ಕನ್ನಡ ಸುದ್ದಿ  /  ಮನರಂಜನೆ  /  Ramana Avatara: ರಾಮನ ಅವತಾರದಲ್ಲಿ ಜೆಂಟಲ್ ಮ್ಯಾನ್ ವೇಷ; ಹಾಡಿನ ಮೂಲಕ ರಿಷಿ ಎಂಟ್ರಿ

Ramana Avatara: ರಾಮನ ಅವತಾರದಲ್ಲಿ ಜೆಂಟಲ್ ಮ್ಯಾನ್ ವೇಷ; ಹಾಡಿನ ಮೂಲಕ ರಿಷಿ ಎಂಟ್ರಿ

ಆಪರೇಷನ್‌ ಅಲಮೇಲಮ್ಮ ಸಿನಿಮಾ ಖ್ಯಾತಿಯ ನಟ ರಿಷಿ ಈಗ ರಾಮನ ಅವತಾರ ತಾಳಿದ್ದಾರೆ. ಅಂದರೆ ಆ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಅದರ ಹಾಡೊಂದೂ ಸದ್ಯ ಬಿಡುಗಡೆಯಾಗಿ ಸುದ್ದಿ ಮಾಡುತ್ತಿದೆ.

ರಾಮನ ಅವತಾರದಲ್ಲಿ ಜೆಂಟಲ್ ಮ್ಯಾನ್ ವೇಷ; ಹಾಡಿನ ಮೂಲಕ ರಿಷಿ ಎಂಟ್ರಿ
ರಾಮನ ಅವತಾರದಲ್ಲಿ ಜೆಂಟಲ್ ಮ್ಯಾನ್ ವೇಷ; ಹಾಡಿನ ಮೂಲಕ ರಿಷಿ ಎಂಟ್ರಿ

Ramana Avatara: ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ನಟನೆಯ ಮೂಲಕವೇ ಗುರುತಿಸಿಕೊಂಡ ಕಲಾವಿದ ರಿಷಿ. ತಮ್ಮ ಪಾಲಿಗೆ ಬಂದ ಸಿನಿಮಾಗಳಲ್ಲಿ ಅದ್ಬುತ ನಟನೆ ನೀಡಿ ಮೆಚ್ಚುಗೆ ಪಡೆದ ರಿಷಿ, ಆಪರೇಷನ್‌ ಅಲಮೇಲಮ್ಮ, ಕವಲುದಾರಿ ಸಿನಿಮಾಗಳ ಮೂಲಕವೇ ಪರಿಚಿತ. ಇದೇ ರಿಷಿ ರಾಮನ ಅವತಾರ ಎತ್ತಿದ್ದಾರೆ. ಸದ್ದಿಲ್ಲದೆ ಶೂಟಿಂಗ್‌ ಮುಗಿಸಿರುವ ಈ ಸಿನಿಮಾ ಹಾಡೊಂದರ ಮೂಲಕ ಆಗಮಿಸಿದೆ.

ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿರುವ ರಾಮ ಈಸ್ ಜೆಂಟಲ್ ಮ್ಯಾನ್ ಎಂಬ ಸಾಹಿತ್ಯವುಳ್ಳ ಹಾಡಿಗೆ ಅಭಿನಂದನ್ ಮಹಿಶಾಲೆ ಧ್ವನಿಯಾಗಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಟೈಟಲ್ ಕಂ ರೋಮ್ಯಾಂಟಿಕ್ ಹಾಡಾಗಿರುವ ರಾಮ ಈಸ್ ಜೆಂಟಲ್ ಮ್ಯಾನ್‌ನಲ್ಲಿ ರಿಷಿ ತನ್ನ ಪ್ರೀತಿಯನ್ನು ನಾಯಕಿಗೆ ವ್ಯಕ್ತಪಡಿಸುತ್ತಾ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ಸತ್ಯಕಥೆ ಇರುವುದು ಬರೀ ಅಡಿಬರಹದಲ್ಲಷ್ಟೇ!; ದೇಶ ವಿಭಜಿಸುವ ಕೇರಳ ಸ್ಟೋರಿಯಂಥ ಚಿತ್ರಗಳು ನನಗಿಷ್ಟವಿಲ್ಲ ಎಂದ ಕಮಲ್‌ ಹಾಸನ್

ಬೆಂಗಳೂರು ಸಮೀಪದ ಸಾವನದುರ್ಗ ಮತ್ತು ಶಿವಗಂಗೆಯಲ್ಲಿ ಈ ಹಾಡಿನ ಶೂಟಿಂಗ್‌ ಮಾಡಲಾಗಿದೆ. ಪಾಶ್ಚಾತ್ಯ ಶೈಲಿಯ ಸಂಗೀತಕ್ಕೆ ಪಕ್ಕಾ ದೇಸಿ ಟಚ್‌ನಲ್ಲಿ ಈ ಹಾಡು ಮೂಡಿಬಂದಿದೆ. ಇನ್ನೇನು ಶೀಘ್ರದಲ್ಲಿ ರಾಮನ ಅವತಾರ ಚಿತ್ರವನ್ನು ತೆರೆಗೆ ತರುವ ನಿಟ್ಟಿನಲ್ಲಿ ಸಿನಿಮಾ ತಂಡ ಕೆಲಸ ಮಾಡುತ್ತಿದ್ದು, ಇದೀಗ ಮೊದಲ ಹಾಡು ಹೊರಬಿದ್ದಿದೆ. ಮುಂದಿನ ದಿನಗಳಲ್ಲಿ ಚಿತ್ರದ ಇನ್ನುಳಿದ ಹಾಡುಗಳನ್ನು ಬಿಡುಗಡೆ ಮಾಡಲಿದ್ದಾರೆ.

ಈ ಹಿಂದೆ ಟೀಸರ್ ಮೂಲಕ ಕಾಮಿಡಿಯ ರಸದೂಟ ಉಣಬಡಿಸಿದ್ದ ರಾಮನ ಅವತಾರ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದಾರೆ. ಪ್ರಣೀತಾ ಸುಭಾಷ್ ಮತ್ತು ಶುಭ್ರ ಅಯ್ಯಪ್ಪ ರಿಷಿಗೆ ಜೋಡಿಯಾಗಿದ್ದಾರೆ. ನಟ ಅರುಣ್ ಸಾಗರ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ತಮ್ಮದೇ ನಾಟಿ ಫ್ಯಾಕ್ಟರಿ ಯೂಟ್ಯೂಬ್ ಚಾನೆಲ್ ಮೂಲಕ ಹೆಸರು ಪಡೆದಿರುವ ವಿಕಾಸ್ ಪಂಪಾಪತಿ, ರಾಮನ ಅವತಾರ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.

ಸ್ಟಾರ್ ಫ್ಯಾಬ್ ಪ್ರೊಡಕ್ಷನ್ ಬ್ಯಾನರ್‌ ಅಡಿಯಲ್ಲಿ ಆಪರೇಷನ್ ಅಲಮೇಲಮ್ಮ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ, ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ರೊಮ್ಯಾಂಟಿಕ್ ಕಾಮಿಡಿಯ ಈ ಚಿತ್ರಕ್ಕೆ ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೆ ಛಾಯಾಗ್ರಹಣವಿದೆ. ಜೂಡಾ ಸ್ಯಾಂಡಿ ಸಂಗೀತ, ಅಮರನಾಥ್ ಸಂಕಲನ ಈ ಚಿತ್ರಕ್ಕಿದೆ. ಉಡುಪಿ, ಬೆಂಗಳೂರು ಸುತ್ತುಮುತ್ತ ಶೂಟಿಂಗ್ ನಡೆಸಲಾಗಿದೆ.

IPL_Entry_Point