ ನಾಯಕ ಸ್ಯಾಮ್‌ ಕರನ್‌ ಕೂಡಾ ಹೀಗೆಯೇ ಮಾಡಿದ್ದಾರೆ.

ಏಪ್ರಿಲ್‌ 18ರಂದು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಮುಲ್ಲನ್‌ಪುರದಲ್ಲಿ ಪಂದ್ಯ ನಡೆಯಿತು. ಪಂದ್ಯದ ಟಾಸ್ ಪ್ರಕ್ರಿಯೆ ವೇಳೆ ನಾಟಕೀಯ ಬೆಳವಣಿಗೆಗೆಳು ನಡೆದವು. ನಾಣ್ಯ ಮೇಲಕ್ಕೆ ಚಿಮ್ಮಿಸಿ ಕೆಳಕ್ಕೆ ಬೀಳುತ್ತಿದ್ದಂತೆಯೇ, ಪಂಜಾಬ್‌ ನಾಯಕ ಸ್ಯಾಮ್ ಕರನ್ ನಾಣ್ಯದ ಬಳಿ ಹೋಗಿ ಸೂಕ್ಷ್ಮವಾಗಿ ಗಮನಿಸಿದ್ದಾರೆ. ಹೆಟ್‌ ಅಥವಾ ಟೇಲ್ಸ್‌ ಯಾವುದು ಬಿದ್ದಿದೆ ಎಂಬುದನ್ನು ಗಮನಿಸಿ, ಮ್ಯಾಚ್‌ ರೆಫ್ರಿ ಹೇಳುವುದಕ್ಕೆ ತಾಳೆ ಇದೆಯಾ ಎಂಬುದನ್ನು ಖುದ್ದು ತಾವೇ ಕಂಡುಕೊಂಡಿದ್ದಾರೆ. ಇದೇ ವೇಳೆ ಕ್ಯಾಮರಾಮೆನ್‌ ಕೂಡಾ ಟಾಸ್‌ ನಾಣ್ಯವನ್ನು ಜೂಮ್‌ ಹಾಕಿ ತೋರಿಸಿದ್ದಾರೆ.

ಗುಜರಾತ್‌ ಟೈಟಾನ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ನಡುವಿನ ಪಂದ್ಯದ ವೇಳೆ, ಜಿಟಿ ನಾಯಕ ಶುಭ್ಮನ್‌ ಗಿಲ್‌ ಕೂಡಾ ಟಾಸ್‌ ಅನ್ನು ಸೂಕ್ಷ್ಮವಾಗಿ ಗಮನಿಸಿದ್ದರು.

ಇದನ್ನೂ ಓದಿ | ಎಂಎಸ್ ಧೋನಿ ಔಟ್, ಮತೀಶಾ ಪತಿರಾಣ ಇಂಪ್ಯಾಕ್ಟ್ ಪ್ಲೇಯರ್; ಲಕ್ನೋ ಪಂದ್ಯಕ್ಕೆ ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್ XI

ಈ ಹಿಂದೆ ಆರ್‌ಸಿಬಿ ಮತ್ತು ಮುಂಬೈ ತಂಡದ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯ ನಾಣ್ಯವನ್ನು ಚಿಮ್ಮಿಸುವಾಗ ಪಿಚ್‌ನ ಹಿಂದೆ ನಾಣ್ಯವನ್ನು ಹಾರಿಸಿದ್ದರು. ಆ ದೃಶ್ಯಗಳು ಕ್ರಿಕೆಟ್ ಲೋಕದ ಗೊಂದಲಕ್ಕೆ ಕಾರಣವಾಗಿತ್ತು. ಅದರಲ್ಲಿ ಪಾಂಡ್ಯ ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡರು. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಅನುಮಾನಗಳು ವ್ಯಕ್ತವಾದವು. ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಬಗ್ಗೆ ಅನುಮಾನ ಹೆಚ್ಚಾಗಿತ್ತು.

ಆ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ, ಟಾಸ್‌ಗೂ ಮುನ್ನ ಕೊನೆಯ ಪಂದ್ಯದಲ್ಲಿ ನಡೆದ ಘಟನೆಯ ಬಗ್ಗೆ ಪ್ಯಾಟ್ ಕಮಿನ್ಸ್‌ಗೆ ಆರ್‌ಸಿಬಿ ನಾಯಕ ಫಾಫ್ ಘಟನೆ ವಿವರಿಸಿದ್ದು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಹೀಗಾಗಿ ಯಾವುದೇ ಗೊಂದಲಗಳಿಗೆ ಅವಕಾಶ ಇರಬಾರದು ಎಂದು ಸ್ಯಾಮ್‌ ಕರನ್‌ ಟಾಸ್‌ ವೇಳೆ ಎಚ್ಚರಿಕೆಯಿಂದಿದ್ದರು. ಅಲ್ಲದೆ ಕ್ಯಾಮರಾ ಕೂಡಾ ಜೂಮ್ ಮಾಡಿ ಟಾಸ್ ಆದ ನಾಣ್ಯವನ್ನು ತೋರಿಸುವ ಮೂಲಕ ಸಂದೇಹಗಳಿಗೆ ಅವಕಾಶ ನೀಡಲಿಲ್ಲ.

ಮುಂದೆ ಎಲ್ಲಾ ಪಂದ್ಯಗಳ ಸಮಯದಲ್ಲೂ ಇದೇ ಸಂಪ್ರದಾಯ ಮುಂದುವರೆಯುವ ಸಾಧ್ಯತೆ ಇದೆ. ಎಲ್ಲಾ ತಂಡಗಳ ನಾಯಕರು ಟಾಸ್‌ ಯಾರ ಪರ ಬಿದ್ದಿದೆ ಎಂಬುದನ್ನು ಖುದ್ದು ತಾವೇ ಗಮನಿಸಿದರೂ ಅಚ್ಚರಿ ಇಲ್ಲ.

IPL_Entry_Point