ಕನ್ನಡ ಸುದ್ದಿ  /  Entertainment  /  Former Mp, Malayalam Actor Innocent Passes Away

Innocent Passes away: ಮಾಜಿ ಸಂಸದ, ಮಲಯಾಳಂ ಖ್ಯಾತ ಹಾಸ್ಯನಟ ಇನ್ನಸೆಂಟ್ ಇನ್ನಿಲ್ಲ!

ಇನ್ನಸೆಂಟ್, ಕ್ಯಾನ್ಸರ್ ವಿರುದ್ಧ ಕೂಡಾ ಹೋರಾಡಿದ್ದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದ ನಂತರ ಗುಣಮುಖರಾಗಿದ್ದರು. 2015ರಲ್ಲಿ ತಾನು ಕ್ಯಾನ್ಸರ್‌ ಫ್ರೀ ಎಂದು ಘೋಷಿಸಿದ್ದರು. ಕ್ಯಾನ್ಸರ್‌ ಸಮಸ್ಯೆ ಬಗ್ಗೆ 'ಲಾಫ್ಟರ್ ಇನ್ ದಿ ಕ್ಯಾನ್ಸರ್ ವಾರ್ಡ್' ಎಂಬ ಪುಸ್ತಕವನ್ನು ಬರೆದಿದ್ದರು.

ಮಾಜಿ ಸಂಸದ, ಮಲಯಾಳಂ ಖ್ಯಾತ ಹಾಸ್ಯನಟ ಇನ್ನಸೆಂಟ್
ಮಾಜಿ ಸಂಸದ, ಮಲಯಾಳಂ ಖ್ಯಾತ ಹಾಸ್ಯನಟ ಇನ್ನಸೆಂಟ್

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂನ ಖ್ಯಾತ ನಟ ಇನ್ನಸೆಂಟ್ ಭಾನುವಾರ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನಸೆಂಟ್‌ ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮಾರ್ಚ್‌ 3 ರಂದು ಇನ್ನಸೆಂಟ್ ಉಸಿರಾಟ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಕೊಚ್ಚಿಯ ವಿಪಿಎಸ್‌ ಲೇಕ್‌ಶೋರ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಕೋವಿಡ್‌ ಸೋಂಕಿಗೆ ಒಳಗಾಗಿದ್ದರು, ಜೊತೆಗೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಇನ್ನಸೆಂಟ್ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನಸೆಂಟ್ ನಿಧನ ಮಲಯಾಳಂ ಚಿತ್ರರಂಗಕ್ಕೆ ಆಘಾತ ನೀಡಿದೆ. ಅವರ ನಿಧನದ ಸುದ್ದಿ ತಿಳಿದು ಅಭಿಮಾನಿಗಳು ಕೂಡಾ ಶಾಕ್‌ ಆಗಿದ್ದಾರೆ.

ಇನ್ನಸೆಂಟ್ ಪೂರ್ತಿ ಹೆಸರು ಇನ್ನಸೆಂಟ್ ವರೀದ್ ತೆಕ್ಕೆತಾಳ. 1972 ರಲ್ಲಿ 'ನೃತ್ಯಶಾಲಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ತಮ್ಮ 5 ದಶಕಗಳ ವೃತ್ತಿ ಜೀವನದಲ್ಲಿ ಇನ್ನಸೆಂಟ್ ಸುಮಾರು 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸೀನ್‌ ನಂ 7, ಇರಕ್ಕಲ್‌, ಪುಲಿ ವರುನ್ನೆ ಪುಲಿ, ವಸಂತ ಸೇನಾ, ಒರು ಯುಗಸಂಧ್ಯ, ಗೀತಂ, ಐಸ್‌ ಕ್ರೀಮ್‌, ನೀಲ ಕುರಿಂಜಿ ಪುತಪ್ಪೂಳ್‌, ಆರ್ಯನ್‌, ವಿಟ್ನೆಸ್‌, ವರ್ಣಂ, ಉತ್ತಮ ಮೇಳಂ , ಪವಿತ್ರಂ, ಹಿಟ್ಲರ್‌, ಉಸ್ತಾದ್‌, ಇಷ್ಟಂ, ವೇಷಂ, ಡ್ರೈವಿಂಗ್‌ ಲೈಸನ್ಸ್‌ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಇನ್ನಸೆಂಟ್, ಪೃಥ್ವಿರಾಜ್ ಸುಕುಮಾರನ್ ಜೊತೆ 'ಕಡುವ' ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕಳೆದ ವರ್ಷ ಜುಲೈನಲ್ಲಿ ತೆರೆ ಕಂಡಿತ್ತು. ಅವರು ನಟಿಸಿರುವ 'ಪಾಚುವುಂ ಅದ್ಭುತವಿಳಕ್ಕುಂ' ಸಿನಿಮಾ ಬಿಡುಗಡೆ ಆಗಬೇಕಿದೆ. ಮಲಯಾಳಂ ಚಿತ್ರರಂಗದಲ್ಲಿ ಇನ್ನಸೆಂಟ್, ಉತ್ತಮ ಹಾಸ್ಯನಟನಾಗಿ ಗುರುತಿಸಿಕೊಂಡಿದ್ದರು.

ಕ್ಯಾನ್ಸರ್‌ ವಿರುದ್ಧ ಹೋರಾಡಿದ್ದ ನಟ

ಇನ್ನಸೆಂಟ್, ಕ್ಯಾನ್ಸರ್ ವಿರುದ್ಧ ಕೂಡಾ ಹೋರಾಡಿದ್ದರು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದ ನಂತರ ಗುಣಮುಖರಾಗಿದ್ದರು. 2015ರಲ್ಲಿ ತಾನು ಕ್ಯಾನ್ಸರ್‌ ಫ್ರೀ ಎಂದು ಘೋಷಿಸಿದ್ದರು. ಕ್ಯಾನ್ಸರ್‌ ಸಮಸ್ಯೆ ಬಗ್ಗೆ 'ಲಾಫ್ಟರ್ ಇನ್ ದಿ ಕ್ಯಾನ್ಸರ್ ವಾರ್ಡ್' ಎಂಬ ಪುಸ್ತಕವನ್ನು ಬರೆದಿದ್ದರು. ಮಲಯಾಳಂ ಸಿನಿಮಾ ಅಸೋಸಿಯೇಷನ್‌ ಅಧ್ಯಕ್ಷರಾಗಿ ಇನ್ನಸೆಂಟ್ 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಹಾಸ್ಯ ನಟನಾಗಿ, ಖಳನಟಗಾಗಿಯೂ ಗುರುತಿಸಿಕೊಂಡಿದ್ದಾರೆ.

ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಇನ್ನಸೆಂಟ್

ಇನ್ನಸೆಂಟ್ ಸಿನಿಮಾ ಜೊತೆಗೆ ರಾಜಕೀಯದಲ್ಲಿ ಕೂಡಾ ಗುರುತಿಸಿಕೊಂಡಿದ್ದರು. 2014ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚಾಲಕುಡಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು. ಬಹುಮುಖ ಪ್ರತಿಭೆ ಇನ್ನಸೆಂಟ್ ನಿಧನಕ್ಕೆ ಮಲಯಾಳಂ ಚಿತ್ರರಂಗ ಕಂಬನಿ ಮಿಡಿದಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹಾಗೂ ಇನ್ನಿತರರು ನಟ ಇನ್ನಸೆಂಟ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

IPL_Entry_Point

ವಿಭಾಗ