ಕನ್ನಡ ಸುದ್ದಿ  /  Entertainment  /  Sandalwood News Why Ajagajantara Movie Actress Anjana Left Kannada Film Industry Ondu Cinema Kathe Rsm

Sandalwood News: ನೆನಪಿದ್ದಾರಾ ಅಜಗಜಾಂತರ ನಟಿ ಅಂಜನಾ; ಚಿತ್ರರಂಗದಲ್ಲಿ ಉತ್ತಮ ಅವಕಾಶಗಳಿದ್ದರೂ ಇದ್ದಕ್ಕಿದ್ದಂತೆ ಸಿನಿಮಾ ಬಿಟ್ಟಿದ್ದು ಏಕೆ?

1997ರಲ್ಲಿ ತೆರೆ ಕಂಡ 'ಏನೂಂದ್ರೆ' ಸಿನಿಮಾ ನಂತರ ಅಂಜನಾ ಬೇರೆ ಸಿನಿಮಾಗಳಲ್ಲಿ ನಟಿಸಲಿಲ್ಲ. ರೇಲಂಗಿ ನರಸಿಂಹರಾವ್‌, ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಚಿತ್ರದಲ್ಲಿ ಅಂಜನಾ ಧೀರೇಂದ್ರ ಗೋಪಾಲ್‌ ಮೊಮ್ಮಗಳಾಗಿ ನಟಿಸಿದ್ದರು.

ನಟಿ ಅಂಜನಾ
ನಟಿ ಅಂಜನಾ (PC: SGV Digital - Kannada Full Movies YouTube Channel)

'ಅಜಗಜಾಂತರ' ಸಿನಿಮಾ ಎಂದರೆ ತಕ್ಷಣ ನೆನಪಾಗುವುದು ಕಾಶಿನಾಥ್‌, ಹಾಗೇ ಅವರೊಂದಿಗೆ ನಟಿಸಿದ್ದ ನಟಿ ಅಂಜನಾ ಅವರನ್ನು ಕೂಡಾ ಯಾರೂ ಮರೆಯಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ಟಾಪ್‌ ನಟಿಯಾಗಿದ್ದ ಅಂಜನಾ, ಕನ್ನಡದ ಅನೇಕ ಸ್ಟಾರ್‌ ನಟರೊಂದಿಗೆ ನಟಿಸಿದರು. ಆದರೆ ಚಿತ್ರರಂಗದಲ್ಲಿ ಇನ್ನೂ ಡಿಮ್ಯಾಂಡ್‌ ಇರುವಾಗಲೇ ಅವರು ಇದ್ದಕ್ಕಿದ್ದಂತೆ ನಾಪತ್ತೆ ಆದರು.

1990ರಲ್ಲಿ ಚಿತ್ರರಂಗಕ್ಕೆ ಬಂದ ಅಂಜನಾ

ಅಂಜನಾ ಬಣ್ಣದ ಲೋಕಕ್ಕೆ ಬಂದಿದ್ದು 1990ರಲ್ಲಿ ತೆರೆ ಕಂಡ 'ಶಬರಿಮಲೆಸ್ವಾಮಿ ಅಯ್ಯಪ್ಪ' ಚಿತ್ರದ ಮೂಲಕ, ಸಿನಿಮಾದ ಶ್ರೀಹರಿ ಮಾಯೆಯ ಅವತಾರ... ಎಂಬ ಹಾಡಿನಲ್ಲಿ ಅಂಜನಾ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಾದ ನಂತರ ಪ್ರಭಾಕರ್‌ ಜೊತೆ 'ಕಿಲಾಡಿ ತಾತ' ಚಿತ್ರದಲ್ಲಿ ಕಾಣಿಸಿಕೊಂಡರು. ನಂತರ ಶಶಿಕುಮಾರ್‌ ಹಾಗೂ ಮಾಲಾಶ್ರೀ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪೊಲೀಸನ ಹೆಂಡತಿ ಚಿತ್ರದಲ್ಲಿಇನ್‌ಸ್ಪೆಕ್ಟರ್‌ ದುರಹಂಕಾರಿ ಪತ್ನಿಯಾಗಿ ನಟಿಸಿ ಗಮನ ಸೆಳೆದರು. ನಂತರ 1991ರಲ್ಲಿ ತೆರೆ ಕಂಡ 'ಅಜಗಜಾಂತರ' ಚಿತ್ರದಲ್ಲಿ ಕಾಶಿನಾಥ್‌ ಜೊತೆ ನಾಯಕಿಯಾಗಿ ನಟಿಸಿದರು. ಈ ಚಿತ್ರದಲ್ಲಿ, ಹಣಕ್ಕೆ ಆಸೆ ಪಟ್ಟು ಶ್ರೀಮಂತ ಹುಡುಗನನ್ನು ಮದುವೆ ಆಗಬೇಕೆಂಬ ಹುಡುಗಿಯಾಗಿ ನಟಿಸಿದ್ದರು.

ಅಜಗಜಾಂತರ ಚಿತ್ರದ ಮೂಲಕ ಹೆಸರು ಗಳಿಸಿದ ನಟಿ

ಕಥೆ, ಹಾಸ್ಯ, ಸಂಭಾಷಣೆಯಿಂದ ದೊಡ್ಡ ಯಶಸ್ಸು ಕಂಡಿದ್ದ ಈ ಚಿತ್ರ ತೆಲುಗು ಹಾಗೂ ಹಿಂದಿ ಭಾಷೆಗಳಿಗೆ ರೀಮೇಕ್‌ ಆಗಿತ್ತು. ಪರಭಾಷೆಗಳಲ್ಲಿ ಕೂಡಾ ಸಿನಿಮಾ ಸಕ್ಸಸ್‌ ಕಂಡಿತ್ತು. ಹಿಂದಿಯ 'ಜುದಾಯಿ' ಚಿತ್ರದಲ್ಲಿ ಅಂಜನಾ ಪಾತ್ರವನ್ನು ಖ್ಯಾತ ನಟಿ ಶ್ರೀದೇವಿ ನಿಭಾಯಿಸಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಅಂಜನಾ ಡಾ. ವಿಷ್ಣುವರ್ಧನ್‌ ಪ್ರಭಾಕರ್‌, ಕಾಶಿನಾಥ್‌, ಜೈ ಜಗದೀಶ್‌, ಅಂಬರೀಶ್‌, ಅನಂತ್‌ನಾಗ್‌, ಶ್ರೀಧರ್‌ ಸೇರಿ ಅನೇಕ ಸ್ಟಾರ್‌ ನಟರೊಂದಿಗೆ ನಟಿಸಿದ್ದಾರೆ. ಪತ್ರಕರ್ತೆ, ಖಳನಟಿಯಾಗಿ, ನಾಯಕಿಯಾಗಿ, ಪೋಷಕ ನಟಿ, ವಕೀಲೆ ಆಗಿ ನಟಿಸಿ ಅಂಜನಾ ಸಿನಿಪ್ರಿಯರನ್ನು ರಂಜಿಸಿದ್ದಾರೆ.

20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

ವೀರ ಧೀರ, ಸೆಂಟ್ರಲ್‌ ರೌಡಿ, ಒಂದು ಸಿನಿಮಾ ಕಥೆ, ನನ್ನ ತಂಗಿ, ಮೇಘ ಮಂದಾರ, ಮೈಸೂರು ಜಾಣ, ಹಠಮಾರಿ ಹೆಣ್ಣು ಕಿಲಾಡಿ ಗಂಡು, ಆಂತಂಕ, ನಿಸ್ಕರ್ಷ, ಮೋಜಿನ ಮದುವೆ, ಕಿಲಾಡಿಗಳು, ಗೋಪಿ ಕಲ್ಯಾಣ, ಜಾಣ, ಲೂಟಿ ಗ್ಯಾಂಗ್‌, ಗಣೇಶನ ಗಲಾಟೆ, ಬಂಗಾರದ ಕಳಶ, ತಾಳಿಪೂಜೆ, ವೀರಭದ್ರ, ಏನೂಂದ್ರೆ ಸಿನಿಮಾಗಳಲ್ಲಿ ಅಂಜನಾ ನಟಿಸಿದರು. ಒಂದು ಸಿನಿಮಾಗಳಿಗಿಂತ ಮತ್ತೊಂದು ಸಿನಿಮಾಗಳಲ್ಲಿ ಅವರ ಪಾತ್ರ ಬಹಳ ಚೆಂದ. ಆ ಪಾತ್ರಕ್ಕೆ ಹೇಳಿ ಮಾಡಿಸಿದಂತೆ ಅಂಜನಾ ಎಲ್ಲಾ ಪಾತ್ರಗಳಿಗೂ ಚೆನ್ನಾಗಿ ಒಪ್ಪುತ್ತಿದ್ದರು.

ಏನೂಂದ್ರೆ ಅಂಜನಾ ಅಭಿನಯದ ಕಡೆಯ ಸಿನಿಮಾ

ಆದರೆ 1997ರಲ್ಲಿ ತೆರೆ ಕಂಡ 'ಏನೂಂದ್ರೆ' ಸಿನಿಮಾ ನಂತರ ಅಂಜನಾ ಬೇರೆ ಸಿನಿಮಾಗಳಲ್ಲಿ ನಟಿಸಲಿಲ್ಲ. ರೇಲಂಗಿ ನರಸಿಂಹರಾವ್‌, ಈ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದರು. ಚಿತ್ರದಲ್ಲಿ ಅಂಜನಾ ಧೀರೇಂದ್ರ ಗೋಪಾಲ್‌ ಮೊಮ್ಮಗಳಾಗಿ ನಟಿಸಿದ್ದರು. ಮದುವೆ ಮಾಡಿಕೊಳ್ಳಲು ಇಷ್ಟವಿಲ್ಲದ ಯುವತಿ, ತಾತನ ಆಸ್ತಿ ಬೇರೆಯವರ ಪಾಲಾಗಬಾರದು ಎಂಬ ಕಾರಣಕ್ಕೆ ದುಡ್ಡು ಕೊಟ್ಟು ಅಗ್ರಿಮೆಂಟ್‌ ಮದುವೆ ಮಾಡಿಕೊಳ್ಳುವ ಯುವತಿ ಪಾತ್ರದಲ್ಲಿ ಅಂಜನಾ ನಟಿಸಿದ್ದರು.

ಇದ್ದಕ್ಕಿದ್ದಂತೆ ಚಿತ್ರರಂಗ ತೊರೆದ ಪ್ರತಿಭಾವಂತೆ

ಚಿತ್ರರಂಗದಲ್ಲಿ ಉತ್ತಮ ಅವಕಾಶಗಳಿದ್ದರೂ ಅಂಜನಾ ಮಾತ್ರ ಇದ್ದಕ್ಕಿದ್ದಂತೆ ಸಿನಿಮಾಗಳನ್ನು ಬಿಟ್ಟರು. ಅಂದಿನಿಂದ ಇಲ್ಲಿವರೆಗೂ ಅವರು ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ಅಂಜನಾ ಮದುವೆ ಆಗಿದ್ದರಿಂದ ಚಿತ್ರರಂಗ ಬಿಟ್ಟರು, ಪತಿ ಮನೆಯವರು ಇನ್ಮುಂದೆ ನಟಿಸಬಾರದು ಎಂದು ಕಂಡಿಷನ್‌ ಹಾಕಿದ್ದರಿಂದ ಅವರು ನಟನೆಯಿಂದ ಮಾತ್ರವಲ್ಲದೆ ಚಿತ್ರಂಗದಿಂದಲೇ ಸಂಪೂರ್ಣ ದೂರಾದರು ಎಂದು ಕೆಲವರು ಹೇಳಿದರೆ, ಅಂಜನಾಗೆ ಸಿನಿಮಾಗಳಲ್ಲಿಅವಕಾಶಗಳಿದ್ದರೂ ಆಕೆ ಸಿನಿಮಾ ಮಂದಿಯಿಂದ ಸಾಕಷ್ಟು ಸಮಸ್ಯೆ ಅನುಭವಿಸಿದರು, ಆದ್ದರಿಂದ ಅವರು ಚಿತ್ರರಂಗ ಬಿಟ್ಟರು ಎಂಬ ಮಾತೂ ಇದೆ. ಅಂಜನಾ ಸದ್ಯಕ್ಕೆ ಮುಂಬೈನಲ್ಲಿ ನೆಲೆಸಿದ್ದಾರೆ ಎನ್ನಲಾಗುತ್ತಿದೆ. ಒಂದು ಕಾಲದಲ್ಲಿ ಸಿನಿಪ್ರಿಯರನ್ನು ರಂಜಿಸಿದ್ದ ಅಂಜನಾ ಹೀಗೆ ದಿಢೀರ್‌ ನಾಪತ್ತೆಯಾಗಿದ್ದು ನಿಜಕ್ಕೂ ಬೇಸರದ ವಿಚಾರ.

IPL_Entry_Point