Jan Ki Baat Exit Poll: ಕೈ-ಕಮಲ ಪೈಪೋಟಿ, ತೆನೆಹೊತ್ತ ಮಹಿಳೆ ನಿರ್ಣಾಯಕ; ಸುವರ್ಣ‌ ನ್ಯೂಸ್ - ಜನ್‌ ಕೀ ಬಾತ್‌ ಎಕ್ಸಿಟ್‌ ಪೋಲ್‌ ವರದಿ
ಕನ್ನಡ ಸುದ್ದಿ  /  ಕರ್ನಾಟಕ  /  Jan Ki Baat Exit Poll: ಕೈ-ಕಮಲ ಪೈಪೋಟಿ, ತೆನೆಹೊತ್ತ ಮಹಿಳೆ ನಿರ್ಣಾಯಕ; ಸುವರ್ಣ‌ ನ್ಯೂಸ್ - ಜನ್‌ ಕೀ ಬಾತ್‌ ಎಕ್ಸಿಟ್‌ ಪೋಲ್‌ ವರದಿ

Jan Ki Baat Exit Poll: ಕೈ-ಕಮಲ ಪೈಪೋಟಿ, ತೆನೆಹೊತ್ತ ಮಹಿಳೆ ನಿರ್ಣಾಯಕ; ಸುವರ್ಣ‌ ನ್ಯೂಸ್ - ಜನ್‌ ಕೀ ಬಾತ್‌ ಎಕ್ಸಿಟ್‌ ಪೋಲ್‌ ವರದಿ

Asianet Suvarna News Jan Ki Baat Exit Poll: ಕರ್ನಾಟಕ ವಿಧಾನಸಭಾ ಚುನಾವಣೆಯ ಎಕ್ಸಿಟ್‌ ಪೋಲ್‌ ವರದಿಯನ್ನು ಜನ್‌ ಕೀ ಬಾತ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಕಟಿಸಿದೆ. ಇದರ ಪ್ರಕಾರ, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಪೈಪೋಟಿ ಇದ್ದು, ಜೆಡಿಎಸ್‌ ನಿರ್ಣಾಯಕವಾಗುವ ಸಾಧ್ಯತೆ ಇದೆ. ಪ್ರಾಂತ್ಯವಾರು ಪಕ್ಷಗಳ ಸಂಭಾವ್ಯ ಸೋಲು-ಗೆಲುವಿನ ವಿವರವೂ ಇಲ್ಲಿದೆ.

ಜನ್‌ ಕೀ ಬಾತ್‌ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌  ಮತದಾನೋತ್ತರ ಸಮೀಕ್ಷೆಯಲ್ಲಿ ಪಕ್ಷಗಳ ಗೆಲುವಿನ ಸಾಧ್ಯತೆಯ ಚಿತ್ರಣ ಹೀಗಿದೆ.
ಜನ್‌ ಕೀ ಬಾತ್‌ ಮತ್ತು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತದಾನೋತ್ತರ ಸಮೀಕ್ಷೆಯಲ್ಲಿ ಪಕ್ಷಗಳ ಗೆಲುವಿನ ಸಾಧ್ಯತೆಯ ಚಿತ್ರಣ ಹೀಗಿದೆ. (PC - @jankibaat1 )

ರಾಜ್ಯ ವಿಧಾನಸಭೆಯ ಮತದಾನ ಅಂತ್ಯಗೊಂಡ ಬೆನ್ನಿಗೆ ಜನ್‌ ಕಿ ಬಾತ್‌ ಮತ್ತು ಏಷ್ಯಾನೆಟ್‌ ಸುವರ್ಣನ್ಯೂಸ್‌ ಜತೆಗೂಡಿ ನಡೆಸಿದ ಎಕ್ಸಿಟ್‌ ಪೋಲ್‌ ವರದಿ ಬಹಿರಂಗವಾಗಿದೆ. ಇದರಂತೆ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂಬ ಸುಳಿವು ವ್ಯಕ್ತವಾಗಿದೆ.

ಈ ಚುನಾವಣೋತ್ತರ ಸಮೀಕ್ಷೆಯಲ್ಲಿ ಈ ಬಾರಿ ಬಿಜೆಪಿ 94 ರಿಂದ 117ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 96 ರಿಂದ 106 ಸ್ಥಾನ ಗೆಲ್ಲಲಿದೆ. ಜೆಡಿಎಸ್ 14 ರಿಂದ 24 ಸ್ಥಾನ ಗೆಲ್ಲಲಿದೆ ಎಂಬುದನ್ನು ಉಲ್ಲೇಖಿಸಲಾಗಿದೆ.

ಪಕ್ಷಸ್ಥಾನಗಳು 
ಬಿಜೆಪಿ94 ರಿಂದ 117 
ಕಾಂಗ್ರೆಸ್96 ರಿಂದ 106
ಜೆಡಿಎಸ್14 ರಿಂದ 24 
ಇತರೆ0 -2 

ಜನ್‌ ಕೀ ಬಾತ್‌ ಎಕ್ಸಿಟ್‌ ಪೋಲ್‌ ವರದಿಯನ್ನು ಪ್ರದೀಪ್‌ ಭಂಡಾರಿ ಏಷ್ಯಾ‍ನೆಟ್‌ ಸುವರ್ಣಾ ನ್ಯೂಸ್‌ನಲ್ಲಿ ಬಿಡುಗಡೆ ಮಾಡಿದರು. ಇದರಂತೆ, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಅತ್ಯಂತ ಹತ್ತಿರದ ಸ್ಪರ್ಧೆ ಇದ್ದು, ಸ್ಪಷ್ಟ ಬಹುಮತ ಪಡೆಯುವುದು ಎರಡೂ ಪಕ್ಷಗಳಿಗೆ ಕಷ್ವವಾಗಲಿದೆ ಎಂಬುದು ಬಿಂಬಿತವಾಗಿದೆ.

ಬಿಜೆಪಿಗೆ ಗರಿಷ್ಠ 117 ಸ್ಥಾನಗಳ ಗೆಲುವನ್ನು ಇಲ್ಲಿ ಬಿಂಬಿಸಲಾಗಿದೆ. ಕಾಂಗ್ರೆಸ್‌ ಪಕ್ಷ 91ರಿಂದ 106 ಸ್ಥಾನಗಳಲ್ಲಿ ಗೆಲ್ಲಬಹುದು ಎಂದು ಹೇಳಲಾಗಿದೆ. ಇನ್ನು ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್‌ 14ರಿಂದ 24 ಸ್ಥಾನಗಳಲ್ಲಿ ಗೆಲುವು ದಾಖಲಿಸಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಇನ್ನು ಮತಹಂಚಿಕೆ ಲೆಕ್ಕಾಚಾರಕ್ಕೆ ಬಂದರೆ, ಬಿಜೆಪಿಯ ಮತಗಳಿಕೆ ಪ್ರಮಾಣವು ಶೇಕಡ 37.5ರಿಂದ ಶೇಕಡ 39 ಇರಲಿದೆ. ಅದೇ ರೀತಿ, ಕಾಂಗ್ರೆಸ್‌ ಪಕ್ಷದ ಮತಗಳಿಕೆ ಪ್ರಮಾಣವು ಶೇಕಡ 38ರಿಂದ ಶೇಕಡ 40, ಜೆಡಿಎಸ್‌ ಮತಗಳಿಕೆ ಪ್ರಮಾಣವು ಶೇಕಡ 14ರಿಂದ ಶೇಕಡ 17 ಇರಲಿದೆ ಎಂದು ವರದಿ ವಿವರಿಸಿದೆ.

ಹಳೇಮೈಸೂರು ಭಾಗದಲ್ಲಿ ಪಕ್ಷಗಳ ಸಾಧನೆ ಹೇಗಿರಲಿದೆ?

ಹಳೇಮೈಸೂರು ಭಾಗದಲ್ಲಿ ಒಟ್ಟು 57 ವಿಧಾನಸಭಾ ಕ್ಷೇತ್ರಗಳಿವೆ. ಈ ಕ್ಷೇತ್ರಗಳಲ್ಲಿ ಬಹುತೇಕ ಒಕ್ಕಲಿಗ ಸಮುದಾಯದವರದ್ದೇ ಪ್ರಾಬಲ್ಯ. ಕಳೆದ ಬಾರಿ ಇಲ್ಲಿ ಬಿಜೆಪಿ ತನ್ನ ಸಾಧನೆಯನ್ನು ಕಳೆದ ಬಾರಿಗೆ ಹೋಲಿಸಿದರೆ ಸುಧಾರಿಸಿಕೊಳ್ಳಲಿದೆ. ಅದು ಇಲ್ಲಿ 15 ಸ್ಥಾನಗಳಲ್ಲಿ ಗೆಲ್ಲಬಹುದು. ಕಾಂಗ್ರೆಸ್‌ 24, ಜೆಡಿಎಸ್‌ 16 ಮತ್ತು ಇತರೆ 2 ಇಲ್ಲಿಂದ ಗೆಲ್ಲಬಹುದು ಎಂದು ವರದಿ ವಿವರ ನೀಡಿದೆ.

ಸೆಂಟ್ರಲ್‌ ಕರ್ನಾಟಕ ಭಾಗದಲ್ಲಿ ಹೇಗಿರಲಿದೆ ಪಕ್ಷಗಳ ಸೋಲುಗೆಲುವು?

ಸೆಂಟ್ರಲ್‌ ಕರ್ನಾಟಕ ಭಾಗದಲ್ಲಿ ಒಟ್ಟು 26 ವಿಧಾನಸಭಾ ಕ್ಷೇತ್ರಗಳಿವೆ ಇಲ್ಲಿ ಬಿಜೆಪಿ 13ರಲ್ಲಿ ಗೆಲ್ಲಬಹುದು ಎಂದು ಜನ್‌ ಕೀ ಬಾತ್‌ - ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಎಕ್ಸಿಟ್‌ ಪೋಲ್‌ ವರದಿ ಹೇಳಿದೆ.

ಕಾಂಗ್ರೆಸ್‌ ಪಕ್ಷ ಕೂಡ ಇಲ್ಲಿ ಪ್ರಬಲ ಪೈಪೋಟಿ ನೀಡುತ್ತಿದ್ದು 11 ಸ್ಥಾನಗಳಲ್ಲಿ ಗೆಲ್ಲಬಹುದು. ಜೆಡಿಎಸ್‌ ಎರಡು ಸ್ಥಾನಗಳಲ್ಲಿ ಜಯಭೇರಿ ಬಾರಿಸಬಹುದು ಎಂಬುದು ಎಕ್ಸಿಟ್‌ ಪೋಲ್‌ನಲ್ಲಿ ಕಂಡ ಫಲಿತಾಂಶ ಎಂದು ವರದಿ ಹೇಳಿದೆ.

ಕರಾವಳಿ ಕರ್ನಾಟಕದಲ್ಲಿರುವುದು 19 ಅದರಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ

ಕರಾವಳಿ ಕರ್ನಾಟಕ ಭಾಗದಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 19. ಕರಾವಳಿ ಕರ್ನಾಟಕ ಪ್ರದೇಶವು ಬಿಜೆಪಿ ಪ್ರಾಬಲ್ಯದ ಪ್ರದೇಶವಾಗಿದ್ದು, ಇಲ್ಲಿ ಬಿಜೆಪಿ 2018ರ ತನ್ನ ಸಾಧನೆಯನ್ನು ಪುನರಾವರ್ತಿಸಲಿದೆ ಎಂದು ಸಮೀಕ್ಷೆ ಹೇಳಿದೆ.

ಜನ್‌ ಕೀ ಬಾತ್‌ - ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಎಕ್ಸಿಟ್‌ ಪೋಲ್‌ ವರದಿ ಕರಾವಳಿ ಕರ್ನಾಟಕದಲ್ಲಿನ 19 ಕ್ಷೇತ್ರಗಳ ಪೈಕಿ 15 ಬಿಜೆಪಿ ಪಾಲಾಗಲಿದೆ. ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್‌ ಬರಲಿದೆ. ಇಲ್ಲಿ ಪಕ್ಷೇತರರಿಗೆ, ಜೆಡಿಎಸ್‌ಗೆ ಯಾವುದೇ ಸ್ಥಾನ ಇಲ್ಲ ಎಂದು ಸಮೀಕ್ಷೆ ಹೇಳಿದೆ.

ಬೆಂಗಳೂರು ಪ್ರಾಂತ್ಯದಲ್ಲೂ ಬಿಜೆಪಿಯದ್ದೇ ಪ್ರಾಬಲ್ಯ

ರಾಜ್ಯ ರಾಜಧಾನಿ ಬೆಂಗಳೂರು ಭಾಗದಲ್ಲಿ ಒಟ್ಟು 32 ವಿಧಾನಸಭಾ ಕ್ಷೇತ್ರಗಳನ್ನು ಈ ಸಮೀಕ್ಷೆ ಗುರುತಿಸಿದೆ. ಅದರಲ್ಲಿ 17 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಬಹುದು. ಈ ಗೆಲುವು ಬಹುತೇಕ ಮೋದಿ ಅಲೆಯ ಪ್ರಭಾವದ್ದಾಗಿರಲಿದೆ. ಬೆಂಗಳೂರು ನಗರಭಾಗದಲ್ಲಿ ಮೋದಿ ರೋಡ್‌ ಷೋ ಬಹಳ ಪರಿಣಾಮ ಬೀರಿದೆ ಎಂದು ವರದಿ ಉಲ್ಲೇಖಿಸಿದೆ.

ಬೆಂಗಳೂರು ಭಾಗದಲ್ಲಿ ಕಾಂಗ್ರೆಸ್‌ ಪಕ್ಷ 15 ಸ್ಥಾನಗಳಲ್ಲಿ ಗೆಲುವು ದಾಖಲಿಸಬಹುದು. ಉಳಿದಂತೆ, ಜೆಡಿಎಸ್‌ ಅಥವಾ ಪಕ್ಷೇತರ ಅಭ್ಯರ್ಥಿಗಳಿಗೆ ಇಲ್ಲಿ ಗೆಲುವು ದಕ್ಕುವುದು ಕಷ್ಟ ಎಂಬುದನ್ನು ವರದಿ ಬಿಂಬಿಸಿದೆ.

ಮುಂಬೈ- ಕರ್ನಾಟಕ ಪ್ರಾಂತ್ಯದಲ್ಲಿ ಬಿಜೆಪಿ ಪ್ರಾಬಲ್ಯ

ಮುಂಬೈ- ಕರ್ನಾಟಕ ಪ್ರಾಂತ್ಯದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸುವ ಲಕ್ಷಣಗಳಿವೆ. ಇಲ್ಲಿರುವ ಒಟ್ಟು 50 ಸ್ಥಾನಗಳ ಪೈಕಿ 31ರಲ್ಲಿ ಬಿಜೆಪಿ ಗೆಲ್ಲಬಹುದು. ಅದೇ ರೀತಿ ಕಾಂಗ್ರೆಸ್‌ ಪಕ್ಷವು 19ರಲ್ಲಿ ಗೆಲ್ಲಬಹುದು ಎಂದು ಜನ್‌ ಕೀ ಬಾತ್‌ - ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಎಕ್ಸಿಟ್‌ ಪೋಲ್‌ ವರದಿ ವಿವರಿಸಿದೆ.

ಹೈದರಾಬಾದ್‌ ಕರ್ನಾಟಕ ಪ್ರಾಂತ್ಯದಲ್ಲಿ ಕಾಂಗ್ರೆಸ್‌ ಪ್ರಾಬಲ್ಯ

ಜನ್‌ ಕೀ ಬಾತ್‌ - ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಎಕ್ಸಿಟ್‌ ಪೋಲ್‌ ವರದಿ ಹೈದರಾಬಾದ್‌ ಕರ್ನಾಟಕ ಪ್ರಾಂತ್ಯ ಭಾಗದ ಒಟ್ಟು 40 ಸ್ಥಾನಗಳಲ್ಲಿ ಕಾಂಗ್ರೆಸ್‌ ಪ್ರಾಬಲ್ಯವೇ ಹೆಚ್ಚು. ಅಲ್ಲಿ 24 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲಬಹುದು. 15 ಸ್ಥಾನದಲ್ಲಿ ಬಿಜೆಪಿ ಬಂಧರೆ ಜೆಡಿಎಸ್‌ 1 ಸ್ಥಾನದಲ್ಲಿ ಗೆಲ್ಲಬಹುದು ಎಂದು ವಿವರಿಸಿದೆ.

.

Whats_app_banner